ಜೈಪುರ: ಪ್ರತಿಯೊಬ್ಬರೂ ತಮ್ಮ ಲಿಂಗ ಮತ್ತು ಲಿಂಗ ಗುರುತನ್ನು ನಿರ್ಧರಿಸುವುದು ಒಬ್ಬರ ಹಕ್ಕಾಗಿದೆ ಎಂದು ರಾಜಸ್ಥಾನ ಹೈಕೋರ್ಟ್ ಹೇಳಿದೆ.
ರಾಜಸ್ಥಾನದಲ್ಲಿ ಹುಟ್ಟಿನಿಂದಲೇ ಹೆಣ್ಣಾಗಿದ್ದ ವ್ಯಕ್ತಿಗೆ, ಹೆಣ್ಣಿನ ಸ್ಥಾನಮಾನದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲಾಯಿತು. 2013ರಲ್ಲಿ ಸರ್ಕಾರಿ ಸೇವೆಗೆ ಸೇರಿದ್ದ ಅವರಿಗೆ ಲಿಂಗ ದೋಷವಿರುವುದು ಪತ್ತೆಯಾಗಿತ್ತು. ತರುವಾಯ, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ, ಲಿಂಗ ಪರಿವರ್ತನೆ ಮಾಡಿ ಪುರುಷರಾದರು.
ಮಹಿಳೆ ಒಬ್ಬಳನ್ನು ಮದುವೆಯಾಗಿ ಮಕ್ಕಳೂ ಸಹ ಅವರಿಗಿದ್ದಾರೆ. ಈ ಹಿನ್ನಲೆಯಲ್ಲಿ ಆತನ ಕುಟುಂಬವು ಭವಿಷ್ಯದಲ್ಲಿ ಎಲ್ಲಾ ವಿತ್ತೀಯ ಪ್ರಯೋಜನಗಳನ್ನು ಪಡೆಯುವ ರೀತಿಯಲ್ಲಿ, ತನ್ನ ಲಿಂಗವನ್ನು ಪುರುಷ ಎಂದು ನೋಂದಾಯಿಸಲು ಆದೇಶ ನೀಡುವಂತೆ ಕೋರಿ ಅವರು ರಾಜಸ್ಥಾನ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು.
ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಇದೀಗ ತೀರ್ಪನ್ನು ಪ್ರಕಟಿಸಿದೆ. ತೀರ್ಪಿನಲ್ಲಿ ‘ಪ್ರತಿಯೊಬ್ಬರೂ ತಮ್ಮ ಲಿಂಗ ಮತ್ತು ಲಿಂಗ ಗುರುತಿನ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. ತಾಯಿಯ ಗರ್ಭದಲ್ಲಿರುವಾಗಲೇ ಒಬ್ಬರಿಗೆ ಸಾಂವಿಧಾನಿಕವಾಗಿ ಸಿಗಬಹುದಾದ ಎಲ್ಲಾ ಹಕ್ಕುಗಳನ್ನು ನೀಡಬೇಕಾಗಿದೆ. ತೃತೀಯ ಲಿಂಗ ಕಾಯ್ದೆಯ ಪ್ರಕಾರ ಶಸ್ತ್ರಚಿಕಿತ್ಸೆಯ ಮೂಲಕ ಲಿಂಗ ಪರಿವರ್ತನೆಗೊಂಡ ವ್ಯಕ್ತಿಗೆ, ಅವರು ಬಯಸಿದ ಲಿಂಗ ಮಾನ್ಯತೆಯನ್ನು ನೀಡಬೇಕು.
ಆದರೆ, 2019ರಲ್ಲಿ ಕಾನೂನು ಜಾರಿಗೆ ಬರುವ ಮೊದಲೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹಿಂದಿನ ಕಾನೂನುಗಳ ಪ್ರಕಾರ, ಅವರು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಲಿಂಗವನ್ನು ಬದಲಾಯಿಕೊಳ್ಳಬಹುದು. ಅದರ ಆಧಾರದ ಮೇಲೆ, ರಾಜ್ಯ ಸರ್ಕಾರವು ಅವರ ಸೇವಾ ದಾಖಲೆಗಳಲ್ಲಿ ಸೂಕ್ತ ತಿದ್ದುಪಡಿಗಳನ್ನು ಮಾಡಬೇಕು’ ಎಂದು ತೀರ್ಪಿನಲ್ಲಿ ಹೇಳಲಾಗಿದೆ.