ಬೆಂಗಳೂರು: ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕಾರಣಕ್ಕೆ ಸಂಬಂಧಿಸಿದಂತೆ ಮೊದಲನೇ ಆರೋಪಿ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ಮೂರನೇ ಆರೋಪಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ಪ್ರಕರಣದಲ್ಲಿ, ‘ಮೇಲ್ಮನವಿ ಮಾಡಲು ಇದು ಅರ್ಹ ಪ್ರಕರಣವಲ್ಲ’ ಎಂದಿರುವ ಸರ್ಕಾರದ ನಡೆಗೆ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇದು ಕಾನೂನಿನ ಕುಣಿಕೆಯಿಂದ ಕೋಮುವಾದಿಗಳಿಗೆ ಪಾರಾಗಲು ಸರ್ಕಾರ ಅವಕಾಶ ನೀಡುವುದಲ್ಲದೆ ಇನ್ನೇನು? ಸರ್ಕಾರ ಯಾರ ಹಿತವನ್ನು ಕಾಪಾಡುತ್ತಿದೆ ಎಂದು ಅರ್ಥೈಸಲು ಬೇರೆ ಕಾರಣ ಬೇಕಿಲ್ಲ. ಸರ್ಕಾರದ ಇಂತಹ ಧೋರಣೆಗಳಿಂದ ಕೋಮುವಾದಿ ಶಕ್ತಿಗಳಿಗೆ ಇನ್ನಷ್ಟು ಧ್ಯರ್ಯ ಬಂದಂತಾಗಿದೆ.
ಪುನೀತ್ ಕೆರೆಹಳ್ಳಿಯಂತಹ ಸಮಾಜ ಘಾತುಕರು ಕಾನೂನನ್ನು ಕೈಗೆತ್ತಿಕೊಳ್ಳಲು ಸರ್ಕಾರದ ಇಂತಹ ನಿರ್ಧಾರಗಳೇ ಕಾರಣ. ಸರ್ಕಾರ ಇಂತಹವರ ಮೇಲೆ ಯಾಕೆ ಮಮಕಾರ ತೋರಿಸುತ್ತಿದೆ. ಕಾನೂನಿಗೆ ಸವಾಲು ಹಾಕುತ್ತಿರುವ ಪುನೀತ್ ಕೆರೆಹಳ್ಳಿ ಮೆರೆಯಲು ಕಾಂಗ್ರೆಸ್ ಸರ್ಕಾರ ಯಾಕೆ ಅವಕಾಶ ಮಾಡಿಕೊಡುತ್ತಿದೆ” ಎಂದು ಅವರು ಸರಕಾರವನ್ನು ಪ್ರಶ್ನಿಸಿದ್ದಾರೆ.
ಅತನನ್ನು ನಿಯಂತ್ರಿಸಲು ಸರ್ಕಾರ ಆತಂಕ ಪಡುತ್ತಿದೆಯೇ? ಕಾಂಗ್ರೆಸ್ ಕೋಮುವಾದಿಗಳಿಗೆ ಹಿತಕಾರಿಯಾಗಿ ವರ್ತಿಸುತ್ತಿದೆ. ಕಳೆದ ಬಾರಿಯ ಬಿಜೆಪಿ ಸರ್ಕಾರದ ಕೋಮು ಧ್ರುವೀಕರಣದಿಂದ ಬೇಸತ್ತ ಜನರು ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದರು. ಕಾಂಗ್ರೆಸ್ ಸರ್ಕಾರ ಬಂದರೆ ಕೋಮುವಾದಿಗಳ ಸದ್ದಡಗುವುದು ಎಂದು ಭಾವಿಸಿದ್ದರು. ಆದರೆ, ಸರ್ಕಾರದ ಈಗಿನ ನಡೆ ನೋಡಿದರೆ ಅದು ಕೇವಲ ಭ್ರಮೆ ಎಂದೆನಿಸುತ್ತದೆ.
ಯಾಕೆಂದರೆ, ಒಂದೆಡೆ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಸರ್ಕಾರಕ್ಕೆ ಕವಡೆ ಕಾಸಿನ ಬೆಲೆಯನ್ನೂ ನೀಡುತ್ತಿಲ್ಲ. ಆತ ಅನಾರೋಗ್ಯದ ನೆಪದಲ್ಲಿ ಆಸ್ಪತ್ರೆ ಸೇರಿ ಪಾರಾಗುತ್ತಾನೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡುತ್ತಿರುವುದೇಕೆ? ಈ ಪ್ರಕರಣಗಳನ್ನು ಗಮನಿಸಿದರೆ ಸರ್ಕಾರ ಯಾರ ಹಿತಾಸಕ್ತಿ ಕಾಪಾಡುತ್ತಿದೆ ಎಂದು ಅರ್ಥವಾಗುತ್ತದೆ. ತಮ್ಮನ್ನು ಚುನಾಯಿಸಿದ ಮತದಾರರಿಗೆ ದ್ರೋಹ ಬಗೆಯದೆ ಸರ್ಕಾರ ತನ್ನ ಕರ್ತವ್ಯ ನಿರ್ವಹಿಸಲು ಮುಂದಾಗಬೇಕೆಂದು ತಾಹೇರ್ ಹುಸೇನ್ ಸರ್ಕಾರವನ್ನು ಆಗ್ರಹಿಸಿದ್ದಾರೆ.