ನವದೆಹಲಿ: ನೀಟ್ ಪ್ರವೇಶ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಗ್ಯಾಂಗ್ ಶಾಮೀಲಾಗಿರುವುದು ಹೇಗೆ ಎಂಬ ಹೊಸ ಮಾಹಿತಿಯನ್ನು ಸಿಬಿಐ ಬಿಡುಗಡೆ ಮಾಡಿದೆ.
ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಈ ಬಾರಿಯ ನೀಟ್ (NEET) ಪ್ರವೇಶ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವು ಹಗರಣಗಳ ಆರೋಪ ಕೇಳಿಬಂದಿತ್ತು. ಈ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಈ ಹಗರಣ ನಡೆದಿರುವುದು ದೃಢಪಟ್ಟಿದೆ.
ಈ ಕುರಿತು ಸಿಬಿಐ ನಿನ್ನೆ ಪ್ರಕಟಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, ‘ಪರೀಕ್ಷೆ ನಡೆದ ಓಯಸಿಸ್ ಶಾಲೆಯ ಮುಖ್ಯೋಪಾಧ್ಯಾಯ ಇಶಾನುಲ್ ಹಕ್ ನಗರದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಸಂಯೋಜಕರಾಗಿದ್ದರು. ಇವರನ್ನು ಮತ್ತು ಶಾಲೆಯ ಉಪ ಮುಖ್ಯೋಪಾಧ್ಯಾಯ ಇಮ್ತಿಯಾಜ್ ಆಲಂ ಅವರನ್ನು ಹಗರಣದ ಮಾಸ್ಟರ್ ಮೈಂಡ್ ಪಂಕಜ್ ಕುಮಾರ್ ಸಂಪರ್ಕಿಸಿದ್ದಾರೆ. ಈ ಮೂವರೂ ಸೇರಿ, ಪರೀಕ್ಷೆ ನಡೆಯುವ ಮೇ 5 ರಂದು ಬೆಳಗ್ಗೆ ಸೆಕ್ಯೂರಿಟಿ ಬಾಕ್ಸ್‌ನಿಂದ ಪ್ರಶ್ನೆಪತ್ರಿಕೆ ತೆಗೆದು ಫೋಟೋ ತೆಗೆದಿದ್ದಾರೆ.
ಏತನ್ಮಧ್ಯೆ, ಬಿಹಾರದ ಕೆಲವು ಪ್ರಸಿದ್ಧ ವೈದ್ಯಕೀಯ ಕಾಲೇಜಿನ ಕೆಲವು ವಿದ್ಯಾರ್ಥಿಗಳನ್ನು ಕರೆತಂದು ಹಜಾರಿಬಾಗ್‌ನಲ್ಲಿ ವಸತಿ ಕಲ್ಪಿಸಿಕೊಡಲಾಗಿತ್ತು. ಹಣ ಪಾವಿತಿಸಿದ್ದ ಆ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ ಕೆಲವು ವ್ಯಕ್ತಿಗಳು ಅವುಗಳನ್ನುಅವರಿಗೆ ವಿತರಿಸಿದ್ದಾರೆ. ವಿದ್ಯಾರ್ಥಿಗಳು ಆ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ನೀಡಿದ್ದಾರೆ.
ಈ ಹಗರಣದಲ್ಲಿ ಭಾಗಿಯಾಗಿರುವ ಪಂಕಜ್ ಕುಮಾರ್, ಪರೀಕ್ಷೆ ನಡೆದ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಪ್ರಶ್ನೆಗಳಿಗೆ ಉತ್ತರ ಬರೆದ ವಿದ್ಯಾರ್ಥಿಗಳು, ಖರೀದಿಸಿದ ವಿದ್ಯಾರ್ಥಿಗಳು ಸೇರಿ 35ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.