ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಮಧುರೈ Archives » Dynamic Leader
November 23, 2024
Home Posts tagged ಮಧುರೈ
ದೇಶ

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಮಣಿಪುರ ವಿಚಾರವಾಗಿ ಪ್ರಧಾನಿ ಮೋದಿ ವಿವರಣೆ ನೀಡಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಆದರೆ ಉಭಯ ಸದನಗಳಲ್ಲಿ ಅನುಮತಿ ನಿರಾಕರಣೆ ಆಗುತ್ತಿರುವುದರಿಂದ ನಿರಂತರ ಉದ್ವಿಗ್ನತೆ ಉಂಟಾಗಿದೆ. ಮತ್ತು ಸದನಗಳನ್ನು ಸಹ ಮುಂದೂಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಈ ನಿರ್ಣಯದ ಮೇಲಿನ ಚರ್ಚೆ ಇಂದು (ಆ.9) 2ನೇ ದಿನವೂ ನಡೆಯಿತು.

ಇಂದಿನ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಡಿಎಂಕೆ ಪಕ್ಷದ ಸಂಸದೆ ಕನಿಮೊಳಿ ಮಾತನಾಡಿದರು. ”ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ರಾಜ್ಯವನ್ನು ಉಳಿಸಬೇಕಾದ ಪರಿಸ್ಥಿತಿ ಇದೆ. ‘ಡಬಲ್ ಇಂಜಿನ್ ಸರ್ಕಾರ’ ಎಂದು ಬಿಂಬಿಸಿಕೊಳ್ಳುವ ಬಿಜೆಪಿ, ಮಣಿಪುರದ ವಿಚಾರದಲ್ಲಿ ಏಕೆ ವಿವರಣೆ ನೀಡುತ್ತಿಲ್ಲ? ಮಣಿಪುರದ ಮಹಿಳಾ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ಮೌನವಾಗಿರುವುದೇಕೆ?

ಮಣಿಪುರದಲ್ಲಿ ನಡೆಯುತ್ತಿರುವ ಹತ್ಯಾಕಾಂಡವನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿಫಲವಾಗಿವೆ. ಮಣಿಪುರದಲ್ಲಿ ಮೂರು ತಿಂಗಳಿನಿಂದ ಗಲಭೆ ತಡೆಯುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ. ಮಣಿಪುರದ ಶಿಬಿರಗಳಲ್ಲಿ ತಂಗಿರುವ ಜನರ ಸ್ಥಿತಿ ಗಂಭೀರವಾಗಿದೆ. ‘ಮಣಿಪುರ ಕ್ಯಾಂಪ್‌ನಲ್ಲಿ ತಂಗಿರುವ ಜನರನ್ನು ನೋಡಲು ಮಣಿಪುರದ ಮುಖ್ಯಮಂತ್ರಿ ಮತ್ತು ಪ್ರಧಾನಿ ಏಕೆ ಬಂದಿಲ್ಲ’ ಎಂದು ಹುಡುಗಿಯೊಬ್ಬರು ನನ್ನನ್ನು ಕೇಳಿದರು.

ಮಣಿಪುರದಲ್ಲಿ ಸಂತ್ರಸ್ತರಿಗೆ ಪೊಲೀಸರು ಯಾವ ಸಹಾಯವನ್ನೂ ಮಾಡಲಿಲ್ಲ. 161 ಸಶಸ್ತ್ರ ಪಡೆಗಳು ಅಲ್ಲಿದ್ದರೂ ಹಿಂಸಾಚಾರವನ್ನು ತಡೆಯಲಿಲ್ಲ. ಮೃತ ದೇಹಗಳು ಕೂಡ ಸಂಬಂಧಿಕರಿಗೆ ತಲುಪಿಲ್ಲ. ಬಿಜೆಪಿ ಆಡಳಿತದಲ್ಲಿ ಬೆಲೆ ಏರಿಕೆ ಮಾತ್ರವಲ್ಲ, ಮಹಿಳೆಯರ ಮೇಲಿನ ಅಪರಾಧಗಳೂ ಹೆಚ್ಚಿವೆ. ಮಣಿಪುರದಲ್ಲಿ ಸ್ಥಾಪಿಸಲಾಗಿರುವ ನೂರಾರು ಪರಿಹಾರ ಶಿಬಿರಗಳಲ್ಲಿ ಸೂಕ್ತ ಸೌಲಭ್ಯ, ಆಹಾರ, ಕುಡಿಯುವ ನೀರೂ ಇಲ್ಲ. ಮಣಿಪುರದಲ್ಲಿನ ಪರಿಹಾರ ಶಿಬಿರಗಳು ಅನೈರ್ಮಲ್ಯ ಮತ್ತು ವಾಸಕ್ಕೆ ಯೋಗ್ಯವಲ್ಲ.

ದೇಶದಲ್ಲಿ ಸಾಕಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಖಾಲಿ ಇರುವ ಹುದ್ದೆಗಳ ಭರ್ತಿಗೂ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ. ಅದರಲ್ಲೂ ರೈಲ್ವೆ ವಲಯದಲ್ಲಿ ಹುದ್ದೆಗಳು ಭರ್ತಿಯಾಗಿಲ್ಲ. ಸಂಸತ್ತಿನಲ್ಲಿ ರಾಜದಂಡವನ್ನು ಅಳವಡಿಸಿ, ‘ಇದು ಚೋಳರಾಜನಿಗೆ ಸೇರಿದ್ದು’ ಎಂದು ಹೇಳಿದ್ದೀರಿ. ಕನ್ನಗಿಯ ಕೋಪಕ್ಕೆ ಪಾಂಡಿಯನ ರಾಜದಂಡ ಮುರಿದ ಕಥೆ ಏನು ಗೊತ್ತಾ? ನಮ್ಮ ಮೇಲೆ ಹಿಂದಿ ಹೇರುವುದನ್ನು ನಿಲ್ಲಿಸಿಕೊಂಡು, ಸಿಲಪತಿಕಾರಂ ಓದಿ; ಅದರಲ್ಲಿ ನಿಮಗೆ ಅನೇಕ ಪಾಠಗಳಿವೆ.

ಪ್ರಧಾನಮಂತ್ರಿಯವರು ಮಣಿಪುರದ ಜನರನ್ನು ಖುದ್ದಾಗಿ ಭೇಟಿ ಮಾಡಿ ನ್ಯಾಯ ಸ್ಥಾಪಿಸುವುದು ಅಗತ್ಯವಾಗಿದೆ. ಮಣಿಪುರ ಹಿಂಸಾಚಾರದಲ್ಲಿ 170ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣದ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ದ್ರೌಪದಿಯಂತೆಯೇ ಮಣಿಪುರದ ಮಹಿಳೆಯರನ್ನು ವಿವಸ್ತ್ರಗೊಳಿಸಿದಾಗ ಅವರ ಇಷ್ಟ ದೇವರನ್ನು ಪ್ರಾರ್ಥಿಸಿರುತ್ತಾರೆ. ಆದರೆ ಅವರನ್ನು ರಕ್ಷಿಸಲು ದೇವರಾಗಲಿ, ಸರ್ಕಾರವಾಗಲಿ ಬರಲಿಲ್ಲ.

ಮಹಾಭಾರತವನ್ನು ಚೆನ್ನಾಗಿ ಓದಿದವರಿಗೆ ಗೊತ್ತು. ಅಪರಾಧಿಗಳಿಗೆ ಮಾತ್ರವಲ್ಲ, ಅದನ್ನು ಮೌನವಾಗಿದ್ದು ನೋಡಿ ಆನಂದಿಸಿದವರಿಗೂ ಶಿಕ್ಷೆಯಾಯಿತು. ಹತ್ರಾಸ್, ಕಥುವಾ, ಉನ್ನಾವೋ, ಬಿಲ್ಕಿಸ್ ಬಾನು, ಕುಸ್ತಿಪಟುಗಳ ಪ್ರತಿಭಟನೆಯ ಸಂದರ್ಭದಲ್ಲಿ ಮೌನವಹಿಸಿದವರನ್ನು ಭಾರತ ಮಾತೆಯರು ಶಿಕ್ಷಿಸುತ್ತಾರೆ. ಆಡಳಿತಾರೂಢ ಸಮ್ಮಿಶ್ರ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಕನಿಮೋಳಿ ಭಾವುಕ ಭಾಷಣ ಮಾಡಿದ್ದಾರೆ.