ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ನೀರು Archives » Dynamic Leader
October 22, 2024
Home Posts tagged ನೀರು
ರಾಜಕೀಯ

ನವದೆಹಲಿ: ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿ ಕಾಪಾಡುವ ವಿಚಾರದಲ್ಲಿ ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ನಾವೆಲ್ಲಾ ಒಂದು ಧ್ವನಿಯಾಗಿ ಗಟ್ಟಿ ನಿಲ್ಲಬೇಕು ಎಂದು ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಸಂಬಂಧ ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಸಚಿವರು, ಸರ್ವ ಪಕ್ಷದ ಸಂಸತ್ ಸದಸ್ಯರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  

“ಸಂಕಷ್ಟ ಸೂತ್ರ ಸಿದ್ಧವಾಗದೇ ಇರುವುದರಿಂದ ಕಾವೇರಿ ನೀರು ಹಂಚಿಕೆ ಎನ್ನುವುದು ನಮ್ಮ ರಾಜ್ಯಕ್ಕೆ ಕ್ಲಿಷ್ಟಕರವಾಗಿ ಪರಿಣಮಿಸಿದೆ. ನೀರು ಬಿಡಬಾರದು ಎನ್ನುವ ಪ್ರಶ್ನೆ ಅಲ್ಲ. ಬಿಡಲು ನಮ್ಮಲ್ಲಿ ನೀರೇ ಇಲ್ಲ. ಕುಡಿಯುವ ನೀರಿಗೆ 33 ಟಿಎಂಸಿ, ಬೆಳೆ ರಕ್ಷಣೆಗೆ 70 ಟಿಎಂಸಿ, ಕೈಗಾರಿಕೆಗಳಿಗೆ 3 ಟಿಎಂಸಿ ಸೇರಿ ಒಟ್ಟು 106 ಟಿಎಂಸಿ ನೀರು ನಮಗೆ ಅನಿವಾರ್ಯವಾಗಿ ಬೇಕಿದೆ. ಈಗ ನಮ್ಮ ಬಳಿ ಇರುವುದು 53 ಟಿಎಂಸಿ ನೀರು ಮಾತ್ರ. ಹೀಗಾಗಿ ತಮಿಳುನಾಡಿಗೆ ಬಿಡಲು ನೀರೇ ಇಲ್ಲ. ನಮಗೆ ಆಗಸ್ಟ್ ಬಳಿಕ ಮಳೆ ಬರಲ್ಲ. ತಮಿಳುನಾಡಿಗೆ ಆಗಸ್ಟ್ ಬಳಿಕ ಮಳೆ ಬರುತ್ತದೆ. ಅಲ್ಲಿ ಅಂತರ್ಜಲ ಕೂಡ ಹೆಚ್ಚಿದೆ. ಆದ್ದರಿಂದ ನಾವು ಹೆಚ್ಚು ಸಂಕಷ್ಟದಲ್ಲಿದ್ದೇವೆ.

ಇದನ್ನೂ ಓದಿ: ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳಯರಿಗೆ ಶೇ.33 ಮೀಸಲಾತಿ: 7 ವರ್ಷ ಕಾಯಬೇಕು?

ವಾಸ್ತವ ಪರಿಸ್ಥಿತಿಯನ್ನು ನಮ್ಮ ಕಾನೂನು ತಂಡ ಮತ್ತು ತಜ್ಞರು ಹಾಗೂ ಅಧಿಕಾರಿಗಳ ತಂಡ CWMC ಎದುರು ಸಮರ್ಥವಾಗಿ ವಾದ ಮಂಡಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ 108.4 ಟಿಎಂಸಿ ನೀರನ್ನು ನಾವು ಬಿಡಬೇಕಿತ್ತು. ಆದರೆ ನಾವು ಬಿಟ್ಟಿರುವುದು 39.8 ಟಿಎಂಸಿ ನೀರು ಮಾತ್ರ. ಇಂಥಾ ಪರಿಸ್ಥಿತಿ ಎದುರಾದಾಗ ಸಮರ್ಥವಾಗಿ ಜನರ ಹಿತ ಕಾಪಾಡಲು ಮೇಕೆದಾಟು ನಮಗೆ ಅನಿವಾರ್ಯ.

ಆದ್ದರಿಂದ ನಮ್ಮ ನೀರನ್ನು, ನಮ್ಮ ಜಾಗದಲ್ಲಿ ಬಳಸಿಕೊಳ್ಳಲು, ಸಂಗ್ರಹಿಸಿಕೊಳ್ಳಲು, ವಿದ್ಯುತ್ ಉತ್ಪಾದಿಸಿಕೊಳ್ಳಲು ಮೇಕೆದಾಟು ನಮಗೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಇಂಥಾ ಪರಿಸ್ಥಿತಿಗೆ ಮೇಕೆದಾಟು ಪರಿಹಾರ ಆಗುತ್ತದೆ. ಈಗಾಗಲೇ ನಾವು ಕೇಂದ್ರ ನೀರಾವರಿ ಸಚಿವರಿಗೆ ಎರಡು ಬಾರಿ ಪತ್ರ ಬರೆದು ಪರಿಸ್ಥಿತಿಯನ್ನು ಸಮಗ್ರವಾಗಿ ವಿವರಿಸಿದ್ದೇವೆ. ಸರ್ವಪಕ್ಷ ನಿಯೋಗದೊಂದಿಗೆ ಭೇಟಿ ಮಾಡಲು ಕೇಂದ್ರದ ಜಲ ಶಕ್ತಿ ಸಚಿವರು ಹಾಗೂ ಪ್ರಧಾನಿ ಅವರ ಸಮಯ ಕೇಳಿದ್ದೇವೆ. ಹೀಗಾಗಿ ಮುಂದೆ ನಾವು ಇಡಬೇಕಾದ ಹೆಜ್ಜೆಗಳ ಕುರಿತು ವೈಜ್ಞಾನಿಕ ಸಂಗತಿಗಳ ಆಧಾರದಲ್ಲಿ ಚರ್ಚಿಸಬೇಕು” ಎಂದು ಹೇಳಿದ್ದಾರೆ.  

ರಾಜಕೀಯ

ಬೆಂಗಳೂರು: “ಮೇಕೆದಾಟು ಯೋಜನೆಗೆ ಹಿಂದಿನ ಸರ್ಕಾರ ಒಂದು ಸಾವಿರ ಕೋಟಿ ರೂ. ಘೋಷಿಸಿದೆ. ಆದರೆ, ಖರ್ಚು ಮಾಡಿಲ್ಲ. ಯೋಜನೆಯನ್ನು ಸಾಕಾರಗೊಳಿಸಲು ಆ ಹಣ ಬಳಕೆಯಾಗಲಿದೆ. ತಮಿಳುನಾಡಿನ ನಮ್ಮ ಸಹೋದರರ ಮೇಲೆ ಕೋಪವಾಗಲೀ, ದ್ವೇಷವಾಗಲೀ ಇಲ್ಲ. ಅವರೂ ನಮ್ಮ ಅಣ್ಣತಮ್ಮಂದಿರಂತೆ.

ಕರ್ನಾಟದಲ್ಲಿ ನೆಲೆಸಿರುವ ತಮಿಳಿಗರು ಹಾಗೂ ತಮಿಳುನಾಡಿನಲ್ಲಿ ನೆಲೆಸಿರುವ ಕನ್ನಡಿಗರು ಕಾವೇರಿ ನೀರು ಕುಡಿಯುತ್ತಿದ್ದಾರೆ. ಕೋರ್ಟು, ಕಚೇರಿ ಅಲೆದದ್ದು ಸಾಕು. ಮೇಕೆದಾಟು ಯೋಜನೆಯಿಂದ ಎರಡೂ ರಾಜ್ಯಗಳಿಗೂ ಅನುಕೂಲವಾಗಲಿದೆ. ಕಾವೇರಿ ಪಾತ್ರದಲ್ಲಿರುವ ರೈತರಿಗೆ ನೀರಾವರಿ ಹಾಗೂ ಶ್ರೀಸಾಮಾನ್ಯರಿಗೆ ಕುಡಿಯುವ ನೀರು ಎರಡೂ ಲಭಿಸಲಿದೆ.

ನಾನು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಅಕ್ಕಪಕ್ಕದ ರಾಜ್ಯದವರು ಅಣ್ಣ ತಮ್ಮಂದಿರಂತೆ ಬದುಕೋಣ. ನಿಮ್ಮಲ್ಲಿ ಹೃದಯ ಶ್ರೀಮಂತಿಕೆ ಇದೆ; ನಮ್ಮಲ್ಲೂ ಹೃದಯ ಶ್ರೀಮಂತಿಕೆ ಇದೆ; ಒಬ್ಬರಿಗೊಬ್ಬರು ಸಹಕರಿಸುತ್ತಾ ಜೊತೆಯಾಗಿ ಸಾಗೋಣ” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.