ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಮುರಾಜಕಾರಣಕ್ಕೆ ಬಲಿಯಾದ ಆರು ಕುಟುಂಬಗಳಿಗೆ ತಲಾ ರೂ.25 ಲಕ್ಷ ಮೊತ್ತದ ಚೆಕ್ ಗಳನ್ನು ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು. ವಸತಿ ಇಲಾಖೆ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್, ಕೃಷಿ ಸಚಿವ ಚೆಲುವನಾರಾಯಣ ಸ್ವಾಮಿ, ಮಾಜಿ ಸಚಿವ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಮುಂತಾದವರು ಪಾಲ್ಗೊಂಡಿದ್ದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಮುರಾಜಕಾರಣಕ್ಕೆ ಬಲಿಯಾದ ಬಳಿಕ ಸರ್ಕಾರದ ತಾರತಮ್ಯ ನೀತಿಯಿಂದ ವಂಚನೆಗೆ ಒಳಗಾಗಿದ್ದ ಆರು ಕುಟುಂಬಗಳಿಗೆ ತಲಾ ರೂ. 25 ಲಕ್ಷ ಮೊತ್ತದ ಪರಿಹಾರ ಚೆಕ್ ಗಳನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿತರಿಸಿ ಮಾತನಾಡಿದರು.
“ಸರ್ಕಾರ ಸರ್ವರಿಗೂ ಸೇರಿದ್ದು. ಬಿಡಿ ಬಿಡಿಯಾಗಿ ಒಂದು ಜಾತಿ, ಒಂದು ಧರ್ಮದ ಪರವಾಗಿ ವರ್ತಿಸುವುದು ಸಂವಿಧಾನ ವಿರೋಧಿ ಕೃತ್ಯ. ಬಿಜೆಪಿಯ ದ್ವೇಷ ಮತ್ತು ತಾರತಮ್ಯ ರಾಜಕಾರಣದ ವಿರುದ್ಧ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಸದನದಲ್ಲೇ ಧ್ವನಿ ಎತ್ತಿದ್ದೆ. ಕೋಮುಗಲಭೆಗಳಿಗೆ ಬಲಿಯಾದ ಮೃತರ ಹೆಸರಲ್ಲೂ ಬಿಜೆಪಿ ತಾರತಮ್ಯ ನೀತಿಯನ್ನು ಅನುಸರಿಸಿತ್ತು. ಮೃತರ ಕುಟುಂಬದವರ ಕಣ್ಣೀರು ಒರೆಸುವುದು ಮತ್ತು ಪರಿಹಾರ ವಿತರಣೆಯಲ್ಲೂ ಸರ್ಕಾರ ತಾರತಮ್ಯವನ್ನು ಮೆರೆದಿತ್ತು. ಹಿಂದಿನ ಸರ್ಕಾರ ಮಾಡಿದ್ದ ತಾರತಮ್ಯವನ್ನು ನಾವು ಸರಿಪಡಿಸಿದ್ದೇವೆ.
ನಮ್ಮ ಅವಧಿಯಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಮತಾಂಧರಿಗೆ, ಅನೈತಿಕ ಪೊಲೀಸ್ ಗಿರಿಗೆ, ಜಾತಿ-ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ. ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಈಗಾಗಲೇ ಸ್ಪಷ್ಟ ಸೂಚನೆ ನೀಡಿದ್ದೇನೆ” ಎಂದು ಮುಖ್ಯಮಂತ್ರಿ ಹೇಳಿದರು.