ಚೆನ್ನೈ: ನಟ ವಿಜಯ್, ರಾಜಕೀಯ ರಂಗಕ್ಕೆ ಇಳಿದಿದ್ದಾರೆ. ಅವರ ಪಕ್ಷಕ್ಕೆ “ತಮಿಳಗ ವೆಟ್ರಿ ಕಳಗಂ” ಎಂದು ಹೆಸರಿಟ್ಟಿರುವುದಾಗಿ ಇಂದು ಅವರು ಅಧಿಕೃತವಾಗಿ ಘೋಷಿಸಿದ್ದಾರೆ.
ಇದರ ಬಗ್ಗೆ ಅವರು ಪ್ರಕಟಿಸಿರುವ ಪತ್ರಿಕಾ ಹೇಳಿಕೆಯಲ್ಲಿ, “ವಿಜಯ್ ಪೀಪಲ್ಸ್ ಮೂವ್ಮೆಂಟ್ನ ಹೆಸರಿನಲ್ಲಿ ಅನೇಕ ವರ್ಷಗಳಿಂದ ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ವಿವಿಧ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಮಾಡುತ್ತಾ ಪರಿಹಾರ ನೆರವುಗಳನ್ನು ನೀಡಿ, ಸಮಾಜ ಸೇವೆ ಮಾಡಿಕೊಂಡು ಬರುತ್ತಿರುವುದು ತಮ್ಮೆಲ್ಲರಿಗೂ ತಿಳಿದಿದೆ.
ಆದಾಗ್ಯೂ, ಸಂಪೂರ್ಣವಾಗಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸುಧಾರಣೆಗಳನ್ನು ತರಲು, ಸ್ವಯಂ ಸೇವಾ ಸಂಸ್ಥೆಯಿಂದ ಸಾಧ್ಯವಿಲ್ಲ, ಅದನ್ನು ಮಾಡಲು ರಾಜಕೀಯ ಶಕ್ತಿಯ ಅಗತ್ಯವಿದೆ.
ಪ್ರಸ್ತುತ ರಾಜಕೀಯ ವಾತಾವರಣ, ಆಡಳಿತಾತ್ಮಕ ಅಸ್ವಸ್ಥತೆಗಳು ಮತ್ತು ‘ಭ್ರಷ್ಟ ರಾಜಕೀಯ ಸಂಸ್ಕೃತಿ’ ಒಂದೆಡೆಯಾದರೆ, ನಮ್ಮ ಜನರನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುವ ‘ವಿಭಜಕ ರಾಜಕೀಯ ಸಂಸ್ಕೃತಿ’ ಮತ್ತೊಂದೆಡೆಯಾಗಿದೆ. ಇದರಿಂದ ನಮ್ಮ ಏಕತೆ ಮತ್ತು ಪ್ರಗತಿಗೆ ಅಡೆತಡೆ ಉಂಟಾಗಿವೆ.
ನಿಸ್ವಾರ್ಥ, ಪಾರದರ್ಶಕ, ಜಾತಿ ರಹಿತ, ದೂರದೃಷ್ಟಿಯ ಆಲೋಚನೆ ಹೊಂದಿದ, ಲಂಚ-ಭ್ರಷ್ಟಾಚಾರ ರಹಿತ ದಕ್ಷ ಆಡಳಿತವನ್ನು ಮುನ್ನಡೆಸಬಲ್ಲ, ಮೂಲಭೂತ ರಾಜಕೀಯ ಬದಲಾವಣೆಗಾಗಿ, ನಿರ್ದಿಷ್ಟವಾಗಿ ಹೇಳುವುದಾದರೆ, ತಮಿಳುನಾಡಿನಲ್ಲಿರುವ ಪ್ರತಿಯೊಬ್ಬರೂ ಅದಕ್ಕಾಗಿ ಹಾತೊರೆಯುತ್ತಿದ್ದಾರೆ ಎಂಬುದು ವಾಸ್ತವಿಕ ಸತ್ಯವಾಗಿದೆ. ಅಂತಹ ಮೂಲಭೂತ ರಾಜಕೀಯ ಬದಲಾವಣೆಯನ್ನು, ಜನರ ಒಮ್ಮತದ ಅಭಿಮಾನ ಮತ್ತು ಪ್ರೀತಿಯನ್ನು ಪಡೆದ ಪ್ರಮುಖವಾದ ಒಂದು ಜನಶಕ್ತಿಯ ಮೂಲಕವೇ ಸಾಧ್ಯವಾಗಿಸಬಹುದಾಗಿದೆ.
ಅದರಂತೆ ನನ್ನ ನೇತೃತ್ವದಲ್ಲಿ “ತಮಿಳಗ ವೆಟ್ರಿ ಕಳಗಂ” ಎಂಬ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ಆರಂಭಿಸಿ, ಭಾರತದ ಮುಖ್ಯ ಚುನಾವಣಾ ಆಯೋಗದಲ್ಲಿ ನೋಂದಾಯಿಸಲು ನಮ್ಮ ಪಕ್ಷದ ಪರವಾಗಿ ಇಂದು ಅರ್ಜಿ ಸಲ್ಲಿಸಲಾಗಿದೆ. ಮುಂಬರುವ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಮತ್ತು ಜನರು ಬಯಸುವ ಮೂಲಭೂತ ರಾಜಕೀಯ ಬದಲಾವಣೆಗೆ ಕಾರಣವಾಗುವುದು ನಮ್ಮ ಗುರಿಯಾಗಿದೆ.
ಚುನಾವಣಾ ಆಯೋಗದ ಅನುಮೋದನೆ ಪಡೆದ ನಂತರ, ಮುಂಬರುವ ಸಂಸತ್ತಿನ ಚುನಾವಣೆ ಮುಗಿದ ಮೇಲೆ, ತಮಿಳುನಾಡಿಗೆ ಸಂಬಂಧಿಸಿದ ನೀತಿಗಳ ಯಶಸ್ಸಿಗೆ ಮತ್ತು ತಮಿಳುನಾಡಿನ ಜನರ ಉನ್ನತಿಗಾಗಿ ನಮ್ಮ ಪಕ್ಷದ ನೀತಿ, ನಿಯಮಗಳು, ಧ್ವಜ, ಚಿಹ್ನೆ ಮತ್ತು ಕ್ರಿಯಾ ಯೋಜನೆಗಳನ್ನು ಮುಂದಿಟ್ಟು, ಸಾರ್ವಜನಿಕ ಸಭೆ ಸಮಾರಂಭಗಳೊಂದಿಗೆ ತಮಿಳುನಾಡಿನ ಜನತೆಗಾಗಿ ನಮ್ಮ ರಾಜಕೀಯ ಪಯಣ ಆರಂಭವಾಗಲಿದೆ.
ಮುಂಬರುವ 2024ರ ಸಂಸತ್ ಚುನಾವಣೆಯಲ್ಲಿ ನಾವು ಸ್ಪರ್ಧಿಸುವುದಿಲ್ಲ, ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಸಾಮಾನ್ಯ ಸಭೆ ಮತ್ತು ಕಾರ್ಯಕಾರಿ ಸಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ನನ್ನ ಮಟ್ಟಿಗೆ ಹೇಳುವುದಾದರೆ, ರಾಜಕೀಯವು ಕೇವಲ ಇನ್ನೊಂದು ವೃತ್ತಿಯಲ್ಲ; ರಾಜಕೀಯ ನನ್ನ ಹವ್ಯಾಸವಲ್ಲ; ಅದು ನನ್ನ ಆಳವಾದ ಆಸೆ. ಅದರಲ್ಲಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಬಯಸುತ್ತೇನೆ.
ನನ್ನ ಪರವಾಗಿ, ನಾನು ಈಗಾಗಲೇ ಒಪ್ಪಿಕೊಂಡಿರುವ ಮತ್ತೊಂದು ಚಲನಚಿತ್ರ ಸಂಬಂಧಿತ ಕೆಲಸಗಳನ್ನು, ಪಕ್ಷದ ಕೆಲಸಕ್ಕೆ ಅಡ್ಡಿಯಾಗದ ರೀತಿಯಲ್ಲಿ ಮುಗಿಸಿಕೊಟ್ಟ ನಂತರ, ನಾನು ಸಂಪೂರ್ಣವಾಗಿ ಜನಸೇವೆಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.