ಹೈದರಾಬಾದ್: ಖ್ಯಾತ ನಟಿ ಜಮುನಾ (86) ಅನಾರೋಗ್ಯದಿಂದ ಹೈದರಾಬಾದ್‌ನಲ್ಲಿ ನಿಧನರಾದರು. ನಟಿ ಜಮುನಾ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಪ್ರಮುಖ ನಟರೊಂದಿಗೆ ಅಭಿನಯಿಸಿದ್ದಾರೆ.
ಕನ್ನಡದಲ್ಲಿ ಜಮುನಾ 8 ಚಿತ್ರಗಳಲ್ಲಿ ನಟಿಸಿದ್ದರು. ತೆನಾಲಿ ರಾಮಕೃಷ್ಣ, ಭೂಕೈಲಾಸ ಮೊದಲಾದ ಸಿನಿಮಾಗಳಲ್ಲಿ ಜಮುನಾ ಬಣ್ಣ ಹಚ್ಚಿದ್ದರು. ತೆಲುಗಿನಲ್ಲಿ ಸುಮಾರು 100 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಜಮುನಾ ಅವರು 1936 ಆಗಸ್ಟ್ 30 ರಂದು ಹಂಪಿಯಲ್ಲಿ (Hampi) ಜನಿಸಿದ್ದರು. 1953ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಹಲವು ದಶಕಗಳ ಕಾಲ ಚಿತ್ರರಂಗಕ್ಕಾಗಿ ಶ್ರಮಿಸಿದರು.
ಜಮುನಾ ಪಾರ್ಥಿವ ಶರೀರವನ್ನು ಬೆಳಗ್ಗೆ 11ಗಂಟೆಗೆ ಹೈದರಾಬಾದ್ನಲ್ಲಿರುವ ಫಿಲಂ ಚೇಂಬರ್‌ಗೆ ತರಲಾಗುತ್ತದೆ. ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಜಮುನಾ ಅವರ ನಟನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಜಮುನಾ ಅವರು ನಟನೆಯ ಜತೆಗೆ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. 1980ರಲ್ಲಿ ಅವರು ಕಾಂಗ್ರೆಸ್ಗೆ ಸೇರ್ಪಡೆ ಆದರು. 1989ರಲ್ಲಿ ಜಮುನಾ ಅವರು ರಾಜಮಂಡ್ರಿಯಿಂದ ಸಂಸದೆಯಾಗಿ ಆಯ್ಕೆ ಆದರು. 1991ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಸೋತರು. ಆ ಬಳಿಕ ರಾಜಕೀಯದಿಂದ ದೂರ ಉಳಿದರು.