ಬೆಂಗಳೂರು: ಇಂದು ಮಧ್ಯಾಹ್ನ 3 ಗಂಟೆಗೆ ಸುಮನಹಳ್ಳಿ ಸರ್ಕಲ್ ಸಮೀಪದ ನಿರಾಶ್ರಿತರ ಪರಿಹಾರ ಕೇಂದ್ರದ ಬಳಿ ನೂತನವಾಗಿ ನಿರ್ಮಿಸಿದ ಡಾ.ಬಾಬು ಜಗಜೀವನ ರಾಮ್ ಭವನ ಹಾಗೂ ಸಂಶೋಧನಾ ಸಂಸ್ಥೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.
ಈ ಉದ್ಘಾಟನಾ ಸಮಾರಂಭಕ್ಕೆ “ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ, ನಾವು ನೀವು ಎಲ್ಲರೂ ಜೊತೆಗೂಡಿ ಹಸಿರು ಕ್ರಾಂತಿಯ ಹರಿಕಾರ, ಕಾರ್ಮಿಕ ವರ್ಗದ ಹಿತಚಿಂತಕ, ರಾಷ್ಟ್ರದ ಹೆಮ್ಮೆಯ ಉಪಪ್ರಧಾನಿಯಾಗಿದ್ದ ಬಾಬು ಜಗಜೀವನ ರಾಮ್ ಅವರನ್ನು ಈ ಮೂಲಕ ಸ್ಮರಿಸಿ, ಗೌರವಿಸೋಣ” ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಆಹ್ವಾನ ನೀಡಿದ್ದಾರೆ.
ಬೆಳಿಗ್ಗೆ 11 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭವನದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಉಪಸ್ಥಿತರಿರುತ್ತಾರೆ. ಲೋಕಸಭೆಯ ಮಾಜಿ ಸ್ಪೀಕರ್ ಶ್ರೀಮತಿ ಮೀರಾಕುಮಾರ್ ಅವರು ಗೌರವಾನ್ವಿತ ಆಹ್ವಾನಿತರಾಗಿ ಭಾಗವಹಿಸಲಿರುವ ಈ ಕಾರ್ಯಕ್ರಮಕ್ಕೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.