ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಡ್ರಗ್ಸ್ ಹಾವಳಿ Archives » Dynamic Leader
November 21, 2024
Home Posts tagged ಡ್ರಗ್ಸ್ ಹಾವಳಿ
ರಾಜ್ಯ

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಹಾವಳಿ ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಇಲಾಖೆಗಳ ಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಇಂದು ಸಭೆ ನಡೆಸಿದರು.

ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ರಾಜ್ಯದಲ್ಲಿ ಡ್ರಗ್ಸ್ ಜಾಲದ ಬೇರುಗಳನ್ನೇ ಕತ್ತರಿಸಲು ತೀರ್ಮಾನ ಮಾಡಿದ್ದೇವೆ. ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ, ಇದಕ್ಕಾಗಿ ಇನ್ನಷ್ಟು ಕಠಿಣ, ನಿರ್ದಾಕ್ಷಿಣ್ಯವಾದ ಕ್ರಮಗಳನ್ನು ಕೈಗೊಳ್ಳಲು ಇಂದು ನಿರ್ಧರಿಸಲಾಗಿದೆ.

ಗೃಹ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದ್ದು, ಮೇಲಿಂದ ಮೇಲೆ ಸಭೆಗಳನ್ನು ನಡೆಸಿ, ಅಗತ್ಯ ಕಾರ್ಯತಂತ್ರ ರೂಪಿಸಲು ಸೂಚನೆ ನೀಡಲಾಗಿದೆ. ಟಾಸ್ಕ್ ಫೋರ್ಸ್ ನಲ್ಲಿ ಆರೋಗ್ಯ ಸಚಿವರು, ಶಿಕ್ಷಣ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಇರುತ್ತಾರೆ.

ಠಾಣಾಧಿಕಾರಿಗಳಿಗೆ ಗೊತ್ತಿಲ್ಲದೆ ಡ್ರಗ್ಸ್ ದಂಧೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಠಾಣಾಧಿಕಾರಿ ಡಿವೈಎಸ್‌ಪಿ, ಎಸಿಪಿ ಮತ್ತು ಎಸ್.ಪಿ ಗಳನ್ನು ಹೊಣೆ ಮಾಡಲು ತೀರ್ಮಾನಿಸಿದ್ದೇವೆ. ಕರ್ತವ್ಯಲೋಪವಾದಲ್ಲಿ ಇವರ ವಿರುದ್ಧ ಕ್ರಮ ಖಚಿತ.

ಪೆಡ್ಲರ್ ಗಳಿಗೆ ಜೀವಾವಧಿ ಶಿಕ್ಷೆಯವರೆಗೂ ಕಠಿಣ ಶಿಕ್ಷೆ ವಿಧಿಸಲು ಕಾನೂನು ತಿದ್ದುಪಡಿಗೆ ಕ್ರಮ ವಹಿಸಲಾಗುವುದು. ಈಗ ಜಾರಿ ಇರುವ ಕಾನೂನನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಮೊದಲು ಪ್ರಯತ್ನ ಮಾಡುತ್ತೇವೆ. ಇದರ ಬಳಿಕವೂ ಅಗತ್ಯಬಿದ್ದರೆ ಹೊಸ ಕಾನೂನು ಮಾಡುತ್ತೇವೆ.

ಎನ್.ಸಿ.ಸಿ, ಎನ್.ಜಿ.ಒ ಗಳನ್ನು ಬಲಗೊಳಿಸುವುದನ್ನು ಗುರಿಯಾಗಿಸಿಕೊಂಡಿದ್ದೇವೆ. ಪುನರ್ವಸತಿ ಕೇಂದ್ರಗಳನ್ನು ಹೆಚ್ಚಿಸಲು, ಸಮರ್ಪಕಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇವೆ.

ಡ್ರಗ್ಸ್ ಹಾವಳಿ ತೊಡೆದು ಹಾಕಲು ಕ್ಷಿಪ್ರ ಮತ್ತು ತೀಕ್ಷ್ಣ ಕ್ರಮ ಕೈಗೊಳ್ಳುತ್ತೇವೆ. ವಿದ್ಯಾರ್ಥಿ, ಯುವ ಜನರ ಮೇಲೆ, ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದನ್ನು ತಡೆಯಲು ಕ್ರಮ ವಹಿಸಲಾಗುವುದು.

ಡ್ರಗ್ಸ್ ಸೇವಿಸಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಪ್ರಕರಣಗಳಿಗೆ ಬ್ರೇಕ್ ಹಾಕುತ್ತೇವೆ. ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ಕೊಡುವ ಜೊತೆಗೆ ಅವರನ್ನೇ ಹೊಣೆ ಮಾಡಿ ಕ್ರಮ ಕೂಡ ತೆಗೆದುಕೊಳ್ಳುತ್ತೇವೆ.

ಗೃಹ ಇಲಾಖೆ, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ, ಸಮಾಜ‌ ಕಲ್ಯಾಣ ಇಲಾಖೆ ಸೇರಿ ಹಲವು ಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿ ಹಲವು ಕ್ಷಿಪ್ರ ತೀರ್ಮಾನಗಳನ್ನು ಕೈಗೊಂಡಿದ್ದೇವೆ.

ವಿದ್ಯಾರ್ಥಿ-ಯುವ ಜನರ, ಪೋಷಕರ ಸಹಭಾಗಿತ್ವದಲ್ಲಿ ಮಾಹಿತಿ ಸಂಗ್ರಹಿಸಿ ಡ್ರಗ್ಸ್ ಹಾವಳಿಗೆ ಬ್ರೇಕ್ ಹಾಕುವ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದೇವೆ. ಈಗಾಗಲೇ ಇರುವ ರಾಜ್ಯ ಮಟ್ಟದ ಸಮಿತಿಯಿಂದ ಮಾಹಿತಿ, ಅಭಿಪ್ರಾಯ ಸಂಗ್ರಹಿಸಿದ್ದೇವೆ.

ಬೆಂಗಳೂರು EAST ವಿಭಾಗದಲ್ಲಿ ಡ್ರಗ್ಸ್ ಹಾವಳಿ ತೀವ್ರವಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇದಕ್ಕೆ ಬಲಿ‌ ಹಾಕಲು ನಿರ್ಣಯ ಮಾಡಿದ್ದೇವೆ. ಒರಿಸ್ಸಾ, ಆಂಧ್ರ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಿಂದ ಮಾದಕ ವಸ್ತು ರಾಜ್ಯಕ್ಕೆ ಪೂರೈಕೆ ಆಗುತ್ತಿದೆ. ಇದನ್ನು ತಡೆಯಲು ಹೊಸ ಕಾರ್ಯತಂತ್ರ ರೂಪಿಸುತ್ತಿದ್ದೇವೆ.

ಜಾಗೃತಿ ಮತ್ತು ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರವಾಗಿ ನಡೆಸಲು ಸ್ಪಷ್ಟ ಸೂಚನೆ ನೀಡಲಾಗಿದೆ” ಎಂದು ಹೇಳಿದರು.