ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಬೆಂಗಳೂರು ಬಂದ್ Archives » Dynamic Leader
December 2, 2024
Home Posts tagged ಬೆಂಗಳೂರು ಬಂದ್
ಬೆಂಗಳೂರು

ಬೆಂಗಳೂರು: ಬೆಂಗಳೂರು ಬಂದ್ ವೇಳೆಯಲ್ಲಿ ವಾಹನ ಸಂಚಾರ ಮತ್ತು ಸಾರ್ವಜನಿಕ ವಹಿವಾಟುಗಳಿಗೆ ಯಾರಿಂದಲೂ ತೊಂದರೆಯಾಗಿಲ್ಲ. ಒಟ್ಟು 771 ಪ್ರತಿಭಟನಾಕಾರರನ್ನು ಬಂಧಿಸಲಾಗಿತ್ತು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಬೆಂಗಳೂರು ನಗರಾದ್ಯಂತ ಈ ದಿನ (ಸೆ.26) ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ಕೆಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದವು. ಈ ಹಿನ್ನಲೆಯಲ್ಲಿ, ನಗರಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಡಲಾಗಿತ್ತು. ಎಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆದಿರುವುದಿಲ್ಲ. ವಾಹನ ಸಂಚಾರ ಮತ್ತು ಸಾರ್ವಜನಿಕ ವಹಿವಾಟುಗಳಿಗೆ ಯಾರಿಂದಲೂ ದಕ್ಕೆ ಆಗದಂತೆ ನೋಡಿಕೊಳ್ಳಲಾಗಿತ್ತು.

ಇದನ್ನೂ ಓದಿ: ಬಿಜೆಪಿಯ 25 ಸಂಸದರು ಪ್ರಧಾನಿಯವರ ಮೇಲೆ ಒತ್ತಡ ಹೇರಿ ಕಾವೇರಿ ಸಮಸ್ಯೆಗೆ ಪರಿಹಾರ ದೊರಕಿಸಬೇಕು! – ಸಿದ್ದರಾಮಯ್ಯ

ಬಂದ್ ಅಂಗವಾಗಿ ಕೆಲವು ಸಂಘಟನೆಗಳು ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಮತ್ತು ಮೆರೆವಣಿಗೆ ಮಾಡಲು ಯತ್ನಿಸಿದ್ದು, ಅವರನ್ನು ಪೊಲೀಸರು ಮುಂಜಾಗ್ರತ ಕ್ರಮವಾಗಿ ಬಂಧಿಸಿ, ನಂತರ ಬಿಡುಗಡೆ ಮಾಡಿರುತ್ತಾರೆ. ಈ ರೀತಿ ಒಟ್ಟು 771 ಪ್ರತಿಭಟನಾಕಾರರನ್ನು ಬಂಧಿಸಲಾಗಿರುತ್ತದೆ. ಆಟೋರಿಕ್ಷ ಸಂಚಾರ ಸೇರಿದಂತೆ ಸಾರಿಗೆ ವ್ಯವಸ್ಥೆ ಸಾಮಾನ್ಯವಾಗಿದ್ದು, ಅಂಗಡಿ ಮುಂಗಟ್ಟುಗಳು ಹಾಗೂ ಹೋಟೆಲ್‌ಗಳು ಸಾಮಾನ್ಯವಾಗಿ ತೆರೆದಿದ್ದವು.

ಇದನ್ನೂ ಓದಿ: ಕಾವೇರಿ ಜಲ ನಿಯಂತ್ರಣ ಸಮಿತಿ ಆದೇಶ ಕನ್ನಡಿಗರ ಪಾಲಿಗೆ ಮರಣಶಾಸನ: ಹೆಚ್.ಡಿ.ಕುಮಾರಸ್ವಾಮಿ

ಇದೇ ಅಂಗವಾಗಿ ಸುಮಾರು ಒಂದು ಸಾವಿರ ಜನರು ಪೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡು, ಈ ಸಮಯದಲ್ಲಿ ವಿವಿಧ ಸಂಘಟನೆ ಮುಖಂಡರು ಸರ್ಕಾರದ ದೋರೆಣೆಯ ವಿರುದ್ಧ ಪ್ರತಿಭಟಿಸಿರುತ್ತಾರೆ. ನಂತರ ರಾಜ್ಯದ ಮಂತ್ರಿಗಳಾದ ಆರ್.ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿ ತೆರಳಿರುತ್ತಾರೆ. ಒಟ್ಟಾರೆ, ಜನ-ಸಾಮಾನ್ಯರಿಗೆ ಯಾವುದೇ ತೊಂದರೆ ಆಗದೇ ಬಂದ್ ಶಾಂತಿಯುತವಾಗಿ ಮುಕ್ತಾಯಗೊಂಡಿರುತ್ತದೆ” ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ನಾನು ನಿಮಗೆ ನೀಡಿದ ಉಡುಗರೆ: ಪ್ರಧಾನಿ ಮೋದಿ

ರಾಜಕೀಯ

ಮೈಸೂರು: ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಾವೇರಿ ವಿಷಯವನ್ನು ರಾಜಕೀಯಗೊಳಿಸುತ್ತಿರುವುದು ಸ್ವಂತ ಲಾಭಕ್ಕೆ ಹೊರತು ಜನರ ಹಾಗೂ ನಾಡಿನ ಹಿತದೃಷ್ಟಿಯಿಂದ ಅಲ್ಲ ಎಂದು ಇಂದು (ಸೆ.26) ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದರು.  

ಬಂದ್ ಮಾಡಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವಕಾಶವಿದೆ. ಆದರೆ ನ್ಯಾಯಾಲಯ ಯಾವುದೇ ಸಭೆ, ಮೆರವಣಿಗೆಯನ್ನು ನಡೆಸಬಾರದು, ಪ್ರತಿಭಟನೆ ಮಾಡಬಾರದು ಎಂದು ಹೇಳಿದೆ. ನಾವು ನಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುವಾಗ ಇತರರ ಮೂಲಭೂತ ಹಕ್ಕುಗಳನ್ನು ಕೂಡ ಗಮನದಲ್ಲಿರಿಸಿಕೊಳ್ಳಬೇಕು ಎಂದು ಹೇಳಿದರು.

ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು 144 ಸೆಕ್ಷನ್ ಜಾರಿ ಮಾಡಲಾಗಿದೆ. ರಾಜ್ಯದ ಹಾಗೂ ಜನತೆಯ ಹಿತದೃಷ್ಟಿಯಿಂದ ಆದೇಶ ಮಾಡಲಾಗಿದೆ. ಬಿಜೆಪಿಯವರನ್ನು ಮೊದಲು ಚಡ್ಡಿಗಳು ಎಂದೇ ಕರೆಯಲಾಗುತ್ತಿತ್ತು, ಈಗ ಚಡ್ಡಿ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಪ್ರತಿಭಟನೆಗೆ ನಮ್ಮ ತಕರಾರಿಲ್ಲ. ಆದರೆ ರಾಜಕೀಯ ಲಾಭಕ್ಕಾಗಿ ನೆಲ, ಜಲ, ಭಾಷೆಯ ವಿಷಯವನ್ನು ರಾಜಕಾರಣ ಮಾಡಬಾರದು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಡಿಎಂಕೆ ‘ಬಿ ಟೀಮ್’ ಎಂಬ ಬಿಜೆಪಿ ಆರೋಪ ರಾಜಕೀಯಪ್ರೇರಿತವಾದುದ್ದು. ಡಿಎಂಕೆ ತಮಿಳುನಾಡಿನವರು. ಬಿಜೆಪಿ ಪಕ್ಷ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿತ್ತು. ಅವರನ್ನು ಏನೆಂದು ಹೇಳಬೇಕು? ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿಗಳಿಗೆ ಪತ್ರ ಬರೆದಿರುವುದು ಸಂತೋಷದ ವಿಷಯ. ಅದನ್ನು ನಾನು ಸ್ವಾಗತಿಸಿದ್ದೇನೆ. ಆದರೆ ರಾಜ್ಯ ಸರ್ಕಾರ ವಿಫಲವಾಗಿದೆ ಎನ್ನುವುದು ಸುಳ್ಳು ಎಂದರು.

ಇದನ್ನೂ ಓದಿ: ಕಾವೇರಿ ಜಲ ನಿಯಂತ್ರಣ ಸಮಿತಿ ಆದೇಶ ಕನ್ನಡಿಗರ ಪಾಲಿಗೆ ಮರಣಶಾಸನ: ಹೆಚ್.ಡಿ.ಕುಮಾರಸ್ವಾಮಿ

ರಾಜ್ಯ ಸರ್ಕಾರ ಈ ರಾಜ್ಯದ ರೈತರ ಹಾಗೂ ರಾಜ್ಯದ ಹಿತರಕ್ಷಣೆಗೆ ಯಾವತ್ತೂ ಹಿಂದೆ ಬಿದ್ದಿಲ್ಲ; ಬೀಳುವುದೂ ಇಲ್ಲ. ನಮಗೆ ಅಧಿಕಾರ ಮುಖ್ಯವಲ್ಲ; ರಾಜ್ಯದ ಜನರ ಹಿತ ಮುಖ್ಯ. ಇದರಲ್ಲಿ ನಾವು ಬಲವಾದ ನಂಬಿಕೆ ಇಟ್ಟುಕೊಂಡಿರುವವರು. ಜನರು ಬಂದ್ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಬಂದ್, ಮೆರವಣಿಗೆ, ಪ್ರತಿಭಟನೆ ಮಾಡಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ಮಾಡಿದೆ. ಪ್ರತಿಭಟನೆ ಮಾಡುವವರು ಇದನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾವೇರಿ ನೀರು ನಿಯಂತ್ರಣ ಮಂಡಳಿ ಹಾಗೂ ಸರ್ವೋಚ್ಚ ನ್ಯಾಯಾಲಯದ ಮುಂದೆ ಸಂಕಷ್ಟ ಸೂತ್ರ ರೂಪಿಸಲು ನಾವು ಒತ್ತಡ ಹೇರುತ್ತಿದ್ದೇವೆ. ಏಕೆಂದರೆ, ಮಳೆ ಕೈಕೊಟ್ಟ ಸಂದರ್ಭದಲ್ಲಿ ಎರಡೂ ಕಡೆ ಸಂಕಷ್ಟ ಶುರುವಾಗುತ್ತದೆ. ಅಂಥ ಸಂದರ್ಭದಲ್ಲಿ ನಾವು ಸಂಕಷ್ಟ ಹಂಚಿಕೊಳ್ಳಬೇಕು. ಇಂತಹ ಸನ್ನಿವೇಶದಲ್ಲಿ ನೀರು ಹಂಚಿಕೆಯ ವಿಚಾರದಲ್ಲಿ ಸಂಕಷ್ಟ ಸೂತ್ರವಿರಬೇಕು. ಮತ್ತೊಂದು ಪರಿಹಾರವೆಂದರೆ, ಮೇಕೆದಾಟು ಯೋಜನೆ ಅನುಷ್ಠಾನ. ಈ ಜಲಾಶಯವಿದ್ದಿದ್ದರೆ 67 ಟಿಎಂಸಿ ನೀರು ಇರುತ್ತಿದ್ದು, ಅಲ್ಲಿ ನೀರಿದ್ದರೆ ತಮಿಳುನಾಡಿಗೆ ನೀರು ಬಿಡಲು ಅನುಕೂಲವಾಗುತ್ತಿತ್ತು. ಈ ಜಲಾಶಯದಿಂದ ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಿಗೆ ಅನುಕೂಲವಾಗುತ್ತಿತ್ತು ಎಂಬುದನ್ನು ಒತ್ತಿ ಹೇಳಿದರು.

ಕೇಂದ್ರದ ತಜ್ಞರು ರಾಜ್ಯದಲ್ಲಿ ಕಾವೇರಿ ನೀರಿನ ಲಭ್ಯತೆಯನ್ನು ವಾಸ್ತವವಾಗಿ ಪರಿಶೀಲಿಸುವ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಜನತಾದಳದ ವರಿಷ್ಠರಾದ ದೇವೇಗೌಡರು, ಈ ಬಗ್ಗೆ ಭೇಟಿಯಾಗಿದ್ದು, ಕೇಂದ್ರದೊಂದಿಗೆ ಅವರ ಹೊಸ ಸ್ನೇಹದಿಂದ ಪರಿಹಾರ ದೊರೆಯಬಹುದೇ ನೋಡಬೇಕಿದೆ. ರಾಜ್ಯ ಸರ್ಕಾರ ಪರಿಹಾರ ಸೂತ್ರ ಕೋರಿ ಬರೆದಿರುವ ಪತ್ರಕ್ಕೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಬಿಜೆಪಿಯ 25 ಸಂಸದರು ಪ್ರಧಾನಿಯವರ ಮೇಲೆ ಒತ್ತಡ ಹೇರಿ, ಕಾವೇರಿ ಸಮಸ್ಯೆಗೆ ಪರಿಹಾರ ದೊರಕಿಸಬೇಕು ಎಂದು ಒತ್ತಾಯಿಸಿದರು.

ಸಾಮಾನ್ಯ ವರ್ಷಗಳಲ್ಲಿ ತಮಿಳುನಾಡಿಗೆ ನೀರು ಬಿಡಬೇಕಾದ ಪ್ರಮಾಣದ ಬಗ್ಗೆ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಆದರೆ ಸಂಕಷ್ಟದ ಸಮಯದಲ್ಲಿ ಆ ರಾಜ್ಯಕ್ಕೆ ನೀರು ಬಿಡುವ ಪ್ರಮಾಣ ತಿಳಿಸುವ ಸಂಕಷ್ಟ ಸೂತ್ರ ಇನ್ನೂ ನಿರ್ಧಾರವಾಗಿಲ್ಲ. ಇಂತಹ ಸಂದರ್ಭದಲ್ಲಿ ಒಂದು ಸೌಹಾರ್ದ ಇತ್ಯರ್ಥಕ್ಕೆ ಬರುವುದೇ ಉತ್ತಮ. ಆದ್ದರಿಂದ ಕಾವೇರಿ ವಿವಾದದ ಇತ್ಯರ್ಥಕ್ಕೆ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು. ಕಾವೇರಿ ವಿಷಯದ ವಾದಮಂಡನೆಗೆ ಮೊದಲಿನಿಂದಲೂ ಇರುವ ಕಾನೂನೂ ತಂಡವೇ ಈಗಲೂ ಇದ್ದು, ಎಲ್ಲ ಪಕ್ಷದ ಸರ್ಕಾರದ ಅವಧಿಯಲ್ಲಿ ಇದ್ದ ತಂಡವೇ ಆಗಿದೆ ಎಂದು ಪ್ರತಿಕ್ರಿಯಿಸಿದರು.

ರಾಜಕೀಯ

ಬೆಂಗಳೂರು: ಕರ್ನಾಟಕದ ನಿರಂತರ ಹೋರಾಟ, ಬಂದ್‌ ನಡುವೆಯೂ ದೆಹಲಿಯ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿದೆ. 18 ದಿನಗಳ ಕಾಲ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ತಿಳಿಸಿದೆ. ಈ ಹಿನ್ನಡೆಗೆ ಕಾಂಗ್ರೆಸ್ ಸರ್ಕಾರ ಕಾರಣವೆಂದು ಮಾಜಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿರುವ ಕರ್ನಾಟಕಕ್ಕೆ ಈಗ ಮತ್ತೆ ದೊಡ್ಡ ಹಿನ್ನಡೆ ಆಗಿದೆ. ಹಿನ್ನಡೆ ಎನ್ನುವುದು ನಿರಂತರವಾಗಿದ್ದು, ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಇನ್ನೂ 18 ದಿನಗಳ ಕಾಲ ನಿತ್ಯವೂ 3000 ಕ್ಯೂಸೆಕ್ಸ್ ಹರಿಸಲು ಕರ್ನಾಟಕಕ್ಕೆ ಇಂದು ಆದೇಶ ನೀಡಿದೆ. ಇದು ನಿಜಕ್ಕೂ ಆಘಾತಕಾರಿ; ಕಾವೇರಿ ಮತ್ತು ಕನ್ನಡಿಗರ ಪಾಲಿಗೆ ಮರಣಶಾಸನ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಾವೇರಿ ಕೊಳ್ಳ ಮತ್ತು ಬೆಂಗಳೂರು ನಗರದ ಜನರ ಕತ್ತು ಹಿಚುಕುವುದಕ್ಕೆಂದೇ ಕಾಂಗ್ರೆಸ್ ಸರಕಾರ ಬಂದಿದೆಯೇನೋ ಎಂದು ಬಹಳ ನೋವಿನಿಂದ ಹೇಳಲೇಬೇಕಾಗಿದೆ

‘ಕೆಆರ್ಎಸ್ ಜಲಾಶಯಕ್ಕೆ ನಿತ್ಯವೂ 10,000 ಕ್ಯೂಸೆಕ್ ಒಳಹರಿವು ಇದೆ’ ಎನ್ನುತ್ತಾರೆ ಜಲ ಸಂಪನ್ಮೂಲ ಸಚಿವರು. ಇದಕ್ಕೆ ತದ್ವಿರುದ್ಧವಾಗಿ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ‘ನಮ್ಮಲ್ಲಿ ನೀರೇ ಇಲ್ಲ’ ಎಂಬ ಮಾಹಿತಿ ನೀಡುತ್ತಾರೆ. ಇನ್ನೊಂದೆಡೆ ಹಿರಿಯ ಅಧಿಕಾರಿಯೊಬ್ಬರು ‘ಈ ಆದೇಶದಿಂದ ರಾಜ್ಯಕ್ಕೆ 2.5 ಟಿಎಂಸಿ ನೀರು ಉಳಿತಾಯವಾಗಿದೆ’ ಎನ್ನುತ್ತಾರೆ. ‘ಎತ್ತು ಏರಿಗೆ, ಕೋಣ ನೀರಿಗೆ’ ಎನ್ನುವಂತಿದೆ ಜಲ ಸಂಪನ್ಮೂಲ ಇಲಾಖೆ ಮತ್ತು ಸರಕಾರದ ಪರಿಸ್ಥಿತಿ. ಹೆಜ್ಜೆಹೆಜ್ಜೆಗೂ ಅನರ್ಥಗಳನ್ನೇ ಮಾಡುತ್ತಿರುವ ಈ ಸರಕಾರದ ವೈಫಲ್ಯದ ಲಾಭವನ್ನು ತಮಿಳುನಾಡು ಅತ್ಯಂತ ಜಾಣತನದಿಂದ ಪಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.

ನಾವು ಕುಡಿಯಲು ನೀರು ಕೇಳುತ್ತಿದ್ದೇವೆ, ತಮಿಳುನಾಡು ಅಕ್ರಮವಾಗಿ ಮಿತಿಮೀರಿದ ವಿಸ್ತೀರ್ಣದಲ್ಲಿ ಬೆಳೆದ ‘ಕುರುವೈ’ ಬೆಳೆಗೆ ನೀರು ಕೇಳುತ್ತಿದೆ. ಅಲ್ಲಿ ಸ್ವಾರ್ಥ ಇದೆ; ಇಲ್ಲಿ ಜನರ ಬದುಕಿದೆ. ಮಾನವೀಯ ನ್ಯಾಯಕ್ಕೆ ವಿರುದ್ಧವಾದ ತಮಿಳುನಾಡು ನಡೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಆ ರಾಜ್ಯದ ಇಂಥ ಮನಃಸ್ಥಿತಿಯ ವಿರುದ್ಧ ಪ್ರಬಲ ಹೋರಾಟ ಮಾಡುವ ಇಚ್ಛಾಶಕ್ತಿ ಈ ಸರ್ಕಾರಕ್ಕೆ ಇಲ್ಲದಾಗಿದೆ. ಕೇವಲ ಪಾಲುದಾರ ಪಕ್ಷ ಡಿಎಂಕೆಯ ಯೋಗಕ್ಷೇಮವನ್ನೇ ಕೈ ಸರಕಾರ ನೋಡುತ್ತಾ, ಕರ್ನಾಟಕದ ಹಿತವನ್ನು ಸಂಪೂರ್ಣ ಬಲಿ ಕೊಟ್ಟಿದೆ. ಕನ್ನಡಿಗರ ಮೇಲೆ ‘ಬಂಡೆ’ ಎಳೆದಿದೆ ಎಂದು ಆಡಳಿತ ರೂಢ ಡಿಎಂಕೆ ಮತ್ತು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಈಗಾಗಲೇ ಕಾವೇರಿ ನೀರು ಹಂಚಿಕೆಯನ್ನು ನ್ಯಾಯಾಧಿಕರಣ ಅಖೈರುಗೊಳಿಸಿದ್ದು, ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಸಂಕಷ್ಟ ಕಾಲದಲ್ಲಿ ಪರಿಹಾರವೇನು? ಮಾತೆತ್ತಿದರೆ ನೀರು ಬಿಡಿ ಎಂದು ಆದೇಶಿಸುವ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) & ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಈ ಕೂಡಲೇ ‘ಸಂಕಷ್ಟ ಹಂಚಿಕೆ ಸೂತ್ರ’ವನ್ನು ರೂಪಿಸಲೇಬೇಕು. ಆ ನಿಟ್ಟಿನಲ್ಲಿ ಸರ್ಕಾರ ಒತ್ತಡ ಹೇರಿ, ಆ ಸೂತ್ರ ರೂಪಿಸದ ಹೊರತು ತಮಿಳುನಾಡಿಗೆ ನೀರು ಹರಿಸುವ ಪ್ರಶ್ನೆಯೇ ಇಲ್ಲವೆಂದು ಕಡ್ಡಿ ತುಂಡು ಮಾಡಿದಂತೆ ಸ್ಪಷ್ಟವಾಗಿ ಹೇಳಲೇಬೇಕು. ಯಾವುದೇ ಕಾರಣಕ್ಕೂ ಈಗ ನೀರು ಹರಿಸಬಾರದು ಎಂದು ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.