ತಿರುವಣ್ಣಾಮಲೈ ಜಿಲ್ಲೆಯ ಸೆಂಗಮ್ ಬಳಿಯ ಪಕ್ರಿಪಾಳ್ಯಂ ಪ್ರದೇಶದಲ್ಲಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.
ಈ ಭೀಕರ ಅಪಘಾತದಲ್ಲಿ ತುಮಕೂರಿನಲ್ಲಿ ನೆಲೆಸಿದ್ದ ಒಂದೇ ಕುಟುಂಬಕ್ಕೆ ಸೇರಿದ ಶ್ರೀನಿವಾಸನ್ (ವಯಸ್ಸು 60), ಮಲರ್ (55), ಮಣಿಕಂಠನ್ (40), ಹೇಮಂತ್ (35), ಸತೀಶ್ ಕುಮಾರ್ (40), ಸರ್ವೇಶ್ವರನ್ (6), ಸಿದ್ದು (3) ಅವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಅಲ್ಲದೆ, ಗಂಭೀರವಾಗಿ ಗಾಯಗೊಂಡಿರುವ ಸತೀಶ್ ಕುಮಾರ್ ಅವರ ಪತ್ನಿ ಕಾವ್ಯಾ (32) ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಎಲ್ಲಾ ದೇಹಗಳನ್ನು ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಮರಣೋತ್ತರ ಪರೀಕ್ಷೆ ಬಳಿಕ ತಮಿಳುನಾಡು ಉಪಸಭಾಪತಿ ಕೆ.ಪಿಚ್ಚಾಂಡಿ ಮೃತ ದೇಹಗಳಿಗೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಲ್ಲದೇ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ ಹೇಳಿದ್ದಾರೆ.
ನಂತರ ಜಿಲ್ಲಾಧಿಕಾರಿ ಮುರುಗೇಶ್, ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೇಯನ್, ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಕಂಬನ್, ಸಂಸದ ಸಿ.ಎನ್.ಅಣ್ಣಾದೊರೈ, ಶಾಸಕರಾದ ಗಿರಿ, ನಗರಸಭೆ ಉಪಾಧ್ಯಕ್ಷೆ ರಾಜಾಂಗಮ್ ಮತ್ತಿತರರು ಗೌರವ ಸಲ್ಲಿಸಿದರು. ಬಳಿಕ 7 ಮಂದಿಯ ಮೃತದೇಹಗಳನ್ನು ಸರ್ಕಾರಿ ಗೌರವದೊಂದಿಗೆ ಪ್ರತ್ಯೇಕ ವಾಹನದಲ್ಲಿ ಸ್ವಗ್ರಾಮಕ್ಕೆ ಕಳುಹಿಸಲಾಯಿತು.