Leaders View
• ಡಿ.ಸಿ.ಪ್ರಕಾಶ್
ನವದೆಹಲಿ: “ಬಿಜೆಪಿಯ ಹಿಂದೂಗಳು ಹಿಂಸಾತ್ಮಕರು; ನಿಜವಾದ ಹಿಂದೂಗಳಲ್ಲ” ಎಂದು ಹೇಳಿದ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಸಂಸದರು ವಿರೋಧ ವ್ಯಕ್ತಪಡಿಸಿದರು. ರಾಹುಲ್ ಕ್ಷಮೆಯಾಚಿಸುವಂತೆ ಒತ್ತಾಯಿಸುತ್ತಿದ್ದಂತೆ ಲೋಕಸಭೆಯಲ್ಲಿ ಕೋಲಾಹಲ ಉಂಟಾಯಿತು.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶಿವ, ಯೇಸು ಮತ್ತು ಗುರುನಾನಕ್ ಮುಂತಾದವರ ಭಾವಚಿತ್ರಗಳನ್ನು ತೋರಿಸಿ ಮಾತನಾಡಿದರು. ಸದನದ ನಿಯಮಗಳ ಪ್ರಕಾರ ಯಾವುದೇ ಧಾರ್ಮಿಕ ದೇವರ ಚಿತ್ರಗಳನ್ನು ತೋರಿಸಬಾರದು ಎಂದು ಬಿಜೆಪಿ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ರಾಹುಲ್ ಗಾಂಧಿ, “ಪ್ರಧಾನಿ ಮೋದಿ ಅವರು ಶಿವನೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ನಾವೆಲ್ಲರೂ ಹುಟ್ಟುತ್ತೇವೆ ಮತ್ತು ಸಾಯುತ್ತೇವೆ. ಆದರೆ ಪ್ರಧಾನಿ ಮೋದಿ ಜೈವಿಕವಾಗಿ ಹುಟ್ಟಿದವರಲ್ಲ. ಪ್ರಧಾನಿ ಮೋದಿ ಇಡೀ ಹಿಂದೂ ಧರ್ಮದ ಪ್ರತಿನಿಧಿಯಲ್ಲ. ಒಂದು ನಿರ್ದಿಷ್ಟ ಧರ್ಮ ಮಾತ್ರವಲ್ಲ, ನಮ್ಮಲ್ಲಿರುವ ಎಲ್ಲಾ ಧರ್ಮಗಳು ಧೈರ್ಯ ಮತ್ತು ಅಹಿಂಸೆಯ ಬಗ್ಗೆ ಮಾತನಾಡುತ್ತವೆ.
ಬಿಜೆಪಿಯ ಹಿಂದೂಗಳು ಹಿಂಸಾತ್ಮಕರು; ನಿಜವಾದ ಹಿಂದೂಗಳಲ್ಲ. ಹಿಂದೂ ಧರ್ಮವು ಭಯ, ದ್ವೇಷ ಮತ್ತು ಸುಳ್ಳಿನ ಧರ್ಮವಲ್ಲ. ಬಿಜೆಪಿಯವರು ದಿನದ 24 ಗಂಟೆಯೂ ಹಿಂಸಾಚಾರ ಮತ್ತು ದ್ವೇಷದ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂದೂ ಧರ್ಮವು ಅಹಿಂಸೆಯನ್ನು ಕಲಿಸುತ್ತದೆ; ದ್ವೇಷವನಲ್ಲ” ಎಂದು ಮಾತನಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ, “ರಾಹುಲ್ ಭಾಷಣ ಎಲ್ಲಾ ಹಿಂದೂಗಳ ಮೇಲಿನ ದಾಳಿಯಾಗಿದೆ. ರಾಹುಲ್ ಹಿಂದೂಗಳನ್ನು ಹಿಂಸಾತ್ಮಕ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ” ಎಂದು ಖಂಡಿಸಿದರು. ಲೋಕಸಭೆಯಲ್ಲಿ ಮಾತನಾಡುವಾಗ ಪ್ರಧಾನಿ ಮೋದಿಯವರು ಅಡ್ಡಿಪಡಿಸಿ ಮಾತನಾಡಿದ್ದು ಇದೇ ಮೊದಲು ಎಂಬುದು ಗಮಾರ್ಹ.
ಪ್ರಧಾನಿಯ ನಂತರ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ದೇಶದ ಕೋಟ್ಯಾಂತರ ಜನರು ತಮ್ಮನ್ನು ತಾವು ಹಿಂದೂ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಾರೆ. ರಾಹುಲ್ ಅವರ ಭಾಷಣಕ್ಕೆ ಈ ಸದನದಲ್ಲಿ ಮಾತ್ರವಲ್ಲ ಇಡೀ ರಾಷ್ಟ್ರದ ಕ್ಷಮೆಯಾಚಿಸಬೇಕು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಡೀ ದೇಶವನ್ನೇ ಬಂಧಿಸಿದವರು ಸುರಕ್ಷತೆಯ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ.
ಕಾಂಗ್ರೆಸ್ ಆಳ್ವಿಕೆಯಲ್ಲಿ ದೆಹಲಿಯಲ್ಲಿ ಸಾವಿರಾರು ಸಿಖ್ಖರನ್ನು ಕಗ್ಗೊಲೆ ಮಾಡಲಾಯಿತು. ಸದನವನ್ನು ಈ ರೀತಿ ನಡೆಸುವಂತಿಲ್ಲ, ರಾಹುಲ್‌ಗೆ ನಿಯಮ ಗೊತ್ತಿಲ್ಲದಿದ್ದರೆ ನಿಯಮದ ಬಗ್ಗೆ ಪಾಠ ಹೇಳಿ. ಭಾವಚಿತ್ರ ತೋರಿಸಬೇಡಿ ಎಂದು ಹೇಳಿದರೂ ಮತ್ತೆ ಮತ್ತೆ ಈ ರೀತಿ ಮಾಡುವುದನ್ನು ಒಪ್ಪುವುದಿಲ್ಲ” ಎಂದರು.
ಆಡಳಿತ ಪಕ್ಷದ ಸಂಸದರು ಭಾರತೀಯ ಸಂವಿಧಾನದವನ್ನು ಎತ್ತಿಹಿಡಿದು ರಾಹುಲ್ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು. ಆ ಸಮಯದಲ್ಲಿ ಶಿವನ ಚಿತ್ರವನ್ನು ಮತ್ತೊಮ್ಮೆ ತೋರಿಸಿದ ರಾಹುಲ್, ಅಯೋಧ್ಯೆ ವ್ಯಾಪ್ತಿಯ ಕ್ಷೇತ್ರವನ್ನು ಗೆದ್ದ ಸಮಾಜವಾದಿ ಪಕ್ಷದ ಸಂಸದರನ್ನು ಅಭಿನಂದಿಸಿ, “ರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲೇ ಬಿಜೆಪಿಗೆ ತಕ್ಕ ಪಾಠ ಕಲಿಸಲಾಗಿದೆ” ಎಂದರು.
ರಾಹುಲ್ ಭಾಷಣದ ವೇಳೆ ಮಧ್ಯಂತರದಲ್ಲಿ ಮೈಕ್ ಸ್ವಿಚ್ ಆಫ್ ಆಗುತ್ತಿದ್ದಂತೆ, “ಮೈಕ್ ನಿಯಂತ್ರಣ ಯಾರ ಬಳಿ ಇದೆ? ಅಯೋಧ್ಯೆ ಹೆಸರು ಹೇಳಿದ ತಕ್ಷಣ ನನ್ನ ಮೈಕ್ ಸ್ವಿಚ್ ಆಫ್ ಮಾಡಲಾಗುತ್ತದೆ” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಭಾಧ್ಯಕ್ಷರು, “ನೀವು ಮಾತನಾಡಲು ಎದ್ದು ನಿಂತಾಗ ನಿಮ್ಮ ಮೈಕ್ ಎಂದಿಗೂ ಆಫ್ ಆಗುವುದಿಲ್ಲ. ಹಳೆಯ ಸಂಸತ್ತಿನಲ್ಲೂ ಸರೀ, ಹೊಸ ಸಂಸತ್ತಿನಲ್ಲೂ ಸರೀ ಇದೇ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿರುತ್ತೇವೆ” ಎಂದರು.
ಮುಂದುವರಿದು ಮಾತನಾಡಿದ ರಾಹುಲ್ ಗಾಂಧಿ, “ಅಯೋಧ್ಯೆ ಕ್ಷೇತ್ರದಿಂದ ಸ್ಪರ್ಧಿಸಲು ಮೋದಿ ಎರಡು ಬಾರಿ ಪ್ರಯತ್ನಿಸಿದ್ದರು. ಆದರೆ, ‘ಅಯೋಧ್ಯೆಯಲ್ಲಿ ಸ್ಪರ್ಧಿಸಬೇಡಿ, ಜನ ಸೋಲಿಸುತ್ತಾರೆ’ ಎಂದು ವಿಶ್ಲೇಷಕರು ಎಚ್ಚರಿಸಿದರು. ಪ್ರಧಾನಿ ಮೋದಿ ಅವರು ಬಿಜೆಪಿ ಸಂಸದರನ್ನು ಹೆದರಿಸುವ ರೀತಿಯಲ್ಲಿ ಇದ್ದಾರೆ.
ರಾಮಮಂದಿರ ಉದ್ಘಾಟನೆಯಾದಾಗ ಅಂಬಾನಿ ಮತ್ತು ಅದಾನಿ ಮಾತ್ರ ಅಲ್ಲಿದ್ದರು; ಸಣ್ಣ ವ್ಯಾಪಾರಿಗಳನ್ನು ಬೀದಿಗೆ ಎಸೆದರು. ಅಯೋಧ್ಯೆ ಜನರ ಭೂಮಿಯನ್ನು ಕಸಿದುಕೊಂಡರು; ಮನೆಗಳನ್ನು ಕೆಡವಲಾಯಿತು. ದೇವಸ್ಥಾನದ ಉದ್ಘಾಟನಾ ಸಮಾರಂಭಕ್ಕೆ ಸ್ಥಳೀಯರು ಯಾರುಕೂಡ ಬಂದಿರಲಿಲ್ಲ. ಹಾಗಾಗಿಯೇ ಅಯೋಧ್ಯೆಯ ಜನತೆ ಬಿಜೆಪಿಗೆ ಉತ್ತಮ ತೀರ್ಪು ನೀಡಿದ್ದಾರೆ” ಎಂದರು.
ಆಗ ಮತ್ತೊಮ್ಮೆ ಎದ್ದು ನಿಂತ ಪ್ರಧಾನಿ ಮೋದಿ, “ಸಂವಿಧಾನ ಏನು ಹೇಳುತ್ತದೋ ಅದನ್ನು ಪಾಲಿಸುತ್ತೇನೆ” ಎಂದರು. “ವಿರೋಧ ಪಕ್ಷದ ನಾಯಕನನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದನ್ನು ಪ್ರಜಾಪ್ರಭುತ್ವ ಮತ್ತು ಸಂವಿಧಾನ ನನಗೆ ಕಲಿಸಿದೆ. ರಾಹುಲ್‌ಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಕಲಿಸಬೇಕು” ಎಂದರು.
ಮತ್ತೇ ಎದ್ದು ನಿಂತು ಮಾತನಾಡಿದ ರಾಹುಲ್ ಗಾಂಧಿ, “ನೀಟ್ ಪರೀಕ್ಷೆ ಶ್ರೀಮಂತರ ಆಯ್ಕೆಯಾಗಿದೆ. ನೀಟ್ ಪರೀಕ್ಷೆಯ ಮೂಲಕ ವೈದ್ಯಕೀಯ ಶಿಕ್ಷಣ ವ್ಯಾಪಾರವಾಗಿದೆ. ನೀವು ಎಲ್ಲಾ ವೃತ್ತಿಪರ ಪರೀಕ್ಷೆಗಳನ್ನು ವಾಣಿಜ್ಯ ಮಾದರಿ ಪರೀಕ್ಷೆಗಳನ್ನಾಗಿ ಮಾಡಿದ್ದೀರಿ.
7 ವರ್ಷಗಳಲ್ಲಿ 70 ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಕಾಂಗ್ರೆಸ್‌ಗೆ ನಿಮ್ಮನ್ನು ಕಂಡು ಹೆದರಿಕೆಯಿಲ್ಲ. ಆದರೆ ನೀವು ಕಾಂಗ್ರೆಸ್‌ಗೆ ಹೆದರುತ್ತಿದ್ದೀರಿ. ನೀಟ್ ಪರೀಕ್ಷೆಯಲ್ಲಿ ಒಬ್ಬರು ‘ಟಾಪರ್’ ಆಗಬಹುದು. ಆದರೆ, ಅವರಲ್ಲಿ ಹಣವಿಲ್ಲದಿದ್ದರೆ ವೈದ್ಯಕೀಯ ಶಿಕ್ಷಣ ಓದಲು ಸಾಧ್ಯವಿಲ್ಲ.
ಇದನ್ನು ಶ್ರೀಮಂತ ಮಕ್ಕಳಿಗಾಗಿ ತರಲಾಗಿದೆ. ಈ ಪರೀಕ್ಷೆಯ ಮೂಲಕ ನೀವು ಸಾವಿರಾರು ಕೋಟಿ ಗಳಿಸಿದ್ದೀರಿ. ನೀಟ್ ಪರೀಕ್ಷೆಯ ಬಗ್ಗೆ ರಾಷ್ಟ್ರಪತಿಗಳ ಭಾಷಣದಲ್ಲಿ ಒಂದೇ ಒಂದು ಮಾತು ಇರಲಿಲ್ಲ. ನೀಟ್ ಬಗ್ಗೆ ಒಂದು ದಿನದ ಚರ್ಚೆ ನಡೆಯಬೇಕು.
ನೀಟ್ ಪರೀಕ್ಷೆಗೆ ವಿದ್ಯಾರ್ಥಿಗಳು ಇಡೀ ವರ್ಷ ತಯಾರಿ ನಡೆಸುತ್ತಾರೆ. ವಿದ್ಯಾರ್ಥಿಗಳಿಗೆ, ಕುಟುಂಬಗಳು ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಅಗತ್ಯ ಬೆಂಬಲವನ್ನು ನೀಡುತ್ತವೆ. ಆದರೆ ಇಂದು ನೀಟ್ ಪರೀಕ್ಷೆಯನ್ನೇ ನಂಬದ ವಾತಾವರಣ ನಿರ್ಮಾಣವಾಗಿದೆ.
ಈ ಪರೀಕ್ಷೆಯನ್ನು ಶ್ರೀಮಂತ ವಿದ್ಯಾರ್ಥಿಗಳಿಗಾಗಿಯೇ ಸಿದ್ಧಪಡಿಸಲಾಗಿದೆ. ನಾನು ವಿರೋಧ ಪಕ್ಷದ ನಾಯಕನಾದ ನಂತರ ನನಗೆ ಹಿಂದೆಂದೂ ಅನಿಸದ ಸಂಗತಿಯೊಂದು ಅರಿವಾಯಿತು. ಕಾಂಗ್ರೆಸ್ ಪಕ್ಷವನ್ನು ಮಾತ್ರವಲ್ಲ, ನಾನು ಇಲ್ಲಿರುವ ಪ್ರತಿ ವಿರೋಧ ಪಕ್ಷಗಳನ್ನೂ ಪ್ರತಿನಿಧಿಸುತ್ತೇನೆ. ಪ್ರತಿಪಕ್ಷಗಳ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವನ್ನು ನಿಯೋಜಿಸಿದಾಗಲೂ ಅವರನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ.
ನೀವು ಸಭಾಧ್ಯಕ್ಷರ ಆಸನದಲ್ಲಿ ಕುಳಿತಾಗ ಪ್ರಧಾನಿ ಮತ್ತು ನಾನು ಕೈಕುಲುಕಿದೆವು. ನಾನು ಕೈಕುಲುಕಿದಾಗ ನೀವು ಗಂಭೀರವಾಗಿ ಕುಳಿತು ಕೈಕುಲುಕಿದ್ದೀರಿ, ಆದರೆ ಪ್ರಧಾನಿ ಕೈಕುಲುಕಿದಾಗ ನೀವು ನಮಸ್ಕರಿಸಿ ಕೈಕುಲುಕ್ಕುತ್ತೀರಿ. ಸಭಾಧ್ಯಕ್ಷರು ಯಾರಿಗೂ ತಲೆಬಾಗಬಾರದು. ಈ ಸದನದಲ್ಲಿ ಸ್ಪೀಕರ್‌ಗಿಂತ ದೊಡ್ಡವರು ಯಾರೂ ಇಲ್ಲ” ಎಂದು ಮಾತನಾಡಿದರು.