‘ನ್ಯೂಸ್ ಕ್ಲಿಕ್’ ಸಂಸ್ಥೆ ಚೀನಾದಿಂದ ಹಣ ಪಡೆದಿದೆ ಎಂದು ಅಮೆರಿಕದ ಮಾಧ್ಯಮ ಸಂಸ್ಥೆ ‘ನ್ಯೂಯಾರ್ಕ್ ಟೈಮ್ಸ್’ ಸುಮಾರು 2 ತಿಂಗಳ ಹಿಂದೆ ಆಧಾರರಹಿತ ವರದಿ ಪ್ರಕಟಿಸಿತ್ತು. ಅದರ ಆಧಾರದ ಮೇಲೆ, ಜಾರಿ ನಿರ್ದೇಶನಾಲಯ (ಇಡಿ) ಸೆಪ್ಟೆಂಬರ್ 2021 ರಲ್ಲಿ ‘ನ್ಯೂಸ್ ಕ್ಲಿಕ್’ ಮಾಧ್ಯಮ ಕಚೇರಿ ಮೇಲೆ ದಾಳಿ ನಡೆಸಿತು. ಮನಿ ಲಾಂಡರಿಂಗ್ ತಡೆ ಕಾಯಿದೆ ಅಡಿಯಲ್ಲಿ, ‘ನ್ಯೂಸ್ ಕ್ಲಿಕ್’ ಕಂಪನಿಯ ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರ ಮಾಲೀಕತ್ವದಲ್ಲಿನ ರೂ.4.5 ಕೋಟಿ ಮೌಲ್ಯದ ಮನೆ ಮತ್ತು ರೂ. 41 ಲಕ್ಷ ಸ್ಥಿರ ಠೇವಣಿಗಳನ್ನೂ ಸ್ಥಗಿತಗೊಳಿಸಿತು.
ಈ ಹಿನ್ನಲೆಯಲ್ಲಿ, ಅಕ್ಟೋಬರ್ 3 ರಂದು ‘ನ್ಯೂಸ್ ಕ್ಲಿಕ್’ ಮಾಧ್ಯಮ ಮತ್ತು ಅದರ ಸಂಬಂಧಿತ ಪತ್ರಕರ್ತರಿಗೆ ಸೇರಿದ 100 ಸ್ಥಳಗಳಲ್ಲಿ 12 ಗಂಟೆಗಳ ಕಾಲ ದಾಳಿ ನಡೆಸಿದ ದೆಹಲಿ ಪೊಲೀಸರು, ಸೆಲ್ ಫೋನ್, ಲ್ಯಾಪ್ ಟಾಪ್, ಕಂಪ್ಯೂಟರ್ ಹಾರ್ಡ್ ಡಿಸ್ಕ್ ಇತ್ಯಾದಿಗಳನ್ನು ಜಪ್ತಿ ಮಾಡಿದ್ದಾರೆ. ‘ನ್ಯೂಸ್ ಕ್ಲಿಕ್’ ನೌಕರರು ಮತ್ತು 9 ಪತ್ರಕರ್ತರಿಗೆ 25 ಪ್ರಶ್ನೆಗಳ ಪಟ್ಟಿಯನ್ನು ನೀಡಿ ತನಿಖೆ ನಡೆಸಲಾಯಿತು.
ಇದನ್ನೂ ಓದಿ: ಜನರ ಮನಸ್ಥಿತಿ ಬದಲಾಗಿದೆ; ಮುಂದಿನ ದಿನಗಳಲ್ಲಿ ಕುಟುಂಬ ಪ್ರಾಬಲ್ಯವಿರುವ ರಾಜ್ಯ ಪಕ್ಷಗಳು ನೆಲಕಚ್ಚುವುದು ಖಚಿತ!
ಇದಕ್ಕೂ ಮುನ್ನ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಹೊಸ ಪ್ರಕರಣವನ್ನು ದಾಖಲಿಸಿಕೊಂಡ ದೆಹಲಿ ಪೊಲೀಸರು, 12 ಗಂಟೆಗಳ ದಾಳಿ ಮತ್ತು ವಿಚಾರಣೆಯ ನಂತರ, ‘ನ್ಯೂಸ್ ಕ್ಲಿಕ್’ ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ರಾತ್ರಿ ಬಂಧಿಸಲಾಗಿದೆ.
‘ನ್ಯೂಸ್ ಕ್ಲಿಕ್’ ಮೇಲಿನ ದಾಳಿಯು ದೇಶಾದ್ಯಂತ ಆಘಾತವನ್ನು ಉಂಟುಮಾಡಿದೆ. ‘ಇಂಡಿಯಾ’ ಮೈತ್ರಿಕೂಟದ ವಿರೋಧ ಪಕ್ಷಗಳು ಮತ್ತು ಭಾರತೀಯ ಪತ್ರಕರ್ತರ ಸಂಘ, ಪತ್ರಕರ್ತರ ರಾಷ್ಟ್ರೀಯ ಒಕ್ಕೂಟ, ದೆಹಲಿ ಪತ್ರಕರ್ತರ ಒಕ್ಕೂಟ ಮತ್ತು ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಮುಂತಾದ ಸಂಘಟನೆಗಳು ‘ಇದು ಮೋದಿ ಸರ್ಕಾರದ ದಬ್ಬಾಳಿಕೆ ವಿಧಾನ’ ಎಂದು ಖಂಡಿಸಿವೆ.
ಇದನ್ನೂ ಓದಿ: ಕಾವಾಡಿಗರ ಹಟ್ಟಿಯ ಅಭಿವೃದ್ದಿಗೆ 3 ಎಕರೆ ಜಾಗ 4 ಕೋಟಿ ರೂಪಾಯಿ: ಸಿದ್ದರಾಮಯ್ಯ
ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರು, “ಚೀನಾದ ಕಂಪನಿಗಳಿಂದ ಭಾರಿ ಹಣ ಪಡೆದಿರುವ ‘ಪಿಎಂ ಕೇರ್ಸ್’ (PM CARES) ನ ವ್ಯವಸ್ಥಾಪಕರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ” ಎಂದು ಪ್ರಶ್ನಿಸಿದ್ದಾರೆ. ಈ ಹಿನ್ನಲೆಯಲ್ಲಿ, “ಮೋದಿ ಸರಕಾರವೇ ಚೀನಾಕ್ಕೆ ಬೆಂಬಲವಾಗಿ ವರ್ತಿಸುತ್ತಿದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಈ ಬಗ್ಗೆ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ‘ಎಕ್ಸ್’ ಪೇಜ್ ನಲ್ಲಿ, “ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು 20 ಬಾರಿ ಭೇಟಿಯಾಗಿದ್ದಾರೆ. ಜೂನ್ 19, 2020 ರಂದು ಚೀನಾ ಸೇನೆಯು ಗಡಿಯಲ್ಲಿ ಅತಿಕ್ರಮಣ ಮಾಡಿದಾಗ ಅದರ ಬಗ್ಗೆ ಅವರು ಯಾವುದೇ ಪ್ರಶ್ನೆಗಳನ್ನು ಎತ್ತಲಿಲ್ಲ. ಪಿಎಂ ಕೇರ್ಸ್‌ಗಾಗಿ ಚೀನಾ ಕಂಪನಿಗಳಿಗೆ ಕೋಟಿಗಟ್ಟಲೆ ಹಣ ನೀಡಲು ಮೋದಿ ಅವಕಾಶ ನೀಡಿದ್ದರು. ಹಾಗಾದರೆ ವಿದೇಶಿ ಶಕ್ತಿಗಳು ಯಾರನ್ನು ನಿಯಂತ್ರಿಸುತ್ತಿವೆ?” ಎಂದು ಪ್ರಶ್ನಿಸಿ ಆರೋಪಿಸಿದ್ದಾರೆ.