ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಮೋದಿ 3.0 Archives » Dynamic Leader
November 23, 2024
Home Posts tagged ಮೋದಿ 3.0
ದೇಶ

ಡಿ.ಸಿ.ಪ್ರಕಾಶ್

ಪ್ರಧಾನಿ ಮೋದಿ ಅವರು 3ನೇ ಅವಧಿಗೆ ಅಧಿಕಾರ ಸ್ವೀಕರಿಸಿದ ಮೊದಲ 100 ದಿನಗಳಲ್ಲಿ ಏಳು ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡಿದ್ದೂ ಅಲ್ಲದೆ, ಆಯಾ ದೇಶಗಳ ಜತೆಗಿನ ಸಂಬಂಧವನ್ನೂ ಗಟ್ಟಿಗೊಳಿಸಿದ್ದಾರೆ. ಅಲ್ಲದೆ, ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟಿನ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ.

ಜೂನ್ 9 ರಂದು ಅಧಿಕಾರ ಸ್ವೀಕರಿಸಿದ ಪ್ರಧಾನಿ ಮೋದಿ, 4 ದಿನಗಳೊಳಗೆ ಅಂದರೆ ಜೂನ್ 13-14 ರಂದು ಇಟಲಿಯ ಬಸ್ಸಾನೊದಲ್ಲಿ ನಡೆದ 50ನೇ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden), ಆಗಿನ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ (Rishi Sunak), ಆಗಿನ ಫ್ರೆಂಚ್ ಅಧ್ಯಕ್ಷ ಇಮ್ಮಾನ್ಯುವೆಲ್ ಮಾಕ್ರೋನ್ (Emmanuel Macron), ಜರ್ಮನ್ ಪ್ರಧಾನಿ ಓಲಾಫ್ ಸ್ಕೋಲ್ಜ್ (Olaf Scholz), ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ (Fumio Kishida), ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಮತ್ತು ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಮುಂತಾದ ನಾಯಕರನ್ನು ಭೇಟಿಯಾಗಿ ಪರಸ್ಪರ ಸೌಹಾರ್ದ ಕುರಿತು ಚರ್ಚಿಸಿದರು.

ಪ್ರಧಾನಿ ಮೋದಿ ಜುಲೈ 8 ಮತ್ತು 9 ರಂದು ರಷ್ಯಾದ ರಾಜಧಾನಿ ಮಾಸ್ಕೋಗೆ ಭೇಟಿ ನೀಡಿದರು. 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅಲ್ಲಿಗೆ ತೆರಳಿದ್ದರು. ಅವರು ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚಿಸಿದರು. ಅಲ್ಲದೆ, ಪ್ರಧಾನಿ ಮೋದಿಯವರಿಗೆ ರಷ್ಯಾ ಸರ್ಕಾರದ ಪರವಾಗಿ ಆ ದೇಶದ ಅತ್ಯುನ್ನತ ಪ್ರಶಸ್ತಿಯಾದ ‘ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ತಲ್’ ನೀಡಿ ಗೌರವಿಸಲಾಯಿತು. ರಷ್ಯಾದ ಕಜಾನ್ ಮತ್ತು ಎಕಟೆರಿನ್‌ಬರ್ಗ್‌ನಲ್ಲಿ ಎರಡು ಹೊಸ ಭಾರತೀಯ ಕಾನ್ಸುಲೇಟ್‌ಗಳನ್ನು ತೆರೆಯುವುದಾಗಿಯೂ ಪ್ರಧಾನಿ ಮೋದಿ ಘೋಷಿಸಿದರು. ಅವರು ಪುಟಿನ್ ಅವರೊಂದಿಗೆ ಉಕ್ರೇನ್ ಜೊತೆಗಿನ ಕದನ ವಿರಾಮದ ಬಗ್ಗೆಯೂ ಚರ್ಚಿಸಿದರು.

ರಷ್ಯಾ ಪ್ರವಾಸ ಮುಗಿಸಿ ಜುಲೈ 9 ರಂದು 2 ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ಮೋದಿ ಆಸ್ಟ್ರಿಯಾಕ್ಕೆ ತೆರಳಿದರು. ದೇಶದ ಅಧ್ಯಕ್ಷ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ಮತ್ತು ಪ್ರಧಾನಿ ಕಾರ್ಲ್ ನೆಹಮ್ಮರ್ ಅವರನ್ನು ಸ್ವಾಗತಿಸಿದರು. ವಿಯೆನ್ನಾದಲ್ಲಿ ಭಾರತೀಯ ಮೂಲದ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು ಭಾಷಣ ಮಾಡಿದರು. ಸುಮಾರು 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ಆಗಸ್ಟ್ 21 ರಂದು ಎರಡು ದಿನಗಳ ಅಧಿಕೃತ ಭೇಟಿಗಾಗಿ ಪೋಲೆಂಡ್ ಗೆ ತೆರಳಿದ್ದ ಪ್ರಧಾನಿ ಮೋದಿ, ಆ ದೇಶದ ಪ್ರಧಾನಿ ಹಾಗೂ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಸೌಹಾರ್ದತೆಯನ್ನು ಗಟ್ಟಿಗೊಳಿಸಿದರು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅವರು ವಾರ್ಸಾದಲ್ಲಿ ಭಾರತೀಯ ಮೂಲದ ಉದ್ಯಮಿಗಳನ್ನೂ ಭೇಟಿ ಮಾಡಿದರು. ಆ ಸಮಯದಲ್ಲಿ ಅವರು ಭಾರತದಲ್ಲಿ ವ್ಯಾಪಾರ ಮಾಡುವ ಬಗ್ಗೆಯೂ ಚರ್ಚಿಸಿದರು. ಕಳೆದ 45 ವರ್ಷಗಳಲ್ಲಿ ಪೋಲೆಂಡ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅದನ್ನು ಮುಗಿಸಿ ಆಗಸ್ಟ್ 23 ಮತ್ತು 24 ರಂದು ಮೋದಿ ಉಕ್ರೇನ್‌ಗೆ ತೆರಳಿದರು. ಆ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಅವರನ್ನು ಭೇಟಿಯಾಗಿ ಮಾತನಾಡಿದರು. ಆಗ ಪ್ರಧಾನಿ ಮೋದಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಚರ್ಚಿಸಿದರು. ಕೀವ್‌ನಲ್ಲಿ ಹಿಂದಿ ಕಲಿಯುತ್ತಿರುವ ಉಕ್ರೇನಿಯನ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. 1991ರಲ್ಲಿ ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರ ಭಾರತದ ಪ್ರಧಾನಿಯೊಬ್ಬರು ಉಕ್ರೇನ್‌ಗೆ ನೀಡಿದ ಮೊದಲ ಭೇಟಿ ಇದಾಗಿದೆ.

ಏಷ್ಯಾದ ಪುಟ್ಟ ರಾಷ್ಟ್ರವಾದ ಬ್ರೂನೈ (Brunei) ಜತೆಗಿನ ರಾಜತಾಂತ್ರಿಕ ಸಂಬಂಧ 40 ವರ್ಷ ದಾಟಿರುವ ಹಿನ್ನೆಲೆಯಲ್ಲಿ ಭಾರತದ ಮೊದಲ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 3 ಮತ್ತು 4 ರಂದು ಅಲ್ಲಿಗೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಅವರು ದೇಶದ ಸುಲ್ತಾನ್ ಹಸನಲ್ ಬೊಲ್ಕಿಯಾ (Sultan Hassanal Bolkiah) ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳು ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಮಾತನಾಡಿದರು.

ಎರಡು ದಿನಗಳ ಪ್ರವಾಸ ಮುಗಿಸಿ ಸೆಪ್ಟೆಂಬರ್ 4 ಮತ್ತು 5 ರಂದು ಮತ್ತೊಂದು ಏಷ್ಯಾದ ಸಿಂಗಾಪುರಕ್ಕೆ ತೆರಳಿದರು. ಪ್ರಧಾನಿಯಾಗಿ ಇದು ಅವರ ಐದನೇ ಭೇಟಿಯಾಗಿದೆ. ಸಿಂಗಾಪುರದ ಪ್ರಧಾನಿ ಲಾರೆನ್ಸ್ ವಾಂಗ್ (Lawrence Wong) ಅವರನ್ನು ಸ್ವಾಗತಿಸಿ ಖಾಸಗಿ ಭೋಜನವನ್ನು ನೀಡಿದರು. ಉಭಯ ನಾಯಕರು ಭೇಟಿಯಾಗಿ ವಿವಿಧ ವಿಷಯಗಳನ್ನು ಚರ್ಚಿಸಿದರು. ಆ ಸಮಯದಲ್ಲಿ, ತಿರುವಳ್ಳುವರ್ ಹೆಸರಿನಲ್ಲಿ ಶೀಘ್ರದಲ್ಲೇ ಸಿಂಗಾಪುರದಲ್ಲಿ ಮೊದಲ ಅಂತರರಾಷ್ಟ್ರೀಯ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಉಭಯ ದೇಶಗಳ ನಡುವಿನ ಸಂಬಂಧದ ಕುರಿತು ಸಮಾಲೋಚನೆ ನಡೆಸಿದರು.

100 ದಿನಗಳಲ್ಲಿ ಸುಮಾರು 12 ದಿನಗಳ ಕಾಲ ಏಳು ರಾಷ್ಟ್ರಗಳನ್ನು ಸುತ್ತಾಡಿ, 7ಜಿ ಶೃಂಗಸಭೆ, ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ, ‘ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ತಲ್’ ಪ್ರಶಸ್ತಿ ಸ್ವೀಕಾರ, ರಷ್ಯಾ ಮತ್ತು ಉಕ್ರೇನ್ ಕದನ ವಿರಾಮದ ಕುರಿತು ಮಾತುಕತೆ, ಹಿಂದಿ ಕಲಿಯುತ್ತಿರುವ ಉಕ್ರೇನಿಯನ್ ವಿದ್ಯಾರ್ಥಿಗಳೊಂದಿಗೆ ಸಂವಾದ, ಸಿಂಗಾಪುರದಲ್ಲಿ ಶೀಘ್ರದಲ್ಲೇ ತಿರುವಳ್ಳುವರ್ ಹೆಸರಿನಲ್ಲಿ ಮೊದಲ ಅಂತರರಾಷ್ಟ್ರೀಯ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಲು ನಿರ್ಧಾರ, ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆಗಳು, ಸೌಹಾರ್ದತೆ ಕುರಿತು.. ವ್ಯಾಪಾರ ವಹಿವಾಟಿನ ಕುರಿತು.. ಪ್ರಧಾನಿ ಮೋದಿಯವರು ನಡೆಸಿರುವ ಮಾತುಕತೆಗಳೆಲ್ಲವೂ ಈಗ ಇತಿಹಾಸವೇ? ಅದು ನಿಮ್ಮ ಸಾಧನೆಯೂ ಹೌದು!

ಆದರೆ, “ಇದಕೆಲ್ಲ ಸಮಯವಿರುವ ನಿಮಗೆ ಮಣಿಪುರಕ್ಕೆ ಹೋಗಲು ಮಾತ್ರ ಏಕೆ ಸಮಯವಿಲ್ಲ? ಅಲ್ಲಿ ಸೌಹಾರ್ದತೆ ಬೇಡವೇ? ಅಲ್ಲಿ ಕದನ ವಿರಾಮ ಬೇಡವೇ? ಅಲ್ಲಿನ ಹತ್ಯೆಗಳನ್ನು, ಹತ್ಯಾಚಾರಗಳನ್ನು, ಗಲಭೆಗಳನ್ನು, ಮನೆಗಳಿ ಬೆಂಕಿ ಹಚ್ಚುವುದನ್ನು ತಡೆಯಲು ನಿಮಗೆ ಮನಸ್ಸಿಲ್ಲವೇ? ಮಹಿಳೆಯರು ಮತ್ತು ಮಕ್ಕಳ ಆಕ್ರಂದನವನ್ನು ಕೇಳಲು ನಿಮಗೆ ಆಗುತ್ತಿಲ್ಲವೇ? ನೀವು 3ನೇ ಅವಧಿಗೆ ಅಧಿಕಾರ ಸ್ವೀಕರಿಸಿದ ಮೊದಲ 100 ದಿನಗಳಲ್ಲಿ ಮಣಿಪುರದ ಜನತೆಗಾಗಿ ಮಾಡಿದ್ದಾದರೂ ಏನು? ಎಂದಷ್ಟೇ ನಿಮ್ಮನ್ನು ಕೇಳುತ್ತಿದ್ದಾರೆ; ಈ ನಾಡಿನ ಪ್ರಜ್ಞಾವಂತ ಜನರು, ನಿಮ್ಮಲ್ಲಿ ಉತ್ತರವಿದೆಯೇ ಮೋದಿ ಜಿ..!   

ಲೇಖನ

ಡಿ.ಸಿ.ಪ್ರಕಾಶ್

ಬಿಜೆಪಿಯ ಮೇಲೆ ಅದರ ಮಾತೃ ಸಂಘಟನೆಯಾದ ಆರ್‌ಎಸ್‌ಎಸ್ ಅತೃಪ್ತದಲ್ಲಿದೆ ಎಂಬ ಸುದ್ದಿ ಪ್ರಕಟವಾಗುತ್ತಲೇ ಇದೆ!

ಇತ್ತೀಚೆಗೆ ಬಿಜೆಪಿ ಮತ್ತು ಅದರ ಸಂಘಟನೆಯಾದ ಆರ್‌ಎಸ್‌ಎಸ್ ನಡುವೆ ಸಂಘರ್ಷ ನಡೆಯುತ್ತಿದೆ. ಅದರಲ್ಲೂ 2024ರ ಲೋಕಸಭೆ ಚುನಾವಣೆ ವೇಳೆಗೆ ಈ ಸಂಘರ್ಷ ಹೆಚ್ಚಿರುವುದನ್ನು ಕಾಣಬಹುದು.

ಬಿಜೆಪಿ ಅಧಿಕಾರದಲ್ಲಿರುವುದರಿಂದ ಆರ್‌ಎಸ್‌ಎಸ್ ಸಂಘಟನೆಗೆ ಮನ್ನಣೆ ನೀಡದಿರುವುದು ಆರ್‌ಎಸ್‌ಎಸ್ ನಿರ್ವಾಹಕರಿಗಾಗಿ ಸಿಟ್ಟು ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಬಿಜೆಪಿಗೆ ಬೆಂಬಲವಾಗಿ ಚುನಾವಣಾ ಕೆಲಸ ಮಾಡಿಲ್ಲ ಎಂಬ ಸುದ್ದಿ ಹೊರಬಿದ್ದಿರುವಾಗಲೇ ಆರ್‌ಎಸ್‌ಎಸ್ ಸಂಘಟನೆಯ ಮುಖವಾಣಿಯಾದ ‘ಆರ್ಗನೈಸರ್’ನಲ್ಲಿ ಈ ಕುರಿತು ಲೇಖನ ಪ್ರಕಟವಾಗಿದೆ.

ಆರ್‌ಎಸ್‌ಎಸ್‌ನ ರತನ್ ಶಾರದಾ ಅವರು ಈ ಲೇಖನವನ್ನು ಬರೆದಿದ್ದಾರೆ. ‘ಮೋದಿ 3.0 – ತಪ್ಪುಗಳನ್ನು ಸರಿಪಡಿಸಲಿಕ್ಕಾಗಿ ಒಂದು ಸಂಭಾಷಣೆ’ ಎಂಬ ಶೀರ್ಷಿಕೆಯ ಲೇಖನದಲ್ಲಿ, ‘ಬಿಜೆಪಿ ನಾಯಕರು ಮತ್ತು ಆಡಳಿತಗಾರರಿಗೆ ಬೀದಿಯಲ್ಲಿ ಧ್ವನಿಸುವ ಜನರ ಕೂಗು ಕೇಳುವುದಿಲ್ಲ. ಬದಲಿಗೆ, ಪ್ರಧಾನಿ ಮೋದಿಯವರ ಜನಪ್ರಿಯತೆಯ ಬೆಳಕಿನಲ್ಲಿ ಅವರು ಬಿಸಿಲು ಕಾಯುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ಅಲ್ಲದೆ, ‘ಬಿಜೆಪಿ ನಾಯಕರು ತಮ್ಮ ಬಗ್ಗೆ ಅತಿಯಾದ ಆತ್ಮವಿಶ್ವಾದಲ್ಲಿದ್ದರು. ಆದರೆ ವಾಸ್ತವ ಏನೆಂಬುದನ್ನು ಚುನಾವಣಾ ಫಲಿತಾಂಶ ತೋರಿಸಿದೆ’ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ನೋಡಿದರೆ ಲೋಕಸಭೆ ಚುನಾವಣೆಯಲ್ಲಿ ಆರ್‌ಎಸ್‌ಎಸ್ ಸಂಘಟನೆ ಬಿಜೆಪಿ ಪರ ಕೆಲಸ ಮಾಡಿಲ್ಲ ಎಂಬ ವರದಿಗಳು ನಿಜ ಎಂಬುದನ್ನು ಈ ಲೇಖನ ಅಧಿಕೃತವಾಗಿ ಬಹಿರಂಗಪಡಿಸಿದೆ.

ಲೋಕಸಭೆ ಚುನಾವಣೆ ಫಲಿತಾಂಶದ ವೇಳೆ ಆರ್‌ಎಸ್‌ಎಸ್ ನಾಯಕ ಮೋಹನ್ ಭಾಗವತ್ ಅವರು ಕೆಲವು ಹೇಳಿಕೆಗಳನ್ನು ವ್ಯಕ್ತಪಡಿಸಿದ್ದರು. ಆ ವೇಳೆ ‘ನಿಜವಾದ ಸೇವಕರು ದುರಹಂಕಾರಿಯಾಗಿರುವುದಿಲ್ಲ’ ಎಂದು ಬಿಜೆಪಿ ಸದಸ್ಯರನ್ನು ಪರೋಕ್ಷವಾಗಿ ಟೀಕಿಸಿದ್ದರು.’ಆರ್ಗನೈಸರ್’ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ‘ಚುನಾವಣಾ ಕೆಲಸಗಳಿಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸ್ವಯಂಸೇವಕರನ್ನು (ಆರ್‌ಎಸ್‌ಎಸ್ ಕಾರ್ಯಕರ್ತರು) ಸಂಪರ್ಕಿಸಿಲ್ಲ’ ಎಂದು ಉಲ್ಲೇಖಿಸಲಾಗಿದೆ.

ಲೋಕಸಭೆ ಚುನಾವಣೆ ನಡೆಯುತ್ತಿರುವಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವಿನ ಅಹಂಕಾರವನ್ನು (Ego) ಬಹಿರಂಗಪಡಿಸುವ ಕೆಲವು ಹೇಳಿಕೆಗಳನ್ನು ನೀಡಿದ್ದರು. ಅಂದರೆ, ‘ತನ್ನ ಸ್ವಂತ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸುವ ಸ್ಥಿತಿಯಲ್ಲಿ ಬಿಜೆಪಿ ಇದೆ. ಅದಕ್ಕೆ ಆರ್‌ಎಸ್‌ಎಸ್ ಬೇಡ’ ಎಂದು ಅವರು ಹೇಳಿದರು.

ಅಲ್ಲದೆ, ವಾಜಪೇಯಿ ಪ್ರಧಾನಿಯಾಗಿದ್ದ ಸಮಯ ಹಾಗೂ ಮೋದಿ ಪ್ರಧಾನಿಯಾಗಿದ್ದ ಸಮಯವನ್ನು ಹೋಲಿಕೆ ಮಾಡಿ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ವಾಜಪೇಯಿ ಕಾಲದಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಸಹಾಯ ಪಡೆಯುವ ಮಟ್ಟೆಕ್ಕೆ ಒಂದು ಸಣ್ಣ ಶಕ್ತಿಯಾಗಿತ್ತು. ಈಗ ಬಿಜೆಪಿ ಬೆಳೆದಿದೆ. ಯಾರ ಕೃಪಾಕಟಾಕ್ಷವೂ ಇಲ್ಲದೇ ಬಿಜೆಪಿ ಸ್ವಂತ ಬಲದಿಂದ ನಡೆಯುತ್ತಿದೆ’ ಎಂದು ಜೆ.ಪಿ.ನಡ್ಡಾ ಹೇಳಿದ್ದರು.

ಆದರೆ ಜೆ.ಪಿ.ನಡ್ಡಾ ಹೇಳಿದ್ದಕ್ಕೆ ವ್ಯತಿರಿಕ್ತವಾಗಿ ಲೋಕಸಭೆ ಚುನಾವಣೆ ಫಲಿತಾಂಶ ಬಂದಿದೆ. ಬಿಜೆಪಿ 370 ಮತ್ತು ಎನ್‌ಡಿಎ 400 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ಬಿಜೆಪಿ ಗೆದ್ದಿರುವುದು 240 ಕ್ಷೇತ್ರಗಳಲ್ಲಿ ಮಾತ್ರ. ಸರ್ಕಾರ ರಚನೆಗೆ ಬೇಕಾದ 272 ಸಂಖ್ಯಾಬಲವನ್ನೂ ಬಿಜೆಪಿ ಮುಟ್ಟಲು ಸಾಧ್ಯವಾಗಲಿಲ್ಲ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಒಟ್ಟು 293 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದೆ. ಹೀಗಾಗಿ ಬಿಜೆಪಿ ನಾಯಕರು ಇದನ್ನು ಅರಿಯದೆ ತೇಲಾಡುತ್ತಿದ್ದಾರೆ ಎಂದು ಆರ್‌ಎಸ್‌ಎಸ್ ಕಡೆಯವರು ಹೇಳುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸುತ್ತಿರುವ ರಾಜಕೀಯ ವಿಮರ್ಶಕರು, “ಬಿಜೆಪಿ ಆರ್‌ಎಸ್‌ಎಸ್ ಹಿಡಿತದಲ್ಲಿರಬೇಕು. ಅವರ ರಾಜಕೀಯ ಅಜೆಂಡಾಗಳನ್ನು ಬಿಜೆಪಿ ಆಡಳಿತಗಾರರು ಈಡೇರಿಸಬೇಕು ಎಂದು ಆರ್‌ಎಸ್‌ಎಸ್ ನಿರೀಕ್ಷಿಸುತ್ತದೆ. ಆದರೆ ಬಿಜೆಪಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರುವಷ್ಟು ಬೆಳೆದಿರುವಾಗ ಬಿಜೆಪಿ ನಾಯಕರು, ಆರ್‌ಎಸ್‌ಎಸ್ ಸಂಘಟನೆಯ ಮೇಲೆ ಅವಲಂಬಿತರಾಗಿರಲು ಬಯಸುತ್ತಿಲ್ಲ. ಅದುವೇ ಸಮಸ್ಯೆಗೆ ಕಾರಣ” ಎಂದು ಹೇಳುತ್ತಾರೆ.

ಮಣಿಪುರ ರಾಜ್ಯದಲ್ಲಿ ಜನಾಂಗೀಯ ಸಂಘರ್ಷಗಳಿಂದ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೂ, ಸಾವಿರಾರು ಮಂದಿ ಮನೆ ಕಳೆದುಕೊಂಡು, ಮಹಿಳೆಯರು ಅಧೋಗತಿಗೆ ಒಳಗಾಗಿದ್ದರೂ ಪ್ರಧಾನಿ ಮೋದಿ ಇದುವರೆಗೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ, ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಅವರು ‘ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಮೋದಿ ಸರ್ಕಾರದ ಭದ್ರತೆಯ ವೈಫಲ್ಯವೇ ಕಾರಣ’ ಎಂದು ಟೀಕಿಸಿದ್ದಾರೆ. ‘ಚುನಾವಣೆ ವಿಜಯೋತ್ಸವದ ಸಂಭ್ರಮ ಸಾಕು. ಮಣಿಪುರ ಶಾಂತಿಗಾಗಿ ಕಾಯುತ್ತಿದೆ’ ಎಂದು ಟೀಕಿಸಿದ್ದಾರೆ.

ಬೀದಿಗೆ ಬಂದ ಆರ್‌ಎಸ್‌ಎಸ್-ಬಿಜೆಪಿ ಘರ್ಷಣೆ ಇನ್ನೂ ತೀವ್ರವಾಗುತ್ತದೆಯೇ ಅಥವಾ ಕಡಿಮೆಯಾಗುತ್ತದೆಯೇ? ಕಾಲವೇ ಉತ್ತರಿಸಬೇಕು.