ಮೋದಿಯ ಧಾರ್ಮಿಕ ಆರ್ಯ ಮಾದರಿಯನ್ನು ಸೋಲಿಸಲು ನಾಯಕರು ಮತ್ತು ಕಾರ್ಯಕರ್ತರ ಪಡೆ ಸಾಲುವುದಿಲ್ಲ; ಮೋದಿ ಮಾದರಿಯನ್ನು ಸೋಲಿಸಲು ಪೆರಿಯಾರ್ ಅವರ ದ್ರಾವಿಡ ಮಾದರಿಯೇ ಸರಿಯಾದ ಅಸ್ತ್ರ. ಎಂದು ಡಿಎಂಕೆ ಸಂಸದ ಎ.ರಾಜ ಹೇಳಿದ್ದಾರೆ.
ನೆನ್ನೆ ತಿರುಚ್ಚಿಯಲ್ಲಿ ಡಿಎಂಕೆ ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ರಾಜ, “ಇಂದು ಜಗತ್ತು ಭಾರತವನ್ನು ನೋಡಿ ಉಗುಳುತ್ತಿದೆ. ನಮ್ಮ ಊರಿನಲ್ಲಿ ಹಲವು ಜಾತಿ ಭೇದಗಳಿವೆ. ಬಡವ-ಶ್ರೀಮಂತ ಎಂಬ ಭೇದವಿದೆ. ಆದರೆ ಅದು ಯಾವುದೇ ಜಾತಿಯ ಮಹಿಳೆಯಾಗಿರಲಿ. ಆ ಮಹಿಳೆಯನ್ನು ಯಾರಾದರೂ ವಿವಸ್ತ್ರಗೊಳಿಸಲು ಸಾಧ್ಯವೇ? ನಾವು ಬಿಟ್ಟುಬಿಡುತ್ತೇವಾ? ಜಾತಿ ಭೇದ ನೋಡುವವರೂ ಕೂಡ, ಬೇರೆ ಜಾತಿಯ ಮಹಿಳೆಗೆ ಅನ್ಯಾಯವಾಗುತ್ತಿದ್ದರೆ ಪ್ರಶ್ನೆ ಮಾಡುತ್ತಾರೆ. ಈ ಮಣ್ಣಿನಲ್ಲಿ ಮಹಿಳೆಗೆ ಪ್ರತ್ಯೇಕ ಗೌರವವಿದೆ. ಆದರೆ ಇದು ಮೋದಿಯ ಬಳಿ ಕಾಣತ್ತಿಲ್ಲ.
ಒಂದು ಕಡೆ ಭ್ರಷ್ಟಾಚಾರ; ಒಂದು ಕಡೆ ಸರ್ವಾಧಿಕಾರ; ಇನ್ನೊಂದು ಕಡೆ ಧಾರ್ಮಿಕತೆ. ಮತೀಯತೆ ಮತ್ತು ಭ್ರಷ್ಟಾಚಾರ ಸೇರಿಕೊಂಡು ಡಿಎಂಕೆ ಪಕ್ಷವನ್ನು ನೋಡಿ, ಇದೊಂದು ಭ್ರಷ್ಟ ಪಕ್ಷ ಮತ್ತು ಕುಟುಂಬ ಆಡಳಿತ ಎಂದು ಹೇಳುತ್ತಿದೆ. ಹೌದು, ಇದು ಕುಟುಂಬ ಆಡಳಿತವೇ? ಗೋಪಾಲಪುರಂನ ಮನೆಯನ್ನು ಅಡಮಾನವಿಟ್ಟು, ಮಿಸಾದಲ್ಲಿ ಬಂಧಿತರಾಗಿ ಒಂದು ವರ್ಷಗಳಿಗೂ ಮೇಲಾಗಿ ಜೈಲಿನಲ್ಲಿದ್ದ ಕಾರ್ಯಕರ್ತರ ಕುಟುಂಬಕ್ಕೆ ಹಣ ಕಳುಹಿಸಿದ ಕುಟುಂಬದ ಯಜಮಾನನೇ ನಮ್ಮ ಕರುಣಾನಿಧಿ. ಈ ರೀತಿ ನೋಡುವುದಾದರೆ ಇದು ಕುಟುಂಬ ಆಡಳಿತವೇ? ನಮ್ಮ ಕುಟುಂಬವನ್ನು ಪ್ರಶ್ನಿಸುವ ಯೋಗ್ಯತೆ ನಿಮಗೆ (ಬಿಜೆಪಿ) ಇಲ್ಲ.
ಮೋದಿ ವಿರುದ್ಧ ಉತ್ತರದ ರಾಜ್ಯಗಳಲ್ಲಿ ದೊಡ್ಡ ಪಡೆಯೇ ಸೇರುತ್ತಿದೆ. ಆದರೆ ಮೋದಿ ಎಂಬ ಮತೀಯವಾದವನ್ನು ಸೋಲಿಸಲು ಈ ಪಡೆ ಸಾಲುವುದಿಲ್ಲ. ತತ್ವದ ಅಗತ್ಯವಿದೆ. ಪೆರಿಯಾರ್ ರವರ ದ್ರಾವಿಡ ತತ್ವವು ಮೋದಿಯನ್ನು ಬೀಳಿಸಬಲ್ಲ ಸರಿಯಾದ ಆಯುಧವಾಗಿದೆ. ಮೋದಿಯವರ ಆರ್ಯ ಮಾದರಿಯನ್ನು ಪೆರಿಯಾರ್ ಅವರ ದ್ರಾವಿಡ ಮಾದರಿಯಿಂದ ಮಾತ್ರ ಸೋಲಿಸಲು ಸಾಧ್ಯ” ಎಂದರು.