ಇಂದು ಬಿಹಾರದ ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಮಾಲೋಚನಾ ಸಭೆ ಮುಕ್ತಾಯವಾಗಿದೆ. ಜೆಡಿಯು ಅಧ್ಯಕ್ಷ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಸುಮಾರು 4 ಗಂಟೆಗಳ ಕಾಲ ಸಮಾಲೋಚನೆ ಸಭೆ ನಡೆಯಿತು.
ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಕೆ.ಸಿ.ವೇಣುಗೋಪಾಲ್, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಹಾಗೂ ಟಿ.ಆರ್.ಬಾಲು, ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್‌ನ ಉಮರ್ ಅಬ್ದುಲ್ಲಾ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕಿ ಮೆಹಬೂಬಾ ಮುಫ್ತಿ, ರಾಷ್ಟ್ರೀಯ ಜನತಾ ದಳದ ನಾಯಕ ಲಾಲು ಪ್ರಸಾದ್ ಯಾದವ್ ಹಾಗೂ ತೇಜಸ್ವಿ ಯಾದವ್, ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಡಿ.ರಾಜಾ, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸೀತಾರಾಂ ಯೆಚೂರಿ, ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಅಧ್ಯಕ್ಷ ಉದ್ಧವ್ ಠಾಕ್ರೆ, ಜಾರ್ಖಂಡ್ ಮುಕ್ತಿ ಮೋರ್ಚಾ ಅಧ್ಯಕ್ಷ ಹೇಮಂತ್ ಸೊರೆನ್ ಸೇರಿದಂತೆ 15ಕ್ಕೂ ಹೆಚ್ಚು ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದರು.
ಸಮಾಲೋಚನಾ ಸಭೆಯ ನಂತರ, ವಿರೋಧ ಪಕ್ಷಗಳ ನಾಯಕರು ಜಂಟಿಯಾಗಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಮಾತನಾಡಿ, “ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲಾಯಿತು. ಬಿಜೆಪಿಯ ಕಳೆದ 9 ವರ್ಷಗಳ ಆಡಳಿತ ಅನಾಹುತಕ್ಕೆ ಕಾರಣವಾಗಿದೆ. ಬಿಜೆಪಿ ಆಡಳಿತದಲ್ಲಿ ದೇಶದ ಪ್ರಜಾಪ್ರಭುತ್ವ ಮತ್ತು ಸಮಾಜ ದುರಂತವಾಗಿದೆ. ಮೋದಿ ನೇತೃತ್ವದ ಸರ್ಕಾರ ದೊಡ್ಡ ಉದ್ಯಮಿಗಳ ಪರವಾಗಿ ನಾಚಿಕೆಯಿಲ್ಲದೆ ಕೆಲಸ ಮಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ದೇಶದಲ್ಲಿ ಪ್ರಜಾಪ್ರಭುತ್ವ ಕಣ್ಮರೆಯಾಗುತ್ತದೆ. ಬಿಜೆಪಿಯನ್ನು ಸೋಲಿಸಲೇಬೇಕು ಎಂದು ವಿರೋಧ ಪಕ್ಷಗಳು ತೀರ್ಮಾನಿಸಿವೆ” ಎಂದರು.
ಮಲ್ಲಿಕಾರ್ಜುನ ಖರ್ಗೆ: “ಜಾತ್ಯತೀತ ಪಕ್ಷದ ನಾಯಕರ ಮುಂದಿನ ಸಭೆ ಜುಲೈ 12 ರಂದು ಶಿಮ್ಲಾದಲ್ಲಿ ನಡೆಯಲಿದೆ. ಸಭೆಯಲ್ಲಿ ರಾಜ್ಯಗಳ ಪ್ರಮುಖ ನಾಯಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪ್ರಾದೇಶಿಕ ಪಕ್ಷಗಳ ವಿಲೀನದ ಬಗ್ಗೆಯೂ ಚರ್ಚಿಸಿದ್ದೇವೆ” ಎಂದರು.
ರಾಹುಲ್ ಗಾಂಧಿ: ” ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದ ರಚನೆಯನ್ನು ಹಾಳು ಮಾಡುತ್ತಿವೆ. ನಮ್ಮ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾವು ಸಿದ್ಧಾಂತದಲ್ಲಿ ಒಂದಾಗಿದ್ದೇವೆ” ಎಂದರು.
ಮಮತಾ ಬ್ಯಾನರ್ಜಿ: “ಬಿಹಾರದಲ್ಲಿನ ಗೊಂದಲವೇ ವಿರೋಧ ಪಕ್ಷಗಳು ಒಗ್ಗೂಡಲು ಕಾರಣ. ಸಿಬಿಐ ಹಾಗೂ ಇಡಿಯನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಬಳಿ ಹೋರಾಡಬೇಕಿದೆ. ಕೇಂದ್ರ ಸರ್ಕಾರ ಯಾವುದೇ ವಿಷಯದ ಬಗ್ಗೆ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸುವುದಿಲ್ಲ. ನಾವು ಒಗ್ಗಟ್ಟಾಗಿದ್ದೇವೆ; ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಮುಂದಿನ ಸಭೆಯಲ್ಲಿ ಬಿಜೆಪಿಯನ್ನು ಸೋಲಿಸುವ ಬಗ್ಗೆ ವಿವರವಾಗಿ ಚರ್ಚಿಸುತ್ತೇವೆ. ಇತಿಹಾಸ ಇಲ್ಲಿಂದ ಆರಂಭವಾಗುತ್ತದೆ. ಇತಿಹಾಸ ಬದಲಿಸುವ ಬಿಜೆಪಿಯ ಪ್ರಯತ್ನವನ್ನು ಒಗ್ಗಟ್ಟಾಗಿ ಎದುರಿಸೋಣ. ಈ ಬಾರಿಯೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗೆದ್ದರೆ ಅದು ಭಾರತದ ಕೊನೆಯ ಸಾರ್ವತ್ರಿಕ ಚುನಾವಣೆಯಾಗಲಿದೆ” ಎಂದರು.
ಮೆಹಬೂಬಾ ಮುಫ್ತಿ: “ದೇಶದ ಜಾತ್ಯತೀತ ಸ್ವರೂಪದ ಮೇಲೆ ದಾಳಿ ನಡೆಯುತ್ತಿದೆ. ಗಾಂಧಿಯನ್ನು ಬೆಂಬಲಿಸೋಣ; ಗೋಡ್ಸೆಯನ್ನು ಅಲ್ಲ” ಎಂದು ಹೇಳಿದರು.
ವಿರೋಧ ಪಕ್ಷದ ನಾಯಕರ ಮುಂದಿನ ಸಭೆ ಜುಲೈ 12 ರಂದು ಶಿಮ್ಲಾದಲ್ಲಿ ನಡೆಯಲಿದೆ. ಈ ಸಭೆಗೆ ಕಾಂಗ್ರೆಸ್ ನೇತೃತ್ವ ವಹಿಸಲಿದೆ ಎಂದು ತಿಳಿದು ಬಂದಿದೆ.