ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ತಾಹೇರ್ ಹುಸೇನ್ Archives » Dynamic Leader
December 3, 2024
Home Posts tagged ತಾಹೇರ್ ಹುಸೇನ್
ರಾಜಕೀಯ

ಬೆಂಗಳೂರು: ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ ರಾಜಕೀಯ ಪಕ್ಷಗಳು ತತ್ವ ಸಿದ್ದಾಂತವನ್ನು ಸಂಪೂರ್ಣವಾಗಿ ಮರೆತು ಬಿಟ್ಟಿವೆ. ರಾಜಕೀಯದಲ್ಲಿ ನೈತಿಕತೆ ಮಾಯವಾಗುತ್ತಿದೆ. ಇದು ದೇಶದ ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಕಳವಳ ವ್ಯಕ್ತ ಪಡಿಸಿದ್ದಾರೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪ್ರಕ್ರಿಯೆ ಅತಿಯಾಗುತ್ತದೆ ಎಂಬುದು ವಾಸ್ತವ ಸತ್ಯ. ಪ್ರಜೆಗಳು ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಪ್ರಜ್ಞೆ ರಾಜಕೀಯ ಪಕ್ಷಗಳು ಮರೆತಿದ್ದಾರೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಸಿದ್ದಾಂತಗಳಿಗೆ ಯಾವುದೇ ಬೆಲೆ ಇಲ್ಲ ಎನ್ನಿಸುತ್ತಿದೆ. ಟಿಕೆಟ್ ಸಿಕ್ಕರೆ ಒಂದು ಪಕ್ಷ; ಇಲ್ಲದಿದ್ದರೆ ಇನ್ನೊಂದು ಪಕ್ಷ. ಬೆಳಿಗ್ಗೆ ಒಂದು ಪಕ್ಷ, ಸಂಜೆ ಒಂದು ಪಕ್ಷ ಎಂದು ಅಭ್ಯರ್ಥಿಗಳು ಹೀಗೆ ಜಿಗಿಯುತ್ತಾ ಹೋಗುತ್ತಾರೆ. ತತ್ವ ಸಿದ್ಧಾಂತದ ಬಗ್ಗೆ ಮಾತನಾಡುವ ಪಕ್ಷಗಳು, ಅಂತಹ ಅಭ್ಯರ್ಥಿಗಳಿಗೆ ಟಿಕೀಟ್ ನೀಡಿ ಪ್ರೋತ್ಸಾಹಿಸಿ ಇಂಥ ಅನೈತಿಕತೆಗೆ ಕುಮ್ಮಕ್ಕು ನೀಡುತ್ತಿವೆ.

ಎಲ್ಲಿದ್ದರೂ ಹೇಗಿದ್ದರೂ ಜನ ಓಟು ಹಾಕುತ್ತಾರೆ ಎಂಬ ಭಾವನೆ ಅವರಲ್ಲಿ ಅಡಕವಾಗಿವೆ. ಅಧಿಕಾರಕ್ಕಾಗಿ ಪಕ್ಷಾಂತರ ಪ್ರಕ್ರಿಯೆಯಲ್ಲಿ ಯಾವ ಪಕ್ಷವೂ ಕಡಿಮೆಯಿಲ್ಲ. ಆಪರೇಷನ್ ಕಮಲ/ಹಸ್ತ ಎಂಬ ಹೆಸರಲ್ಲಿ ನಡೆಯುವ ರಾಜಕೀಯ ಅನೈತಿಕತೆಗೂ ಇಲ್ಲಿ ಕೊರತೆಯಿಲ್ಲ. ಕುಟುಂಬ ರಾಜಕಾರಣದಲ್ಲೂ ಯಾರೂ ಕಮ್ಮಿಯಿಲ್ಲ.

ಪ್ರಿಯಾಂಕಾ ಗಾಂಧಿ ವಯನಾಡ್ ನಲ್ಲಿ ಚುನಾವಣಾ ಅಖಾಡಕ್ಕಿಳಿದಿರುವಾಗ ಅದರ ವಿರುದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವಂಶಾಡಳಿತದ ಬಗ್ಗೆ ತೀವ್ರ ವಾಗ್ದಾಳಿ ನಡೆಸುತ್ತಾರೆ. ಆದರೆ, ಕರ್ನಾಟಕದಲ್ಲಿ ಬಿಜೆಪಿಯ ಬಸವರಾಜ್ಬೊ ಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯಲ್ಲಿರುವುದು ಅವರ ಕಣ್ಣಿಗೆ ಕಾಣಿಸುದಿಲ್ಲ. ಇತರ ಪಕ್ಷಗಳ ಕಡೆಗೆ ಬಹಿರಂಗವಾಗಿ ಬೆರಳು ತೋರಿಸುವಾಗ ತಮ್ಮೆಡೆಗೆ ಉಳಿದ ಬೆರಳು ತೋರುತ್ತಿರುವ ಬಗ್ಗೆ ಅವರು ಚಿಂತಿಸುವುದಿಲ್ಲ. ಯಡಿಯೂರಪ್ಪ ಪುತ್ರನಿಗೆ ರಾಜ್ಯದ ಬಿಜೆಪಿ ಅಧ್ಯಕ್ಷ ಪಟ್ಟ ಒಲಿದು ಬಂದಾಗ ಇವರು ಕಣ್ಣು ಮುಚ್ಚಿ ಕುಳಿತಿದ್ದರು.

ದೇಶದಲ್ಲಿ ಜಾತ್ಯತೀತ ಪಕ್ಷ ಎಂದು ಗುರುತಿಸಲ್ಪಡುವ ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಪುತ್ತೂರಿನಲ್ಲಿ ವಿಶ್ವಹಿಂದೂ ಪರಿಷತ್ ನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಇದರ ವಿರುದ್ದ ಕಾಂಗ್ರೆಸ್ ನಿಂದಲೂ ಅಪಸ್ವರ ಕೇಳಿ ಬರುತ್ತಿಲ್ಲ. ಶಿಸ್ತು ಕ್ರಮ, ಶೋಕಾಸ್ ನೊಟೀಸ್ ಎಚ್ಚರಿಕೆ ಯಾವುದೂ ಕಂಡು ಬರುತ್ತಿಲ್ಲ. ಪ್ರತಿಯೊಂದು ಪಕ್ಷಗಳಿಗೂ ಒಂದು ತತ್ವ ಸಿದ್ಧಾಂತ ಅನ್ನೋದು ಇರುತ್ತದೆ. ಆದರೆ, ಅದನ್ನು ಗಾಳಿಗೆ ತೂರಲಾಗುತ್ತದೆ.  ಅಧಿಕಾರ, ಹಣದ ಮುಂದೆ ಯಾವ ತತ್ವ ಸಿದ್ದಾಂತವೂ ಗಣನೆಗೆ ಬರುವುದಿಲ್ಲ.

ರಾಜಕೀಯ ಪಕ್ಷಗಳು ನೈತಿಕ ರಾಜಕಾರಣದಿಂದ ದೂರ ಸರಿಯುತ್ತಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಇದನ್ನು ತಡೆಗಟ್ಟಲು ಪ್ರಜ್ಞಾವಂತ ನಾಗರಿಕರು ಮುಂದೆ ಬರಬೇಕೆಂದು ಅವರು ಮನವಿ ಮಾಡಿದ್ದಾರೆ.

ರಾಜಕೀಯ

ಬೆಂಗಳೂರು: ಕರ್ನಾಟಕದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮಿತಿಯ ಬಹುನಿರೀಕ್ಷಿತ ಜಾತಿಗಣತಿ ವರದಿ ಅತಿ ಶೀಘ್ರದಲ್ಲಿ ಜಾರಿಗೆ ಬರಲಿ ಎಂದು ವಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಅಡ್ವಕೇಟ್ ತಾಹೇರ್ ಹುಸೇನ್ ರಾಜ್ಯ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಅವರು, “ರಾಜ್ಯದಲ್ಲಿ ಕನಿಷ್ಟ ಪಕ್ಷ ಗ್ರಾಮ ಪಂಚಾಯತಿ ಸದಸ್ಯರೂ ಆಗದ ಸಮುದಾಯವಿದೆ. ಎಲ್ಲಾ ಸಮುದಾಯಗಳಿಗೆ ನ್ಯಾಯ ಬದ್ದವಾಗಿ ಆಡಳಿತ, ಶೈಕ್ಷಣಿಕ, ಸಾಮಾಜಿಕವಾಗಿ ಎಲ್ಲಾ ರಂಗಗಳಲ್ಲೂ ಸಮಾನ ಪ್ರಾತಿನಿಧ್ಯತೆ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹದ್ದೊಂದು ವರದಿ ಸಿದ್ದಪಡಿಸಿರುವುದು ಸ್ವಾಗತಾರ್ಹ. ಆದರೆ ಆ ವರದಿಗಳನ್ನು ಪೆಟ್ಟಿಗೆಯಲ್ಲಿಟ್ಟು ಕಾಲಹರಣ ಮಾಡುತ್ತಿರುವುದು ಆಕ್ಷೇಪಾರ್ಹ” ಎಂದು ಹೇಳಿದ್ದಾರೆ.

“ಈ ವರದಿಯ ಬಿಡುಗಡೆ ಕುರಿತು ಆತಂಕ ವ್ಯಕ್ತಪಡಿಸುವವರ ಸ್ವಾರ್ಥತೆ ಗಮನಿಸಬಹುದು. ಇದನ್ನು ಜನಹಿತಕ್ಕಿಂತ ರಾಜಕೀಯ ಲಾಭಕ್ಕಾಗಿ ಬಳಸಲು ಕೆಲವರು ಪ್ರಯತ್ನಿಸುತ್ತಿರುವುದು ಅಕ್ಷಮ್ಯ. ರಾಜ್ಯದ ಜನರ ಸಮಸ್ಯೆಗಳನ್ನು ನ್ಯಾಯಬದ್ದ ರೀತಿಯಲ್ಲಿ ನಿಭಾಯಿಸುವ ಮೂಲಕ ಜನಪ್ರತಿನಿಧಿಗಳು ತಮ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು” ಎಂದಿದ್ದಾರೆ.

“ಕಳೆದ ಬಾರಿಯ ಸಿದ್ದರಾಮಯ್ಯರ ಸರ್ಕಾರ ಈ ವರದಿ ತಯಾರಿಸಲು ಆಗಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜುರವರನ್ನು ನೇಮಿಸಿತ್ತು. ನಂತರ ಅದರ ಹೊಣೆಗಾರಿಕೆ ಜಯಪ್ರಕಾಶ್ ಹೆಗ್ಡೆಯವರ ಪಾಲಿಗೆ ದೊರೆತಿತ್ತು. ಅವರು ಈಗಾಗಲೇ ಸರ್ಕಾರಕ್ಕೆ ವರದಿ ಸಮರ್ಪಸಿದ್ದಾರೆ. ಅದು 48 ಸಂಪುಟ ಹೊಂದಿದ್ದು 200 ಪುಟಗಳಷ್ಟು ವರದಿಯಿದೆ. 1351 ವಿವಿಧ ಜಾತಿಗಳ ಸಮೀಕ್ಷೆ ನಡೆಸಲಾಗಿದೆ” ಎಂದು ವಿವರಿದಿದ್ದಾರೆ.

“5.98 ಕೋಟಿ ಜನರನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿದೆ. 3.98 ಕೋಟಿಗೂ ಹೆಚ್ಚು ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ವರ್ಗಗಳಿದ್ದು 1.87 ಕೋಟಿ ಲಿಂಗಾಯುತರು, ಒಕ್ಕಲಿಗರು, ಬ್ರಾಹ್ಮಣ ಮತ್ತಿತರ ಜಾತಿಗಳಿವೆ. ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಕೋಟಾ ಶಿಫಾರಸು ಮಾಡಿದೆ. ವೀರೇಶೈವ ಮತ್ತು ಲಿಂಗಾಯತರು ಒಂದೇ ಎಂದು ಸಮಿತಿ ಒತ್ತುಕೊಟ್ಟು ಹೇಳಿದೆ.

ಆರು ಕೋಟಿ ಜನರಲ್ಲಿ ಯಾವ ಯಾವ ಜಾತಿಯ ಜನರು ಎಷ್ಟೆಷ್ಟು ಮಂದಿಯಿದ್ದಾರೆಂದು ವರದಿಯಲ್ಲಿ ಹೇಳಲಾಗಿದ್ದು, ಈ ಎಲ್ಲಾ ಜಾತಿಯ ಜನರಿಗೆ ಅವರವರ ಅನುಪಾತಕ್ಕೆ ಅನುವಾಗಿ ಪ್ರಾತಿನಿಧ್ಯ ದೊರೆಯಬೇಕಾಗಿದೆ” ಎಂದು ಹೇಳಿರುವ ಅಡ್ವಕೇಟ್ ತಾಹೇರ್ ಹುಸೇನ್ ಅವರು, “ಕಾಂಗ್ರೆಸ್ ಪಕ್ಷ ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿಗಣತಿ ವರದಿ ಜಾರಿ ಮಾಡುತ್ತೇವೆಂದಾಗ ಸುಮ್ಮನಿದ್ದವರು ಇದೀಗ ತಗಾದೆ ತೆಗೆಯುತ್ತಿರುವುದು ಸರಿಯಲ್ಲ” ಎಂದು ವಿರೋಧಪಕ್ಷಗಳನ್ನು ಟೀಕಿಸಿದ್ದಾರೆ.

ರಾಜಕೀಯ

ಬೆಂಗಳೂರು: ಓರ್ವ ಜನಪ್ರತಿನಿಧಿಯಾಗಿ ಮಹಿಳೆಯರ ಬಗ್ಗೆ ಇಷ್ಟೊಂದು ಕೀಳುಮಟ್ಟದ ಮಾತುಗಳನ್ನಾಡಿರುವ ಶಾಸಕ ಮುನಿರತ್ನ ರವರ ನಡೆ ಅತ್ಯಂತ ಖಂಡನೀಯ ಮತ್ತು ಅವರ ಶಾಸಕತ್ವವನ್ನು ಈ ಕೂಡಲೇ ರದ್ದು ಪಡಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಒತ್ತಾಸಿದ್ದಾರೆ.

ಮಾನ್ಯ ಸಭಾಪತಿಗಳು ಮುನಿರತ್ನ ಅವರ ಶಾಸಕತ್ವವನ್ನು ಈ ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿರುವ ಅವರು, “ಇದು ಕೇವಲ ಒಕ್ಕಲಿಗ ಸಮುದಾಯಕ್ಕೆ ಮಾತ್ರವಲ್ಲ ಇಡೀ ಮಹಿಳಾ ಸಮೂಹಕ್ಕೆ ಮಾಡಿದ ಅವಮಾನವಾಗಿದೆ. ಮಹಿಳೆಯರ ಬಗ್ಗೆ ಇವರಿಗೆ ಎಷ್ಟು ಗೌರವವಿದೆ ಎಂಬುದು ಇವರ ಈ ಕೃತ್ಯದಿಂದ ಬಹಿರಂಗಗೊಂಡಿದೆ. ಇಂತಹ ಶಾಸಕರಿಗೆ ನೈತಿಕತೆಯ ಪಾಟದ ಅಗತ್ಯವಿದೆ” ಎಂದು ಹೇಳಿದ್ದಾರೆ.

“ಚಿತ್ರರಂಗದಿಂದ ಬಂದು ರಾಜಕೀಯ ರಂಗದಲ್ಲಿ ಸಭ್ಯತೆ ಮೆರೆದವರು ಅದೆಷ್ಟೋ ಮಂದಿಯಿದ್ದಾರೆ. ಆದರೆ ಇವರು, ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ಚೆಲುವರಾಜು ರವರಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದೂ ಅಲ್ಲದೇ ಅವರ ಪತ್ನಿಯನ್ನು ನಿಂದಿಸುವ ಹಂತಕ್ಕೆ ತಲುಪಿದ್ದಾರೆಂದರೆ ಇವರಲ್ಲಿ ಅಹಂಕಾರ ಪೊಗರು ಅವೆಷ್ಟಿವೆ ಎಂಬುದನ್ನು ಅಂದಾಜಿಸಬಹುದು” ಎಂದು ಕಿಡಿಕಾರಿದ್ದಾರೆ.

“ಜನಪ್ರತಿನಿಧಿ ಎನಿಸಿಕೊಳ್ಳಲು ಇವರೆಷ್ಟು ಅರ್ಹರು? ಜನರು ಜನಪ್ರತಿನಿಧಿಗಳನ್ನು ಆರಿಸುವಾಗ ಅವರ ನೈತಿಕತೆಯನ್ನು ಕೂಡಾ ಮಾನದಂಡವನ್ನಾಗಿಸಬೇಕು. ಇಲ್ಲದಿದ್ದಲ್ಲಿ ಇಂತಹದ್ದು ಮರುಕಳಿಸುತ್ತದೆ” ಎಂದು ಅವರು ಹೇಳಿದ್ದಾರೆ.

ರಾಜಕೀಯ

ಬೆಂಗಳೂರು: ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ಕೆಳಗಿಳಿಸಿ, ರಾಷ್ಟ್ರ ಧ್ವಜ ಹಾರಿಸಿದ್ದನ್ನು ರಾಜಕೀಯ ಗೊಳಿಸಿ, ಜನರನ್ನು ದಾರಿತಪ್ಪಿಸುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವರ್ತನೆ ಖಂಡನೀಯ ಎಂದು ವೆಲ್‌ಫೇರ್ ಪಾರ್ಟಿಯ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ರಾಷ್ಟ್ರ ಧ್ವಜ ಅಥವಾ ಕನ್ನಡ ಧ್ವಜ ಹಾರಿಸಲು ಅನುಮತಿ ಪಡೆದು, ಕೇಸರಿ ಧ್ವಜ ಹಾರಿಸಲು ಪ್ರಯತ್ನಿಸುವುದು ಎಷ್ಟು ಸರಿ. ಮಾತ್ರವಲ್ಲ, 60 ಅಡಿ ಎತ್ತರದ ಸ್ಥಂಭಕ್ಕೆ ಅನುಮತಿ ಪಡೆದು 108 ಅಡಿ ಎತ್ತರದ ಸ್ಥಂಭ ಸ್ಥಾಪಿಸಲಾಗಿದೆ ಎಂದು ತಿಳಿದು ಬಂದಿದೆ. ಇದು ಸ್ಪಷ್ಟವಾದ ನಿಯಮ ಉಲ್ಲಂಘನೆಯಲ್ಲವೇ? ಸರ್ಕಾರದ ವಿರುದ್ಧ ಜನರನ್ನು ಈ ರೀತಿ ಎತ್ತಿ ಕಟ್ಟುವುದನ್ನು ಸಮರ್ಥಿಸಲಾಗದು.

ಈ ಮೂಲಕ ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ರಾಜಕೀಯಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮುಂದಾಗಿದೆಯೇ? ಎಂದು ಪ್ರಶ್ನಿಸಿರುವ ತಾಹೇರ್ ಹುಸೇನ್, ಸರಕಾರ ನಾಡಿನ ಜನತೆಗೆ ವಾಸ್ತವಾಂಶಗಳನ್ನು ತಿಳಿಸಿಕೊಡುವ ಪ್ರಯತ್ನ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ಜನರು ನಿಜಾಂಶಗಳನ್ನು ಅರಿತು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ  ಕಾಪಾಡಲು ಶ್ರಮಿಸಬೇಕು. ದ್ವೇಷದ ರಾಜಕೀಯಕ್ಕೆ ಯಾರೂ ಬಲಿಯಾಗಬಾರದು ಎಂದು ಅವರು ನಾಡಿನ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರಾಜಕೀಯ

ಬೆಂಗಳೂರು: ಶ್ರೀಕಾಂತ್ ಪೂಜಾರಿ ಪರ ಬಿಜೆಪಿ ಬೀದಿಗಿಳಿದಿರುವುದರಲ್ಲಿ ಕೋಮು ಬಣ್ಣ ಲೇಪಿಸಿ ಜನರನ್ನು ಪ್ರಚೋದಿಸಿ ರಾಜಕೀಯ ಲಾಭಗಳಿಸುವ ಹುನ್ನಾರವಿದೆ ಎಂದು ವೆಲ್‌ಫೇರ್ ಪಾರ್ಟಿಯ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯಾಚರಿಸಿ ಇಲ್ಲಿನ ಬಡವರ, ರೈತರ, ನೊಂದವರ ಸಮಸ್ಯೆಗಳ ಪರವಾಗಿ ಹೋರಾಡಬೇಕಿದ್ದ ಬಿಜೆಪಿ, ಓರ್ವ 16 ಕ್ರಿಮಿನಲ್ ಮೊಕದ್ದಮೆಗಳಲ್ಲಿ ಸಿಲುಕಿರುವ ಆರೋಪಿಯ ಪರವಾಗಿ ಅಲ್ಲಲ್ಲಿ ಪ್ರತಿಭಟನೆ ನಡೆಸುವಂತಹ ಕಾರ್ಯಕ್ಕೆ ಇಳಿದಿರುವುದು ವಿಪರ್ಯಾಸ.

ಕರಸೇವಕರು ಎಂದು ಹೇಳಿಕೊಂಡು ಪ್ರಕರಣವನ್ನುಗಂಭೀರಗೊಳಿಸಿ ಪ್ರಚೋದಿಸುವ ಮೂಲಕ ಲೋಕಸಭಾ ಚುನಾವಣಾ ದಿನಗಳು ಸಮೀಪಿಸುತ್ತಿದ್ದಂತೆ ರಾಜಕೀಯ ಲಾಭ ಗಳಿಸುವ ಯತ್ನದಲ್ಲಿ ಬಿಜೆಪಿ ತೊಡಗಿದೆ. ಇಷ್ಟಕ್ಕೂ ಈ ಪ್ರತಿಭಟನಾಕಾರರು ತಾವು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಒಮ್ಮೆ ಸ್ವಯಂ ಆತ್ಮಾವಲೋಕನ ನಡೆಸಬೇಕಾಗಿದೆ.

ರಾಜ್ಯದ ಬಿಜೆಪಿ ನಾಯಕರು ಈ ಆರೋಪಿಯ ಪರವಾಗಿ ಬೀದಿಗಿಳಿದಿರುವುದರಲ್ಲಿನ ಪ್ರಾಮಾಣಿಕತೆಯ ಬಗ್ಗೆ ಜನರಲ್ಲಿ ಅನುಮಾನವಿದೆ. ಇಲ್ಲಿನ ರೈತರ ಬಡ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಇಷ್ಟೊಂದು ಮಹತ್ವ ನೀಡಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು ಎಂದು ಅವರು ಹೇಳಿದ್ದಾರೆ.

ರಾಜಕೀಯ

“ಮುಸ್ಲಿಮರ ನಂಬಿಕೆಗೆ-ವಿಶ್ವಾಸಕ್ಕೆ ಘಾಸಿಯುಂಟು ಮಾಡಿ, ಸಮಾಜ ಒಡೆದು ಗಲಭೆಯೆಬ್ಬಿಸಿ ಅಧಿಕಾರಕ್ಕೇರುವ ಷಡ್ಯಂತ್ರ ಇದಾಗಿದೆ. ಈ ಸಂವಿಧಾನ ವಿರೋಧಿ ಕೃತ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು” ವೆಲ್‌ಫೇರ್ ಪಾರ್ಟಿ.

ಮುಸ್ಲಿಮರ ವಿರುದ್ದ ಕೊಳಕು ನಾಲಗೆ ಹರಿಬಿಟ್ಟು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರ ವಿರುದ್ದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಸರ್ಕಾರವನ್ನು ಆಗ್ರಹಿಸಿದ್ದಾರೆ .

‌ರಾಜಕೀಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಈಶ್ವರಪ್ಪ, ಮುಸ್ಲಿಮರ ವಿರುದ್ದ ಕೊಳಕು ನಾಲಿಗೆ ಹೊರಚಾಚಿ ಹರಿಯಬಿಟ್ಟು ತಮ್ಮ ಹಳೆಯ ಚಾಳಿ ಮುಂದುವರಿಸಿದ್ದಾರೆ. ಲಂಗುಲಗಾಮಿಲ್ಲದೆ ಮಾತನಾಡುತ್ತಿರುವ ಈಶ್ವರಪ್ಪರ ಮಾನಸಿಕ ಆರೋಗ್ಯವನ್ನು ಪರೀಕ್ಷಿಸಲು ಸರ್ಕಾರ ಮುಂದಾಗಬೇಕು ಎಂದು ಹೇಳಿದ್ದಾರೆ.

ಮಸೀದಿ ಒಡೆದು ಪುಡಿ ಮಾಡುತ್ತೇವೆ ಎಂದು ಬಹಿರಂಗವಾಗಿ ಸರ್ಕಾರಕ್ಕೆ ಅವಾಝ್ ನೀಡಿ, ಮುಸಲ್ಮಾನ ಸಮುದಾಯವನ್ನು ಕೆಣಕುವ ಹುನ್ನಾರ ಮಾಡಿದ್ದಾರೆ. ಲೋಕಸಭಾ ಚುನಾವಣಾ ಸಿದ್ದತೆಯಲ್ಲಿರುವ ಬಿಜೆಪಿ, ಇಂತಹ ಕೋಮು ಪ್ರಚೋದಕ ಮಾತುಗಳನ್ನೇ ಅಸ್ತ್ರ ಮಾಡಿಕೊಳ್ಳುವ ಸೂಚನೆ ದಟ್ಟವಾಗಿದೆ ಎಂದು ಕಿಡಿಕಾರಿದ್ದಾರೆ.

ಕಲ್ಲಡಕ ಪ್ರಭಾಕರ್ ಭಟ್ ಮೂಲಕ ಅದಕ್ಕೆ ಚಾಲನೆ ನೀಡಿ, ಅದನ್ನು ಈಶ್ವರಪ್ಪ ಮುಂದುವರಿಸುತ್ತಿದ್ದಾರೆ. ಮುಸ್ಲಿಮರ ನಂಬಿಕೆಗೆ- ವಿಶ್ವಾಸಕ್ಕೆ ಘಾಸಿಯುಂಟು ಮಾಡಿ, ಸಮಾಜ ಒಡೆದು ಗಲಭೆಯೆಬ್ಬಿಸಿ ಅಧಿಕಾರಕ್ಕೇರುವ ಷಡ್ಯಂತ್ರ ಇದಾಗಿದೆ. ಈ ಸಂವಿಧಾನ ವಿರೋಧಿ ಕೃತ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಈ ಸರಣಿ ಮುಂದುವರಿಯಲಿದೆ ಎಂದು ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಬಾಯಲ್ಲಿ ಶ್ರೀರಾಮನ ಹೆಸರು ಹೇಳಿಕೊಂಡು, ರಾಕ್ಷಸೀಯ ಮುಖ ಪ್ರದರ್ಶಿಸುವ ಮೂಲಕ ಈಶ್ವರಪ್ಪ ವರಿಷ್ಟರ ಕೃಪೆ ಗಿಟ್ಟಿಸಲು ಹವಣಿಸುತ್ತಿದ್ದಾರೆ. ಈಗಾಗಲೇ ಮೂಲೆಗುಂಪಾಗಿರುವ ಈಶ್ವರಪ್ಪರ ಬಳಿ ಕೊಳಕು ನಾಲಿಗೆ ಮಾತ್ರ ಅಸ್ತ್ರವಾಗಿದೆ. ಮಗನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅದನ್ನು ಪ್ರಯೋಗಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಇವರನ್ನು ಬಂಧಿಸಿ ಈ ರಾಜ್ಯದ ಜನರ ಹಿತ ಹಾಗೂ ನೆಮ್ಮದಿಯನ್ನು ಕಾಪಾಡಲು ಸರ್ಕಾರ ಬದ್ದವಾಗಿರಬೇಕು. ಸರ್ಕಾರ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸದೇ ಇರವುದರಿಂದ ಇಂಥ ಸಮಾಜ ಘಾತಕ ಶಕ್ತಿಗಳಿಗೆ ಧ್ಯರ್ಯ ಸಿಗುತಿದ್ದೆ. ರಾಜಕೀಯ ಲೆಕ್ಕಚಾರ ಬಿಟ್ಟು ಸರ್ಕಾರ ಸಮಾಜದ ಹಿತದೃಷ್ಟಿಯಿಂದ ಕಠಿಣ ಕ್ರಮ ಜರುಗಿಸಬೇಕೆಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.