ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಮೋದಿ ವಿರುದ್ಧ ಹಕ್ಕುಚ್ಯುತಿ ಮಂಡನೆ Archives » Dynamic Leader
December 3, 2024
Home Posts tagged ಮೋದಿ ವಿರುದ್ಧ ಹಕ್ಕುಚ್ಯುತಿ ಮಂಡನೆ
ದೇಶ ರಾಜಕೀಯ

 ಡಿ.ಸಿ.ಪ್ರಕಾಶ್

ಬಿಹಾರದಲ್ಲಿ, 2022 ರ ದ್ವಿತೀಯಾರ್ಧದಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡ ನಿತೀಶ್ ಕುಮಾರ್, ಆರ್‌ಜೆಡಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅದೇ ವರ್ಷದ ಅಕ್ಟೋಬರ್‌ನಲ್ಲಿ ರಾಜ್ಯ ಮಟ್ಟದ ಜಾತಿವಾರು ಸಮೀಕ್ಷೆಯನ್ನು ಬಿಡುಗಡೆ ಮಾಡಿದರು.

ಜೊತೆಗೆ, ರಾಜ್ಯ ಸರ್ಕಾರಿ ಮೀಸಲಾತಿಯನ್ನು ಶೇ.65ಕ್ಕೆ ಹೆಚ್ಚಿಸುವುದಾಗಿಯೂ ಭರವಸೆ ನೀಡಿದರು. ಅಂದಿನಿಂದ, ಕಾಂಗ್ರೆಸ್ ಸೇರಿದಂತೆ ‘ಇಂಡಿಯಾ ಮೈತ್ರಿಕೂಟ’ ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ಜಾತಿವಾರು ಜನಗಣತಿ ನಡೆಸುವಂತೆ ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತಿವೆ.

ಆದರೆ, ಈ ಬಗ್ಗೆ ಮೌನ ವಹಿಸಿದ್ದ ಬಿಜೆಪಿ ಸರ್ಕಾರ ಲೋಕಸಭೆ ಚುನಾವಣೆಯಲ್ಲಿ ಎಸ್.ಸಿ, ಎಸ್.ಟಿ ಮೀಸಲಾತಿಯನ್ನು ಕಸಿಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಪ್ರಚಾರ ಮಾಡಿತ್ತು. ಜಾತಿವಾರು ಗಣತಿಯನ್ನು ಬೆಂಬಲಿಸುವ ನಿತೀಶ್ ಕುಮಾರ್ ಮತ್ತು ಇತರರ ಬೆಂಬಲದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರವೂ ಬಿಜೆಪಿ ಈ ವಿಷಯದಲ್ಲಿ ಮೌನವಾಗಿದೆ.

ಆದರೂ, ಸರ್ಕಾರದ ಎಲ್ಲಾ ಯೋಜನೆಗಳು ಹಿಂದುಳಿದ, ಪರಿಶಿಷ್ಟ ಮತ್ತು ಬುಡಕಟ್ಟು ಜನರಿಗೆ ಸರಿಯಾಗಿ ಸಿಗುವಂತೆ ಮಾಡಲು ರಾಷ್ಟ್ರಮಟ್ಟದಲ್ಲಿ ಜಾತಿವಾರು ಜನಗಣತಿ ನಡೆಸಬೇಕು ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

ಈ ಹಿನ್ನೆಲೆಯಲ್ಲಿ, 2024-25ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಕಳೆದ ವಾರ ಮಂಡಿಸಲಾಗಿತ್ತು. ಈ ಕುರಿತು ಲೋಕಸಭೆಯಲ್ಲಿ ಸೋಮವಾರ (ಜುಲೈ 29) ರಂದು ದಿನ ನಡೆದ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, “ಕೇಂದ್ರ ಬಜೆಟ್‌ ತಯಾರಿಸುವಲ್ಲಿ 20 ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಆದರೆ ಹಿಂದುಳಿದ, ಪರಿಶಿಷ್ಟ ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇರಿದ ಒಬ್ಬ ವ್ಯಕ್ತಿಯನ್ನೂ ಅದರಲ್ಲಿ ಸೇರಿಸಲಾಗಿಲ್ಲ.

ದೇಶದ ಶೇ.73ರಷ್ಟು ಜನಸಂಖ್ಯೆ ಹೊಂದಿರುವ ಈ ಮೂರು ಸಮುದಾಯಗಳಿಗೆ ಬಜೆಟ್ ನಲ್ಲಿ ಏನೂ ಸಿಗಲಿಲ್ಲ. ಇಂದಿನ ಭಾರತದಲ್ಲಿ ಕಮಲ ಆಕಾರದ ಚಕ್ರವ್ಯೂಹ ಇದೆ. ಯುವಕರು, ರೈತರು, ಮಹಿಳೆಯರು, ಸಣ್ಣ ಮತ್ತು ಮಧ್ಯಮ ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಇದನ್ನು ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ ಮುಂತಾದ ಆರು ಜನರು ನಿಯಂತ್ರಿಸುತ್ತಾರೆ” ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ, ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಅನುರಾಗ್ ಠಾಕೂರ್ ಅವರು ರಾಹುಲ್ ಗಾಂಧಿ ವಿರುದ್ಧ ಜಾತಿ, ಧರ್ಮದ ಆಧಾರದಲ್ಲಿ ಪರೋಕ್ಷ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಮೋದಿ ಇದನ್ನು ಹೊಗಳಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ನಿನ್ನೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಭಾಷಣಕ್ಕೆ ಪ್ರತಿಕ್ರಿಯಿಸಿದ ಅನುರಾಗ್ ಠಾಕೂರ್, “ತನ್ನ ಜಾತಿ ಗೊತ್ತಿಲ್ಲದ ವ್ಯಕ್ತಿ ಜಾತಿವಾರು ಗಣತಿ ಬಗ್ಗೆ ಮಾತನಾಡುತ್ತಿದ್ದಾರೆ. ಅಲ್ಲದೆ, ಕೆಲವರು ಆಕಸ್ಮಿಕವಾಗಿ ಹಿಂದೂಗಳಾಗಿದ್ದಾರೆ. ಆದ್ದರಿಂದ, ಮಹಾಭಾರತದ ಬಗ್ಗೆ ಅವರ ಜ್ಞಾನವು ಹಾಗೆ ಆಗಿರುತ್ತದೆ” ಎಂದು ವಾಗ್ದಾಳಿ ನಡೆಸಿದರು.

ಅನುರಾಗ್ ಠಾಕೂರ್

ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, “ಆದಿವಾಸಿ, ದಲಿತ ಮತ್ತು ಹಿಂದುಳಿದವರ ಸಮಸ್ಯೆಗಳನ್ನು ಯಾರೇ ಎತ್ತಿದರೂ ಅವರನ್ನು ನಿಂದಿಸಲಾಗುತ್ತದೆ. ಆದಾಗ್ಯೂ, ನಾನು ಇದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ಅನುರಾಗ್ ಠಾಕೂರ್ ನನ್ನನ್ನು ನಿಂದಿಸಿ ಅವಮಾನ ಮಾಡಿದ್ದಾರೆ.

ಆದರೆ, ನಾನು ಅವರಿಂದ ಯಾವುದೇ ಕ್ಷಮೆಯನ್ನು ಬಯಸುವುದಿಲ್ಲ. ನೀವು ನನ್ನನ್ನು ಎಷ್ಟು ಬೇಕಾದರೂ ಅವಮಾನಿಸಬಹುದು. ಸಂಸತ್ತಿನಲ್ಲಿ ಜಾತಿವಾರು ಜನಗಣತಿಯನ್ನು ನಾವು ಅಂಗೀಕರಿಸುತ್ತೇವೆ” ಎಂದರು. ಮತ್ತೊಂದೆಡೆ, ಸಮಾಜವಾದಿ ನಾಯಕ ಅಖಿಲೇಶ್ ಯಾದವ್, “ಅದು ಹೇಗೆ ಒಬ್ಬರ ಜಾತಿಯನ್ನು ಕೇಳುವುದು?” ಎಂದು ಅನುರಾಗ್ ಠಾಕೂರ್ ಅವರನ್ನು ಪ್ರಶ್ನಿಸಿದರು.

ಅಲ್ಲದೆ, ಅನೇಕ ವಿರೋಧ ಪಕ್ಷದ ಸಂಸದರು ಸಹ ಅನುರಾಗ್ ಠಾಕೂರ್ ಅವರ ಇಂತಹ ಭಾಷಣವನ್ನು ವಿರೋಧಿಸಿದರು. ಆದರೆ, ಸದನದಲ್ಲಿ ನಡೆದ ಈ ಘಟನೆಗೆ ಇನ್ನಷ್ಟು ತುಪ್ಪ ಸುರಿಯುವ ಸಲುವಾಗಿ ಪ್ರಧಾನಿ ಮೋದಿ, ನನ್ನ ಯುವ ಮತ್ತು ಶಕ್ತಿಯುತ ಸಹೋದ್ಯೋಗಿ ಅನುರಾಗ್ ಠಾಕೂರ್ ಅವರ ಈ ಭಾಷಣ, ಕೇಳಲೇಬೇಕು. ಸತ್ಯ ಮತ್ತು ಹಾಸ್ಯದ ಈ ಪರಿಪೂರ್ಣ ಮಿಶ್ರಣವು ಇಂಡಿಯಾ ಮೈತ್ರಿಕೂಟದ ಕೊಳಕು ರಾಜಕೀಯವನ್ನು ಬಹಿರಂಗಪಡಿಸುತ್ತದೆ” ಎಂದು ಟ್ವೀಟ್ ಮಾಡಿ, ಅನುರಾಗ್ ಠಾಕೂರ್ ಅವರು ಸದನದಲ್ಲಿ ಮಾಡಿದ ಭಾಷಣದ ವೀಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮ ಪುಟ X ನಲ್ಲಿ ಹಂಚಿಕೊಂಡಿದ್ದಾರೆ.

ಇದರ ಬೆನ್ನಲ್ಲೇ ಅನುರಾಗ್ ಠಾಕೂರ್ ಅವರು ಅಖಿಲೇಶ್ ಯಾದವ್ ಅವರ ಹಳೆಯ ವಿಡಿಯೋವನ್ನು ಕಟ್ ಮಾಡಿ, “ನೀವು ಜಾತಿಯ ಬಗ್ಗೆ ಅದು ಹೇಗೆ ಕೇಳಬಹುದು ಅಖಿಲೇಶ್ ಯಾದವ್?” ಎಂದು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

ಮತ್ತೊಂದೆಡೆ, ಕಮ್ಯುನಿಸ್ಟ್ ಪಕ್ಷದ ಸಂಸದ ಸಿ.ವೆಂಕಟೇಶನ್ ಅವರು ತಮ್ಮ ಎಕ್ಸ್ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ, “ನಿನ್ನೆ ಸಂಸತ್ತಿನಲ್ಲಿ, ‘ತನ್ನ ಜಾತಿ ಗೊತ್ತಿಲ್ಲದ ವ್ಯಕ್ತಿ ಜಾತಿವಾರು ಗಣತಿ ಬಗ್ಗೆ ಮಾತನಾಡಬಹುದಾ?’ ಎಂದು ರಾಹುಲ್ ಗಾಂಧಿ ಬಗ್ಗೆ ಅನುರಾಗ್ ಠಾಕೂರ್ ಮಾತನಾಡಿದರು.

ಈ ಭಾಷಣವನ್ನು ಎಲ್ಲರೂ ಕೇಳಲೇಬೇಕಾದ ಅತ್ಯುತ್ತಮ ಭಾಷಣ ಎಂದು ಪ್ರಧಾನಿ ತಮ್ಮ ‘ಎಕ್ಸ್’ ಸೈಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ದೇಶದ ಅತ್ಯುನ್ನತ ಸದನಗಳಲ್ಲಿ ಬಿಜೆಪಿಯ ಧ್ವನಿ ಎಷ್ಟು ನೋವಿನಿಂದ ಹೊರಹೊಮ್ಮುತ್ತಿದೆ ಎಂಬುದನ್ನು ನೋಡಿ” ಎಂದು ಟೀಕಿಸಿದ್ದಾರೆ. ಅವರನ್ನು ಅನುಸರಿಸಿ ಹಲವು ವಿರೋಧ ಪಕ್ಷಗಳ ನಾಯಕರು, ಅನುರಾಗ್ ಠಾಕೂರ್ ಅವರ ಕ್ರಮವನ್ನು ಖಂಡಿಸುತ್ತಾ, ಮೋದಿಯವರ ಹೊಗಳಿಕೆಯನ್ನು ಟೀಕಿಸುತ್ತಿದ್ದಾರೆ.

ಅಲ್ಲದೆ, ಅನುರಾಗ್ ಠಾಕೂರ್ ಅವರ ವೀಡಿಯೊವನ್ನು ವೀಕ್ಷಿಸಲು ಮೋದಿಯವರ ಮನವಿಗೆ ವಿರುದ್ಧವಾಗಿ ಕಾಂಗ್ರೆಸ್ ಪಕ್ಷವು, ಇದು ಸಂಸತ್ತಿನ ವಿಶೇಷ ಹಕ್ಕುಗಳ ಉಲ್ಲಂಘನೆ ಮತ್ತು ಅಸಂವಿಧಾನಿಕ ಎಂದು ಲೋಕಸಭೆಯ ರೂಲ್ ಬುಕ್ ಚಾಪ್ಟರ್ 20ರ ರೂಲ್ ನಂಬರ್ 222ರ ಪ್ರಕಾರ ಮೋದಿಯವರ ವಿರುದ್ಧ ಹಕ್ಕುಚ್ಯುತಿ (Privilege Motion Notice) ಮಂಡಿಸಿದೆ.