ಗಂಗಾಜಲದ ಮೇಲೆ ಶೇ.18ರಷ್ಟು ಜಿಎಸ್‌ಟಿ ವಿಧಿಸಿರುವ ಬಿಜೆಪಿ ಸರಕಾರವನ್ನು ಕಾಂಗ್ರೆಸ್ ಪಕ್ಷ ಖಂಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನದ ಪ್ರವಾಸವಾಗಿ ಇಂದು ಉತ್ತರಾಖಂಡಕ್ಕೆ ತೆರಳಿದ್ದರು. ಅಲ್ಲಿ ಅವರು ಸಾಂಪ್ರದಾಯಿಕ ಬಿಳಿ ಬಟ್ಟೆಗಳನ್ನು ಧರಿಸಿ ಪವಿತ್ರ ಜೋಲಿಂಗ್‌ಕಾಂಗ್ ಪರ್ವತದ ಮುಂದೆ ಧ್ಯಾನ ಮಾಡಿದರು.
ಮತ್ತು ಗುಂಜಿ ಗ್ರಾಮಕ್ಕೆ ತೆರಳಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಜತೆಗೆ 4,200 ಕೋಟಿ ರೂ.ಗಳ ಕಲ್ಯಾಣ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಪ್ರಧಾನಿ ಮೋದಿ ಉತ್ತರಾಖಂಡ್ ನಲ್ಲಿದ್ದಾಗ ಗಂಗಾಜಲದ ಮೇಲೆ ಶೇ.18ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಿರುವುದನ್ನು ಕಾಂಗ್ರೆಸ್ ಸೇರಿದಂತೆ ಪಕ್ಷಗಳು ತೀವ್ರವಾಗಿ ಖಂಡಿಸಿವೆ.
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ x ಜಾಲತಾಣದಲ್ಲಿ ಪ್ರಕಟಿಸಿರುವ ಪೋಸ್ಟ್‌ನಲ್ಲಿ, “ನೀವು ಇಂದು ಉತ್ತರಾಖಂಡದಲ್ಲಿ ಇರುವುದು ಉತ್ತಮ. ನಿಮ್ಮ ಸರ್ಕಾರ ಗಂಗಾಜಲಕ್ಕೆ 18% ಜಿಎಸ್‌ಟಿ ವಿಧಿಸಿದೆ. ಮನೆಯಿಂದ ಗಂಗಾಜಲವನ್ನು ಖರೀದಿಸುವವರಿಗೆ ಇದು ಎಂತಹ ಹೊರೆ ಎಂದು ಯೋಚಿಸಲೂ ನನಗೆ ಸಾಧ್ಯವಾಗುತ್ತಿಲ್ಲ.
ಇದು ಜನ ಸಾಮಾನ್ಯರ ಬಗ್ಗೆ ಯೋಚಿಸದ ಬಿಜೆಪಿ ಸರ್ಕಾರದ ಕಪಟತನದ ಪರಮಾವಧಿ” ಎಂದು ಟೀಕಿಸಿದ್ದಾರೆ. ಅಲ್ಲದೆ ಗಂಗಾಜಲದ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಹಲವು ರಾಜಕೀಯ ಪಕ್ಷಗಳು ತೀವ್ರವಾಗಿ ವಿರೋಧಿಸುತ್ತಿವೆ.