ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ರಾಜೌರಿ Archives » Dynamic Leader
October 17, 2024
Home Posts tagged ರಾಜೌರಿ
ದೇಶ

ಡಿ.ಸಿ.ಪ್ರಕಾಶ್, ಸಂಪಾದಕರು

ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 1,800 ಸಿ.ಆರ್‌.ಪಿ.ಎಫ್. ಸಿಬ್ಬಂದಿಯನ್ನು ಕಾಶ್ಮೀರಕ್ಕೆ ಕಳುಹಿಸಿಕೊಟ್ಟಿದೆ. ಅಲ್ಲಿ ಭಯೋತ್ಪಾದಕ ಘಟನೆಗಳು ಹೆಚ್ಚಾಗಲು ಕಾರಣವೇನು?

ಕಳೆದ ಕೆಲವು ವಾರಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಘಟನೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ಕೇಂದ್ರ ಸರ್ಕಾರವು ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 1,800 ಸೈನಿಕರನ್ನು ಹೆಚ್ಚುವರಿಯಾಗಿ ಅಲ್ಲಿಗೆ ಕಳುಹಿಸಿಕೊಟ್ಟಿದೆ.

ಕಳೆದ ಕೆಲವು ವಾರಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಾಜೌರಿ ಜಿಲ್ಲೆಗಳಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಅರೆಸೇನಾ ಪಡೆಗಳು ಮಾತ್ರವಲ್ಲದೆ ಮಕ್ಕಳು ಸೇರಿದಂತೆ ಅಮಾಯಕ ನಾಗರಿಕರು ಸಹ ಸಾವನ್ನಪ್ಪಿದ್ದಾರೆ.

2023ರ ಮೊದಲ ದಿನ, ಜನವರಿ 1 ರಂದು, ಸುಮಾರು 7 ಗಂಟೆಗೆ, ರಾಜೌರಿಯಲ್ಲಿ ಒಂದು ಭಯಾನಕ ಘಟನೆ ನಡೆಯಿತು. ಅಲ್ಲಿನ ಅರಣ್ಯದಿಂದ ಬಂದೂಕು ಹಿಡಿದು ಬಂದ ಇಬ್ಬರು ಭಯೋತ್ಪಾದಕರು ಅಲ್ಲಿದ್ದ ಮೂರು ಮನೆಗಳಿಗೆ ನುಗ್ಗಿ ನಾಲ್ವರು ಅಮಾಯಕ ನಾಗರಿಕರನ್ನು ಕೊಂದು ಹಾಕಿದರು. ಮನೆಯೊಳಗಿದ್ದವರ ಆಧಾರ್ ಕಾರ್ಡ್ ಪರಿಶೀಲಿಸಿ ಅವರ ಧರ್ಮವನ್ನು ಪತ್ತೆ ಹಚ್ಚಿ ಗುಂಡಿಕ್ಕಿ ಕೊಂದಿದ್ದಾರೆ.

ಹತ್ತು ನಿಮಿಷಗಳಲ್ಲಿ ಗುಂಡಿನ ದಾಳಿಯನ್ನು ನಿಲ್ಲಿಸಿದ್ದ ದುಷ್ಕರ್ಮಿಗಳು, ಅಪ್ಪರ್ ಡ್ಯಾಂಗ್ರಿಯ ಮನೆಯೊಂದರಲ್ಲಿ ಇದ್ದವರ ಮೇಲೆಯೂ ಗುಂಡನ್ನು ಹಾರಿಸಿದ್ದಾರೆ. ನಂತರ 25 ಮೀಟರ್ ದೂರ ಕ್ರಮಿಸಿ ಅಲ್ಲಿದ್ದ ನಾಗರಿಕರ ಮೇಲೆಯೂ ಗುಂಡನ್ನು ಹೊಡೆದಿದ್ದಾರೆ. ನಂತರ ಮತ್ತೊಂದು ಮನೆಯವರ ಮೇಲೆಯೂ ಗುಂಡನ್ನು ಹಾರಿಸಿದ್ದಾರೆ. ಆ ದಾಳಿಯಲ್ಲಿ 10 ಮಂದಿಗೆ ಗುಂಡು ತಗಲಿರುತ್ತದೆ.

ಅವರನ್ನು ರಾಜೌರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಾರ್ಗಮಧ್ಯೆಯೇ ಮೂವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಗಾಯಾಳುಗಳನ್ನು ವಿಮಾನದಲ್ಲಿ ಜಮ್ಮುವಿಗೆ ರವಾನಿಸಲಾಗಿರುತ್ತದೆ. ಅವರಲ್ಲಿದ್ದ ಒಬ್ಬರು ಕೂಡ ಮೃತಪಟ್ಟಿರುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಭಯೋತ್ಪಾದಕರ ಬಂಧನಕ್ಕೆ ಸೇನೆ ಮತ್ತು ಅರೆಸೇನಾ ಪಡೆಗಳು ಶೋಧ ಆರಂಭಿಸಿದೆ ಎಂದು ಹೆಚ್ಚುವರಿ ಡಿಜಿಪಿ ತಿಳಿಸಿದ್ದಾರೆ.

ಮನೋಜ್ ಸಿನ್ಹಾ

ಇತ್ತೀಚಿನ ದಿನಗಳಲ್ಲಿ ಕಾಶ್ಮೀರದಲ್ಲಿ ನಿರಂತರವಾಗಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳು ಸಾರ್ವಜನಿಕರಲ್ಲಿ ಭೀತಿಯನ್ನು ಮೂಡಿಸಿದೆ. ಈ ದಾಳಿಯ ವಿರುದ್ಧ ವರ್ತಕರು, ಸಂಘಟನೆಗಳು ಸೇರಿದಂತೆ ವಿವಿಧ ಪಕ್ಷಗಳು ಪ್ರತಿಭಟನೆಗಳನ್ನು ನಡೆಸುತ್ತಿವೆ. ಪ್ರಕ್ಷುಬ್ಧ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತ ಜನರು ಪಾಕಿಸ್ತಾನ ಮತ್ತು ಭಯೋತ್ಪಾದಕರನ್ನು ಖಂಡಿಸಿ ಘೋಷಣೆಗಳನ್ನು ಹಾಕಿದ್ದಾರೆ. ಅದೇ ಸಮಯದಲ್ಲಿ, ಸಾರ್ವಜನಿಕರನ್ನು ಭಯೋತ್ಪಾದಕರಿಂದ ರಕ್ಷಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳದ ಲೆಫ್ಟಿನೆಂಟ್ ಗವರ್ನರ್ ಆಡಳಿತದ ವಿರುದ್ಧವೂ ಘೋಷಣೆಗಳನ್ನು ಹಾಕಲಾಯಿತು ಎಂದು ವರದಿಗಳು ತಿಳಿಸುತ್ತಿವೆ.

ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯನ್ನು ರಾಜಕೀಯ ಪಕ್ಷಗಳು ಸಹ ಖಂಡಿಸಿವೆ. ‘ಕೇಂದ್ರಾಡಳಿತ ಪ್ರದೇಶದ ಆಡಳಿತವು ಕಾಶ್ಮೀರದಲ್ಲಿನ ಅಲ್ಪಸಂಖ್ಯಾತ ಸಮುದಾಯಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಭಯೋತ್ಪಾದಕರ ದಾಳಿಯಿಂದ ಸಹಜ ಸ್ಥಿತಿಗೆ ಭಂಗ ಬಂದಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ. ಈ ಹಿನ್ನಲೆಯಲ್ಲಿಯೇ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ 1,800 ಸಿ.ಆರ್‌.ಪಿ.ಎಫ್. ಸಿಬ್ಬಂದಿಯನ್ನು ಪ್ರಕ್ಷುಬ್ಧ ಪ್ರದೇಶಗಳಿಗೆ ಕಳುಹಿಸಿ ಕೊಡುವ ನಿರ್ಧಾರವನ್ನು ಮಾಡಿತು.

2019ರಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು. ಆ ನಂತರ ಅಲ್ಲಿ ಚುನಾವಣೆಯನ್ನೂ ನಡೆಸಲಿಲ್ಲ. ಅಲ್ಲಿ ಲೆಫ್ಟಿನೆಂಟ್ ಗವರ್ನರ್ ಮೂಲಕ ಆಡಳಿತ ನಡೆಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿರುವ ಮನೋಜ್ ಸಿನ್ಹಾ ಮತ್ತು ಕೇಂದ್ರ ಬಿಜೆಪಿ ಸರ್ಕಾರವನ್ನು ಅಲ್ಲಿನ ರಾಜಕೀಯ ಪಕ್ಷಗಳು ನಿರಂತರವಾಗಿ ಟೀಕಿಸಿಕೊಂಡು ಬರುತ್ತಿದೆ. ‘ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆದು ರಾಜಕೀಯ ಪಕ್ಷಗಳು ಮುಕ್ತವಾಗಿ ಕಾರ್ಯನಿರ್ವಹಿಸುವಂತಹ ವಾತಾವರಣ ಸೃಷ್ಠಿಯಾದರೆ ಮಾತ್ರ ಅಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಡಿಮೆಯಾಗುತ್ತವೆ’ ಎಂದು ಪ್ರತಿಪಕ್ಷಗಳ ಮುಖಂಡರುಗಳು ಹೇಳುತ್ತಿದ್ದಾರೆ.