ಬೆಂಗಳೂರು : ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸಿದೆ. ಸದ್ಯ ರಾಜ್ಯ ಪೊಲೀಸ್ ಇಲಾಖೆಯ ಸಿಸಿಬಿ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ. ಈಗ ಎನ್‌ಐಎ ಪ್ರಕರಣದ ವಿಚಾರಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ. ಪ್ರಕರಣದಲ್ಲಿ ಇನ್ನು ಯಾವುದೇ ಆರೋಪಿಯನ್ನು ಬಂಧಿಸಿಲ್ಲ.
ಮಾರ್ಚ್ 1 ರಂದು ವೈಟ್‌ಫೀಲ್ಡ್‌ನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಮಧ್ಯಾಹ್ನ ಬಾಂಬ್ ಸ್ಫೋಟವಾಗಿತ್ತು. ಘಟನೆಯಲ್ಲಿ 9 ಜನ ಗಾಯಗೊಂಡಿದ್ದರು. ಮೊದಲು ಸಿಲಿಂಡರ್ ಸ್ಫೋಟ ಎನ್ನಲಾಗಿತ್ತು. ಆದರೆ, ಬಳಿಕ ಅದು ಸುಧಾರಿತ ಐಇಡಿ ಬಳಸಿ ಮಾಡಿರುವ ಸ್ಫೋಟ ಎಂದು ದೃಢವಾಯಿತು. ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಬಾಂಬ್ ಇರುವ ಬ್ಯಾಗ್ ಅನ್ನು ಹೋಟೆಲ್‌ನಲ್ಲಿಯೆ ಬಿಟ್ಟು ಹೋಗಿದ್ದ. ಅದು ಬಳಿಕ ಸ್ಫೋಟಗೊಂಡಿತ್ತು.
ಸ್ಫೋಟದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು, ಬಿಜೆಪಿ ನಾಯಕರು ಎನ್‌ಐಎ ತನಿಖೆಗೆ ಆಗ್ರಹಿಸಿದ್ದರು. ಅದರಂತೆ ಕೇಂದ್ರ ಗೃಹ ಸಚಿವಾಲಯ ಪ್ರಕರಣದ ತನಿಖೆಯನ್ನು ಈಗ ಎನ್‌ಐಎಗೆ ವಹಿಸಿದೆ. ಈಗಾಗಲೇ ಎನ್‌ಐಎ ಅಧಿಕಾರಿಗಳು ಪ್ರಕರಣದ ವಿಚಾರವಾಗಿ ಸಿಸಿಬಿ ಪೊಲೀಸರಿಗೆ ಸಹಾಯ ಮಾಡುತ್ತಿದ್ದರು. ಈಗ ಪೂರ್ತಿ ಪ್ರಕರಣವನ್ನು ಅವರೇ ತನಿಖೆ ನಡೆಸಲಿದ್ದಾರೆ.