ಚುನಾವಣಾ ಬಾಂಡ್ ಯೋಜನೆಯು ಸಮಾನತೆ, ನ್ಯಾಯಸಮ್ಮತತೆ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಉಲ್ಲಂಘಿಸಿದೆ. ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪು ಚುನಾವಣೆಯಲ್ಲಿ ಪಾರದರ್ಶಕತೆ, ಮಾಹಿತಿ ಹಕ್ಕು ಮತ್ತು ಸಮಾನತೆ ಮುಂತಾದವುಗಳಿಗೆ ಸಿಕ್ಕಿದ ಜಯವಾಗಿದೆ.
ರಾಜಕೀಯ ಪಕ್ಷಗಳು ದೇಣಿಗೆ ಪಡೆಯುವ ಚುನಾವಣಾ ಬಾಂಡ್ ಯೋಜನೆ ಅಸಿಂಧು ಎಂದು ಸುಪ್ರೀಂ ಕೋರ್ಟ್ ನಿನ್ನೆ ತೀರ್ಪು ನೀಡಿದೆ. ದೇಣಿಗೆಗಳ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡುವಂತೆಯೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಆದೇಶಿಸಿದೆ.
ಹೀಗಾಗಿ ಕಾರ್ಪೊರೇಟ್ ಕಂಪನಿಗಳು ಮತ್ತು ದೊಡ್ಡ ಉದ್ಯಮಿಗಳಿಂದ ಪ್ರತಿ ಪಕ್ಷಗಳು ಎಷ್ಟು ಹಣ ಪಡೆದಿವೆ ಎಂಬ ವಿವರವನ್ನು ಮಾರ್ಚ್ 31 ರೊಳಗೆ ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ.
ಈ ಹಿನ್ನಲೆಯಲ್ಲಿ, ಸುಪ್ರೀಂ ಕೋರ್ಟ್ನ ಈ ತೀರ್ಪನ್ನು ಮಾಜಿ ಹಣಕಾಸು ಸಚಿವ ಹಾಗೂ ರಾಜ್ಯಸಭಾ ಸದಸ್ಯ ಪಿ.ಚಿದಂಬರಂ ಸ್ವಾಗತಿಸಿದ್ದಾರೆ. ಮತ್ತು ಈ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ್ದಾರೆ.
‘ಚುನಾವಣಾ ಬಾಂಡ್ ಯೋಜನೆಯು ಸಮಾನತೆ, ನ್ಯಾಯಸಮ್ಮತತೆ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಉಲ್ಲಂಘಿಸಿದೆ. ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪು ಚುನಾವಣೆಯಲ್ಲಿ ಪಾರದರ್ಶಕತೆ, ಮಾಹಿತಿ ಹಕ್ಕು ಮತ್ತು ಸಮಾನತೆ ಮುಂತಾದವುಗಳಿಗೆ ಸಿಕ್ಕಿದ ಜಯವಾಗಿದೆ’ ಎಂದು ಹೇಳಿದ್ದಾರೆ.
‘ಪ್ರಸ್ತುತ ದೊಡ್ಡ ಕಾರ್ಪೊರೇಟ್‌ಗಳಿಂದ ಮತ್ತು ದೊಡ್ಡ ದೊಡ್ಡ ಬಂಡವಾಳಶಾಹಿಗಳಿಂದ ಬಿಜೆಪಿ ಪಡೆದ ದೇಣಿಗೆಯಲ್ಲಿ ಶೇಕಡಾ 90ರಷ್ಟು ಬಹಿರಂಗಗೊಳ್ಳಲಿದೆ.
ಹಣ ಕೊಟ್ಟವರು ಯಾರು? ಅವರು ಹಣ ಪಾವತಿಸಿದಾಗ, ಅದಕ್ಕೆ ಪ್ರತಿಯಾಗಿ ಪಕ್ಷ ಅವರಿಗೆ ನೀಡಿದ್ದು ಏನು? ಎಂಬುದನ್ನು ಜಗತ್ತೇ ತಿಳಿಯಲಿದೆ. ರಾಜಕೀಯ ಪಕ್ಷಗಳಿಗೆ ಹಣ ಏಕೆ ಕೊಡಲಾಯಿತು ಎಂದು ಜನ ಪ್ರಶ್ನಿಸುತ್ತಾರೆ. ಆಗ ಜನರು ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ’ ಎಂದು ಚಿದಂಬರಂ ಹೇಳಿದ್ದಾರೆ.