ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಕರ್ನಾಟಕ ಬಿಜೆಪಿ Archives » Page 2 of 3 » Dynamic Leader
October 16, 2024
Home Posts tagged ಕರ್ನಾಟಕ ಬಿಜೆಪಿ (Page 2)
ದೇಶ ರಾಜಕೀಯ

ಜೈಪುರ: ‘ಬಡವರನ್ನು ವಂಚಿಸುವುದು ಕಾಂಗ್ರೆಸ್ ತಂತ್ರ; ಕಳೆದ 50 ವರ್ಷಗಳಿಂದಲೂ ಅದನ್ನೇ ಮಾಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದಲ್ಲಿ ಆಯೋಜಿಸಿದ್ದ ಬೃಹತ್ ರ‍್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿಯ 9 ವರ್ಷಗಳ ಆಡಳಿತ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಇಂದು (ಮೇ 31) ಪ್ರಧಾನಿ ಮೋದಿ ಅವರು ರಾಜಸ್ಥಾನದ ಅಜ್ಮೀರ್‌ನಲ್ಲಿ ಮೆಗಾ ರ‍್ಯಾಲಿಯನ್ನು ಉದ್ಘಾಟಿಸಿದರು. ಇದೇ ರೀತಿಯ ರ‍್ಯಾಲಿಗಳನ್ನು ದೇಶಾದ್ಯಂತ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಒಂದು ತಿಂಗಳ ಕಾಲ ಈ ರ‍್ಯಾಲಿ ನಡೆಯಲಿದೆ. ಇದರಲ್ಲಿ ಕೇಂದ್ರ ಸಚಿವರು, ಸಂಸದರು, ಬಿಜೆಪಿ ನಾಯಕರು ಭಾಗವಹಿಸಿ, ತಮ್ಮ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲಿದ್ದಾರೆ.

ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ರಾಜಸ್ಥಾನದ ಅಜ್ಮೀರ್‌ಗೆ ಬರುವ ಮೊದಲು, ಬ್ರಹ್ಮ ದೇವಾಲಯ ಪುಷ್ಕರಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತು. ಬ್ರಹ್ಮದೇವನ ಆಶೀರ್ವಾದದಿಂದ, ಭಾರತದಲ್ಲಿ ಹೊಸ ಸೃಷ್ಟಿಗಳ ಯುಗ ನಡೆಯುತ್ತಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ 9 ವರ್ಷಗಳ ಆಡಳಿತ ಪೂರ್ಣಗೊಂಡಿದೆ. ಈ 9 ವರ್ಷಗಳ ಸರ್ಕಾರದ ಅವಧಿಯಲ್ಲಿ ಬಡವರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ತರಲಾಗಿದೆ.

ಬ್ರಹ್ಮ ದೇವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ

2014ರ ಮೊದಲು ಪರಿಸ್ಥಿತಿ ಹೇಗಿತ್ತು? ಆ ಸಂದರ್ಭದಲ್ಲಿ ಭಯೋತ್ಪಾದಕ ದಾಳಿಗಳು ನಡೆದವು. ಗಡಿಯಲ್ಲಿ ರಸ್ತೆ ನಿರ್ಮಿಸಲು ಕಾಂಗ್ರೆಸ್ ಸರಕಾರ ಹೆದರುತಿತ್ತು. ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಾಣುತಿತ್ತು. ಕಾಂಗ್ರೆಸ್ ಸರ್ಕಾರ ರಿಮೋಟ್ ಕಂಟ್ರೋಲ್ ಮೂಲಕ ಕೆಲಸ ಮಾಡುತಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಕೇವಲ 60% ಲಸಿಕೆಗಳನ್ನು ಮಾತ್ರ ಜನರಿಗೆ ನೀಡಲಾಗುತ್ತಿತ್ತು. 100ರಲ್ಲಿ 40 ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳಿಗೆ ಜೀವ ಉಳಿಸುವ ಲಸಿಕೆಗಳನ್ನು ನೀಡಲು ಅಸಮರ್ಥರಾಗಿದ್ದರು. ಪ್ರಸ್ತುತ, 100% ಲಸಿಕೆಗಳನ್ನು ಎಲ್ಲರಿಗೂ ನೀಡಲಾಗುತ್ತಿದೆ.

ಈಗ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ. ದೇಶದಲ್ಲಿ 100% ಲಸಿಕೆಗಳ ವ್ಯಾಪ್ತಿಯನ್ನು ಸಾಧಿಸಲು ಇನ್ನೂ 40 ವರ್ಷಗಳನ್ನು ತೆಗೆದುಕೊಳ್ಳುತಿತ್ತು. ಜೀವ ಉಳಿಸುವ ಲಸಿಕೆಗಳು ಲಭ್ಯವಿಲ್ಲದಿದ್ದಾಗ, ಸತ್ತ ಬಡ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯನ್ನು ನೀವು ಊಹಿಸಬಲ್ಲಿರಾ? ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಸುಳ್ಳು ಭರವಸೆ ನೀಡುವುದು ಹೊಸದೇನಲ್ಲ. ಇದನ್ನು 50 ವರ್ಷಗಳ ಹಿಂದಿನಿಂದಲೂ ಮಾಡುತ್ತಿದೆ.

ಇದು ಬಡವರಿಗೆ ಆ ಪಕ್ಷ ಮಾಡುವ ದೊಡ್ಡ ದ್ರೋಹವಾಗಿದೆ. ಬಡವರಿಗೆ ಮೋಸ ಮಾಡುವುದೇ ಕಾಂಗ್ರೆಸ್ ತಂತ್ರ. ಇದರಿಂದ ರಾಜಸ್ಥಾನದ ಜನರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಒಂದು ಹುದ್ದೆ, ಒಂದು ಪಿಂಚಣಿ ಹೆಸರಿನಲ್ಲಿ, ಮಾಜಿ ಸೈನಿಕರಿಗೆ ದ್ರೋಹ ಬಗೆದಿದ್ದಾರೆ. ಆದರೆ ಬಿಜೆಪಿ ಸರ್ಕಾರ ಮಾಜಿ ಸೈನಿಕರಿಗೆ ಬಾಕಿ ಹಣ ನೀಡಿ, ಅವರ ಅಭಿವೃದ್ಧಿಗೆ ನೆರವಾದರು’ ಎಂದು ಪ್ರಧಾನಿ ಮೋದಿ ಮಾತನಾಡಿದರು.

ರಾಜಕೀಯ

“ಮಣಿಪುರ ಹೊತ್ತಿ ಉರಿಯುತ್ತಿದೆ! ಮಣಿಪುರದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವಿದೆ! ಪ್ರಧಾನಿ ಮತ್ತು ಗೃಹ ಸಚಿವರು ಕರ್ನಾಟಕದಲ್ಲಿ ರೋಡ್ ಷೋ ಮಾಡುತ್ತ ಬ್ಯುಸಿಯಾಗಿದ್ದಾರೆ”! ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷವು ಸರಣಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದೆ.

“ಎಲ್ಲಾ ಗಲಭೆಗಳು ನಡೆಯೋದು ಬಿಜೆಪಿ ಆಡಳಿತದಲ್ಲೇ ಏಕೆ? ಗುಜರಾತ್ ಗಲಭೆ: ಬಿಜೆಪಿ ಸರ್ಕಾರ, ತ್ರಿಪುರ ಗಲಭೆ: ಬಿಜೆಪಿ ಸರ್ಕಾರ, ಬೆಂಗಳೂರು ಗಲಭೆ: ಬಿಜೆಪಿ ಸರ್ಕಾರ, ದೆಹಲಿ ಗಲಭೆ: ಬಿಜೆಪಿ ಸರ್ಕಾರ, ಈಗ ಮಣಿಪುರ ಗಲಭೆ: ಬಿಜೆಪಿ ಸರ್ಕಾರ. ಬಿಜೆಪಿ ಆಡಳಿತದಲ್ಲಿ ಜನರಿಗೆ ತಮ್ಮ ಸ್ವಂತ ಮನೆಯೊಳಗೇ ರಕ್ಷಣೆ ಇಲ್ಲವಾದಾಗ ದೇಶದ ರಕ್ಷಣೆ ಸಾಧ್ಯವೇ?

ನಿಜವಾದ ಭಜರಂಗಿಗಳು (ಕ್ರೀಡಾಪಟುಗಳು) ದೆಹಲಿಯ ಜಂತರ್ ಮಂಥರ್‌ನಲ್ಲಿ ತಮಗಾದ ಶೋಷಣೆಯ ನೋವು ತಾಳದೆ ಪ್ರತಿಭಟಿಸುತ್ತಿದ್ದಾರೆ. ನರೇಂದ್ರ ಮೋದಿ ಅವರೇ, ಇಲ್ಲಿನ ನಕಲಿ ಭಜರಂಗಿಗಳ ಓಲೈಕೆ ಬಿಟ್ಟು ಅಸಲಿ ಭಜರಂಗಿಗಳ ನೋವು ಆಲಿಸಿ. ಅಲ್ಲೂ “ಬಜರಂಗಿ ಪುನಿಯಾ” ಎಂಬ ಹೆಸರಿನ ಕ್ರೀಡಾಪಟು ನೋವಿನಲ್ಲಿದ್ದಾರೆ. ನಿಮಗೆ ಆ ಅಸಲಿ ಬಜರಂಗಿಗಳ ಹಿತ ಬೇಡವೇ?

ಬಜರಂಗದಳ ಬಿಜೆಪಿಯ ಮುದ್ದಿನ ಕೂಸು ಎಂದಾದರೆ, ದಿನೇಶ್ ನಾಯ್ಕ ಎಂಬ ದಲಿತನ ಕೊಲೆಯ ಹೊಣೆಯನ್ನು ಬಿಜೆಪಿ ಹೊರಲಿ; ಮಂಗಳೂರಿನ ಪಬ್ ದಾಳಿಯ ಹೊಣೆಯನ್ನು ಬಿಜೆಪಿ ಹೊರಲಿ; ಸಮಾಜಘಾತುಕ ಕೃತ್ಯಗಳೆಲ್ಲದರ ಹೊಣೆಯನ್ನು ಬಿಜೆಪಿಯೇ ಹೊರಲಿ; ನಂತರ ಬಜರಂಗದಳವನ್ನು ಸಮರ್ಥಿಸಿಕೊಳ್ಳಲಿ.

ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವ ಬಜರಂಗದಳ, PFI ಸೇರಿದಂತೆ ಯಾವುದೇ ಸಂಘಟನೆಯ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದರೆ ಉರಿದು ಬೀಳುವ ಬಿಜೆಪಿ ಸಂವಿಧಾನ ಬದಲಿಸುತ್ತೇವೆ ಎಂದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ? ನರೇಂದ್ರ ಮೋದಿ ಅವರೇ ಹಾಗೂ ಬಿಜೆಪಿಗೆ ಸಂವಿಧಾನ ಮುಖ್ಯವೇ, ಸಂವಿಧಾನ ವಿರೋಧಿ ಸಂಘಟನೆಗಳು ಮುಖ್ಯವೇ? ಸ್ಪಷ್ಟಪಡಿಸಿ ನಂತರ ಮಾತಾಡಲಿ.

ಬಜರಂಗದಳ ಬಿಜೆಪಿಯ ಅಂಗಸಂಘಟನೆಯೇ? ಇಷ್ಟೊಂದು ಮಮಕಾರ ತೋರುವ ಕರ್ನಾಟಕ ಬಿಜೆಪಿ, ಬಜರಂಗದಳದವರಿಗೆ ಎಷ್ಟು ಟಿಕೆಟ್ ನೀಡಿದೆ? ಹಿರಿಯರ ನಾಯಕತ್ವವನ್ನು ಮುಗಿಸಲು ಅವರ ಮಕ್ಕಳು, ಸೊಸೆಯಂದಿರು, ಪತ್ನಿಯರಿಗೆ ಟಿಕೆಟ್ ನೀಡುವ ಬದಲು ಬಜರಂಗದಳದವರಿಗೆ ಟಿಕೆಟ್ ನೀಡಿಲ್ಲವೇಕೆ? ಅಮಾಯಕ ಹುಡುಗರನ್ನು ಕಾನೂನು ವಿರೋಧಿ ಕೃತ್ಯಗಳಿಗೆ ಬಳಸಿ ಲಾಭ ಪಡೆಯುವುದು ಮಾತ್ರ ಬಿಜೆಪಿಯ ಕೆಲಸವೇ?

ಬಜರಂಗದಳ ಅತ್ಯತ್ತಮ ಸಂಘಟನೆಯಾಗಿದ್ದರೆ ಅಮಿತ್ ಶಾ ಅವರು ತಮ್ಮ ಮಗನನ್ನು BCCI ಹುದ್ದೆಯಿಂದ ಕಿತ್ತು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ನೇಮಿಸಲಿ. ಬೊಮ್ಮಾಯ್ ತಮ್ಮ ಮಗನ ಉದ್ಯಮವನ್ನು ಮುಚ್ಚಿಸಿ ರಾಜ್ಯಾಧ್ಯಕ್ಷನನ್ನಾಗಿ ಮಾಡಲಿ. ಬಿಜೆಪಿಗರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಡವರ, ದಲಿತ, ಹಿಂದುಳಿದವರ ಮಕ್ಕಳನ್ನು ಬಳಸಿ ಕೋರ್ಟು, ಕೇಸಿಗೆ ಅಲೆಯುವಂತೆ ಮಾಡುವುದನ್ನು ಬಿಡಲಿ.

ಬಜರಂಗದಳ ಬಗ್ಗೆ ಭಯಂಕರವಾಗಿ ಮಾತನಾಡುವ ಕರ್ನಾಟಕ ಬಿಜೆಪಿ ನಾಯಕರು ಉತ್ತರಿಸಲಿ. ಸಿ.ಟಿ.ರವಿ ಮಕ್ಕಳು, ಬಜರಂಗದಳದ ಯಾವ ಹುದ್ದೆಯಲ್ಲಿದ್ದಾರೆ? ಆರ್.ಅಶೋಕ್ ಮಗ ಬಜರಂಗದಳಲ್ಲಿ ಏನು ಕೆಲಸ ಮಾಡುತ್ತಿದ್ದಾರೆ? ತೇಜಶ್ವಿ ಸೂರ್ಯ ಏಕೆ ಬಜರಂಗದಳ ಸೇರಿಲ್ಲ? ಬೊಮ್ಮಾಯ್ ಮಗ ಬಜರಂಗದಳ ಸೇರಿ ಬೆಂಕಿ ಹಚ್ಚುವುದನ್ನು ಬಿಟ್ಟು ಉದ್ಯಮಿಯಾಗಿದ್ದೇಕೆ”? ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷವು ಸರಣಿ ಟ್ವೀಟ್ ಮಾಡಿ ಬಿಜೆಪಿಯ ವಿರುದ್ಧ ಕೆಂಡ ಕಾರಿದೆ.

ರಾಜಕೀಯ

ತುಮಕೂರು: “ಕಳೆದ 3 ವರ್ಷಗಳಿಂದ ಬಿಜೆಪಿ ಮಾಡುತ್ತಿರುವ ಏಕೈಕ ಕೆಲಸವೆಂದರೆ ಅದು ಭ್ರಷ್ಟಾಚಾರ ಮಾತ್ರ. ಇದರಿಂದಾಗಿ ಕರ್ನಾಟಕದ ಜನತೆ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆಯುತ್ತಾರೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ  .

ತುಮಕೂರುನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರುತ್ತಾರೆ, ಬಂದು ತಮ್ಮ ಬಗ್ಗೆ ಮಾತ್ರವೇ ಮಾತನಾಡುತ್ತಾರೆ. ಕರ್ನಾಟಕ ಚುನಾವಣೆ ತನ್ನ ಬಗ್ಗೆ ಅಲ್ಲ ಎಂಬುದನ್ನು ನರೇಂದ್ರ ಮೋದಿ ಅರ್ಥಮಾಡಿಕೊಳ್ಳಬೇಕು ಎಂದು ಲೇವಡಿ ಮಾಡಿದರು. ತಮ್ಮ ಬಗ್ಗೆ ಮಾತನಾಡುವ ಬದಲು ಬಿಜೆಪಿ ಸರ್ಕಾರದ ಕಾರ್ಯಗಳು ಮತ್ತು ಕರ್ನಾಟಕದ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ಮಾತನಾಡುವಂತೆ ಪ್ರಧಾನಿಯನ್ನು ಕೋರಿದ ಅವರು, ನೀವು ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದೀರಿ, ಆದರೆ ಕರ್ನಾಟಕದ ಬಗ್ಗೆ ಮಾತನಾಡದೇ ನೀವು ನಿಮ್ಮ ಬಗ್ಗೆ ಮಾತ್ರವೇ ಮಾತನಾಡುತ್ತೀರಿ.

ಮುಂದಿನ ಐದು ವರ್ಷಗಳಲ್ಲಿ ನೀವು ಏನು ಮಾಡುತ್ತೀರಿ, ಯುವಕರು, ಶಿಕ್ಷಣ, ಆರೋಗ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಏನು ಮಾಡುತ್ತೀರಿ ಎಂಬುದರ ಕುರಿತು ನಿಮ್ಮ ಭಾಷಣಗಳಲ್ಲಿ ನೀವು ಮಾತನಾಡಬೇಕು. ಈ ಚುನಾವಣೆ ನಿಮ್ಮದಲ್ಲ, ಕರ್ನಾಟಕದ ಜನರು ಮತ್ತು ಭವಿಷ್ಯದ ಬಗ್ಗೆ ಆಗಿದೆ. ಕಳೆದ ಮೂರು ವರ್ಷಗಳಿಂದ ಬಿಜೆಪಿಯವರು ಭ್ರಷ್ಟಾಚಾರ ಮಾತ್ರ ಮಾಡುತ್ತಿದ್ದಾರೆ. ಇದರ ಫಲವಾಗಿ ಕರ್ನಾಟಕದ ಜನ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆಯುತ್ತಾರೆ. ಅಂದರೆ ಬಿಜೆಪಿಯವರು ಸಾರ್ವಜನಿಕರಿಗೆ ಮಾಡುವ ಎಲ್ಲಾ ಕೆಲಸಗಳಿಗೆ ಜನರಿಂದ ಶೇಕಡಾ 40 ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ ಎಂಬುದಕ್ಕಾಗಿ. ಇದು ಪ್ರಧಾನಿಗೂ ಗೊತ್ತಿದೆ. ಆದರೆ ಅವರು ಏಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ?

ಕಾಂಗ್ರೆಸ್ 91 ಬಾರಿ ನಿಮ್ಮನ್ನು ನಿಂದಿಸಿದೆ ಎಂದು ನೀವು ಹೇಳುತ್ತೀರಿ, ಆದರೆ ನೀವು ಕರ್ನಾಟಕಕ್ಕಾಗಿ ಏನು ಮಾಡಿದ್ದೀರಿ ಎಂಬುದರ ಬಗ್ಗೆ ಮಾತನಾಡುವುದಿಲ್ಲ. ಮುಂದಿನ ಭಾಷಣದಲ್ಲಿ ನೀವು ಏನು ಮಾಡಿದ್ದೀರಿ ಮತ್ತು ಮುಂದಿನ ಐದು ವರ್ಷಗಳಲ್ಲಿ ನೀವು ಏನು ಮಾಡುತ್ತೀರಿ ಎಂಬುದರ ಕುರಿತು ಮಾತನಾಡಿ” ಎಂದು ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಕಿಡಿ ಕಾರಿದರು.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಬಿಜೆಪಿಯವರು ಪದೇ ಪದೇ ‘ಡಬಲ್ ಎಂಜಿನ್ ಸರ್ಕಾರ; ಡಬಲ್ ಎಂಜಿನ್ ಸರ್ಕಾರ’ ಎಂದು ಹೇಳುತ್ತಿರುವುದನ್ನು ನಾವೆಲ್ಲರು ಕೇಳಿದ್ದೇವೆ. “ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ; ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ; ಅದರಿಂದ ರಾಜ್ಯದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಆದ್ದರಿಂದ ‘ಡಬಲ್ ಎಂಜಿನ್ ಸರ್ಕಾರ’ ಮುಂದುವರಿಯಲು ಬಿಜೆಪಿಯನ್ನು ಬೆಂಬಲಿಸಿ” ಎಂದು ಅದರ ನಾಯಕರು ಹೇಳುತ್ತೀದ್ದಾರೆ.

ಉದಾಹರಣೆಗೆ: ನೀವೆ ಹೇಳಿ, ಜೋಡೆತ್ತಿನ ಬಂಡಿಯಲ್ಲಿ ಎರಡು ಎತ್ತುಗಳು ಸಮಾನವಾದ ತೂಕದಲ್ಲಿರಬೇಕು. ಒಂದು ಗಟ್ಟಿಯಾಗಿ ಮತ್ತೊಂದು ಸಡಿಲವಾಗಿದ್ದರೆ ಅಥವಾ ಒಂದು ಎತ್ತು ಎತ್ತರಕ್ಕೆ ಮತ್ತೊಂದು ಕುಳ್ಳಗೆ ಇದ್ದರೆ ಬಂಡಿ ಓಡುತ್ತೆ? ಕೇಂದ್ರ ಸರ್ಕಾರದ ಎಂಜಿನ್ ಬೇರೆ; ರಾಜ್ಯ ಸರ್ಕಾರಗಳ ಎಂಜಿನೇ ಬೇರೆ. ಕೇಂದ್ರಾಡಳಿತ ಪ್ರದೇಶಗಳ ಎಂಜಿನ್‌ಗಳು ಇದಕ್ಕಿಂತ ಬಿನ್ನವಾದದ್ದು. ಕೇಂದ್ರ ಸರ್ಕಾರದ ಎಂಜಿನ್ 500 ಸಿಸಿ ಆದರೆ, ರಾಜ್ಯ ಸರ್ಕಾರಗಳ ಇಂಜಿನ್ 200 ಸಿಸಿ. ಕೇಂದ್ರಾಡಳಿತ ಪ್ರದೇಶಗಳ ಎಂಜಿನ್ ಬರೀ 100 ಸಿಸಿ ಮಾತ್ರ. ಎಲ್ಲವೂ ಗಾಡಿಗಳೇ ಎಲ್ಲಾ ಗಾಡಿಗಳಿಗೂ ಎಂಜಿನ್ ಇದೆ. ಆದರೆ ಒಂದಕ್ಕೊಂದು ಹೊಲಿಕೆಯಾಗುವುದಿಲ್ಲ. ಅದರದ್ದೇ ಆದ ವಿಶೇಷತೆಗಳು ಇರುತ್ತದೆ. ಒಂದು ಗಾಡಿ ರಿಪೇರಿ ಆದಾಗ, ಮತ್ತೊಂದು ಗಾಡಿಯಿಂದ ಅದನ್ನು ಎಳೆದುಕೊಂಡು ಅಥವಾ ತಳ್ಳಿಕೊಂಡು ಹೋಗಿ ನಿರ್ದಿಷ್ಟವಾದ ಜಾಗಕ್ಕೆ ಸೇರಿಸಬಹುದು. ಆದರೆ ವಿಭಿನ್ನವಾದ ಎರಡು ಗಾಡಿಗಳನ್ನು ಒಂದಾಗಿ ಜೋಡಿಸಿ, ಅದರ ಮೇಲೆ ಕೇಂದ್ರವು ಸವಾರಿ ಮಾಡುತ್ತದೆ ಎಂದರೆ ಅದು ಸಾದ್ಯವಿಲ್ಲ. ಅದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ; ಪ್ರಜಾಪ್ರಭುತ್ವ ಅದನ್ನು ಒಪ್ಪುವುದೂ ಇಲ್ಲ.

ನೆನೆಪಿರಲಿ: ಬಿಜೆಪಿಯ ‘ಒಂದು ದೇಶ ಒಂದೇ ಧರ್ಮ’, ‘ಒಂದು ದೇಶ ಒಂದೇ ಭಾಷೆ’, ಒಂದು ದೇಶ ಒಂದೇ ಚುನಾವಣೆ’ ಮಾದರಿಯಲ್ಲಿ ‘ಒಂದು ದೇಶ ಒಂದೇ ಪಕ್ಷ’ ವೆಂಬ ರಾಜಕೀಯ ಘೋಷನೆಗೆ ಮತ್ತೊಂದು ಅಡ್ಡ ಹೆಸರೇ ‘ಡಬಲ್ ಎಂಜಿನ್ ಸರ್ಕಾರ’. ಈ ಡಬಲ್ ಎಂಜಿನ್ ಸರ್ಕಾರದ ಅಂತಿಮ ಗುರಿಯೇ ಏಕ ನಾಯಕತ್ವದ ಹಿಂದೂ ಬಿಜೆಪಿ ಸರ್ವಾಧಿಕಾರ ಆಡಳಿತ. ಅದರ ಉದ್ದೇಶ ಅಖಂಡ ಭಾರತವೆಂಬ ಹಿಂದೂ ರಾಷ್ಟ್ರ. ಭಾರತವು ಅನೇಕ ರಾಜ್ಯಗಳ ರಾಷ್ಟ್ರವಾಗಿದೆ. ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎಂಬ ತತ್ವವನ್ನು ತರಲು ಇಲ್ಲಿ ಸಾಧ್ಯವಿಲ್ಲ. 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳು ಹಾಗೂ ವೈವಿಧ್ಯಮಯ ಸಾಮಾಜಿಕ ಸಂಸ್ಕೃತಿಗಳನ್ನು ಹೊಂದಿರುವ ಭಾರತದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಫೆಡರಲ್ ರಚನೆಯ ಆಧಾರದ ಮೇಲೆ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೊಡುಗೆ ನೀಡಬೇಕು. ಅದನ್ನು ಬಿಟ್ಟು, ಡಬಲ್ ಎಂಜಿನ್ ಸರ್ಕಾರದ ಹೆಸರಿನಲ್ಲಿ ಒಂದು ದೇಶ ಒಂದೇ ಪಕ್ಷವನ್ನು ಜಾರಿಗೊಳಿಸಲು ಮುದಾಗುವುದು ಸಮಯ ವ್ಯರ್ಥ. “ರಾಜ್ಯದಲ್ಲಿ ಸ್ವಾಯತ್ತ ಸರ್ಕಾರ ಕೇಂದ್ರದಲ್ಲಿ ಸಂಯುಕ್ತ ಸರ್ಕಾರ” ಎಂಬುದೇ ನಮ್ಮ ಘೋಷಣೆಯಾಗಬೇಕು; ಅದುವೇ ನಮಗೆ ಶ್ರೀರಕ್ಷೆ.

ಡಬಲ್ ಎಂಜಿನ್ ಸರ್ಕಾರಕ್ಕೆ ಮತ್ತೊಂದು ಅರ್ಥವಿದೆ: ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಸರ್ಕಾರ ಇದ್ದರೆ ಅದಕ್ಕೆ ಡಬಲ್ ಎಂಜಿನ್ ಸರ್ಕಾರ ಎಂದು ಕರೆಯಾಲಾಗುತ್ತದೆ. ಆದರೆ, ಅದಕ್ಕೆ ಮತ್ತೊಂದು ಅರ್ಥವಿದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಎರಡು ವಿಧದ ಮೂರ್ತಿಗಳು ಇರುತ್ತವೆ. ಒಂದು ‘ಮೂಲವರ್ ಮೂರ್ತಿ’ ಎಂದರೆ, ಗರ್ಭ ಗೃಹದಲ್ಲಿ ಯಾವಾಗಲೂ ಇರುವ ವಿಗ್ರಹ. ಮತ್ತು ‘ಉತ್ಸವ ಮೂರ್ತಿ’ ಎಂದರೆ, ಉತ್ಸವಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯುವ ವಿಗ್ರಹ. ಗರ್ಭ ಗೃಹದಲ್ಲೇ ಇರುವ ‘ಮೂಲವರ್ ಮೂರ್ತಿ’ ಗೃಹ ಸಚಿವ ಅಮಿತ್ ಶಾ ಅವರು ದೇಶವನ್ನು ಬಿಟ್ಟು ಎಲ್ಲೂ ಹೋಗದೆ, 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಕಾರ್ಯವೈಕರಿಯನ್ನು ನೋಡಿಕೊಂಡು, ಪಕ್ಷ ಬಲವರ್ಧನೆಗಾಗಿ ಮತ್ತು ಶತ್ರುಗಳನ್ನು ಹಾಗೂ ವಿರೋಧ ಪಕ್ಷಗಳ ನಾಯಕರುಗಳನ್ನು ಮಟ್ಟ ಹಾಕುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಸದಾ ಪ್ರವಾಸ ಮತ್ತು ಉತ್ಸವಗಳಲ್ಲೇ ಇರುವ ‘ಉತ್ಸವ ಮೂರ್ತಿ’ ಪ್ರಧಾನಿ ನರೇಂದ್ರ ಮೋದಿಯವರು, ದೇಶ, ವಿದೇಶ ಪ್ರವಾಸ, ಅಂತಾರಾಷ್ಟ್ರೀಯ ನಾಯಕರುಗಳ ಭೇಟಿ ಮತ್ತು ಮಾತುಕತೆ, ವರ್ಚುವಲ್ ಮೀಟಿಂಗ್, ಚುನಾವಣೆ ಪ್ರಚಾರ, ಉದ್ಘಾಟನೆ, ರೋಡ್ ಶೋ ಹಾಗೂ ಫೋಟೋ ಸೆಷನ್‌ಗಳಲ್ಲಿಯೇ ಬಿಸಿಯಾಗಿದ್ದಾರೆ. ಒಬ್ಬರು ಪಿಎಂ ಮತ್ತೊಬ್ಬರು ಸೂಪರ್ ಪಿಎಂ. ಒಬ್ಬರು ಪ್ರಜಾಪ್ರಭುತ್ವವಾದಿ  ಮತ್ತೊಬ್ಬರು ಸರ್ವಾಧಿಕಾರಿ. ಇವರಿಬ್ಬರೇ ಕೇಂದ್ರ ಸರ್ಕಾರದ ಡಬಲ್ ಎಂಜಿನ್. ಕೇಂದ್ರ ಸರ್ಕಾರವೇ ಡಬಲ್ ಎಂಜಿನ್ ಸರ್ಕಾರ.

ರಾಜಕೀಯ

“ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ! ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ! ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ! ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ! – ನರೇಂದ್ರ ಮೋದಿ ಅವರೇ ನಿಮ್ಮ ಇಂದಿನ ಭಾಷಣ ಕೇಳಿ ಬಸವಣ್ಣನವರ ಈ ವಚನ ನೆನಪಾಯಿತು. ಇದು ನಿಮ್ಮ ನಡೆ-ನುಡಿಗೆ ಹೇಳಿ ಮಾಡಿಸಿದಂತಿದೆ”. ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸರಣಿ ಟ್ವೀಟ್‌ಗಳನ್ನು ಹಾಕಿ ಪ್ರಧಾನಿ ನರೇಂದ್ರ ಮೋದಿಗೆ ಸರಿಯಾದ ಟಕ್ಕರ್ ನೀಡಿದ್ದಾರೆ.

ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಕಾಲ, ಬಿಜೆಪಿ ಎಂದರೆ ಅಮೃತ ಕಾಲ ಎನ್ನುವ ಮೊದಲು ನಿಮ್ಮ ಅಂತರಂಗವನ್ನು ಒಮ್ಮೆ ಇಣುಕಿ ನೋಡಿ, ಅಲ್ಲಿರುವ ಅದಾನಿ, ಅಂಬಾನಿಗಳು ಕಾಣಲಿಲ್ಲವೇ? ನಿಮ್ಮ ಅಕ್ಕಪಕ್ಕದಲ್ಲಿರುವ ಮುಖ್ಯಮಂತ್ರಿಗಳು ಮತ್ತು ಸಚಿವರ ಭ್ರಷ್ಟ ಮುಖಗಳೂ ಕಾಣಲಿಲ್ಲವೇ ನರೇಂದ್ರ ಮೋದಿ?

ಅದಾನಿ

ರಾಜ್ಯದ ಬಿಜೆಪಿ ಸಚಿವರ 40% ಕಮಿಷನ್ ಕಿರುಕಳದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ನಿಮ್ಮ ಕಾರ್ಯಾಲಯಕ್ಕೆ ಬರೆದ ಪತ್ರವೂ ನಿಮಗೆ ನೆನಪಾಗಲಿಲ್ಲವೇ? ನಿಮ್ಮದೇ ಸಚಿವರ ಕಿರುಕಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಕುಟುಂಬದ ನೆನಪೂ ನಿಮಗೆ ಆಗಲಿಲ್ಲವೇ? ಕಳೆದ ಮೂರುವರೆ ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ರೂಪಾಯಿಗಳನ್ನು ಲೂಟಿ ಹೊಡೆದಿರುವ ರಾಜ್ಯದ ಬಿಜೆಪಿ ಸಚಿವರಿಗೆ ಖಂಡಿತ ಇದು ಅಮೃತ ಕಾಲ. ಆದರೆ ನಿಮ್ಮಂತಹ ಭ್ರಷ್ಟರ ಸರ್ಕಾರ ಪಡೆದ ರಾಜ್ಯದ ಜನತೆಗೆ ಇದು ವಿಷಕಾಲ ನರೆಂದ್ರ ಮೋದಿ ಅವರೇ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

ರಾಜ್ಯದ ಲಿಂಗಾಯತ ನಾಯಕರನ್ನು ಬಳಸಿ ಬಿಸಾಡುವ ನಿಮ್ಮ ಕುತಂತ್ರಿ ಬುದ್ದಿಯನ್ನು ರಾಜ್ಯದ ಲಿಂಗಾಯತರು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ. ನಿಮ್ಮ ಇಡೀ ಭಾಷದಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಬಿ.ಎಸ್.ಯಡಿಯೂರಪ್ಪನವರ ಹೆಸರನ್ನು ಒಮ್ಮೆಯೂ ಎತ್ತಲಿಲ್ಲ ಯಾಕೆ? ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕಾಲದಲ್ಲಿಯೇ ಬಿ.ಎಸ್.ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದಿರಿ, ಅವರನ್ನು ಎರಡೆರಡು ಬಾರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದಿರಿ, ಅವರ ಮಗನಿಗೆ ಕನಿಷ್ಠ ಶಾಸಕನನ್ನಾಗಿ ಮಾಡಲಿಲ್ಲ, ಸಚಿವರನ್ನಾಗಿ ಮಾಡಲಿಲ್ಲ. ಈಗ ಐಟಿ, ಇಡಿ, ಸಿಬಿಐ ಮೂಲಕ ಬಾಯಿಮುಚ್ಚಿಸಿ ಕೂರಿಸಿರುವವರು ನೀವೇ ಅಲ್ಲವೇ ನರೇಂದ್ರ ಮೋದಿ ಅವರೇ?

ಬಿ.ಎಸ್.ಯಡಿಯೂರಪ್ಪ

ಲಿಂಗಾಯತ ಸಮುದಾಯದಲ್ಲಿ ಎರಡನೇ ತಲೆಮಾರಿನ ನಾಯಕರೇ ಇರಬಾರದೆಂದು ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಸಂಜಯ ಪಾಟೀಲ್, ಸೊಗಡು ಶಿವಣ್ಣ ಹೀಗೆ ಸಾಲು ಸಾಲು ನಾಯಕರಿಗೆ ಈ ಬಾರಿ ಟಿಕೆಟ್ ನೀಡದೆ ಅವರ ರಾಜಕೀಯ ಜೀವನವನ್ನೇ ಮುಗಿಸುವ ಹುನ್ನಾರ ಮಾಡಿರುವವರು ನೀವೇ ಅಲ್ಲವೇ ನರೇಂದ್ರ ಮೋದಿ ಜೀ?

ಲಕ್ಷ್ಮಣ ಸವದಿ

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಲಿಂಗಾಯತರ ಪ್ರಮುಖ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಯಾವ ಕಾರಣಕ್ಕೆ ಈ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದಿರಿ? ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿತ್ತಾ? ಸಿಡಿ ಹಗರಣ ಇತ್ತೇ? ಅವರು ಒಳ್ಳೆಯ ಆಡಳಿತಗಾರರರಾಗಿರಲಿಲ್ಲವೇ? ಯಾಕೆ ಅವರನ್ನು ಮೂಲೆಗೆ ತಳ್ಳಿದ್ದೀರಿ? ಅವರ ಈ ಪ್ರಶ್ನೆಗಳು ರಾಜ್ಯದ ಲಿಂಗಾಯತರ ಪ್ರಶ್ನೆಯೂ ಹೌದು. ಧಮ್-ತಾಕತ್ ಇದ್ದರೆ ಇದಕ್ಕೆ ಉತ್ತರ ಕೊಡಿ ನರೇಂದ್ರ ಮೋದಿ ಜೀ.

ಜಗದೀಶ್ ಶೆಟ್ಟರ್

ಬಂಜಾರ ಸಮುದಾಯ ಮತ್ತು ಕಾಂಗ್ರೆಸ್ ಸಂಬಂಧಕ್ಕೆ ಹುಳಿ ಹಿಂಡುವ ನಿಮ್ಮ ಕುತಂತ್ರ ಫಲ ನೀಡಲಾರದು. ಬಂಜಾರರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಿದ್ದು ಕಾಂಗ್ರೆಸ್ ಪಕ್ಷ. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಭೂ ಸುಧಾರಣೆ ಕಾಯ್ದೆಗೆ ಕ್ರಾಂತಿಕಾರಿ ತಿದ್ದುಪಡಿಯನ್ನು ತಂದಿರುವುದು ರಾಜ್ಯದ ಕಾಂಗ್ರೆಸ್ ಸರ್ಕಾರ ಎನ್ನುವುದು ನಿಮಗೆ ತಿಳಿದಿಲ್ಲವೇ ನರೇಂದ್ರ ಮೋದಿ ಅವರೇ?

ಲಂಬಾಣಿ ತಾಂಡಾ

ನರೇಂದ್ರ ಮೋದಿಯವರೇ ನಿಮ್ಮ ಇಡೀ ರಾಜಕೀಯ ಬದುಕೇ ಒಂದು ಸುಳ್ಳಿನ ಕೋಟೆ. ಅದು ಮುರಿದು ಬೀಳುವ ಕಾಲ ಬಂದಿದೆ. ಕಾಂಗ್ರೆಸ್ ನಿಮ್ಮನ್ನು 91 ಬಾರಿ ನಿಂದಿಸಿದೆ ಎನ್ನುವುದು ನಿಮ್ಮ ಇತ್ತೀಚಿನ ಸುಳ್ಳು. ನಮ್ಮ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ನಿಂದಿಸುವುದೇ ನಿಮ್ಮ ಮತ್ತು ನಿಮ್ಮ ಪಕ್ಷದ ನಾಯಕರ ದಿನಚರಿ ಅಲ್ಲವೇ ನರೇಂದ್ರ ಮೋದಿ ಜೀ?

ಸೋನಿಯಾ ಗಾಂಧಿಯವರನ್ನು ಜರ್ಸಿ ಕೌ, ಬಾರ್ ಡಾನ್ಸರ್, ಕಾಂಗ್ರೆಸ್ ಕಿ ವಿಧವಾ ಇನ್ನೂ ಏನೇನೋ ಅಂದವರು ನೀವೇ ಅಲ್ಲವೇ? ನಿಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಿನ್ನೆ ತಾನೆ ಸೋನಿಯಾಗಾಂಧಿಯವರನ್ನು ವಿಷಕನ್ಯೆ ಎಂದು ಹೇಳಿಲ್ಲವೇ? ನಿಮ್ಮ ರಕ್ತದ ಕಣಕಣದಲ್ಲಿಯೂ ದ್ವೇಷಾಸೂಯ ವಿಷ ಇಲ್ಲವೇ ನರೇಂದ್ರ ಮೋದಿ?

ಸೋನಿಯಾ ಗಾಂಧಿ

ರಾಜ್ಯದ ಬಿಜೆಪಿ ಸರ್ಕಾರ 9 ಲಕ್ಷ ಮನೆಗಳನ್ನು ಕಟ್ಟಿದೆ ಎಂಬ ಹಸಿ ಹಸಿ ಸುಳ್ಳು ಹೇಳಿದ್ದಿರಲ್ಲಾ, ನಾವು ಕಟ್ಟಿರುವ ಮನೆಗಳ ಲೆಕ್ಕವನ್ನು ನಿಮಗೆ ಕೊಟ್ಟು ನಿಮ್ಮಿಂದ ಸುಳ್ಳು ಹೇಳಿಸಿದ ವಸತಿ ಸಚಿವರನ್ನು ಒಮ್ಮೆ ಜನರ ಮಧ್ಯೆ ಬಹಿರಂಗ ಚರ್ಚೆಗೆ ಕರೆತನ್ನಿ. ಇದು ನನ್ನ ಸವಾಲು ನರೇಂದ್ರ ಮೋದಿ.

2013-18ರ ಅವಧಿಯಲ್ಲಿ ರೈತರಿಗೆ ಕೊಟ್ಟ ಮಾತಿನಂತೆ 50 ಸಾವಿರ ಕೋಟಿಗೂ ಹೆಚ್ಚು ಹಣವನ್ನು ನೀರಾವರಿಗೆ ಖರ್ಚು ಮಾಡಿ ರೈತರ ಹೊಲಕ್ಕೆ ನೀರು ಹರಿಸಿದ ಹೆಮ್ಮೆ ನಮ್ಮದು. ಮೇಕೆದಾಟು, ಕಳಸ-ಬಂಡೂರಿ ಮತ್ತು ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳೆರಡೂ ನಿರ್ಲಕ್ಷಿಸುತ್ತಾ ಬಂದಿದೆ ಎನ್ನುವುದನ್ನು ರಾಜ್ಯದ ರೈತರಿಗೆ ಗೊತ್ತಿದೆ ನರೇಂದ್ರ ಮೋದಿ.

ಕಳಸ-ಬಂಡೂರಿ

ಕಮಿಷನ್ ನುಂಗುವ ಕರ್ನಾಟಕ ಬಿಜೆಪಿ ಸರ್ಕಾರದ ಚಾಳಿ ಮಠ-ಮಂದಿರಗಳನ್ನೂ ಬಿಟ್ಟಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತರ ಕರ್ನಾಟಕದ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದರೆ ಅದು ತಲುಪುವಾಗ ಕಡ್ಡಿ ಮಾತ್ರ ಉಳಿಯುತ್ತದೆ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿಗಳ ಆಕ್ರೋಶ ನಿಮಗೆ ಕೇಳಿಸಿಲ್ಲವೇ ನರೇಂದ್ರ ಮೋದಿ?

ವಿರೂಪಾಕ್ಷಪ್ಪ ಮಾಡಾಳ್

ನಿಮ್ಮದೇ ಪಕ್ಷದ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಮತ್ತು ಅವರ ಮಗ ಈಗ ಜೈಲಲ್ಲಿರುವುದು ಯಾವ ದೇಶ ಸೇವೆ ಮಾಡಿದ್ದಕ್ಕಾಗಿ ಮೋದಿಯವರೇ? ಪ್ರತಿಷ್ಠಿತ ಕೆಎಸ್ ಡಿಸಿಎಎಲ್ ಕಚೇರಿಯಲ್ಲಿಯೇ ಈ ಶಾಸಕರ ಮಗ ಲಂಚ ತಿನ್ನುವಾಗ ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದನ್ನಲ್ಲಾ? ವಿರೂಪಾಕ್ಷಪ್ಪ ಮಾಡಾಳ್ ಮನೆಯಲ್ಲಿ ಎಂಟುವರೆ ಕೋಟಿ ಹಣವನ್ನು ಲೋಕಾಯುಕ್ತರು ವಶಪಡಿಸಿಕೊಂಡಿದ್ದರಲ್ಲಾ ಅದೇನು ಅವರು ಬೆಳೆದ ಅಡಿಕೆ ಮಾರಾಟದ ದುಡ್ಡೇ ಮೋದಿ? ಎಂದು ಪ್ರಶ್ನೆಗಳನ್ನು ಕೇಳುವ ಮೂಲಕ ಬಿಜೆಪಿಯ ಭ್ರಷ್ಟಾಚಾರ, ಆಡಳಿತ ವೈಫಲ್ಯ, ದ್ವೇಷಾಸೂಯ ರಾಜಕಾರಣದ ಬಗ್ಗೆ ಕಿಡಿ ಕಾರಿದ್ದಾರೆ.

ರಾಜಕೀಯ

ನವದೆಹಲಿ: ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮೇ 4 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಮುಂದಿನ ವರ್ಷ ಸಂಸತ್ ಚುನಾವಣೆ ನಡೆಯಲಿರುವ ಕಾರಣ ಉತ್ತರ ಪ್ರದೇಶದಲ್ಲಿ ಈ ಚುನಾವಣೆ ಮಹತ್ವ ಪಡೆದುಕೊಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ರಾಜಕೀಯ ಪಕ್ಷಗಳು ಪ್ರಯತ್ನಿಸುತ್ತಿವೆ.

ಉತ್ತರಪ್ರದೇಶ ಆಡಳಿತಾರೂಢ ಬಿಜೆಪಿಯಲ್ಲಿ ದೊಡ್ಡ ಬದಲಾವಣೆ ಆರಂಭವಾಗಿದೆ. ಸಂಸತ್ತು ಮತ್ತು ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರಿಗೆ ಪ್ರಾಮುಖ್ಯತೆ ನೀಡದ ಪಕ್ಷವೆಂಬ ಹಣೆಪಟ್ಟಿ ಬಿಜೆಪಿಗಿತ್ತು. ಉತ್ತರ ಪ್ರದೇಶದಲ್ಲಿ ಕಳೆದ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ 57 ಮುಸ್ಲಿಮರಿಗೆ ಮಾತ್ರ ಅವಕಾಶ ನೀಡಿತ್ತು. ಆದರೆ ಈ ಬಾರಿ ಈ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ ಹೈದರಾಬಾದ್‌ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಅಲ್ಪಸಂಖ್ಯಾತರನ್ನು ವಿಸ್ವಾಸಕ್ಕೆ ತೆಗೆದುಕೊಳ್ಳಬೇಕು ಮತ್ತು ಬಿಜೆಪಿ ಅವರನ್ನು ಟೀಕಿಸುವುದನ್ನು ತಪ್ಪಿಸಬೇಕು” ಎಂದು ಕರೆ ನೀಡಿದ್ದರು.

ಪಸ್ಮಾಂಡ ಮುಸ್ಲಿಮರು

ಉತ್ತರ ಪ್ರದೇಶವು ಇತರ ಯಾವುದೇ ರಾಜ್ಯಗಳಿಗಿಂತ ಹೆಚ್ಚು ಮುಸ್ಲಿಮರನ್ನು (ಶೇಕಡಾ 24) ಹೊಂದಿದೆ. ಅವರಲ್ಲಿ ಸುಮಾರು 85% ಪಸ್ಮಾಂಡ ಮುಸ್ಲಿಮರು ಇದ್ದಾರೆ. ಬಿಜೆಪಿಯವರು ಇವರ ಮತಗಳ ಮೇಲೆ ಕಣ್ಣಿಟ್ಟಿದೆ. ಅದಕ್ಕಾಗಿ ಮೊದಲ ಹಂತದ ಚುನಾವಣೆಯಲ್ಲಿ 200, ಎರಡನೇ ಹಂತದ ಚುನಾವಣೆಯಲ್ಲಿ 167 ಮುಸ್ಲಿಮರಿಗೆ ಬಿಜೆಪಿಗೆ ಅವಕಾಶ ನೀಡಿದೆ. ಬಿಜೆಪಿ ಇತಿಹಾಸದಲ್ಲಿ ಇಷ್ಟೊಂದು ಮುಸ್ಲಿಮರಿಗೆ ಇಂತಹ ಅವಕಾಶವನ್ನು ನೀಡಿರಲ್ಲಿಲ್ಲ. ಈ 367 ಅಭ್ಯರ್ಥಿಗಳಲ್ಲಿ ಅರ್ಧದಷ್ಟು ಅಭ್ಯರ್ಥಿಗಳು ಗೆದ್ದರೂ ಮುಸ್ಲಿಮರಲ್ಲಿ ತನ್ನ ಪ್ರಭಾವ ಹೆಚ್ಚುತ್ತದೆ ಎಂದು ಬಿಜೆಪಿ ನಂಬಿದೆ. ಇದು ಮುಂದಿನ ಚುನಾವಣೆಗಳಲ್ಲಿ ಫಲ ನೀಡುವ ನಿರೀಕ್ಷೆಯೂ ಇದೆ. ಏಕೆಂದರೆ ಉತ್ತರ ಪ್ರದೇಶದ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳೇ ಸೋಲು-ಗೆಲುವನ್ನು ನಿರ್ಧರಿಸುತ್ತವೆ.

ಇದರ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯ್ ಬಹದ್ದೂರ್ ಪಾಠಕ್, “ಉತ್ತರ ಪ್ರದೇಶ ವಿಧಾನ ಪರಿಷತ್ತಿನಲ್ಲಿ, ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಸೇರಿದಂತೆ 4 ಮುಸ್ಲಿಮರು ಸದಸ್ಯರಾಗಿದ್ದಾರೆ. ಆದರೆ ಮುಸ್ಲಿಮರ ರಕ್ಷಕ ಎಂದು ಹೇಳಿಕೊಳ್ಳುವ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಾರ್ಟಿ ಹಾಗೂ ಕಾಂಗ್ರೆಸ್ ಪಕ್ಷವು ಮೇಲ್ಮನೆಯಲ್ಲಿ ಮುಸ್ಲಿಮರಿಗೆ ಇಷ್ಟೊಂದು ಅವಕಾಶ ನೀಡಿರಲಿಲ್ಲ. ಸಬ್‌ಕಾ ಸಾತ್‌, ಸಬ್‌ಕಾ ವಿಕಾಸ್ ಎಂಬ ಪ್ರಧಾನಿಯವರ ಘೋಷಣೆಗೆ ತಕ್ಕಂತೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅದನ್ನು ಅನುಷ್ಠಾನ ಗೊಳಿಸುತ್ತಿದೆ” ಎಂದು ಹೇಳಿದ್ದಾರೆ.

ಕಳೆದ ಎರಡು ಸಂಸತ್ ಚುನಾವಣೆಗಳಲ್ಲಿ ಸಿಕ್ಕ ಬೆಂಬಲ 2024ರ ಚುನಾವಣೆಯಲ್ಲಿ ಕಡಿಮೆಯಾಗಲಿದೆ ಎಂಬ ಭಯ ಬಿಜೆಪಿಗಿದೆ. ಈ ನಷ್ಟವನ್ನು ನೀಗಿಸಲು ಬಿಜೆಪಿ ಮುಸ್ಲಿಮರ ಬೆಂಬಲ ಪಡೆಯಲು ಮುಂದಾಗಿದೆ. ಮುಸ್ಲಿಮರನ್ನು ಸೆಳೆಯಲು ಬಿಜೆಪಿ ನೇರವಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವುದು ಗಮನಾರ್ಹ.

ರಾಜಕೀಯ

ತಿರುವನಂತಪುರಂ: ಕೇರಳ ರಾಜ್ಯದ ಕೊಚ್ಚಿಯ ತಿರುವನಂತಪುರಂನಲ್ಲಿ ಕಾರಿನಲ್ಲಿ ನಿಂತು ಪ್ರಯಾಣಿಸಿದ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿಪಿ ಹಾಗೂ ಮೋಟಾರು ವಾಹನ ಇಲಾಖೆಗೆ ದೂರು ನೀಡಲಾಗಿದೆ. ಏಪ್ರಿಲ್ 24 ಮತ್ತು 25 ರಂದು ಪ್ರಧಾನಿ ಮೋದಿಯವರು ಕೇರಳ ಪ್ರವಾಸ ಕೈಗೊಂಡಿದ್ದರು. ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ರೋಡ್ ಶೋ ನಡೆಸುವಾಗ ಕಾರಿನ ಬಾಗಿಲು ತೆರೆದು ನಿಂತು ಪ್ರಯಾಣಿಸಿದರು. ಇದು ಕೇರಳದಲ್ಲಿ ವಿವಾದಕ್ಕೆ ಕಾರಣವಾಗಿದೆ.

ತ್ರಿಶೂರ್ ಬಳಿಯ ತಿರುವಿಳ್ವಾಮಲೈ ನಿವಾಸಿ ಜಯಕೃಷ್ಣನ್ ಕೇರಳ ಡಿಜಿಪಿ ಅನಿಲ್ ಕಾಂತ್ ಹಾಗೂ ಮೋಟಾರು ವಾಹನ ಇಲಾಖೆಗೆ ದೂರು ನೀಡಿದ್ದಾರೆ. ಸದರಿಯವರ ದೂರಿನಲ್ಲಿ, ‘ಮೋಟಾರು ವಾಹನ ಕಾಯ್ದೆಯ ಪ್ರಕಾರ ಕಾರಿನ ಬಾಗಿಲು ತೆರೆದುಕೊಂಡು ವಾಹನ ಚಲಾಯಿಸುವುದು ಅಪರಾಧ. ಇತ್ತೀಚೆಗೆ ಕೊಚ್ಚಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ, ಕಾರಿನ ಬಾಗಿಲು ತೆರೆದುಕೊಂಡು ನಿಂತು ಪ್ರಯಾಣಿಸಿದರು. ಡ್ರೈವರ್ ಕಣ್ಣನ್ನು ಮರೆಮಾಚುವ ರೀತಿಯಲ್ಲಿ ಕಾರ್ ಮುಂದಿನ ಕನ್ನಡಿಯಾದ್ಯಂತ ಹೂಗಳು ಕಾಣಲ್ಪಟ್ಟವು. ಕಾನೂನಿನ ಮುಂದೆ ಎಲ್ಲರೂ ಸಮಾನರು. ಹಾಗಾಗಿ ಕಾನೂನು ಉಲ್ಲಂಘಿಸಿರುವ ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಯಕೃಷ್ಣನ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದರ ಬಗ್ಗೆ ಜಯಕೃಷ್ಣನ್ ಮಾತನಾಡುವಾಗ, ‘ನಮ್ಮ ದೇಶದಲ್ಲಿ ಕಾನೂನು ಎಲ್ಲರಿಗೂ ಸಾಮಾನ್ಯವಾಗಿದೆ. ಇದರಿಂದ ಯಾರಿಗೂ ವಿನಾಯಿತಿ ನೀಡಲಾಗುವುದಿಲ್ಲ. ಪ್ರಧಾನಿ ಮೋದಿ ಕಾನೂನು ಉಲ್ಲಂಘಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೊಲೀಸರು ಹಾಗೂ ಮೋಟಾರು ವಾಹನ ಇಲಾಖೆ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇನೆ. ಎಂದು ಅವರು ಹೇಳಿದ್ದಾರೆ.

ಬೈಕ್ ವ್ಹೀಲಿಂಗ್ ಮಾಡಿದರೆ ಅಪರಾಧ; ಬಸ್‌ನಲ್ಲಿ ಫುಟ್ ಬೋರ್ಡ್ ಹೊಡೆದರೆ ಅಪರಾಧ; ಆದರೆ, ಪ್ರಧಾನಿ ನರೇಂದ್ರ ಮೋದಿ ಕಾರಿನಲ್ಲಿ ನಿಂತು ಪ್ರಯಾಣಿಸಿದರೆ ಅದು ಮಾತ್ರ ಅಪರಾಧವಲ್ಲ?  

ದೇಶ ರಾಜ್ಯ

ಬೆಂಗಳೂರು: ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಮತ್ತು ಬಿಜೆಪಿ ರ‍್ಯಾಲಿ ಆಯೋಜಕರ ವಿರುದ್ಧ ಕಾಂಗ್ರೆಸ್ ಮುಖಂಡರಾದ ರಣದೀಪ್ ಸಿಂಗ್ ಸುರ್ಜೇವಾಲಾ, ಡಾ.ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮುವಾದಿ ಹಕ್ಕುಗಳು ಇರುತ್ತವೆ’ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಅವರು ಇದನ್ನು ಹೇಗೆ ಹೇಳಬಲ್ಲರು? ಈ ಕುರಿತು ನಾವು ಭಾರತ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೇವೆ’ ಎಂದು  ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರಾಜಕೀಯ

“ಬಹುಶಃ ಕರ್ನಾಟಕ ಚುನಾವಣೆಯಲ್ಲಿ ಈ ಮಟ್ಟದಲ್ಲಿ ಪ್ರಧಾನಿ ಸಹಿತ ಕೇಂದ್ರ ಬಿಜೆಪಿ ಸರ್ಕಾರದ ಸಚಿವರು, ದೇಶದ ಹಲವು ಭಾಗದ ಬಿಜೆಪಿ ಮುಖಂಡರು ರಾಜ್ಯದಲ್ಲಿ ಬೀಡು ಬಿಟ್ಟಿರುವುದು ಇದೇ ಮೊದಲಬಾರಿ ಅನಿಸುತ್ತಿದೆ. ದೇಶದ ಗೃಹ ಸಚಿವ ಅಮಿತ್ ಶಾ ಅವರಂತೂ, ರಾಜ್ಯದ ಭವಿಷ್ಯ ಮೋದಿಯವರ ಕೈಗೆ ಕೊಡುವ ನಿರ್ಧಾರ ಮಾಡುವ ಚುನಾವಣೆ ಇದು ಎಂದಿದ್ದಾರೆ.

ಇದೇನು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವವೋ ಅಥವಾ ಸರ್ವಾಧಿಕಾರದ ದೇಶವೋ? ಗೃಹ ಸಚಿವರಿಗೆ ಗೊತ್ತಿಲ್ಲದಿರುವುದು ಕ್ರೂರ ವ್ಯಂಗ್ಯ. ರಾಜ್ಯದ ಜನತೆ ಮೋದಿಯವರ ಮುಖ ನೋಡಿ ಮತ ಹಾಕುವುದಾದರೆ, ಇಲ್ಲಿನ ಬಿಜೆಪಿ ಸರ್ಕಾರ ಮತ್ತದರ ಮುಖಂಡರೆಲ್ಲ ಏಕೆ? ಮತ ಹಾಕದಿದ್ದರೆ ರಾಜ್ಯ ಸಂಕಷ್ಟಕ್ಕೀಡಾಗಲಿದೆ ಎಂಬ ಹೆದರಿಸುವ ಒಳಾರ್ಥವೂ ಇದ್ದಂಗಿದೆ!

ಬಿಜೆಪಿ ಗೆಲ್ಲದಿದ್ದರೆ ಕೋಮು ಗಲಭೆಗಳಾಗಲಿದೆ ಎಂದು ಹೇಳಿರುವ ಅಮಿತ್ ಶಾ ಅವರೆ, ನಿಮ್ಮ ಹುದ್ದೆಯ ಘನತೆ ಗೌಣವಾಗಿಸಬೇಡಿ. ಕೋಮು ಹಿಂಸೆ ಆರಂಭಿಸುವ ಹುನ್ನಾರ ನಿಮ್ಮ ಮಾತಿನಲ್ಲಿ ಅಡಗಿರುವ ಹಾಗಿದೆ! ಇದು ತೀರ ಅಪಾಯಕಾರಿ. ಈಗಾಗಲೇ, ಕನ್ನಡಿಗರು ರಾಜ್ಯ ಬಿಜೆಪಿ ಸರ್ಕಾರವನ್ನು ಮನೆಗೆ ಕಳಿಸಲು ನಿರ್ಧರಿಸಿದ್ದಾರೆ. ನಿಮಗೆ ಸೋಲು ಕಟ್ಟಿಟ್ಟ ಬುತ್ತಿ” ಎಂದು ಗೃಹ ಸಚಿವ ಅಮಿತ್ ಶಾ ಅವರಿಗೆ ಜೆಡಿಎಸ್ ತಿರುಗೇಟು ನೀಡಿದೆ.   

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪದಕರು

ಕರ್ನಾಟಕದಲ್ಲಿ ತಮಿಳು ಭಾಷಿಕರು ಸುಮಾರು 1 ಕೋಟಿಗೂ ಮಿಗಿಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಆನೇಕಲ್, ಮಹದೇವಪುರ, ಕೆ.ಆರ್.ಪುರಂ, ಸಿ.ವಿ.ರಾಮನ್ ನಗರ, ಸರ್ವಜ್ಞ ನಗರ, ಪುಲಿಕೇಶಿನಗರ, ಶಿವಾಜಿನಗರ, ಶಾಂತಿನಗರ, ಬಿಟಿಎಂ ಲೇಔಟ್, ಜಯನಗರ, ಚಿಕ್ಕಪೇಟೆ, ಚಾಮರಾಜ ಪೇಟೆ, ಗಾಂಧಿನಗರ, ರಾಜಾಜಿನಗರ, ಯಶವಂತಪುರ ಹಾಗೂ ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು, ಮೈಸೂರು, ಹನೂರು, ಚಾಮರಾಜನಗರ, ಕೊಳ್ಳೇಗಾಲ, ಹಾಗೂ ಕೆಜಿಎಫ್ ಮುಂತಾದ 23 ಕ್ಷೇತ್ರಗಳಲ್ಲಿ ತಮಿಳರ ಮತಗಳೇ ನಿರ್ಣಾಯಕ.

ದಶಕಗಳ ಹಿಂದೆ ಈ ಕ್ಷೇತ್ರಗಳಲ್ಲಿ ತಮಿಳುನಾಡು ಮೂಲದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷದ ಅಭ್ಯರ್ಥಿಗಳು ಚುನಾವಣೆಗಳಲ್ಲಿ ಸ್ಪರ್ದಿಸುತ್ತಿದ್ದರು. ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ರಾಜಕೀಯ ಬದಲಾವಣೆಗಳು ಮತ್ತು ಎನ್‌ಡಿಎ ಹಾಗೂ ಯೂಪಿಎ ಮೈತ್ರಿ ಪಕ್ಷಗಳ ಕೋರಿಕೆಯ ಮೇರೆಗೆ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಇಲ್ಲಿನ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿ ಚುನಾವಣೆಯಿಂದ ಹಿಂದೆ ಸರಿದವು.

ಯೂಪಿಎ ಮೈತ್ರಿ ಕೂಟದಲ್ಲಿರುವ ಡಿಎಂಕೆ ಮತ್ತು ಸಿದಂಬರಂ ಲೋಕಸಭಾ ಸದಸ್ಯ ತೋಲ್ ತಿರುಮಾವಳವನ್ ನೇತೃವದ “ವಿಡುದಲೈ ಚಿರುತ್ತೈಗಳ್” ಪಕ್ಷಕ್ಕೆ ಕರ್ನಾಟಕದಲ್ಲಿ ಶಾಖೆಗಳಿವೆ. ಮತ್ತು ಅಪಾರವಾದ ಕಾರ್ಯಕರ್ತರಿದ್ದಾರೆ. ವಿಚಾರವಾದಿ ಪೆರಿಯಾರ್ ರವರ ಅನುಯಾಯಿಗಳು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರೂ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಈಗಾಗಲೇ ಘೋಷಣೆ ಮಾಡಿದೆ.

ಆದರೆ, ಎನ್‌ಡಿಎ ಮೈತ್ರಿ ಮೈತ್ರಿಕೂಟದಲ್ಲಿರುವ ಎಐಎಡಿಎಂಕೆ ಪಕ್ಷವು, ಮಾಜಿ ಮುಖ್ಯಮಂತ್ರಿಗಳಾದ ಎಡಪ್ಪಾಡಿ ಪಳನಿಸ್ವಾಮಿ, ಒ.ಪನ್ನೀರ್ ಸೆಲ್ವಂ, ಶಶಿಕಲಾ ಮತ್ತು ಟಿಟಿವಿ ದಿನಕರನ್ ಮುಂತಾದವರ ನಾಯಕತ್ವದ ಕಚ್ಚಾಟದಿಂದ ನಾಲ್ಕು ಭಾಗಗಳಾಗಿ ಹೊಡೆದೋಗಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಮೈತ್ರಿಕೂಟದಲ್ಲಿರುವ ಬಿಜೆಪಿ ಈಗ ಹೊರಗೆ ನಿಂತು ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಪಕ್ಷವನ್ನು ಬಾಯಿಗೆ ಬಂದಂತೆ ವಿಮರ್ಶೆ ಮಾಡಿಕೊಂಡು ತಿರುಗಾಡುತ್ತಿದೆ. ಈರೋಡು ಉಪ ಚುನಾವಣೆಯಿಂದ ಎಐಎಡಿಎಂಕೆ ಮತ್ತು ತಮಿಳುನಾಡು ಬಿಜೆಪಿಯ ಸಂಬಂಧ ಅಷ್ಟೇನು ಸರಿಯಾಗಿಲ್ಲ.

ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ, ಆಡಳಿತ ರೂಡ ಡಿಎಂಕೆ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ಜೊತೆಯಲ್ಲೇ ಮಿತ್ರ ಪಕ್ಷವಾದ ಎಐಎಡಿಎಂಕೆ ಪಕ್ಷದ ನಾಯಕರುಗಳನ್ನೂ ವಿಮರ್ಶೆ ಮಾಡುತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ‘ದಿನನಿತ್ಯ ಪತ್ರಿಕೆಗಳಲ್ಲಿ, ಟಿ.ವಿ.ವಾಹಿನಿಗಳಲ್ಲಿ ಹಾಗೂ ಸಾಮಾಜಿಕ ಮಾದ್ಯಮಗಳಲ್ಲಿ ಸುದ್ದಿಯಾಗಬೇಕು ಎಂಬುದಕ್ಕಾಗಿ ಸಾಕ್ಷ್ಯದಾರ ವಿಲ್ಲದ ವಿಷಯಗಳನ್ನು ಮುನ್ನಲೆಗೆ ತಂದು ಅಣ್ಣಾಮಲೈ ಮಾತನಾಡುತ್ತಿದ್ದಾರೆ’ ಎಂದು ಅಲ್ಲಿನ ದಿಎಂಕೆ ನಾಯಕರು ಹೇಳುತ್ತಿದ್ದಾರೆ. 2021ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿನ ಬಿಜೆಪಿ ಪಕ್ಷವು ಸುಮಾರು 2.62% ಮತಗಳನ್ನು ಮಾತ್ರವೇ ಪಡೆದಿತ್ತು. ಆದರೆ, ಅಲ್ಲಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತಮಿಳುನಾಡಿನಲ್ಲಿ ಪ್ರಬಲವಾದ ವಿರೋಧ ಪಕ್ಷ ನಾವೇ ಎಂದು ಎಲ್ಲಡೆಯೂ ಹೇಳಿಕೊಂಡು ಬರುತ್ತಿದ್ದಾರೆ. ತನ್ನನ್ನು ಎಂಜಿಆರ್, ಜಯಲಲಿತಾ ಹಾಗೂ ಕರುಣಾನಿಧಿ ಅವರೊಂದಿಗೆ ಹೋಲಿಕೆ ಮಾಡಿ ಮಾತನಾಡಿ ಎಲ್ಲರ ನಗೆಪಾಟಿಗೆ ಕಾರಣರಾಗಿದ್ದಾರೆ.

‘ರಫೇಲ್ ಕೈಗಡಿಯಾರದ ಬಿಲ್ಲಿನ ವಿಚಾರದಲ್ಲಿ ನಕಲಿ ರಶೀದಿಯನ್ನು ತೋರಿಸಿ, ದಿನಕ್ಕೊಂದು ಮಾತನಾಡುತ್ತಿದ್ದಾರೆ’ ಎಂದು ಅಲ್ಲಿನ ಜನ ಆಕ್ರೋಶವನ್ನು ವ್ಯಕ್ತಪಡಿಸಿ, ಶೋಷಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಬಂದಂತೆ ಮೀಮ್ಸ್ ಗಳನ್ನು ಹಾಕಿ ಕೀಟಲೆ ಮಾಡುತ್ತಿರುವುದು ದಿನನಿತ್ಯದ ಟ್ರೆಂಡಿಂಗ್ ಆಗಿದೆ. ‘ರಫೇಲ್ ವಾಚ್‌ಗೆ ಬಿಲ್ಲನ್ನು ಕೇಳಿದರೆ, ಅದಕ್ಕೆ ಪ್ರತಿಯುತ್ತರವಾಗಿ ಡಿಎಂಕೆ ಸರ್ಕಾರದ ಭ್ರಷ್ಟಾಚಾರಗಳನ್ನು ಏಪ್ರಿಲ್ ಒಂದರಂದು ಬಯಲುಗೊಳಿಸುತ್ತೇನೆ ಎಂದು ಹೇಳಿ, ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಕೆಲವರ ಆಸ್ತಿ ಪಟ್ಟಿಯನ್ನು ತೋರಿಸಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಅವರ ಮಂತ್ರಿಮಂಡಲದ ಸಹದ್ಯೋಗಿಗಳು ರೂ.1,343,170,000,000 ಕೋಟಿಯಷ್ಟು ಭ್ರಷ್ಟಾಚಾರ ಮಾಡಿದ್ದಾರೆ’ ಎಂದು ಹೇಳುತ್ತಿದ್ದಾರೆ’ ಎಂದು ಅಲ್ಲಿಂದ ವರದಿಗಳು ಹೇಳುತ್ತಿದೆ. ಇದನ್ನೇ ಕಾಯುತ್ತಿದ್ದ ಡಿಎಂಕೆ ಪಕ್ಷವು ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿಯ ಮೂಲಕ ತಕ್ಷಣ ಅಣ್ಣಮಲೈಗೆ ಲೀಗಲ್ ನೋಟೀಸ್ ಕಳುಹಿಸಿ, ‘ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಅವರ ಕುಟುಂಬ ಸದಸ್ಯರು ಮತ್ತು ಡಿಎಂಕೆ ನಾಯಕರ ವಿರುದ್ಧ ಇತ್ತೀಚಿಗೆ ಮಾಡಿದ ಭಾಷಣ ಮತ್ತು ಭ್ರಷ್ಟಾಚಾರ ಆರೋಪಗಳಿಗಾಗಿ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಬೇಕು ಮತ್ತು 48 ಗಂಟೆಗಳ ಒಳಗೆ 500 ಕೋಟಿ ರೂಪಾಯಿಗಳ ನಷ್ಟವನ್ನು ಪಾವತಿಸಬೇಕು. ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು’ ಎಂದು ಲೀಗಲ್ ನೋಟಿಸ್ ಕಳುಹಿಸಿತು.

ಕೆಲವು ದಿನಗಳ ಹಿಂದೆ ಮಾತನಾಡಿದ ಅಣ್ಣಾಮಲೈ ‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿಯನ್ನು ಮುಂದುವರಿಸಿದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಗರ್ವದಿಂದ ಕೇಂದ್ರದ ಬಿಜೆಪಿ ವರಿಷ್ಠರಿಗೆ ಬೆದರಿಕೆಯ ಸಂದೇಶವನ್ನು ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಮುಂದಿನ ಚುನಾವಣೆ ಎಐಎಡಿಎಂಕೆ ಜೊತೆಯಲ್ಲೇ’ ಎಂದು ಪ್ರತಿಕ್ರಿಯೆ ನೀಡಿದರು. ಇಷ್ಟಕ್ಕೆ ತನ್ನಗಾಗದ ಅಣ್ಣಾಮಲೈ ‘ಡಿಎಂಕೆ ಮಾತ್ರವಲ್ಲ ತಮಿಳುನಾಡಿನಲ್ಲಿ ಅಧಿಕಾರ ಚಲಾಯಿಸಿದ ಹಿಂದಿನ ಪಕ್ಷಗಳ ಭ್ರಷ್ಟಾಚಾರವನ್ನೂ ಬಯಲಿಗೆಳೆಯುತ್ತೇನೆ’ ಎಂದು ಎಐಎಡಿಎಂಕೆ ಪಕ್ಷಕ್ಕೆ ದಮಕಿ ಹಾಕಿದರು. ಇದರಿಂದ ಎಐಎಡಿಎಂಕೆ ಮತ್ತು ಬಿಜೆಪಿಯ ಸಂಬಂಧ ಅಳಸಿಹೋಗಿರುವುದು ಸುಳ್ಳೇನಲ್ಲ. ಇವರ ನಡವಳಿಕೆಯಿಂದ ಬೇಸತ್ತ ತಮಿಳುನಾಡು ಬಿಜೆಪಿಯ ರಾಜ್ಯಮಟ್ಟದ ಪದಾಧಿಕಾರಿಗಳು ಸುಮಾರು ಜನ ಪಕ್ಷವನ್ನು ತೊರೆದು ಬೇರೆ ಬೇರೆ ಪಕ್ಷಗಳಲ್ಲಿ ಸೇರಿಕೊಳುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಎನ್‌ಡಿಎ ಮಿತ್ರ ಪಕ್ಷವಾದ ಎಐಎಡಿಎಂಕೆ, ಕರ್ನಾಟಕದಲ್ಲಿ ತಮಿಳರ ಪ್ರಾಬಲ್ಯವಿರುವ ಕಡೆಗಳಲ್ಲಿ ಸ್ಪರ್ದಿಸಲು 4 ರಿಂದ 6 ಕ್ಷೇತ್ರಗಳನ್ನು ಒದಗಿಸಿಕೊಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಕೇಳಿತ್ತು. ಆದರೆ ಇದಕ್ಕೆ ಅಮಿತ್ ಶಾ ಒಪ್ಪಿಗೆ ನೀಡಲಿಲ್ಲವೆಂದು ಹೇಳಲಾಗುತ್ತಿದೆ. ಇದರಿಂದ ರೊಚ್ಚಿಗೆದ್ದ ಎಐಎಡಿಎಂಕೆ ಕೊನೆಯ ಕ್ಷಣದಲ್ಲಿ ಪುಲಿಕೇಶಿನಗರದಲ್ಲಿ ತಮ್ಮ ಅಭ್ಯರ್ಥಿ ಟಿ.ಅನ್ಬರಸನ್ ಅವರನ್ನು ಕಣಕ್ಕಿಳಿಸಿ ತಮ್ಮ ಪ್ರತಿರೋಧವನ್ನು ವ್ಯಕ್ತ ಪಡಿಸಿತು. ಈಗ ಬಿಜೆಪಿ ವರಿಷ್ಠರ ಕೋರಿಕೆಯ ಮೇರೆಗೆ ಅಲ್ಲಿ ತಮ್ಮ ಅಭ್ಯರ್ಥಿಯನ್ನು ವಾಪಸ್ಸು ಪಡೆದುಕೊಂಡಿದೆ.

ಬೆಂಗಳೂರು ನಗರದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕೆಂದು ಕಾರ್ಯತಂತ್ರ ರೂಪಿಸಿರುವ  ಬಿಜೆಪಿಗೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ಕರ್ನಾಟಕ ಚುನಾವಣೆ ಸಹ ಉಸ್ತುವಾರಿಯಾದ ಅಣ್ಣಾಮಲೈ ಅವರಿಂದ ತಮಿಳರ ಪ್ರಾಬಲ್ಯವಿರುವ 23 ಕ್ಷೇತ್ರಗಳಲ್ಲಿ ತಮಿಳರ ಮತಗಳು ಕೈತಪ್ಪಿ ಹೋಗುವುದು ಬಹುತೇಕ ಖಚಿತವಾಗಿದೆ. ಕಾರಣ ಇಲ್ಲಿನ ಬಹುಪಾಲು ತಮಿಳರು ಇನ್ನು ಡಿಎಂಕೆ, ಎಐಎಡಿಎಂಕೆ, ವಿಡುದಲೈ ಚಿರುತ್ತೈಗಳ್, ದ್ರಾವಿಡರ್ ಕಳಗಂ ಹಾಗೂ ದ್ರಾವಿಡರ್ ವಿಡುದಲೈ ಕಳಗಂ ಮೂಂತಾದ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಉಳಿದವರಲ್ಲಿ ಹೆಚ್ಚಿನವರು ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಇದ್ದಾರೆ. ಬಿಜೆಪಿಯಲ್ಲಿ ಬೆರಳೆನಿಕೆಯ ತಮಿಳರೆ ಇದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಡಿಎಂಕೆ ವರಿಷ್ಠ ದಿವಂಗತ ಎಂ.ಕರುಣಾನಿಧಿ ಅವರ ಆಡಳಿತಾವದಿಯಲ್ಲಿ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಹಾಗೂ ಚೆನ್ನೈನಲ್ಲಿ ಸರ್ವಜ್ಞರ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಇದರಿಂದ ಕರ್ನಾಟಕದಲ್ಲಿ ಯಡಿಯೂರಪ್ಪನವರ ಮೇಲೆ ಇಲ್ಲಿನ ತಮಿಳರು ಅಪಾರವಾದ ಗೌರವವನ್ನು ಇಟ್ಟಿದ್ದರು. ಈಗ ಅಣ್ಣಾಮಲೈಯಿಂದ ಅದೂ ಇಲ್ಲದಂತೆ ಆಗಿದೆ. ತಮಿಳುನಾಡಿನಲ್ಲಿರುವ ಆಡಳಿತ ಪಕ್ಷವಾದ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳನ್ನು ಹಾಗೂ ವಿರೋಧ ಪಕ್ಷವಾದ ಎಐಎಡಿಎಂಕೆಯನ್ನು ಕಟುವಾಗಿ ಟೀಕಿಸಿಕೊಂಡು ಇಲ್ಲಿಗೆ ಬಂದು ತಮಿಳರಲ್ಲಿ ಮತ ಕೇಳಿದರೆ ಯಾರುತಾನೇ ಓಟು ನೀಡುತ್ತಾರೆ.