ಕಲ್ಲಡ್ಕ ಪ್ರಭಾಕರ್ ಭಟ್ಟರ ಮುಸ್ಲಿಂ ಮಹಿಳೆಯರ ಕುರಿತ ಅವಹೇಳನಕಾರಿ ಹಾಗೂ ಕೋಮು ಪ್ರಚೋದಿತ ಹೇಳಿಕೆಗೆ ಕೆಎಂಯು ತೀವ್ರ ಖಂಡನೆ! » Dynamic Leader
December 3, 2024
ರಾಜ್ಯ

ಕಲ್ಲಡ್ಕ ಪ್ರಭಾಕರ್ ಭಟ್ಟರ ಮುಸ್ಲಿಂ ಮಹಿಳೆಯರ ಕುರಿತ ಅವಹೇಳನಕಾರಿ ಹಾಗೂ ಕೋಮು ಪ್ರಚೋದಿತ ಹೇಳಿಕೆಗೆ ಕೆಎಂಯು ತೀವ್ರ ಖಂಡನೆ!

ಸಂವಿಧಾನ ವಿರೋಧಿ, ಕೋಮು ದ್ವೇಷ ಹರಡುವ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಈ ಕೂಡಲೇ ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಕಾನೂನು ಕ್ರಮ ಜರುಗಿಸಿ ಬಂಧಿಸಲು ಕರ್ನಾಟಕ ಮುಸ್ಲಿಂ ಯುನಿಟಿ ಒತ್ತಾಯ.

ಇತ್ತೀಚಿಗೆ ಶ್ರೀರಂಗಪಟ್ಟಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, ಮುಸ್ಲಿಂ ಮಹಿಳೆಯರನ್ನು ಉದ್ದೇಶಿಸಿ ನೀಡಿದ ಹೇಳಿಕೆ ಕೋಮು ಪ್ರಚೋದನಕಾರಿ ಆಗಿದೆ. ಭಟ್ ಈ ಮೂಲಕ ಒಂದು ನಿರ್ಧಿಷ್ಟ ಸಮುದಾಯವನ್ನು ಗುರಿಯಾಗಿಸಿ, ಮತೀಯ ಉದ್ವಿಗ್ನತೆ ಸೃಷ್ಟಿಸುವ ಮತ್ತು ಕೋಮು ಗಲಭೆಗಳನ್ನು ಹುಟ್ಟು ಹಾಕುವ ರೀತಿಯ ಹೇಳಿಕೆ ನೀಡಿದ್ದಾರೆ. ಇದು ಸಂವಿಧಾನ ವಿರೋಧಿ ಎಂದು ಕರ್ನಾಟಕ ಮುಸ್ಲಿಂ ಯೂನಿಟಿಯ ಅಧ್ಯಕ್ಷ ಜಬ್ಬಾರ್ ಕಲ್ಬುರ್ಗಿ ಹೇಳಿದ್ದಾರೆ.  

ಅಲ್ಪಸಂಖ್ಯಾತರ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯ ಜೊತೆಗೆ ಮುಸ್ಲಿಂ ಮಹಿಳೆಯ ಗೌರವ ಘನತೆಗಳಿಗೆ ಕುಂದುಂಟು ಮಾಡಿರುವ ಇವರ ಕೋಮುದ್ವೇಷಿ ಹೇಳಿಕೆ ಖಂಡನೀಯ. ಕರ್ನಾಟಕ ರಾಜ್ಯದಲ್ಲಿ ಶಾಂತಿ ಭಂಗವನ್ನು ಉಂಟು ಮಾಡುವ ಮತ್ತು ಮಹಿಳಾ ಹಕ್ಕುಗಳ ಉಲ್ಲಂಘನೆಯ ಹೇಳಿಗಳನ್ನು ನೀಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಶೀಘ್ರ ಹಾಗೂ ಸೂಕ್ತ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲು ಗೊಳಿಸಬೇಕು ಎಂದು ಸರ್ಕಾರವನ್ನು ಹಾಗೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ಅವರೇ ನೇರಹೊಣೆ ಎಂದು ಹೇಳಿದ್ದಾರೆ.  

ಇತರೆ ಧರ್ಮ ಸಮುದಾಯದ ಹೆಣ್ಣು ಮಕ್ಕಳ ಕುರಿತು ಅಸಭ್ಯವಾಗಿ, ಅಶ್ಲೀಲವಾಗಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು ಆ ವೇದಿಕೆಯಲ್ಲಿ ಉಪಸ್ಥಿತರಿದ್ದ ಇತರೆ ಎಲ್ಲಾ ಮುಖಂಡರ ವಿರುದ್ಧವೂ ಕಾನೂನು ಕ್ರಮ ಜರುಗಿಸುವ ಹೊಣೆ ಸರಕಾರದ್ದಾಗಿದೆ. ಈ ಹೇಯ ಕೃತ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಪಕ್ಷದ ಮೌನವೂ ಸಹ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕಾನೂನು ಬಾಹಿರ ಕೃತ್ಯವನ್ನು ಕೆಎಂಯು ಖಂಡಿಸುತ್ತದೆ. ಅಲ್ಲದೆ, ಸಂವಿಧಾನ ವಿರೋಧಿ, ಕೋಮು ದ್ವೇಷ ಹರಡುವ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಈ ಕೂಡಲೇ ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಕಾನೂನು ಕ್ರಮ ಜರುಗಿಸಿ ಬಂಧಿಸಲು ಕರ್ನಾಟಕ ಮುಸ್ಲಿಂ ಯುನಿಟಿ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.

Related Posts