ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಹರಿಯಾಣ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳ ರೈತರು ದೆಹಲಿಗೆ ತೆರಳಿದ್ದಾರೆ. ಇದರಿಂದ ಸಾರಿಗೆ ದಟ್ಟಣೆ ಸಂಭವಿಸಿದೆ. ಪ್ರತಿಭಟನೆಯನ್ನು ತಡೆಯಲು ಭದ್ರತೆಯನ್ನು ಹೆಚ್ಚಿಸಲಾಗಿದೆ.
ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ರಾಜ್ಯಗಳ ರೈತ ಸಂಘಟನೆಗಳು, ಕೃಷಿ ಉತ್ಪನ್ನಗಳಿಗೆ ಎಂ.ಎಸ್.ಪಿ (MSP) ಎಂದು ಕರೆಯಲ್ಪಡುವ ಕನಿಷ್ಠ ಬೆಂಬಲ ಬೆಲೆಗೆ ಖಾತ್ರಿ ನೀಡುವ ಕಾನೂನು, ಪಿಂಚಣಿ, ಭೂಕಬಳಿಕೆಗೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಇಂದು ರಾಜಧಾನಿ ದೆಹಲಿಯತ್ತ ಬೃಹತ್ ಮೆರವಣಿಗೆಗೆ ಕರೆ ನೀಡಿತ್ತು.
ಈ ಹಿನ್ನಲೆಯಲ್ಲಿ, ರಾಜ್ಯಗಳ ರೈತರು ಕೇಂದ್ರ ಸರ್ಕಾರದ ವಿರುದ್ಧ ಮುತ್ತಿಗೆ ಹೋರಾಟ ನಡೆಸಲು ದೆಹಲಿಗೆ ತೆರಳಿದ್ದಾರೆ. ಇದರಿಂದಾಗಿ ದೆಹಲಿಯ ಪ್ರಮುಖ ಗಡಿ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ನಗರದ ಪ್ರಮುಖ ರಸ್ತೆಗಳ ಮಾರ್ಗವನ್ನು ಬದಲಿಸಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಮಾರ್ಚ್ 12ರವರೆಗೆ ದೆಹಲಿಯಲ್ಲಿ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರತಿಭಟನಾಕಾರರು ಯಾವುದೇ ಅಹಿತಕರ ಘಟನೆಗೆ ಒಳಗಾಗದಂತೆ ತಡೆಯಲು ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಅರೆಸೇನಾ ಪಡೆಗಳೂ ಭದ್ರತೆಯಲ್ಲಿ ತೊಡಗಿವೆ.