ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಕಾಂಗ್ರೆಸ್ ಬೃಹತ್ ಜನಾಂದೋಲನ ಸಮಾವೇಶ Archives » Dynamic Leader
November 22, 2024
Home Posts tagged ಕಾಂಗ್ರೆಸ್ ಬೃಹತ್ ಜನಾಂದೋಲನ ಸಮಾವೇಶ
ರಾಜಕೀಯ

ಮೈಸೂರು: ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ ಮತ್ತು ಅಧಿಕಾರ ದುರ್ಬಳಕೆ, ಚುನಾಯಿತ ಸರ್ಕಾರಗಳನ್ನು ಉರುಳಿಸುವ ಬಿಜೆಪಿ, ಜೆಡಿಎಸ್ ನ ಜನತಂತ್ರ ವಿರೋಧಿ ನಡೆಯನ್ನು ವಿರೋಧಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಜನಾಂದೋಲನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

“ನಾನು ಈ ನೆಲದ ಶೋಷಿತರು, ಶ್ರಮಿಕರು, ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿ ಇದ್ದೀನಿ. ಇವರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ ಎನ್ನುವ ಕಾರಣಕ್ಕೆ ನನ್ನನ್ನು ಕೆಳಗಿಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಈ ನಾಡಿನ‌ ಜನತೆ ಅವಕಾಶ ಕೊಡುವುದಿಲ್ಲ ಎನ್ನುವ ನಂಬಿಕೆ ನನಗಿದೆ. ಬಿಜೆಪಿ, ಜೆಡಿಎಸ್ ಎಷ್ಟೇ ಕಪಟ ಉದ್ದೇಶದ ಪಾದಯಾತ್ರೆ ನಡೆಸಿದರೂ ನಾನು ಹೆದರುವುದಿಲ್ಲ. ರಾಜಭವನ ಮತ್ತು ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ನಡೆಸಿದರೂ ನಾನು ಹೆದರುವುದಿಲ್ಲ. ನಾನು ಇವರ ಷಡ್ಯಂತ್ರಕ್ಕೆ ಬಲಿಯಾಗಿ ಮನೆಯಲ್ಲಿ ಕೂರುವವನಲ್ಲ” ಎಂದು ಹೇಳಿದರು.

“ನೀವೆಲ್ಲಾ ಪ್ರಜಾಪ್ರಭುತ್ವದ ಸೇನಾನಿಗಳು. ಸಂವಿಧಾನ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವದ ರಕ್ಷಣೆಗೆ ನಿಂತ ನಾಡಿನ ಏಳುಕೋಟಿ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. ಮನುವಾದಿಗಳು, ಜಾತಿವಾದಿಗಳು ಯಾವತ್ತೂ ಕೂಡ ಶೋಷಿತರು ಅಧಿಕಾರ ನಡೆಸುವುದನ್ನು ಸಹಿಸುವುದಿಲ್ಲ. ದೇವರಾಜ ಅರಸು, ಬಂಗಾರಪ್ಪ ಅವರನ್ನೂ ಇವರು ಸಹಿಸಲಿಲ್ಲ. ಈಗ ನನ್ನನ್ನೂ ಸಹಿಸುತ್ತಿಲ್ಲ.

ಜೆಡಿಎಸ್ ನ ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ಯಾವತ್ತೂ ಕೊಟ್ಟ ಮಾತಿನಂತೆ ನಡೆದುಕೊಳ್ಳುವವರಲ್ಲ. ‘ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಅಧಿಕಾರ ನಡೆಸಿದರೆ ನನ್ನ ಶವದ ಮೇಲೆ ನಡೆಸಬೇಕು’ ಎಂದು ದೇವೇಗೌಡರು ಹೇಳಿದ್ದರು. ‘ನರೇಂದ್ರ ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ’ ಎಂದು ಹೇಳಿದ್ದ ದೇವೇಗೌಡರೇ ಈಗ ಬಿಜೆಪಿ ಜೊತೆ ಶಾಮೀಲಾಗಿದ್ದಾರೆ” ಎಂದು ಕಿಡಿಕಾರಿದರು.

“ನಾನು ರಾಜ್ಯದ ಜನರ ಆಶೀರ್ವಾದದಿಂದ ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿದ್ದೀನಿ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನನಗೆ ಇಷ್ಟೆಲ್ಲಾ ಅಧಿಕಾರ ಸಿಕ್ಕಾಗಲೂ ನನಗೆ ಹಣ ಮಾಡುವ ಆಸೆ ಬಂದಿಲ್ಲ, ನನ್ನ ಪತ್ನಿ ಇವತ್ತಿನವರೆಗೂ ಸಾರ್ವಜನಿಕವಾಗಿ ಕಾಣಿಸಿಲ್ಲ. ಎರಡು ಬಾರಿ ಸಿಎಂ ಆದರೂ ಪ್ರಮಾಣ ವಚನಕ್ಕೂ ಬರಲಿಲ್ಲ.

ನಾವು ಭ್ರಷ್ಟಾಚಾರ ಮಾಡಲು ಸಾಧ್ಯವಿಲ್ಲ. ನಿಮ್ಮ ನಂಬಿಕೆಗೆ ದ್ರೋಹ ಎಸಗಲು ಸಾಧ್ಯವಿಲ್ಲ. ನಾನು ರಾಜಕೀಯದಲ್ಲಿ ಇರುವವರೆಗೂ ಯಾವತ್ತೂ ನಿಮ್ಮ ನಂಬಿಕೆಗೆ ದ್ರೋಹ ಬಗೆಯಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ನಾನು ಸೊನ್ನೆಯಿಂದ ರಾಜಕೀಯ ಪ್ರಾರಂಭಿಸಿದೆ. 1983ರಲ್ಲಿ ಮೊದಲ ಚುನಾವಣೆಗೆ ಡೆಪಾಸಿಟ್ ಮಾಡಲು ನನ್ನ ಬಳಿ ಹಣ ಇರಲಿಲ್ಲ. ನನ್ನ ಕಚೇರಿ ಕ್ಲರ್ಕ್ ಆನಂದ 250ರೂ ಡೆಪಾಸಿಟ್ ಕಟ್ಟಿದರು. ಜನರೇ ಹಣ ಕೊಟ್ಟು ಚುನಾವಣೆ ಗೆಲ್ಲಿಸಿದರು. ಆ ಚುನಾವಣೆಯಲ್ಲಿ ಜನರೇ 63 ಸಾವಿರ ರೂಪಾಯಿ ಖರ್ಚು ಮಾಡಿ ನನ್ನನ್ನು ಆರಿಸಿದರು. ನನ್ನ ಒಂಬತ್ತು ಚುನಾವಣೆ ಗೆಲುವಲ್ಲೂ ಜನರೇ ಹಣ ಖರ್ಚು ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ‌. ದಲಿತರು, ಶೋಷಿತರು, ಅಲ್ಪಸಂಖ್ಯಾತರ ಹಾಗೂ ಸಮಸ್ತ ಜನರ ಏಳಿಗೆಗಾಗಿ ಮಾತ್ರ ನನ್ನ ಅಧಿಕಾರ ಮುಡಿಪಾಗಿಟ್ಟಿದ್ದೇನೆ.

ಬಿಜೆಪಿ, ಜೆಡಿಎಸ್ ಒಟ್ಟಾಗಿ ಎಷ್ಟೇ ಪಾದಯಾತ್ರೆ ನಡೆಸಿದರೂ ನಾನು ಜಗ್ಗಲ್ಲ, ಬಗ್ಗಲ್ಲ. ಹಿಂದುಳಿದ ವರ್ಗಗಳಲ್ಲಿ ದೇವರಾಜ ಅರಸು ಬಿಟ್ಟರೆ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸಿದ್ದು ನಾನು ಮಾತ್ರ. ಇದನ್ನು ಬಿಜೆಪಿ, ಜೆಡಿಎಸ್ ಸಹಿಸುತ್ತಿಲ್ಲ. ಆದರೆ ಎಲ್ಲಿಯವರೆಗೂ ಸೇನಾನಿಗಳಾದ ನಿಮ್ಮ ಆಶೀರ್ವಾದ ನನ್ನ ಮೇಲೆ ಇರುತ್ತದೋ ಅಲ್ಲಿಯವರೆಗೂ ನನ್ನನ್ನು ಯಾವ ಪಾದಯಾತ್ರೆಗಳೂ ಅಲುಗಾಡಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

“ವಾಲ್ಮೀಕಿ ನಿಗಮದ ಪ್ರಕರಣದಲ್ಲೂ ಸರ್ಕಾರದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿ ಸೋತರು. ದಾಖಲೆಗಳು ಸ್ಪಷ್ಟವಾಗಿವೆ. ಸರ್ಕಾರಕ್ಕೂ ನಿಗಮದ ಹಗರಣಕ್ಕೂ ಸಂಬಂಧ ಇಲ್ಲ ಎನ್ನುವುದು ದಾಖಲೆಗಳಲ್ಲಿದೆ.

ವಾಲ್ಮೀಕಿ ನಿಗಮದ ಹಗರಣ ಹೊರಗೆ ಬಂದ ತಕ್ಷಣ ನಾವು ವಿಶೇಷ ತನಿಖಾ ದಳ ರಚಿಸಿದೆವು. ತನಿಖೆ ನಡೆದು ಹಣ ವಾಪಾಸ್ ವಸೂಲಾಗಿದೆ. 50 ಕೋಟಿ ರೂಪಾಯಿಯನ್ನು ಎಸ್‌ಐಟಿ ರಿಕವರಿ ಮಾಡಿ ಆಗಿದೆ. 46 ಕೋಟಿ ಹಣ ಖಾಸಗಿ ಬ್ಯಾಂಕ್ ನಲ್ಲಿದ್ದು ಫ್ರೀಜ್ ಮಾಡಿದ್ದಾರೆ. ಇಷ್ಟು ಪರಿಣಾಮಕಾರಿಯಾಗಿ ಎಸ್‌ಐಟಿ ಯವರು ತನಿಖೆ ನಡೆಸಿದ್ದಾರೆ. ಆದರೂ, ಇಡಿಯವರು ಸ್ವಯಂಸ್ಫೂರ್ತಿಯಿಂದ ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದರೂ ಸರ್ಕಾರದ ವಿರುದ್ಧ ಏನೂ ದಾಖಲೆ ಸಿಗಲಿಲ್ಲ. ಹೀಗಾಗಿ ಹಗರಣವೇ ಅಲ್ಲದ ಮೂಡಾ ಪ್ರಕರಣಕ್ಕೆ ಹಗರಣದ ಬಣ್ಣ ಕೊಟ್ಟರು.

ನನ್ನದೊಂದು ಪತ್ರ ಇಲ್ಲ, ನನ್ನದೊಂದು ಸಹಿ ಇಲ್ಲ, ಆಗ ನಮ್ಮ ಸರ್ಕಾರ ಅಧಿಕಾರದಲ್ಲೂ ಇರಲಿಲ್ಲ. ಆದರೂ ಹಗರಣ, ಹಗರಣ ಎಂದು ಬೊಬ್ಬೆ ಹಾಕುತ್ತಾ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಇದಕ್ಕೆ ನೀವ್ಯಾರೂ ಸೊಪ್ಪು ಹಾಕಬೇಡಿ, ನಂಬಬೇಡಿ” ಎಂದರು.

“ಯಡಿಯೂರಪ್ಪ ಅವರು ಈ ವಯಸ್ಸಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ ಪೋಕ್ಸೋ ಕೇಸಲ್ಲಿ ಇದ್ದಾರೆ. ನಾಚಿಕೆ ಆಗಲ್ವಾ? ಬಿಜೆಪಿ, ಜೆಡಿಎಸ್ ಅಧಿಕಾರಿದಲ್ಲಿ ಇದ್ದಾಗ ನಡೆಸಿದ್ದು ಒಂದಾ, ಎರಡಾ ಹಗರಣಗಳು? ಸುಪ್ರೀಂಕೋರ್ಟ್ ನಲ್ಲಿ ತಮ್ಮ ಹಗರಣಗಳಿಗೆ ತಡೆಯಾಜ್ಞೆ ತಂದಿದ್ದಾರೆ. ಇವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಇವರಿಗೆ ನಾಚಿಕೆ ಆಗಲ್ವಾ?

ಯಡಿಯೂರಪ್ಪ ಅವರು ಚೆಕ್ ನಲ್ಲಿ ಲಂಚ ಪಡೆದು ಜೈಲಿಗೆ ಹೋದರು. ಆರ್.ಅಶೋಕ್, ವಿಜಯೇಂದ್ರ ಇವರೆಲ್ಲರೂ ಜೈಲಿಗೆ ಹೋಗಬೇಕಾದವರು. ಇವರಿಗೆ ನನ್ನ ಬಗ್ಗೆ ಮಾತನಾಡುವ ಯಾವ ಯೋಗ್ಯತೆ ಇದೆ”? ಎಂದು ಆಕ್ರೋಶ ವ್ಯಕ್ತಪಡಿಸಿದರು.

“15 ಬಜೆಟ್ ಮಂಡಿಸಿದ್ದೇನೆ. ನನಗೆ ಹಣದ ಮೋಹ ಇದ್ದಿದ್ದರೆ ಕೋಟಿ ಕೋಟಿ ಮಾಡಬಹುದಿತ್ತು. ಇಷ್ಟು ದಿನವಾದರೂ ನನಗೆ ಮೈಸೂರಲ್ಲಿ ಮನೆ ಇಲ್ಲ, ಈಗ ಕಟ್ಟಿಸುತ್ತಿದ್ದೇನೆ. ಹಿಂದಿದ್ದ ಮನೆ ಸಾಲ ತಗೊಂಡು ಕಟ್ಟಿಸಿದ್ದೆ. ಸಾಲ ತೀರಿಸಲಾಗದೆ ಆ ಮನೆ ಮಾರಿಬಿಟ್ಟೆ. ಬಾಡಿಗೆ ಮನೆಯಲ್ಲಿ ಇದ್ದುಕೊಂಡೇ ವಿಧಾನಸಭೆ, ಲೋಕಸಭೆ ಚುನಾವಣೆ ಮಾಡಿದೆ. ಈಗ ಕಟ್ಟುತ್ತಿರುವ ಮನೆ ಬಿಟ್ಟು ನನ್ನ ಹೆಸರಲ್ಲಿ ಒಂದೇ ಒಂದು ಸೈಟು ಇದ್ದರೆ ತೋರಿಸಿ” ಎಂದು ಸವಾಲೆಸದರು.

ಈಗ ರಾಜಭವನವನ್ನು ದುರುಪಯೋಗಪಡಿಸಿಕೊಂಡು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಈ ಷಡ್ಯಂತ್ರದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ಸೇರಿದ್ದಾರೆ. ಕುಮಾರಸ್ವಾಮಿ ವಿರುದ್ಧ, ನಿರಾಣಿ ವಿರುದ್ಧ, ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದರೂ ರಾಜಭವನದಿಂದ ಇದುವರೆಗೂ ನೋಟಿಸ್ ಹೋಗಿಲ್ಲ. ಆದರೆ ನನಗೆ ಮಾತ್ರ ನೋಟಿಸ್ ಬಂದಿದೆ. ಇದು ಪರಮದ್ರೋಹ ಅಲ್ಲವೇ?” ಎಂದು ಕಿಡಿಕಾರಿದರು.  

“ಮುಡಾ ವಿಚಾರದಲ್ಲಿ ನನ್ನ ತಪ್ಪು ಎಲ್ಲಿದೆ? ಮುಡಾದ ಯಾವ ಸದಸ್ಯರಿಗೂ ನಾನು ಕರೆ ಮಾಡಿಲ್ಲ, ಬೇಡಿಕೆ ಇಟ್ಟಿಲ್ಲ, ಶಿಫಾರಸ್ಸು ಮಾಡಿಲ್ಲ. ನಾನು ಯಾವುದಕ್ಕೂ ಸಹಿ ಹಾಕಿಲ್ಲ. ಹೀಗಿದ್ದಾಗ ಇದರಲ್ಲಿ ನನ್ನ ಪಾತ್ರ ಏನಿದೆ?

ನಮ್ಮ ಜಮೀನು ಅಕ್ರಮವಾಗಿ ವಶಕ್ಕೆ ಪಡೆದು ಸೈಟು, ಪಾರ್ಕ್, ರಸ್ತೆ ಮಾಡಿ ಹಂಚಿಬಿಟ್ಟರು. ಇಲ್ಲಿ ತಪ್ಪು ಮಾಡಿರುವುದು ಮುಡಾ. ತಪ್ಪು ಒಪ್ಪಿಕೊಂಡು ನಂತರ ನನ್ನ ಕುಟುಂಬಕ್ಕೆ ಬದಲಿ ನಿವೇಶನ ನೀಡಿದ್ದಾರೆ. ನನ್ನ ಪತ್ನಿ ಬದಲಿ ಜಮೀನು ಕೊಡಿ ಎಂದು ಅರ್ಜಿ ಹಾಕಿದ್ದರೇ ವಿನಃ ಯಾವುದೇ ನಿರ್ಧಿಷ್ಟ ಜಾಗದಲ್ಲಿ ನಿವೇಶನ ಕೊಡಿ ಎಂದು ಕೇಳಿರಲಿಲ್ಲ.

ನಿವೇಶನ ಕೊಟ್ಟವರು ಜಿಜೆಪಿ ಸರ್ಕಾರದವರು. ಈಗ ಹಗರಣ ನಡೆದಿದೆ ಎನ್ನುತ್ತಿರುವವರು ಅವರೇ. ಇದರಲ್ಲೇ ಅವರ ಉದ್ದೇಶ ಏನಿದೆ ಎಂಬುದನ್ನು ರಾಜ್ಯದ ಜನ ಅರ್ಥಮಾಡಿಕೊಳ್ಳಬೇಕು” ಎಂದು ಮನವಿ ಮಾಡಿದರು.