ಉತ್ತರ ಪ್ರದೇಶ: 17 ವರ್ಷದ ಬಾಲಕಿಯನ್ನು ಅಪಹರಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಬಂದ ವ್ಯಕ್ತಿ, ಮತ್ತೆ ಅದೇ ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಮತ್ತೆ ಬಂಧನಕ್ಕೊಳಗಾಗಿರುವ ಘಟನೆ ಆಘಾತವನ್ನು ಉಂಟು ಮಾಡಿದೆ.
ವಿರನಾಥ್ ಪಾಂಡೆ, ಬಿಹಾರ ರಾಜ್ಯದ ಭೋಜ್‌ಪುರ ಜಿಲ್ಲೆಯವನು. ಉತ್ತರ ಪ್ರದೇಶದಲ್ಲಿ 17 ವರ್ಷದ ಬಾಲಕಿಯನ್ನು ಅಪಹರಿಸಿದ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿದವನು.
ಈ ಹಿನ್ನೆಲೆಯಲ್ಲಿ, ಸಂತ್ರಸ್ತೆಯ ತಂದೆ ಕಳೆದ ಮೇನಲ್ಲಿ ತನ್ನ ಮಗಳು ಮತ್ತೆ ಕಾಣೆಯಾಗಿದ್ದಾಳೆ ಎಂದು ಕೊಯ್ರಾವುನಾ (Koirauna) ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ನಂತರ ಪೊಲೀಸರು ಪ್ರಥಮ ಮಾಹಿತಿ ವರದಿ (FIR) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಹೆಚ್ಚಿನ ತನಿಖೆಯಲ್ಲಿ ಬಾಲಕಿಯನ್ನು ರಕ್ಷಿಸಿದ್ದು, ಪಾಂಡೆಯನ್ನು ಜೈಲಿಗೆ ಕಳುಹಿಸಲಾಗಿದೆ.
ಈ ಕುರಿತು ಮಾತನಾಡಿದ ಕೊಯ್ರಾವುನಾ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಮನೋಜ್ ಕುಮಾರ್, ‘ಪಾಂಡೆ ಜಾಮೀನಿನ ಮೇಲೆ ಹೊರಬಂದ ಕೆಲವು ದಿನಗಳ ನಂತರ ಅಂದರೆ, ಆಗಸ್ಟ್ 5 ರಂದು ಹುಡುಗಿಯನ್ನು ಅಪಹರಿಸಿ, ಒಂದು ತಿಂಗಳ ಕಾಲ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ನಂತರ ಸೆಪ್ಟೆಂಬರ್ 2 ರಂದು ಜಂಗಿಗಂಜ್ (Jangiganj) ರೈಲ್ವೆ ನಿಲ್ದಾಣದ ಬಳಿ ಬಾಲಕಿಯನ್ನು ಬಿಟ್ಟು ಪಾಂಡೆ ಪರಾರಿಯಾಗಿದ್ದಾನೆ. ಇದರ ನಂತರ ಸಂತ್ರಸ್ತೆ ಕಳೆದ ಒಂದು ತಿಂಗಳಿನಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದಳು.
ಪಾಂಡೆ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ, ಅಪಹರಣ ಮತ್ತು ಪೋಕ್ಸೋ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಮಹಿಳೆಯ ವೈದ್ಯಕೀಯ ಪರೀಕ್ಷೆಯಲ್ಲಿ, ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ’ ಎಂದು ಅವರು ಹೇಳಿದರು.
ಪಾಂಡೆ ಅವರನ್ನು ನಿನ್ನೆ (ಸೆ.9) ಇಟಹರಾ ಚೌರಾಹಾ (Itahara Chaura)ದಲ್ಲಿ ಬಂಧಿಸಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.