ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಮಹುವಾ ಮೊಯಿತ್ರಾ Archives » Dynamic Leader
October 17, 2024
Home Posts tagged ಮಹುವಾ ಮೊಯಿತ್ರಾ
ರಾಜಕೀಯ

ಏಪ್ರಿಲ್ 19 ರಿಂದ ಸಂಸತ್ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲಾ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಆ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತೀಚಿಗೆ ತಲೆಗೆ ಪೆಟ್ಟಾದ ಕಾರಣ, ಕೆಲ ದಿನಗಳ ನಂತರ ಮತ್ತೆ ಸಕ್ರಿಯ ಪ್ರಚಾರದಲ್ಲಿ ತೊಡಗಿದ್ದಾರೆ.

ಅದರಂತೆ ನಿನ್ನೆ ಕೃಷ್ಣಾ ನಗರ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮಹುವಾ ಮೊಯಿತ್ರಾ ಅವರಿಗಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈ ಕುರಿತು ಮಾತನಾಡಿದ ಅವರು, “ಬಿಜೆಪಿ ಮತ್ತು ಅದರ ಮೈತ್ರಿಕೂಟ ದೇಶಾದ್ಯಂತ 400 ಸ್ಥಾನಗಳನ್ನು ಗೆಲ್ಲುವ ಬಗ್ಗೆ ಮಾತನಾಡುತ್ತಿದೆ. ನಾನು ನಿಮಗೆ (ಬಿಜೆಪಿ) ಸವಾಲು ಹಾಕುತ್ತೇನೆ. 400 ಸ್ಥಾನಗಳಲ್ಲಿ ಬೇಡ; ಬರೀ 200 ಸ್ಥಾನಗಳಲ್ಲಿ ಗೆದ್ದು ತೋರಿಸಿ.

ಅದೇ ರೀತಿ ಕಳೆದ 2021ರ ವಿಧಾನಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿತ್ತು. ಆದರೆ ಅಂತಿಮವಾಗಿ ಅವರಿಗೆ ಕೇವಲ 77 ಸ್ಥಾನಗಳು ಮಾತ್ರವೇ ಸಿಕ್ಕಿದ್ದು. ಆ 77 ರಲ್ಲಿ ಕೂಡ ಕೆಲವರು ನಮ್ಮಲ್ಲಿ (ತೃಣಮೂಲ ಕಾಂಗ್ರೆಸ್‌) ಸೇರಿಕೊಂಡಿದ್ದಾರೆ. ಹೀಗಾಗಿ ಬಿಜೆಪಿಯವರು ಹೇಳುವುದನ್ನು ಗಂಭೀರವಾಗಿ ಪರಿಗಣಿಸಬೇಡಿ’’ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಅವರು, “ಬಿಜೆಪಿ ಖಾಲಿ (ಡಮ್ಮಿ) ಪಕ್ಷ. ಬಿಜೆಪಿಯವರು ಜನರಿಗೆ ಸುಳ್ಳು ಭರವಸೆಗಳನ್ನು ಮಾತ್ರವೇ ನೀಡುತ್ತಾರೆ. ಸಿಎಎ (CAA) ಕಾನೂನು ಬದ್ಧವಾದ ನಾಗರಿಕರನ್ನು ವಿದೇಶಿಯರನ್ನಾಗಿ ಮಾಡುವ ತಂತ್ರವಾಗಿದೆ. ಸಿಎಎ ಮೊದಲು ಬಂದರೆ, ನಂತರ ಎನ್‌ಆರ್‌ಸಿ (NRC) ಬರುತ್ತದೆ. ಪಶ್ಚಿಮ ಬಂಗಾಳದಲ್ಲಿ ಸಿಎಎ, ಎನ್‌ಆರ್‌ಸಿಯಂತಹ ಯಾವುದನ್ನೂ ನಾವು ಅನುಮತಿಸುವುದಿಲ್ಲ.

ನೀವು ಮತ್ತೆ ಕೇಂದ್ರ ಬಿಜೆಪಿ ಸರ್ಕಾರವನ್ನು ನಂಬಿದರೆ, ಅವರು ನಿಮ್ಮನ್ನೂ ವಿದೇಶಿಯರನ್ನಾಗಿ ಮಾಡುತ್ತಾರೆ. ಬಿಜೆಪಿಯವರನ್ನು ಎಂದಿಗೂ ನಂಬಬೇಡಿ. ‘ಬಿಜೆಪಿ ನಾಯಕರು ಸಿಎಎಗೆ ಏಕೆ ಅರ್ಜಿ ಸಲ್ಲಿಸಲಿಲ್ಲ? ಏಕೆಂದರೆ ಅವರು ಅರ್ಜಿ ಸಲ್ಲಿಸಿದರೆ, ಅವರು ತಮ್ಮನ್ನು ವಿದೇಶಿಯರೆಂದು ಘೋಷಿಸಬೇಕು. ಹಾಗಾಗಿ ಅವರು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.” ಎಂದರು.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್
dynamicleaderdesk@gmail.com

ಸಂಸತ್ತಿನ ಚಳಿಗಾಲದ ಅಧಿವೇಶನದ 5ನೇ ದಿನವಾದ ಇಂದು (ಡಿ.8) ಲೋಕಸಭೆಯಲ್ಲಿ ಪ್ರಶ್ನೋತ್ತರ ಸಮಯ ಆರಂಭವಾದಾಗ ತೃಣಮೂಲ ಕಾಂಗ್ರೆಸ್ ಎಂ.ಪಿ. ಮಹುವಾ ಮೊಯಿತ್ರಾ ಅವರ ಉಚ್ಚಾಟನೆಗೆ ಸಂಬಂಧಿಸಿದಂತೆ ಲೋಕಸಭೆಯ ನೈತಿಕ ಸಮಿತಿಯ ವರದಿ ಮಂಡನೆಯಾಗಬೇಕಿದ್ದ ಸಂದರ್ಭದಲ್ಲಿ ಉಂಟಾದ ಗಲಭೆಯಿಂದ ಸ್ಪೀಕರ್ ಸದನವನ್ನು 12 ಗಂಟೆಗೆ ಮುಂದೂಡಿದರು.

ನಂತರ ಮತ್ತೆ 12 ಗಂಟೆಗೆ ಲೋಕಸಭೆ ಪ್ರಾರಂಭವಾಯಿತು. ಆಗ ಬಿಜೆಪಿ ಸಂಸದ ವಿಜಯ್ ಸೋಂಕರ್ ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯೆ ಮಹುವಾ ಮೊಯಿತ್ರಾ ಅವರನ್ನು ವಜಾಗೊಳಿಸುವ ವರದಿಯನ್ನು ಮಂಡಿಸಿದರು. ಈ ನಿರ್ಣಯವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಸ್ತಾಪಿಸಿದರು. ಇದರ ಬೆನ್ನಲ್ಲೇ ತೃಣಮೂಲ ಮತ್ತು ಕಾಂಗ್ರೆಸ್ ಸದಸ್ಯರು ವರದಿಯ ನಕಲು ಪ್ರತಿ ನೀಡುವಂತೆ ಒತ್ತಾಯಿಸಿ ಧರಣಿ ನಡೆಸಿದರು.

“ಮೊಯಿತ್ರಾ ಅವರನ್ನು ಸದನದಿಂದ ಹೊರಹಾಕಲು ಶಿಫಾರಸು ಮಾಡುವ ವರದಿಯ ಮೇಲಿನ ಮತದಾನದ ಮೊದಲು ಚರ್ಚೆ ನಡೆಸಬೇಕು” ಎಂದು ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಆಗ್ರಹಿಸಿದರು. ವಿರೋಧ ಪಕ್ಷಗಳು ಪ್ರತಿಭಟನೆ ಮುಂದುವರಿಸಿದ್ದರಿಂದ ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಆಗ ಸ್ಪೀಕರ್ ಆಗಿದ್ದ ಬಿಜೆಪಿ ಸಂಸದ ರಾಜೇಂದ್ರ ಅಗರ್ವಾಲ್, “ಸದ್ಯ ವರದಿ ಮಾತ್ರ ಸಲ್ಲಿಕೆಯಾಗಿದೆ. ಈ ಬಗ್ಗೆ ಸದನ ನಿರ್ಧರಿಸಲಿದೆ” ಎಂದರು.

ನಂತರ 2 ಗಂಟೆಗೆ ಸದನ ಆರಂಭವಾದಾಗ, ಮಹುವಾ ಕುರಿತ ನಿರ್ಣಯದ ಮೇಲೆ ಚರ್ಚೆ ನಡೆಯಿತು. ಚರ್ಚೆಯ ನಂತರ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ನಿರ್ಣಯವನ್ನು ಅಂಗೀಕರಿಸಿದ ನಂತರ, ಮಹುವಾ ಮೊಯಿತ್ರಾ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸುವುದಾಗಿ ಸ್ಪೀಕರ್ ಓಂ ಬಿರ್ಲಾ ಅವರು ಘೋಷಿಸಿದರು. ಈ ನಿರ್ಧಾರವನ್ನು ವಿರೋಧಿಸಿ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು.

ಈ ವಿಚಾರದಲ್ಲಿ ಮಹುವಾ ಮೊಯಿತ್ರಾ ಅವರು ಆರೋಪ ಮಾಡಿದ ದಿನದಿಂದಲೂ ಅದನ್ನು ನಿರಾಕರಿಸುತ್ತಲೇ ಬಂದಿರುವುದು ಗಮನಾರ್ಹ. ನಂತರ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಹುವಾ ಮೊಯಿತ್ರಾ, “ಸಂಪೂರ್ಣ ತನಿಖೆ ನಡೆಸದೆ ನನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇಡೀ ಸರ್ಕಾರ ಅದಾನಿ ಎಂಬ ಒಬ್ಬ ವ್ಯಕ್ತಿಗಾಗಿ ಕಾರ್ಯನಿರ್ವಹಿಸುತ್ತಿದೆ. ಜನರ ವೇದಿಕೆಯಲ್ಲಿ ಅದಾನಿ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಬದಲಾಗಿ ಅದಾನಿಯನ್ನು ಉಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಕೇಂದ್ರ ಸರ್ಕಾರ ಕಸಿದುಕೊಳ್ಳುತ್ತಿದೆ. ಸಂಸತ್ತಿನಲ್ಲಿ 300ಕ್ಕೂ ಹೆಚ್ಚು ಸದಸ್ಯರಿರುವ ಬಿಜೆಪಿಗೆ ಒಬ್ಬ ಮುಸ್ಲಿಂ ಸದಸ್ಯರಿಲ್ಲ. ದಮನಕಾರಿ ನೀತಿಯನ್ನು ಅನುಸರಿಸುತ್ತಿರುವ ಬಿಜೆಪಿ ಸರ್ಕಾರದ ಅಂತ್ಯ ಸಮೀಪಿಸಿದೆ” ಎಂದು ಭಾವೋದ್ವೇಗದಿಂದ ಹೇಳಿದರು.

ಮಹುವಾ ಮೊಯಿತ್ರಾ ಅವರನ್ನು ವಜಾಗೊಳಿಸಿರುವುದನ್ನು ವಿರೋಧ ಪಕ್ಷಗಳು ಖಂಡಿಸಿವೆ. “ಮಹುವಾ ಮೊಯಿತ್ರಾ ಅವರ ಕಡೆಯಿಂದ ವಿವರಣೆ ಕೇಳದೆ ಕ್ರಮ ಕೈಗೊಳ್ಳಲಾಗಿದೆ” ಎಂದು ವಿರೋಧ ಪಕ್ಷಗಳು ಖಂಡಿಸಿವೆ.

ಏತನ್ಮಧ್ಯೆ, ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ಮಹುವಾ ಮೊಯಿತ್ರಾ ಅವರು ಸಂಸತ್ತಿನ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. “ದುರ್ಗಾ ಮಾತೆ ಬಂದಿದ್ದಾಳೆ; ಈಗ ನಾವು ನೋಡೋಣ. ಒಬ್ಬ ವ್ಯಕ್ತಿಯ ಮೇಲೆ ದುಷ್ಟ ಶಕ್ತಿ ಬಿದ್ದಾಗ, ಜ್ಞಾನವು ಮೊದಲು ನಾಶವಾಗುತ್ತದೆ. ವಸ್ತ್ರಾಹರಣ ಆರಂಭಿಸಿದ್ದಾರೆ; ಈಗ ನೀವು ಮಹಾಭಾರತ ಯುದ್ಧವನ್ನು ನೋಡುತ್ತೀರಿ” ಎಂದು ಹೇಳಿದರು.

ದೇಶ

ಕೋಲ್ಕತ್ತಾ: ಸಂಸತ್ತಿನಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹಾಗೂ ಮೋದಿ ಮತ್ತು ಅದಾನಿ ವಿರುದ್ಧ ಪ್ರಬಲವಾಗಿ ವಾದ ಮಂಡಿಸುತ್ತಿರುವವರಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಪ್ರಮುಖರು. ಇವರು, ಸಂಸತ್ತಿನಲ್ಲಿ ಅದಾನಿಯ ಕುರಿತು ಪ್ರಶ್ನಿಸಲು ಉದ್ಯಮಿ ಹಿರಾನಂದಾನಿಯಿಂದ ಹಣ ಮತ್ತು ಉಡುಗೊರೆಗಳನ್ನು ಲಂಚವಾಗಿ ಪಡೆದರು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ.

ಅಲ್ಲದೆ, ಹಿರಾನಂದಾನಿ ಮತ್ತು ಅವರ ರಿಯಲ್ ಎಸ್ಟೇಟ್ ಕಂಪನಿ ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳಲು ಲೋಕಸಭೆಯ ವೆಬ್‌ಸೈಟ್ ಮತ್ತು ತಮ್ಮ ಲಾಗಿನ್ ಐಡಿಯನ್ನು ಮಹುವಾ ಮೊಯಿತ್ರಾ ನೀಡಿದ್ದಾರೆ ಎಂದು ನಿಶಿಕಾಂತ್ ದುಬೆ ಆರೋಪಿಸಿದ್ದಾರೆ. ಈ ಬಗ್ಗೆ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಪತ್ರ ಬರೆದ ನಂತರ, ಈ ವಿಚಾರದಲ್ಲಿ ಕ್ರಮ ಕೈಗೊಂಡಿರುವ ಸಂಸದೀಯ ನೈತಿಕ ಸಮಿತಿ, ನವೆಂಬರ್ 2 ರಂದು ವಿಚಾರಣೆಗೆ ಹಾಜರಾಗುವಂತೆ ಮಹುವಾ ಮೊಯಿತ್ರಾ ಅವರಿಗೆ ಆದೇಶ ಮಾಡಿತು.

ಈ ಹಿನ್ನಲೆಯಲ್ಲಿ, ನನ್ನನ್ನು ಸಂಸತ್ತಿನಿಂದ ಹೊರಹಾಕಲು ಬಯಸುವವರು ನನ್ನ ತಲೆ ಕೂದಲನ್ನೂ ಮುಟ್ಟಲಾಗದು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಹೇಳಿದ್ದಾರೆ. ಸಂಸತ್ತಿನಲ್ಲಿ ಅದಾನಿಯ ಕುರಿತು ಪ್ರಶ್ನಿಸಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚವಾಗಿ ಉಡುಗೊರೆ ಪಡೆದಿರುವ ಆರೋಪಕ್ಕೆ ಮೇಲಿನಂತೆ ಮಹುವಾ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಭಾರತದ ಉದ್ಯಮಿ ಅದಾನಿಯು ವಂಚನೆ ಮತ್ತು ಅವ್ಯವಹಾರದ ಆರೋಪಕ್ಕೆ ಒಳಗಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನಲೆಯಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಏಕೆ ಭೇಟಿಯಾದರು?

‘ಇನ್ನು 15 ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಎರಡು ಬಾಂಬ್‌ಗಳು ಸ್ಫೋಟಗೊಳ್ಳಲಿದೆ’ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಉದ್ಯಮಿ ಅಧಾನಿ, ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ. ಗೌತಮ್ ಅದಾನಿಯು ಮುಂಬೈನಲ್ಲಿರುವ ಶರದ್ ಪವಾರ್ ಅವರ ‘ಸಿಲ್ವರ್ ಓಕ್’ ನಿವಾಸಕ್ಕೆ ಏಪ್ರಿಲ್ 20 ರಂದು ಭೇಟಿ ನೀಡಿದರು. ಅಲ್ಲಿ ಶರದ್ ಪವಾರ್ ಮತ್ತು ಅದಾನಿ ಭೇಟಿ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು ಎಂದು ವರದಿಗಳು ಹೇಳುತ್ತವೆ.

ಸುಪ್ರಿಯಾ ಸುಳೆ

ಶರದ್ ಪವಾರ್ ಅವರ ಸಂಬಂಧಿ ಅಜಿತ್ ಪವಾರ್, ಬಿಜೆಪಿಯೊಂದಿಗೆ ಕೈಜೋಡಿಸುತ್ತಾರೆ ಎಂಬ ಊಹಾಪೋಹದ ಸುದ್ಧಿಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಈ ವೇಳೆಯಲ್ಲಿ, ಇಂತಹ ಭೇಟಿ ನಡೆದಿರುವುದು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೆ, ಈ ಭೇಟಿ ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ.

ಶರದ್ ಪವಾರ್ ಮತ್ತು ಅದಾನಿ

ಅದಾನಿ ಸಮೂಹವು ವಿವಿಧ ಅಕ್ರಮಗಳಲ್ಲಿ ಭಾಗಿಯಾಗಿದೆ ಎಂದು ಹಿಂಡೆನ್‌ಬರ್ಗ್ ವರದಿಯು ಪುರಾವೆಗಳೊಂದಿಗೆ ಆರೋಪಿಸಿತ್ತು. ಈ ವಿಚಾರವಾಗಿ ಕಾಂಗ್ರೆಸ್ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳು ಅದಾನಿಯನ್ನು ಕಟುವಾಗಿ ಟೀಕಿಸಿದವು. ಉದ್ಯಮಿ ಅದಾನಿ ಮತ್ತು ಪ್ರಧಾನಿ ಮೋದಿ ನಡುವಿನ ಸಂಪರ್ಕದ ಬಗ್ಗೆ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಶ್ನೆ ಎತ್ತಿದರು. ಮೋದಿ ಮತ್ತು ಅದಾನಿ ಒಟ್ಟಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನೂ ರಾಹುಲ್ ಗಾಂಧಿ ಸಂಸತ್ತಿನಲ್ಲಿ ತೋರಿಸಿದರು. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಅದಾನಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದರೂ ಶರದ್ ಪವಾರ್ ಅದಾನಿಯನ್ನು ಬೆಂಬಲಿಸಿಕೊಂಡು ಬಂದರು.

ರಾಹುಲ್ ಗಾಂಧಿ

ಅದಾನಿ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂಬುದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಪ್ರಮುಖ ಬೇಡಿಕೆಯಾಗಿತ್ತು. ಆದರೆ ‘ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿರುವುದರಿಂದ ಸಂಸದೀಯ ಜಂಟಿ ಸಮಿತಿಯ ತನಿಖೆ ಅಗತ್ಯವಿಲ್ಲ’ ಎಂದು ಶರದ್ ಪವಾರ್ ಹೇಳಿದರು. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಶರದ್ ಪವಾರ್ ಹಾಗೂ ಗೌತಮ್ ಅದಾನಿ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಮಹುವಾ ಮೊಯಿತ್ರಾ

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಅದಾನಿ ವಿಚಾರವನ್ನು ತೀವ್ರವಾಗಿ ಟೀಕಿಸಿಕೊಂಡು ಬರುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅವರು ನೀಡಿದ ಮಾಹಿತಿಯೊಂದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತು. ಅದೇನೆಂದರೆ, ‘ಗೌತಮ್ ಅಧಾನಿ ನನ್ನನ್ನು ಮತ್ತು ಇತರ ಕೆಲವರನ್ನು ಸ್ನೇಹಿತರ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ’ ಎಂದು ಮಹುವಾ ಮೊಯಿತ್ರಾ ಹೇಳಿದರು.

ಆ ಕೆಲವರಲ್ಲಿ ಶರದ್ ಪವಾರ್ ಕೂಡ ಒಬ್ಬರು ಎಂಬುದು ಈ ಭೇಟಿಯ ಮೂಲಕ ಬಹಿರಂಗವಾಗಿದೆ. ಅವರ ಭೇಟಿಯ ನಂತರ ಪ್ರತಿಕ್ರಿಯಿಸಿದ ಮಹುವಾ ಮೊಯಿತ್ರಾ, ‘ಯಾವುದೇ ರಾಜಕಾರಣಿ ಉದ್ಯಮಿ ಅದಾನಿಯನ್ನು ಭೇಟಿ ಮಾಡಬಾರದು’ ಎಂದು ಹೇಳಿದರು. ‘ಅದಾನಿ ಜತೆ ಮುಖಾಮುಖಿಯಾಗಿ ಚರ್ಚಿಸಲು ಏನೂ ಇಲ್ಲ. ಹಿಂಡೆನ್‌ಬರ್ಗ್ ವರದಿಯ ಆರೋಪಗಳ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಳ್ಳೂವ ತನಕ ಯಾವುದೇ ರಾಜಕಾರಣಿ ಅದಾನಿಯನ್ನು ಭೇಟಿ ಮಾಡಬಾರದು’ ಎಂದು ಮಹುವಾ ಮೊಯಿತ್ರಾ ಹೇಳುತ್ತಾರೆ. ಮತ್ತು ಶರದ್ ಪವಾರ್ ಅವರು ಅದಾನಿಯನ್ನು ಭೇಟಿಯಾಗಿರುವುದನ್ನೂ ಟೀಕಿಸಿದ್ದಾರೆ.

ಉದ್ಧವ್ ಠಾಕ್ರೆ

ನವೆಂಬರ್ 2019ರಲ್ಲಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರು. ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಸೇರಿದಂತೆ ಪಕ್ಷಗಳನ್ನು ಒಳಗೊಂಡ ಮಹಾ ವಿಕಾಸ್ ಅಗಾಡಿ ಸಮ್ಮಿಶ್ರ ಸರ್ಕಾರ ಅಲ್ಲಿ ನಡೆಯಿತು. ಇದ್ದಕ್ಕಿದ್ದಂತೆ ಶಿವಸೇನೆಯಿಂದ ಬೇರ್ಪಟ್ಟ ಏಕನಾಥ್ ಶಿಂಧೆ ರಾಜ್ಯದ ಮುಖ್ಯಮಂತ್ರಿಯಾದರು. ಆಡಳಿತ ಬದಲಾವಣೆಗೂ ಮುನ್ನ ಅದಾನಿ ಮತ್ತು ಶರದ್ ಪವಾರ್ ಭೇಟಿ ನಡೆಯಿತು ಎಂಬುದು ಗಮನಾರ್ಹ.

ಅಜಿತ್ ಪವಾರ್

ಪ್ರಸ್ತುತ ಉದ್ಧವ್ ಠಾಕ್ರೆ ಹೂಡಿರುವ ಪ್ರಕರಣದಲ್ಲಿ ಏಕನಾಥ್ ಶಿಂಧೆ ಬೆಂಬಲಿಗ ಶಾಸಕರು ಅನರ್ಹಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಂದೆ ಯಾರು ಸರ್ಕಾರ ರಚಿಸುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಈ ಹಿನ್ನಲೆಯಲ್ಲೇ ಅಜಿತ್ ಪವಾರ್ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಲು ಮುಂದಾಗಿದ್ದಾರೆ ಎಂಬ ವರದಿಗಳು ಹೊರಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಅದಾನಿ ಹಾಗೂ ಶರದ್ ಪವಾರ್ ಭೇಟಿ ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.

ಏಕನಾಥ್ ಶಿಂಧೆ

ಶರದ್ ಪವಾರ್ ಮತ್ತು ಅದಾನಿ ಭೇಟಿಗೂ ಮಹಾರಾಷ್ಟ್ರ ರಾಜಕಾರಣದ ಮುಂದಿನ ನಡೆಗಳಿಗೂ ಸಂಬಂಧ ಇರುವ ಸಾಧ್ಯತೆಗಳು ಇದೆ ಎಂದೂ ಹೇಳಲಾಗುತ್ತಿದೆ. ಮತ್ತು ಈ ಸಭೆಯಲ್ಲಿ ಹಿಂಡೆನ್‌ಬರ್ಗ್ ವರದಿಯಿಂದ ಉಂಟಾದ ಬಿಕ್ಕಟ್ಟು ಮತ್ತು ವಿರೋಧ ಪಕ್ಷಗಳ ಹೋರಾಟದಿಂದ ಅದಾನಿ ಸಮೂಹಕ್ಕೆ ಉದ್ಭವಿಸಿರುವ ಒತ್ತಡದ ಬಗ್ಗೆಯೂ ಅವರು ಖಂಡಿತವಾಗಿ ಚರ್ಚಿಸಿರುತ್ತಾರೆ ಎಂದು ಹೇಳಲಾಗುತ್ತಿದೆ.