ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಮುಖ್ಯ ಕಾರ್ಯನಿರ್ವಹಣಾಧಿಕಾರಿ Archives » Dynamic Leader
October 23, 2024
Home Posts tagged ಮುಖ್ಯ ಕಾರ್ಯನಿರ್ವಹಣಾಧಿಕಾರಿ
ರಾಜ್ಯ

ಬೆಂಗಳೂರು: ಸತತ ಎರಡು ದಿನಗಳ ಕಾಲ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಭೆಯ ಕೊನೆಯಲ್ಲಿ, ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು, ಸಿಇಒ, ಎಸ್‌ಪಿಗಳು ಸಮನ್ವಯದಿಂದ, ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  

“ಸರ್ಕಾರ ಸಮಾಜದ ಅಸಮಾನತೆ ತೊಡೆದು ಹಾಕುವ ಉದ್ದೇಶದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಸರ್ಕಾರದ ಹಣ ದುರುಪಯೋಗ ಆಗದಂತೆ ಕೆಲಸ ಮಾಡಬೇಕು. ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಬೇಕು. ಚರ್ಚೆ ಸಂದರ್ಭದಲ್ಲಿ ಹಲವು ಲೋಪದೋಷಗಳ ಕುರಿತು ಪ್ರಸ್ತಾಪಿಸಲಾಗಿದ್ದು, ಇವುಗಳನ್ನು ಸರಿಪಡಿಸಿಕೊಂಡು ಹೋಗಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ.

“ಉದ್ದೇಶಪೂರ್ವಕವಾಗಿ ಇಂತಹ ಲೋಪ ದೋಷಗಳನ್ನು ಮುಂದುವರೆಸಿದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ನಾವೆಲ್ಲರೂ ಸರ್ಕಾರದ ಸೇವಕರು. ಅದಕ್ಕೆ ವಿಧಾನಸೌಧದಲ್ಲಿ ಕೆಂಗಲ್‌ ಹನುಮಂತಯ್ಯನವರು ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಸಿದ್ದಾರೆ. ನಾವು ಸಮಾಜವನ್ನು, ಸಮಾಜದಲ್ಲಿರುವ ಅಸಮಾನತೆಯ ಕಾರಣವನ್ನು ಅರ್ಥ ಮಾಡಿಕೊಂಡು, ನಮ್ಮ ಜನಪರ ಯೋಜನೆಗಳನ್ನು ಚಾಚೂ ತಪ್ಪದೆ ಅನುಷ್ಠಾನಗೊಳಿಸಬೇಕು. ಉದಾಹರಣೆಗೆ ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ಜಾರಿಯಾಗಿವೆ. ಇತರ ಕೆಲವು ಕಾರ್ಯಕ್ರಮಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು” ಎಂದು ಹೇಳಿದ್ದಾರೆ.

“ಈಗಾಗಲೇ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಲಾಗಿದೆ. ನೀವೆಲ್ಲರೂ ಸೇರಿ ಜಿಲ್ಲೆಯ ಅಭಿವೃದ್ಧಿ ಕುರಿತು ಚಿಂತನೆ ನಡೆಸಬೇಕು. ಜನಪರ ಕಾರ್ಯಕ್ರಮಗಳನ್ನು ನಾವು–ನೀವು ಎಲ್ಲರೂ ಚಾಚೂ ತಪ್ಪದೆ ಅನುಷ್ಠಾನಗೊಳಿಸಬೇಕು. ಏಕೆಂದರೆ ಜನರ ತೆರಿಗೆ ಹಣದಿಂದ ನಾವೆಲ್ಲರೂ ಇದ್ದೇವೆ. ಅವರ ಋಣ ತೀರಿಸಬೇಕು” ಎಂದಿದ್ದಾರೆ.

“ಸಮಾಜದ ಋಣ ನಮ್ಮ ಮೇಲಿದೆ ಎಂಬುದನ್ನು ಅರಿತು ಕೆಲಸ ಮಾಡಬೇಕು. ಮೂರು ತಿಂಗಳ ನಂತರ ಮತ್ತೆ ಸಭೆ ನಡೆಸಲಾಗುವುದು. ಆಗ ಸುಧಾರಣೆಯಾಗದಿದ್ದರೆ ಸಹಿಸಲಾಗದು” ಎಂಬ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ.