ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಹೆಚ್.ಡಿ.ಕುಮಾರಸ್ವಾಮಿ Archives » Page 5 of 5 » Dynamic Leader
October 23, 2024
Home Posts tagged ಹೆಚ್.ಡಿ.ಕುಮಾರಸ್ವಾಮಿ (Page 5)
ರಾಜಕೀಯ

“ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರಾಗಿದ್ದರೂ ಟಿಕೆಟ್ ವಿಚಾರವಾಗಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹೊರಗಿಟ್ಟು ಸಭೆ ನಡೆಸಲಾಗಿದೆ. ರಾಜ್ಯದಲ್ಲಿ ಪಕ್ಷ ಕಟ್ಟಿಬೆಳೆಸಿದ ನಾಯಕನ ದುಸ್ಥಿತಿಯಿದು. ಬಳಸಿ ಎಸೆಯುವುದು ಬಿಜೆಪಿಯ ಜನ್ಮಸಿದ್ದ ಹಕ್ಕು. ವಿಶ್ವದ ಅತ್ಯಂತ ದೊಡ್ಡ ಪಕ್ಷ ಎಂದು ಕೊಚ್ಚಿಕೊಳ್ಳುವ ಕರ್ನಾಟಕ ಬಿಜೆಪಿ ಟಿಕೆಟ್ ಘೋಷಣೆ ಮಾಡದೆ ದಿನ ದೂಡುತ್ತಿವೆ.

ರೌಡಿಗಳನ್ನು ಸೆಳೆಯುವ ಪಕ್ಷವು, ತನ್ನನ್ನು ಕಟ್ಟಿ ಬೆಳೆಸಿದ ನಾಯಕನನ್ನು ಮೂಲೆಗುಂಪು ಮಾಡಲು ನಾಟಕವಾಡುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದಂತೆ ಪೇಶ್ವೆಗಳನ್ನು ಮುನ್ನೆಲೆಗೆ ತರಲು ವೇದಿಕೆ ತಯಾರಾಗುತ್ತಿದೆ. ಹೀಗಾಗಿಯೆ ಕರ್ನಾಟಕ ಬಿಜೆಪಿ ತನ್ನ ಟಿಕೆಟ್ ಘೋಷಣೆಗೆ ಮೀನಮೇಷ ಎಣಿಸುತ್ತಿದೆ.

ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ತೀರ್ಮಾನಿಸಲು ನಡೆಸಿದ ಸಭೆಯ ಮುಖ್ಯ ಸೂತ್ರದಾರ ಅಮಿತ್ ಶಾ ತನ್ನ ಮಗನಿಗೆ ಆಯಕಟ್ಟಿನ ಜಾಗ ನೀಡಿದವರು ಎನ್ನುವುದೆ ಪರಿಸ್ಥಿತಿಯ ವ್ಯಂಗ್ಯ. ಎಲ್ಲಾ ಸಮುದಾಯಗಳ ಕೋಪಕ್ಕೆ ಗುರಿಯಾಗಿರುವ BJP ಈ ಬಾರಿ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಜೆಡಿಎಸ್ ಟ್ವೀಟ್ ಮಾಡಿದೆ. BJP’s list of candidates delayed again, Yediyurappa returns to Bengaluru

ರಾಜಕೀಯ

“ಮಹಾರಾಷ್ಟ್ರದಲ್ಲಿರುವ ಬಿಜೆಪಿ ಡಬಲ್ ಎಂಜಿನ್ ಸರಕಾರ ಪದೇಪದೆ ಕಾಲುಕೆರೆದು ಕಿತಾಪತಿ ಮಾಡುತ್ತಿದೆ. ಚೀನಾ ಮನಸ್ಥಿತಿಯ ಆ ರಾಜ್ಯವು ಕರ್ನಾಟಕವನ್ನು ಶತ್ರು ದೇಶದಂತೆ ನೋಡುತ್ತಿದೆ. ಕೇಂದ್ರ ಬಿಜೆಪಿ ಸರಕಾರ ಇದೆಲ್ಲವನ್ನು ನೋಡಿಕೊಂಡು ಮೌನವಾಗಿದೆ. ಒಕ್ಕೂಟ ವ್ಯವಸ್ಥೆಯ ಅವಸಾನಕ್ಕೆ ಇದೇ ಕಾರಣವಾಗಬಹುದು” ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

“ಒಂದಲ್ಲ ಎರಡಲ್ಲ, ಪ್ರತಿಯೊಂದು ವಿಷಯದಲ್ಲೂ ಮಹಾರಾಷ್ಟ್ರವು ಕರ್ನಾಟಕವನ್ನು ಕೆರಳಿಸುತ್ತಿದೆ. ರಾಜ್ಯದ ಗಡಿ ಒಳಗಿರುವ 865 ಗ್ರಾಮಗಳ ಜನರಿಗೆ ಆರೋಗ್ಯ ವಿಮೆ ಜಾರಿ ಮಾಡಿದ ಆ ರಾಜ್ಯ ಸರಕಾರದ ನಡೆ ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ನೇರ, ಧೂರ್ತ ಪ್ರಯತ್ನವಾಗಿದೆ.

ಮಹಾರಾಷ್ಟ್ರವು ಒಕ್ಕೂಟ ವ್ಯವಸ್ಥೆಯ ಎಲ್ಲಾ ಎಲ್ಲೆಗಳನ್ನು ಮೀರಿ ಅಹಂಕಾರದಿಂದ ವರ್ತಿಸುತ್ತಿದೆ. ಬಿಜೆಪಿ ಸರ್ಕಾರ ‘ಶಿಂಧೆ ಸೂತ್ರದ ಗೊಂಬೆ’ ಯಾಗಿ ಅಂತಹ ರಾಜಕಾರಣಕ್ಕೆ ಕರ್ನಾಟಕವನ್ನು ಬಲಿ ಕೊಡಲು ಹೊರಟಿದೆಯಾ? ಎನ್ನುವ ಅನುಮಾನ ನನ್ನದು. ಇಲ್ಲವಾದರೆ, ಮಹಾರಾಷ್ಟ್ರ ಈ ಪರಿಯ ಉದ್ಧಟತನ ತೋರುತ್ತಿದ್ದರೂ ಮೋದಿ ಸರಕಾರದ ಮೌನವೇಕೆ?

ಕರ್ನಾಟಕದಲ್ಲಿ ಇಡೀ ಭಾರತವೇ ಅಡಗಿದೆ. ಕಾಶ್ಮೀರದಿಂದ ಕನ್ಯಾಕಮಾರಿಯವರೆಗೆ, ಗುಜರಾತಿನಿಂದ ಒಡಿಶಾವರೆಗೆ ಎಲ್ಲ ಕಡೆಯಿಂದಲೂ ಅನ್ನ ಅರಸಿಕೊಂಡು ಬಂದವರಿಗೆ ಆಶ್ರಯ ನೀಡಿದೆ. ಆ ಅನ್ನಕ್ಕೆ ಮಣ್ಣು ಹುಯ್ಯುವ ಹೀನ ಕೆಲಸವನ್ನು ಮಹಾರಾಷ್ಟ್ರ ಎಗ್ಗಿಲ್ಲದೆ ಮಾಡುತ್ತಿದೆ. ಕನ್ನಡಿಗರು ಸುಮ್ಮನಿರುವ ಕಾಲ ಮುಗಿದಿದೆ.

ಭಾರತ ಸ್ವತಂತ್ರ್ಯಗೊಂಡಾಗ ಎಲ್ಲರಿಗಿಂತ ಮೊದಲೇ ಒಕ್ಕೂಟ ವ್ಯವಸ್ಥೆಗೆ ಒಳಪಟ್ಟವರು ನಾವು. ನಮ್ಮ ಉದಾರತೆಯೇ ನಮಗೆ ಇಂದು ಮುಳುವಾಗಿದೆಯಾ? ನೆಲ, ಜಲ, ಭಾಷೆ, ಅನುದಾನ ಸೇರಿ ಪ್ರತಿ ವಿಷಯದಲ್ಲೂ ಕನ್ನಡಿಗರು ಮಲತಾಯಿ ಮಕ್ಕಳಾಗಿದ್ದಾರೆ!! ಇನ್ನೆಷ್ಟು ದಿನ ಈ ಅನ್ಯಾಯ?” ಎಂದು ಮಹಾರಾಷ್ಟ್ರ ಬಿಜೆಪಿ ಡಬಲ್ ಎಂಜಿನ್ ಸರ್ಕಾರವನ್ನು ಮತ್ತು ಬಿಜೆಪಿಯ ಕೇಂದ್ರ ನಾಯಕರ ವಿರುದ್ಧ ತಮ್ಮ ಆಕ್ರೊಷವನ್ನು ವ್ಯಕ್ತ ಪಡಿಸಿ ಸರಣಿ ಟ್ವೀಟ್ ಮಾಡಿದ್ದಾರೆ. Ahead of elections in Karnataka, Maharashtra issues order to extend medical benefits to border villages.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಮೈಸೂರು (ಮಾ.26): ಕುಮಾರಸ್ವಾಮಿ ಹಮ್ಮಿಕೊಂಡಿದ್ದ ಪಂಚರತ್ನ ಯಾತ್ರೆಯಲ್ಲಿ ಒಮ್ಮೆಯಾದರೂ ಭಾಗವಹಿಸಲು ಅವಕಾಶ ಮಾಡಿಕೊಡುವಂತೆ ಭಗವಂತನಲ್ಲಿ ನಾನು ಬೇಡಿಕೊಂಡಿದ್ದೆನು. ಈಗ ಆ ಮಹದಾಸೆ ಈಡೇರಿದೆ ಎಂದು ಮಾಜಿ ಪ್ರಧಾನಮಂತ್ರಿ, ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಹೇಳಿದರು. ಮೈಸೂರು ನಗರದ ರಿಂಗ್ ರಸ್ತೆಯ ಉತ್ತನಹಳ್ಳಿ ಬಳಿಯ ಮೈದಾನದಲ್ಲಿ ಇಂದು ಪಂಚರತ್ನ ರಥಯಾತ್ರೆಯ ಬೃಹತ್ ಸಮಾರೋಪ ಸಮಾವೇಶ ನಡೆಯಿತು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಹೆಚ್.ಡಿ.ದೇವೇಗೌಡರು, ‘ರಾಜ್ಯದಲ್ಲಿ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭವನ್ನು ನೀವು ರೂಪಿಸಿದ್ದೀರಿ. ಕುಮಾರಸ್ವಾಮಿ ತಮ್ಮ ಆರೋಗ್ಯ ಲೆಕ್ಕಿಸದೇ ರಾಜ್ಯ ಸಂಚಾರ ಮಾಡಿದ್ದಾರೆ. ಅವರು ರಾಜ್ಯ ಸುತ್ತಾಡಿದ್ದನ್ನು ನೊಡಿ ಕಣ್ಣು ತುಂಬಿಕೊಂಡಿದ್ದೇನೆ. ನನ್ನ ಆರೋಗ್ಯ ಸರಿಯಾಗಿದ್ದರೆ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದೆನು. ಭಗವಂತನು ಈ ಕಾರ್ಯಕ್ರಮದಲ್ಲಿ ಒಮ್ಮೆಯಾದರೂ ಭಾಗಿಯಾಗುವಂತೆ ಮಾಡಪ್ಪಾ ಎಂದು ಬೇಡಿಕೊಂಡಿದ್ದೆನು’ ಎಂದರು.

ಮೈಸೂರಿನ ಕೃಷ್ಣರಾಜೇಂದ್ರ ಒಡೆಯರು, ಸರ್.ಎಂ.ವಿಶ್ವೇಶ್ವರಯ್ಯ, ಟಿಪ್ಪು ಸುಲ್ತಾನ್, ಕುವೆಂಪು ಅವರಂತಹ ವಿಶ್ವಮಾನ್ಯ ನಾಯಕರು ಹುಟ್ಟಿದ ಕನ್ನಡ ನಾಡಿನಲ್ಲಿ ಜನಿಸಿದ ಹೆಮ್ಮೆ ನನಗಿದೆ. ನಾನೊಬ್ಬ ಕನ್ನಡಿಗನಾಗಿ ದೇಶದ ಅಭಿವೃದ್ಧಿಗೆ ಪ್ರಧಾನಮಂತ್ರಿಯಾಗಿ ಮಾಡಿದ ಕೆಲಸವು ಇಂದಿಗೂ ಮಾತನಾಡುತ್ತಿದೆ. ನಾಡಿನಲ್ಲಿ ಜಗತ್ತಿನ ಏಳಿಗೆಗಾಗಿ ಒಂದು ಸಣ್ಣ ದೀಪವನ್ನು ಹಚ್ಚಿದ್ದೇನೆ ಎಂಬ ತೃಪ್ತಿಯಿದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಹೇಳುತ್ತಾ ಜನಸಂದಣಿ ನೋಡಿ ಗದ್ಗದಿತರಾದರು. ತಾವು ಪ್ರಧಾನಮಂತ್ರಿ ಆಗಿದ್ದಾಗ, ರೈತನ ಮಗನಾಗಿ ರೈತರ ಹಕ್ಕುಗಳ ರಕ್ಷಣೆಗೆ ಮಾಡಿದ ಕಾರ್ಯಗಳನ್ನು ಬಿಚ್ಚಿಟ್ಟರು. ಪಂಜಾಬಿನ ರೈತರು ಒಂದು ಭತ್ತದ ತಳಿಗೆ ದೇವೇಗೌಡರ ಹೆಸರನ್ನು ಇಟ್ಟಿರುವ ಬಗ್ಗೆ ನನೆಪಿಸಿಕೊಂಡರು. ಇನ್ನು ಪ್ರಧಾನಮಂತ್ರಿಯಾಗಿ ಆಡಳಿತ ನಡೆಸಿದ ಇಷ್ಟು ವರ್ಷಗಳ ನಂತರವೂ ದೇಶ, ವಿದೇಶದ ಜನರು ಸ್ಮರಿಸುತ್ತಾರೆ. ಹಲವು ಮಹನೀಯರು ಹುಟ್ಟಿದ ನಾಡಿನಲ್ಲಿ ಜಗತ್ತಿನ ಏಳಿಗೆಗಾಗಿ ಒಂದು ಸಣ್ಣ ದೀಪವನ್ನು ಹಚ್ಚಿದ್ದೇನೆ ಎಂಬ ತೃಪ್ತಿಯಿದೆ ಎಂದು ಭಾವುಕರಾದರು.

ಜಾತಿ, ಮತ ಆಧಾರದ ಮೇಲೆ ಅಧಿಕಾರ ಹಿಡಿಯುವುದು ನಿಂತಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಹಾಗೂ ರೈತರ ಹಕ್ಕುಗಳಿಗೆ ನ್ಯಾಯ ಒದಗಿಸಿದ್ದೇನೆ. ರೈತರ ಹಕ್ಕಿಗಾಗಿ, ಕಾವೇರಿ, ಗಂಗೆ, ಕೃಷ್ಣೆ ಸೇರಿ ಹಲವು ನೀರಾವರಿ ಯೋಜನೆಗಳಿಗೆ ಮಾಡಿದ್ದೇನೆ. ನಾನು ಮಹಿಳೆಯರಿಗೆ ರಾಜಕೀಯ ಮೀಸಲಾತಿ ನಿಡಲು ಶ್ರಮಿಸಿದ್ದೇನೆ. ನಾನು ಪ್ರಧಾನಮಂತ್ರಿ ಆಗಿದ್ದಾಗ ಕಾನೂನು ರೂಪಿಸಲು ಮುಂದಾದಾಗ ಅಧಿಕಾರ ಕಳೆದುಕೊಂಡೆನು. ನಂತರ ಅಧಿಕಾರಕ್ಕೆ ಬಂದವರು ಕಾನೂನು ರೂಪಿಸಿದರೂ, ಅದಕ್ಕೆ ಯೋಜನೆ ಹಾಕಿದ್ದ ನನ್ನ ಹೆಸರು ಹೇಳುವುದನ್ನೇ ಮರೆತುಬಿಟ್ಟರು ಎಂದು ಹೇಳಿದರು. ರಾಜ್ಯದಲ್ಲಿ ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ದೊರಕಬೇಕಾದರೆ ನಾನು ಪ್ರಧಾನಮಂತ್ರಿ ಚಂದ್ರಶೇಖರ್‌ ಅವರೊಂದಿಗೆ ಹೋರಾಟ ಮಾಡಿದ ಪರಿಪಾಟಲು ನನಗೆ ಗೊತ್ತು. ಬೆಂಗಳೂರು ಅಭಿವೃದ್ಧಿಗೆ ಈ ರೈತನ ಮಗನಾಗಿ ದುಡಿದಿದ್ದೇನೆ. ನಾನು ಏನು ಮಾಡಿದ್ದೇನೆ ಎಂಬುದು ಭಗವಂತನಿಗೆ ಮತ್ತು ನಿಮಗೆ ತಿಳಿದಿದೆ. ನಾನು ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಿದ್ದಾಗ ಬೆಂಗಳೂರು – ಮೈಸೂರು ಹೆದ್ದಾರಿ ಅಭಿವೃದ್ಧಿಗೆ ಏನು ತೀರ್ಮಾನ ಕೈಗೊಂಡಿದ್ದೇನೆ ಎಂಬುದು ಗೊತ್ತಿದೆ. ಅದರೆ, ನಾನು ಪ್ರಚಾರವನ್ನು ಪಡೆಯುವುದಿಲ್ಲ ಎಂದರು.

ನನ್ನ 70 ವರ್ಷಗಳ ಅಧಿಕಾರದಲ್ಲಿ ಎಂದಿಗೂ ಕೊಟ್ಟ ಭರವಸೆ ಈಡೇರಿಸಲು ವಿಫಲವಾಗಿಲ್ಲ. ಒಂದು ವೇಳೆ ನಾನು ಕೊಟ್ಟ ಭರವಸೆ ಈಡೇರಿಸಲಿದ್ದಾಗ ರಾಜಿನಾಮೆ ಕೊಟ್ಟಿದ್ದೇನೆ. ನಾನು ಎಲ್ಲ ಕಾಲಕ್ಕೂ ಅಭಿವೃದ್ಧಿ ಮಂತ್ರ ಜಪಿಸಿದ್ದೇನೆ. ನಾನು ಬೆರಳೆಣಿಕೆ ವರ್ಷಗಳಷ್ಟು ಮಾತ್ರ ಅಧಿಕಾರದಲ್ಲಿ ಇದ್ದು, ದೇವರಾಣೆಗೂ ನಾನು ಜನರ ಅಭಿವೃದ್ಧಿಗೆ ದುಡಿದಿದ್ದೇನೆ. ನನ್ನ ಮಕ್ಕಳು, ಮೊಮ್ಮಕ್ಕಳಿಗೂ ಜನರಿಗೋಸ್ಕರ ದುಡಿಯುವಂತೆ ಹೇಳಿದ್ದೇನೆ. ಅವರೂ ಕೂಡ ನಾನು ಸಾಗಿದ ದುಡಿಮೆ ಹಾದಿಯಲ್ಲಿಯೇ ನಡೆಯುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭವನ್ನು ನೀವು ರೂಪಿಸಿದ್ದೀರಿ. ಕುಮಾರಸ್ವಾಮಿ ತಮ್ಮ ಆರೋಗ್ಯ ಲೆಕ್ಕಿಸದೇ ರಾಜ್ಯ ಸಂಚಾರ ಮಾಡಿದ್ದಾರೆ. ಅವರು ರಾಜ್ಯ ಸುತ್ತಾಡಿದ್ದನ್ನು ನೊಡಿ ಕಣ್ಣು ತುಂಬಿಕೊಂಡಿದ್ದೇನೆ. ನನ್ನ ಆರೋಗ್ಯ ಸರಿಯಾಗಿದ್ದರೆ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದೆನು. ಭಗವಂತನು ಈ ಕಾರ್ಯಕ್ರಮದಲ್ಲಿ ಒಮ್ಮೆಯಾದರೂ ಭಾಗಿಯಾಗುವಂತೆ ಮಾಡಪ್ಪಾ ಎಂದು ಬೇಡಿಕೊಂಡಿದ್ದೆನು. ನನ್ನ ಆಸೆಯನ್ನು ಕೇಳಿಕೊಂಡ ಭಗವಂತ ನನ್ನನ್ನು ನಿಮ್ಮಮುಂದೆ ನಿಲ್ಲಿಸಿದ್ದಾನೆ. ನಾನು ಭಗವಂತನ ಆಶೀರ್ವಾದದ ಭಾಗವಾಗಿದ್ದೇನೆ. ಆದರೆ, ನನ್ನ ಶಕ್ತಿ ನೀವು ಆಗಿದ್ದೀರಿ ಎಂದರು.

ಸಮಾರೋಪ ಸಮಾರಂಭವನ್ನು ಉದ್ದೇಶಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ನನ್ನ ರಾಜಕೀಯ ಜೀವನದ ಅವಿಸ್ಮರಣೀಯ ಕ್ಷಣವಿದು. ನನ್ನ ಪೂಜ್ಯ ತಂದೆಯವರು, ಮಾಜಿ ಪ್ರಧಾನಮಂತ್ರಿಗಳು ಆದ ಶ್ರೀ.ಹೆಚ್.ಡಿ.ದೇವೇಗೌಡ ಪಂಚರತ್ನ ರಥಯಾತ್ರೆ ಸಮಾರೋಪ ಸಮಾವೇಶದಲ್ಲಿ ಭಾಗಿಯಾಗಿದ್ದರು. ಅವರ ಸಾನ್ನಿಧ್ಯದಲ್ಲಿ ನಡೆದ ಜೆಡಿಎಸ್ ಹಬ್ಬ ನನ್ನ ರಾಜಕೀಯ ಜೀವನದ ಮಹೋನ್ನತ ಮೈಲುಗಲ್ಲು. ಮೈಸೂರಿನ ಶ್ರೀ.ಚಾಮುಂಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಐತಿಹಾಸಿಕ ಸಮಾವೇಶಕ್ಕೆ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಹರಿದುಬಂದಿದ್ದ ಜನಸಾಗರಕ್ಕೆ ನನ್ನ ಅನಂತ ಧನ್ಯವಾದಗಳು ಎಂದರು.

ಪಂಚರತ್ನ ಯಾತ್ರೆ ಸಮಾರೋಪದಲ್ಲಿ ದೇವೇಗೌಡರು ಭಾಷಣ ಮಾಡುತ್ತಿದಾಗ ಕಣ್ಣೀರು ಹಾಕಿದ ಕುಮಾರಸ್ವಾಮಿ ಮತ್ತು ರೇವಣ್ಣ. ಹತ್ತು ಲಕ್ಷಕ್ಕೂ ಹೆಚ್ಚು ಜನರು ಈ ಐತಿಹಾಸಿಕ ಸಮಾವೇಶದಲ್ಲಿ ಸೇರಿರುವ ನಿರೀಕ್ಷೆ ಇದೆ, ರಾಜ್ಯದ ದಶದಿಕ್ಕುಗಳಿಂದ ಆಗಮಿಸುವ ಪ್ರತಿಯೊಬ್ಬರಿಗೂ ಆಸನ ಹಾಗೂ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

ರಾಜಕೀಯ

ಕೋಲ್ಕತ್ತಾ: ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ಜಾತ್ಯತೀತ ಜನತಾ ದಳದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಪಕ್ಷಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದರು.

ಒಡಿಶಾಗೆ ಭೇಟಿ ನೀಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಡಿಶಾ ಬಿಜು ಜನತಾದಳ ನಾಯಕ ಹಾಗೂ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿಯಾದರು. ಬೇಟಿಯ ಸಂದರ್ಭದಲ್ಲಿ 2024ರ ಲೋಕಸಭೆ ಚುನಾವಣೆ ಮೈತ್ರಿ ಕುರಿತು ಮಾತುಕತೆ ನಡೆಸಿದ್ದರು ಎನ್ನಲಾಗಿದೆ.

ಈ ಹಿನ್ನಲೆಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಶ್ಚಿಮ ಬಂಗಾಳಕ್ಕೆ ತೆರಳಿ, ಕೋಲ್ಕತ್ತಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಇಬ್ಬರೂ ರಾಷ್ಟ್ರೀಯ ರಾಜಕೀಯದ ಬಗ್ಗೆ ಮತ್ತು ವಿಶೇಷವಾಗಿ 2024ರ ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

ಹೆಚ್.ಡಿ.ಕುಮಾರಸ್ವಾಮಿ ನಂತರ ಮಾಧ್ಯಮದವರನ್ನು ಭೇಟಿ ಮಾಡಿದರು. ರಾಹುಲ್ ಗಾಂಧಿ ಅನರ್ಹತೆ ಬಗ್ಗೆ ಕೇಳಿದಾಗ, ‘ಇದು ಕೇಂದ್ರ ಸರ್ಕಾರದ ಕೆಲಸ ಎಂಬುದು ದೇಶಕ್ಕೆ ಗೊತ್ತಿದೆ. ರಾಹುಲ್ ಅನರ್ಹತೆಗೆ ಬಗ್ಗೆ ಆಶ್ಚರ್ಯಪಡುವಂಥದ್ದೇನೂ ಇಲ್ಲ’ ಎಂದರು.
HD Kumaraswamy to meet Mamata Banerjee in Kolkata this evening

ಬೆಂಗಳೂರು

ಬೆಂಗಳೂರು: ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯನ್ನು (ಸಿಡಿಸಿ) ರದ್ದುಗೊಳಿಸಿ, ಕರ್ನಾಟಕ ಕ್ರೈಸ್ತರ ಅಭಿವೃದ್ಧಿ ಮಂಡಳಿ ಅಥವಾ ಅಭಿವೃದ್ಧಿ ನಿಗಮವನ್ನು ಮತ್ತು 3ಬಿ ವರ್ಗದಿಂದ ಕ್ರೈಸ್ತ ಸಮುದಾಯವನ್ನು ಪ್ರತ್ಯೇಕಿಸಿ, ಪ್ರತ್ಯೇಕವಾದ ಮೀಸಲಾತಿಯನ್ನು ಮುಂದಿನ ಬಜೆಟ್ ಅಧಿವೇಶನದಲ್ಲಿ ಘೋಷಣೆ ಮಾಡುವಂತೆ ಜನಶಕ್ತಿ ವೇದಿಕೆ ಸರ್ಕಾರವನ್ನು ಒತ್ತಾಯಿಸಿದೆ.

ಕರ್ನಾಟಕದಲ್ಲಿ ಕ್ರೈಸ್ತರ ಜನಸಂಖ್ಯೆ ಸುಮಾರು ಶೇ.4% ರಷ್ಟಿದೆ. ಸಮುದಾಯದ ಅಭಿವೃದ್ಧಿಗಾಗಿ 2010ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ಸಮಿತಿ ರಚಿಸಿ, ರೂ.50 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದರು. ನಂತರ ಬಂದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ, 2013-14ರಲ್ಲಿ ರೂ.75 ಕೋಟಿ, 2014-15ರಲ್ಲಿ ರೂ.100 ಕೋಟಿ, 2015-16ರಲ್ಲಿ 125 ಕೋಟಿ, 2016-17ರಲ್ಲಿ 175 ಕೋಟಿ ರೂಪಾಯಿಗಳನ್ನು ಅನುದಾನವಾಗಿ ಬಿಡುಗಡೆ ಮಾಡಿತು.

ಸದರಿ ಅನುದಾನದಿಂದ ಚರ್ಚ್ ಹಾಗೂ ಪ್ರಾರ್ಥನಾ ಮಂದಿರಗಳ ದುರಸ್ಥಿ ಹಾಗೂ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣಕ್ಕೆ ಸಹಾಯಧನ, ಅನಾಥಾಶ್ರಮಗಳು, ವೃದ್ಧಾಪ್ಯ ಆಶ್ರಮಗಳು, ವಿಕಲ ಚೇತನಾ ಹಾಗೂ ನಿರಾಶ್ರಿತ ಆಶ್ರಮಗಳ ನಡೆಸುವಿಕೆಗೆ ಸಹಾಯಧನ, ಹೊರ ದೇಶಗಳಲ್ಲಿ ಸ್ನಾತಕೋತ್ತರ ಪದವಿಗಳಿಗೆ ಹಾಗೂ ಹೆಚ್ಚಿನ ವಿದ್ಯಾಬ್ಯಾಸ ಶಿಕ್ಷಣಕ್ಕೆ ಸಹಾಯಧನ ಇತ್ಯಾದಿಗಳಿಗೆ ಈ ಅನುದಾನವು ವಿನಿಯೋಗಿಸಲಾಗುತ್ತಿತ್ತು.

2018ರಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ರವರು ಕ್ರೈಸ್ತರ ಅಭಿವೃದ್ಧಿ ನಿಗಮ ಸ್ಥಾಪಿಸಿ ರೂ.200 ಕೋಟಿಯನ್ನು ಘೋಷಣೆ ಮಾಡಿ, ರೂ.75 ಕೋಟಿಯನ್ನು ಮೀಸಲಿಟ್ಟರು. ನಂತರ ಬಂದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ನಿಗಮದ ಘೋಷಣೆಯನ್ನು ರದ್ಧುಗೊಳಿಸಿ, ‘ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ’ ಯನ್ನು ರಚಿಸಿ, ರೂ.200 ಕೋಟಿಯನ್ನು ಅನುದಾನವಾಗಿ ನೀಡಿತು, ಮತ್ತು ಅಲ್ಪಸಂಖ್ಯಾತ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆ ವತಿಯಿಂದ ದಿನಾಂಕ: 06.11.2019 ರಂದು ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಗೆ ದಕ್ಷಿಣ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜೋಯ್ಲಸ್ ಡಿಸೋಜ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಆದೇಶ ಹೊರಡಿಸಿತು. ಇದರಿಂದ ಕ್ರೈಸ್ತರ ಬಹುದಿನಗಳ ಬೇಡಿಕೆಯಾದ ಕ್ರೈಸ್ತರ ಅಭಿವೃದ್ಧಿ ನಿಗಮಕ್ಕೆ ಮಣ್ಣೆರಚಿದಂತೆ ಆಯಿತು.

ರಾಜ್ಯದಲ್ಲಿ ಸುಮಾರು ಶೇ.4% ರಷ್ಟಿರುವ ಕ್ರೈಸ್ತ ಜನಾಂಗಕ್ಕೆ ಅಲ್ಪಸಂಖ್ಯಾತರ ಇಲಾಖೆಯಲ್ಲಿ ವಿವಿದ ಸೌಲಭ್ಯವನ್ನು ಪಡೆಯಲು ಕೇವಲ ಶೇ.10 ರಷ್ಟು ಅವಕಾಶವನ್ನು ನೀಡಿ, ಸರ್ಕಾರ ಸಮಾಜದ ಮೇಲೆ ಮಲತಾಯಿ ದೋರಣೆ ಮಾಡುತ್ತಿದೆ.

ರಾಜ್ಯ ಸರ್ಕಾರದ ವಿವಿದ ಇಲಾಖೆಗಳು ಕ್ರೈಸ್ತ ಸಮುದಾಯಕ್ಕೆ ಸೇರಿದ ಶೈಕ್ಷಣಿಕ ಮತ್ತು ಆರೋಗ್ಯ ಸಂಸ್ಥೆಗಳ ಕಟ್ಟಡಗಳನ್ನು ಬೇರೆ ಬೇರೆ ಕಾರ್ಯಕ್ರಮಗಳಿಗೆ ಬಳಸಿಕೊಳ್ಳೂತ್ತವೆ. ಆದರೆ, ಕ್ರೈಸ್ತ ಸಂಸ್ಥೆಗಳ ಕೆಲಸ ಕಾರ್ಯಗಳಿಗೆ ಮಾತ್ರ ಅಧಿಕರಿಗಳು ಸ್ಪಂದಿಸುವುದಿಲ್ಲ. ಇದರಿಂದ ಕ್ರೈಸ್ತರ ಕೆಲಸ ಕಾರ್ಯಗಳು ಇಲಾಖೆಯ ಮಟ್ಟದಲ್ಲಿ ಸುಗುಮವಾಗಿ ನಡೆಯುವುದ್ತಿಲ್ಲ. ಇದು ಎಲ್ಲಾ ಸರ್ಕಾರದ ಅವಧಿಯಲ್ಲೂ ಅಧಿಕಾರಿಗಳ ಮನಸ್ಥಿತಿ ಇದೇ ಆಗಿರುತ್ತದೆ.

3ಬಿ ವರ್ಗದಲ್ಲಿ ಕ್ರೈಸ್ತ ಸಮುದಾಯ ಬರುವುದರಿಂದ ಬಲಿಷ್ಠ ಸಮುದಾಯಗಳ ಜೊತೆಗೆ ಕ್ರೈಸ್ತ ಮಕ್ಕಳು ಸ್ಪರ್ದಿಸಲಾಗದೆ ಸರ್ಕಾರದ ಪ್ರಮುಖ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗುತ್ತಿಲ್ಲ. ಇದರಿಂದ ಸಮುದಾಯದ ಪ್ರಗತಿಗೂ ಹಿನ್ನಡೆಯಾಗುತ್ತಿದೆ. ಆದ್ದರಿಂದ 3ಬಿ ವರ್ಗದಿಂದ ಕ್ರೈಸ್ತ ಸಮುದಾಯವನ್ನು ಪ್ರತ್ಯೇಕಿಸಿ, ಪ್ರತ್ಯೇಕ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿಕೊಡಬೇಕಾಗಿದೆ.

ರಾಜ್ಯದಲ್ಲಿ ಬೇರೆ ಬೇರೆ ಸಮುದಾಯದವರಿಗೆ ಅಭಿವೃದ್ಧಿ ಮಂಡಳಿಯನ್ನು ಸರ್ಕಾರ ರಚಿಸಿಕೊಟ್ಟಿದೆ. ಕ್ರೈಸ್ತ ಸಮುದಾಯದವರು ಸಾಕಷ್ಟು ವರ್ಷಗಳಿಂದ ಈ ಬಗ್ಗೆ ಬೆಡಿಕೆ ಇಟ್ಟಿದ್ದರೂ ಇನ್ನೂ ಕ್ರೈಸ್ತ ಅಭಿವೃದ್ಧಿ ಮಂಡಳಿ ರಚಣೆ ಆಗಿಲ್ಲ. ಸರ್ಕಾರ ಕ್ರೈಸ್ತರ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳೂತ್ತಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ರೈಸ್ತ ಸಮುದಾಯದ ಮೇಲೆ ಸರಣಿ ದಾಳಿ ನಡೆದಿದೆ. ಆದರೂ ಕ್ರೈಸ್ತರು ಸಹಿಸಿಕೊಂಡರು. ಇದರ ತನಿಖೆಗಾಗಿ ಆಯೋಗ ರಚನೆ ಮಾಡಲಾಯಿತು. ಆದರೆ, ಆಯೋಗದ ತೀರ್ಮಾನ ಏನೆಂಬುದು ಇಲ್ಲಿಯವರೆಗೆ ತಿಳಿದುಕೊಳ್ಳಲು ಆಗುತ್ತಿಲ್ಲ. ರಾಜ್ಯದ – ದೇಶದ ಅಭಿವೃದ್ಧಿಯಲ್ಲಿ ಕ್ರೈಸ್ತರ ಪಾಲೂ ಇದೆ. ಬಡವರ್ಗದ ಕ್ರೈಸ್ತರಿಗೆ ಈ ರೀತಿ ಅನ್ಯಾಯ ಮಾಡುವುದು ಸರಿಯಲ್ಲ.

ಆದ್ದರಿಂದ ಈ ಸರ್ಕಾರ ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯನ್ನು (ಸಿಡಿಸಿ) ರದ್ದುಗೊಳಿಸಿ, ಕರ್ನಾಟಕ ಕ್ರೈಸ್ತರ ಅಭಿವೃದ್ಧಿ ಮಂಡಳಿ ಅಥವಾ ಅಭಿವೃದ್ಧಿ ನಿಗಮವನ್ನು ಮತ್ತು 3ಬಿ ವರ್ಗದಿಂದ ಕ್ರೈಸ್ತ ಸಮುದಾಯವನ್ನು ಪ್ರತ್ಯೇಕಿಸಿ, ಪ್ರತ್ಯೇಕವಾದ ಮೀಸಲಾತಿಯನ್ನು ಮುಂದಿನ ಬಜೆಟ್ ಅಧಿವೇಶನದಲ್ಲಿ ಘೋಷಣೆ ಮಾಡಬೇಕೆಂದು ಜನಶಕ್ತಿ ವೇದಿಕೆ ಸರ್ಕಾರವನ್ನು ಒತ್ತಾಯಿಸಿದೆ.

ಜನಶಕ್ತಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಡೈನಾಮಿಕ್ ಲೀಡರ್ ಪತ್ರಿಕೆಯ ಸಂಪಾದಕ ಡಿ.ಸಿ.ಪ್ರಕಾಶ್ ನಮ್ಮೊಂದಿಗೆ ಮಾತನಾಡುತ್ತಾ: “ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕ್ರೈಸ್ತರ ಮೇಲೆ ತೋರಿಸಿದ ಅತಿಯಾದ ಪ್ರೀತಿ, ವಿಶ್ವಾಸ, ಅನುಕಂಪ ಹಾಗೂ ಕ್ರೈಸ್ತ ಸಂಘಟನೆಗಳು ನಿರಂತರವಾಗಿ ಮಾಡಿಬಂದ ಹೋರಾಟಕ್ಕೆ ಮಣಿದು 2010ರಲ್ಲಿ ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ಸಮಿತಿಯನ್ನು ರಚಿಸಿ ರೂ.50 ಕೋಟಿಯನ್ನು ಅನುದಾನವಾಗಿ ಬಿಡುಗಡೆ ಮಾಡಿ, ಕ್ರೈಸ್ತರ ಏಳಿಗೆಗೆ ಮುನ್ನುಡಿ ಬರೆದರು. ಮುಂದುವರಿದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಸಂಪ್ರದಾಯವನ್ನು ಮುಂದುವರಿಸಿ ಅನುದಾನವನ್ನು ಹೆಚ್ಚು ಮಾಡುತ್ತಾ ಕ್ರೈಸ್ತರ ಬಾಳಿಗೆ ಬೆಳಕಾದರು.

ಆದರೂ ಇದು ಅತಿ ಕಡಿಮೆಯ ಅನುದಾನವಾಗಿದೆ. ಸುಮಾರು ಶೇ.4% ರಷ್ಟಿರುವ ಕ್ರೈಸ್ತ ಸಮುದಾಯಕ್ಕೆ ಇದರಿಂದ ಏನೂ ಪ್ರಯೋಜನವಾಗುವುದಿಲ್ಲ. ಆರ್ಥಿಕವಾಗಿ ಹಿಂದುಳಿದ ಬಡ ಕ್ರೈಸ್ತರು ಸ್ವಾವಲಂಬಿಗಳಾಗಬೇಕಾದರೆ, ಅವರಿಗೆ ಪ್ರತ್ಯೇಕವಾದ ನಿಗಮ ಅಥವಾ ಮಂಡಳಿ ರಚನೆಯಾದರೆ ಮಾತ್ರ ಅದು ಸಾದ್ಯವಾಗುತ್ತದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಕ್ರೈಸ್ತ ಸಮುದಾಯ ಅಭಿವೃದ್ಧಿ ಪಡೆಯಬೇಕಾದರೆ, 3ಬಿ ವರ್ಗದಿಂದ ಕ್ರೈಸ್ತ ಸಮುದಾಯವನ್ನು ಪ್ರತ್ಯೇಕಿಸಿ, ಪ್ರತ್ಯೇಕವಾದ ಮೀಸಲಾತಿಯನ್ನು ಸರ್ಕಾರ ಘೋಷಣೆ ಮಾಡಬೇಕಾಗಿದೆ.

ಈ ಏರಡು ಪ್ರಮುಖವಾದ ಬೇಡಿಕೆಗಳನ್ನು ನಾವು ಇಂದು ಸರ್ಕಾರದ ಮುಂದಿಟ್ಟಿದ್ದೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಮೇಲ್ಕಂಡ ಎರಡು ಬೇಡಿಕೆಗಳಿಗೆ ಸ್ಪಂದಿಸಿ, ಮುಂಬರುವ 2023ರ ಬಜೆಟ್ ಅಧಿವೇಶನದಲ್ಲಿ ಇದರ ಬಗ್ಗೆ ಘೋಷನೆ ಮಾಡುತ್ತಾರೆ ಎಂದು ನಂಬಿದ್ದೇವೆ” ಎಂದು ಹೇಳಿದರು.      

ಬೆಂಗಳೂರು ರಾಜಕೀಯ

ಬೆಂಗಳೂರು: ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಇಂದು ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಪಕ್ಷದ ವತಿಯಿಂದ ಸರ್ವೋದಯ ದಿನಾಚರಣೆ ಆಚರಿಸಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ದಿನಾಚರಣೆ ಸಾಂಸ್ಕೃತಿಕವಾಗಿ ಬಹಳ ವಿಜೃಂಭಣೆಯಿಂದ ನಡೆಯಿತು. ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಪಕ್ಷದ ಅಧ್ಯಕ್ಷ ಅರ್.ಪ್ರಕಾಶ್ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದರು.

ಜೆ.ಪಿ.ಭವನದಲ್ಲಿ ಇಂದು ಆಚರಿಸಲಾದ ಸರ್ವೋದಯ ದಿನಾಚರಣೆಯಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ರಮೇಶ್, ರಾಜ್ಯ ಹಿರಿಯ ಮುಖಂಡ ಶಫಿಯುಲ್ಲಾ, ನಾಗರಾಜ್, ಮಹಿಳಾ ಘಟಕದ ಅಧ್ಯಕ್ಷೆ ಡಾ.ರೂತ್ ಮನೋರಮ, ಶಾಂತಿನಗರ ಮಹಿಳಾ ಘಟಕದ ಅಧ್ಯಕ್ಷೆ ಸರಸ್ವತಿ ಮುಂತಾದ ಹಲವರು ಭಾಗವಿಸಿದ್ದರು.

ಜೆಡಿಎಸ್ ಕಚೇರಿಯಲ್ಲಿ ನಡೆದ ಸರ್ವೋದಯ ದಿನಾಕಾರಣೆ

ದೇಶಾದ್ಯಂತ ದೇಶಕ್ಕಾಗಿ ಜೀವತೆತ್ತ ಹುತಾತ್ಮರನ್ನು ಸ್ಮರಣೆ ಮಾಡಿ ಅವರ ತ್ಯಾಗ ಸೇವೆ ಮತ್ತು ದೇಶಪ್ರೇಮವನ್ನು ಕೊಂಡಾಡಿ, ಇತರರಲ್ಲಿ ದೇಶ ಪ್ರೇಮ ಮತ್ತು ರಾಷ್ಟಭಕ್ತಿಯನ್ನು ಮೂಡಿಸುವ ಸದುದ್ದೇಶ ಈ ಆಚರಣೆಯ ಮೂಲ ಉದ್ದೇಶವಾಗಿರುತ್ತದೆ. ವಿಶ್ವದಾದ್ಯಂತ ಸುಮಾರು 15 ದೇಶಗಳು ಪ್ರತಿ ವರ್ಷ ಹುತಾತ್ಮರ ದಿನವನ್ನು ಬೇರೆ ಬೇರೆ ದಿನಗಳಲ್ಲಿ ಆಚರಣೆ ಮಾಡಿ ಜನರಲ್ಲಿ ದೇಶ ಪ್ರೇಮದ ಬಗ್ಗೆ ಭಕ್ತಿ ಮೂಡುವಂತೆ ಮಾಡುತ್ತದೆ. ಮೊದಲೆಲ್ಲಾ ಜನವರಿ 26ರ ಗಣರಾಜ್ಯೋತ್ಸವದ ದಿನದಂದು ದೇಶಕ್ಕಾಗಿ ಜೀವತೆತ್ತ ಸೈನಿಕರನ್ನು ನೆನೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಜನವರಿ 30ರಂದು ನಮ್ಮ ದೇಶದ ಸ್ವಾತಂತ್ರಕ್ಕಾಗಿ ‘ಅಹಿಂಸಾ’ ಅಸ್ತ್ರದ ಮುಖಾಂತರ ಹೋರಾಡಿದ ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನವನ್ನು ಆಚರಿಸಲಾಗುತ್ತಿದೆ.

ಗಾಂಧೀಜಿಯವರ ಪುಣ್ಯತಿಥಿಯ ನೆನಪಿಗಾಗಿಯೂ ಈ ದಿನವನ್ನು ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ. ಈ ದಿನದಂದು ಭಾರತದ ಪ್ರಧಾನ ಮಂತ್ರಿ ಮತ್ತು ವಿವಿಧ ಸೇನಾ ದಳಗಳ ಮುಖ್ಯಸ್ಥರು ಸೇರಿದಂತೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಹುತಾತ್ಮರಿಗೆ ಗೌರವವನ್ನು ಸಲ್ಲಿಸುತ್ತಾರೆ. ಎರಡು ನಿಮಿಷಗಳ ಮೌನಾಚರಣೆಯ ಮಾಡಿ ಪ್ರಾರ್ಥಿಸುತ್ತಾರೆ.

ದೇಶ ಬೆಂಗಳೂರು ರಾಜಕೀಯ ರಾಜ್ಯ

ಬೆಂಗಳೂರು: ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಹೋರಾಡುತ್ತಾ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3500 ಕಿ.ಮೀ. ನಡೆದು ಜನರಲ್ಲಿ ಸೌಹಾರ್ದತೆಯ ಸಂದೇಶವನ್ನು ಹರಡಿಸಿರುವ ರಾಹುಲ್ ಗಾಂಧಿಯವರ ನಡೆಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.  

2023, ಜನವರಿ 10 ರಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಪತ್ರ ಬರೆದು, ಜನವರಿ 30 ರಂದು ಶ್ರೀನಗರದಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದರು. ಮಲ್ಲಿಕಾರ್ಜುನ ಖರ್ಗೆಯವರ ಆಹ್ವಾನ ಪತ್ರಕ್ಕೆ ಇಂದು ಪ್ರತಿಯುತ್ತರ ನೀಡಿದ ದೇವೇಗೌಡರು, ‘ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿರುವುದಕ್ಕೆ ಧನ್ಯವಾದಗಳು, ರಾಷ್ಟ್ರಪಿತ ಹುತಾತ್ಮರಾದ ದಿನದಂದು ಶ್ರೀನಗರದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವುದು ತುಂಬಾ ಸೂಕ್ತವಾಗಿದೆ.

ನಾನು ಕಾರ್ಯಕ್ರಮಕ್ಕೆ ಖುದ್ದಾಗಿ ಹಾಜರಾಗಲು ಸಾಧ್ಯವಾಗದಿದ್ದರೂ ನನ್ನ ಶುಭಾಶಯಗಳು ರಾಹುಲ್ ಗಾಂಧಿಯವರಿಗಿದೆ. ಅವರು ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಹೋರಾಡುತ್ತಿದ್ದಾರೆ ಮತ್ತು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3500 ಕಿ.ಮೀ. ನಡೆದು ಜನರಲ್ಲಿ ಸೌಹಾರ್ದತೆಯ ಸಂದೇಶವನ್ನು ಹರಡಿಸಿದ್ದಾರೆ. ದಯವಿಟ್ಟು ಅವರಿಗೆ ನನ್ನ ಆಳವಾದ ಮೆಚ್ಚುಗೆಯನ್ನು ಸೂಚಿಸಿ’ ಎಂದು ಮಲ್ಲಿಕಾರ್ಜುನ ಖರ್ಗೆಯವರಿಗೆ ಇಂದು ಬರೆದ ಪತ್ರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ.