ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ರೈತ Archives » Dynamic Leader
November 23, 2024
Home Posts tagged ರೈತ
ರಾಜಕೀಯ

ಕರ್ನಾಟಕ ಬ್ಯಾಂಕ್ ಸೇರಿದಂತೆ ಕೆಲ ಖಾಸಗಿ ಬ್ಯಾಂಕ್‌ಗಳಲ್ಲಿ ಸುಸ್ತಿದಾರ ರೈತರು/ಬೆಳೆಗಾರರ ವಿಚಾರದಲ್ಲಿ ಬ್ಯಾಂಕ್‌ಗಳು ಮಾನವೀಯತೆಯಿಂದ ವರ್ತಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಖಾಸಗಿ ಬ್ಯಾಂಕ್‌ಗಳ ವಸೂಲಾತಿ ಕಿರುಕುಳದ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಇದು ರೈತರ ಆತ್ಮಹತ್ಯೆಯಂತಹ ಘಟನೆಗೆ ಕಾರಣವಾಗುತ್ತದೆ. ಖಾಸಗಿ ಬ್ಯಾಂಕುಗಳು ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಖಾಸಗಿ ಬ್ಯಾಂಕ್‌ಗಳಲ್ಲಿ ಸುಸ್ತಿದಾರ ರೈತರು/ಬೆಳೆಗಾರರು ಸಾಲ ಮರುಪಾವತಿಸಲು OTS ಅವಕಾಶವಿದೆ‌. RBIನ ಕೂಲಿಂಗ್ ಆಫ್ ನಿಯಮದ ಪ್ರಕಾರ ಕಂತುಗಳ ರೂಪದಲ್ಲಿ ಸಾಲ ಮರುಪಾವತಿಸಲು 12 ತಿಂಗಳ ಕಾಲಾವಕಾಶವಿದೆ. ಆದರೆ ಕೆಲ ಖಾಸಗಿ ಬ್ಯಾಂಕುಗಳು ಸಮಯಾವಕಾಶ ಕೊಡದೆ ತಕ್ಷಣವೇ ಸಾಲ ಮರುಪಾವತಿಸಲು ಒತ್ತಡ ಹೇರುವುದು ಸರಿಯಲ್ಲ.

ಬ್ಯಾಂಕುಗಳ ಕಿರುಕುಳದಿಂದ ರೈತ/ಬೆಳೆಗಾರ ಆತ್ಮಹತ್ಯೆಗೆ ಶರಣಾದರೆ ಅದರ ಕಳಂಕವನ್ನು ಸರ್ಕಾರ ಹೊರಬೇಕು. ಸರ್ಫೇಸಿ ಕಾಯ್ದೆಯನ್ನೇ ಅಸ್ತ್ರವಾಗಿಸಿಕೊಂಡು ಖಾಸಗಿ ಬ್ಯಾಂಕ್‌ಗಳು ಬೆಳೆಗಾರರ ಜಮೀನನ್ನು ಹರಾಜಿಗೆ ಇಡುವುದು ಸೂಕ್ತವಲ್ಲ. ಯಾರು ಉದ್ದೇಶಪೂರ್ವಕ ಸುಸ್ತಿದಾರರಲ್ಲವೋ ಅಂತಹವರಿಗೆ ಸಾಲ ಮರು ಪಾವತಿಗೆ ಖಾಸಗಿ ಬ್ಯಾಂಕುಗಳು ಕಾಲಾವಕಾಶ ನೀಡಲಿ

ಅತಿವೃಷ್ಟಿಯಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಳೆಗಾರರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆನಷ್ಟದ ಪರಿಣಾಮ ಕೆಲ ಬೆಳೆಗಾರರಿಗೆ ಬ್ಯಾಂಕುಗಳ ಸಾಲ ಮರುಪಾವತಿಸಲು ಸಾಧ್ಯವಾಗಿರುವುದಿಲ್ಲ. ಸಾಲ ವಸೂಲಾತಿ ಮಾಡುವಾಗ ಖಾಸಗಿ ಬ್ಯಾಂಕುಗಳು ಈ ಅಂಶವನ್ನು ಪರಿಗಣಿಸಬೇಕು. ಖಾಸಗಿ ಬ್ಯಾಂಕ್ ಆಡಳಿತ ಮಂಡಳಿಗಳು ಈ ಬಗ್ಗೆ ಪರಾಮರ್ಶೆ ಮಾಡಬೇಕು ಎಂದು ಹೇಳಿದ್ದಾರೆ. ‌

ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದಿದ್ದ ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ 2020ರಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಈ ಹೋರಾಟ ಭಾರತವನ್ನು ಸ್ಥಬ್ದಗೊಳಿಸಿತ್ತು. ಅದರಲ್ಲೂ ದೆಹಲಿಯ ಗಡಿಗೆ ಹೊಂದಿಕೊಂಡಿರುವ ಸಿಂಘು, ಟಿಕ್ರಿ ಮತ್ತು ಗಾಜಿಪುರ ಪ್ರದೇಶಗಳಲ್ಲಿ ಪಂಜಾಬ್, ಹರಿಯಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳ ರೈತರು ಕೊರೊನಾ ವೈರಸ್ ಹರಡುವಿಕೆಯ ನಡುವೆಯೂ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.

ಟ್ರಾಕ್ಟರ್ ರ‍್ಯಾಲಿ, ಚಕ್ಕಾ ಜಾಮ್ ಮತ್ತು ರಸ್ತೆ ತಡೆಗಳಂತಹ ಹಲವಾರು ಹಂತಗಳ ಪ್ರತಿಭಟನೆಗಳನ್ನು ನಡೆಸಿದರೂ ಕೇಂದ್ರ ಸರ್ಕಾರ ರೈತರ ನ್ಯಾಯಸಮ್ಮತ ಬೇಡಿಕೆಗಳನ್ನು ನಿರ್ಲಕ್ಷಿಸಿ ವಂಚಿಸುತ್ತಾ ಬಂದಿತು. ಮತ್ತು ಬಿಜೆಪಿ ಬೆಂಬಲಿಗರು ಅವರ ವಿರುದ್ಧ ಮಾನಹಾನಿ ಹರಡಲು ಹಲವು ಪ್ರಯತ್ನಗಳನ್ನು ಮಾಡಿದರು. ಸರಣಿ ಪ್ರತಿಭಟನೆಗಳ ಪರಿಣಾಮದಿಂದ ಮಣಿದ ಕೇಂದ್ರ ಸರ್ಕಾರ ಅಂತಿಮವಾಗಿ ರೈತ ವಿರೋಧಿ ಕಾಯ್ದೆಯನ್ನು ಹಿಂತೆಗೆದುಕೊಂಡಿತು.

ಅದೇ ಸಮಯದಲ್ಲಿ, ಮೋದಿಯವರ ಆಡಳಿತ ದೌರ್ಜನ್ಯವನ್ನು ಟೀಕಿಸಿದ ಅನೇಕ ಪತ್ರಕರ್ತರನ್ನು ಬಿಜೆಪಿ ಸರ್ಕಾರ ಬೆದರಿಸುತ್ತಲೇ ಬಂದಿತು. ಮತ್ತು ಕೇಂದ್ರ ಸರ್ಕಾರದಿಂದ ಕೆಲವು ಪತ್ರಕರ್ತರನ್ನು ಜೈಲಿಗಟ್ಟುವ ಕ್ರೌರ್ಯವೂ ನಡೆಯಿತು.

ಈ ಹಿನ್ನಲೆಯಲ್ಲಿ ಟ್ವಿಟರ್‌ನ ಮಾಜಿ ಸಿಇಒ ಜಾಕ್ ಡಾರ್ಸಿ ಅವರು, ‘ರೈತರ ಪ್ರತಿಭಟನೆಯ ಸುದ್ದಿ ನೀಡುವ ಖಾತೆಗಳನ್ನು ಮತ್ತು ಸರ್ಕಾರವನ್ನು ಟೀಕಿಸುವ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಭಾರತ ಸರ್ಕಾರ ಕೇಳಿತು’ ಎಂಬ ಆಘಾತಕಾರಿ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘2020-21ರ ರೈತರ ಪ್ರತಿಭಟನೆಯ ಖಾತೆಗಳನ್ನು ನಿರ್ಬಂಧಿಸಲು, ಭಾರತ ಸರ್ಕಾರದಿಂದ ಅನೇಕ ವಿನಂತಿಗಳು ಬಂದವು ಮತ್ತು ಸರ್ಕಾರವನ್ನು ಟೀಕಿಸುವ ಪತ್ರಕರ್ತರ ಖಾತೆಗಳನ್ನು ನಿರ್ಬಂಧಿಸುವಂತೆಯೂ ಭಾರತ ಸರ್ಕಾರ ಕೇಳಿತು’ ಎಂದು ಹೇಳಿದ್ದಾರೆ.

“ಅಲ್ಲದೆ, ಬೃಹತ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಟ್ವಿಟರ್ ಕಂಪನಿಯನ್ನು ಮುಚ್ಚುವುದಾಗಿ ಭಾರತ ಸರ್ಕಾರ ಬೆದರಿಕೆ ಹಾಕಿತ್ತು ಮತ್ತು ಖಾತೆಗಳನ್ನು ಬ್ಲಾಕ್ ಮಾಡದಿದ್ದರೆ ಟ್ವಿಟರ್ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ನಡೆಸುವುದಾಗಿ ಅವರು ಹೇಳಿದರು . ಅವರು ಹೇಳಿದಂತೆ ದಾಳಿ ನಡೆಸಲಾಗಿತ್ತು. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇದು ನಡೆಯುತ್ತಿದೆ” ಎಂದು ನೋವಿನಿಂದ ಹೇಳಿದ್ದಾರೆ. ಅವರ ಈ ಹೇಳಿಕೆ ಅಘಾತಕಾರಿಯಾಗಿದೆ.

ಬೆಂಗಳೂರು ರಾಜ್ಯ

ಬೆಂಗಳೂರು: ಕಳೆದ ಎಂಟು ತಿಂಗಳ ಅವಧಿಯಲ್ಲಿ ತೊಗರಿ ಬೇಳೆ ಬೆಳೆಯುವ 61 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಶೋಚನಿಯ ಸುದ್ದಿ ಹೊರಬಂದಿದೆ. ಜಿಲ್ಲಾ ಅಪರಾಧ ದಾಖಲೆಗಳ ಬ್ಯುರೊ ಬಿಡುಗಡೆ ಮಾಡಿರುವ ಈ ಮಾಹಿತಿಯು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ. ರೈತರ ಬದುಕು, ಕೃಷಿಯ ಬಗ್ಗೆ ಉದಾಸೀನ ತೋರುವ ರಾಜ್ಯ ಬಿಜೆಪಿ ಸರ್ಕಾರದ ಬಳಿ ಈ ಬಗ್ಗೆ ಏನಿದೆ ಉತ್ತರ? ಎಂದು ಜೆಡಿಎಸ್ ಪಕ್ಷವು ಟ್ವಿಟ್ಟರ್ ಮೂಲಕ ಬಿಜೆಪಿ ಸರ್ಕಾರವನ್ನು ಖಾರವಾಗಿ ಪ್ರಶ್ನೆ ಮಾಡಿದೆ.

ಅಕಾಲಿಕ‌ ಮಳೆ, ನೀರಿನ‌ ಕೊರತೆ, ಸರಿಯಾದ ಸಮಯದಲ್ಲಿ ಸಮರ್ಪಕವಾಗಿ ಸಿಗದ ಗೊಬ್ಬರ, ವಿವಿಧ ಕೀಟ-ರೋಗಗಳ ಬಾಧೆ, ಬೆಂಬಲ ಬೆಲೆಯ ಅಭಾವ ಇಂತಹ ಹಲವು ಗಂಭೀರ ಸಮಸ್ಯೆಗಳಿಂದ ತೊಗರಿ ನಾಡಿನ ಕೃಷಿಕರು ತತ್ತರಿಸಿಹೋಗಿದ್ದಾರೆ. ಇಷ್ಟು ವ್ಯಾಪಕ ಸಮಸ್ಯೆಗಳ ಸುಳಿಗೆ ಸಿಕ್ಕ ರೈತನಿಗೆ, ಬೆಂಗಾವಲಾಗಿ ನಿಲ್ಲಬೇಕಿದ್ದ ರಾಜ್ಯ ಸರ್ಕಾರ ಗಾಢ ನಿದ್ದೆಯಲ್ಲಿದೆ.

ಕೇಂದ್ರ-ರಾಜ್ಯದ ಡಬಲ್ ಎಂಜಿನ್ ಬಿಜೆಪಿ ಸರ್ಕಾರಗಳು ಈ ಮಟ್ಟದ ನಿರ್ಲಕ್ಷ್ಯ ತೋರಿರುವುದು ಅಕ್ಷಮ್ಯವಷ್ಟೇ ಅಲ್ಲ, ಅತ್ಯಂತ ಅಮಾನವೀಯ ಕೂಡ. ಬೆಳೆ ನಷ್ಟದ ಬಗ್ಗೆ ಅಗತ್ಯ ಮತ್ತು ಸಮರ್ಪಕ ಸಮೀಕ್ಷೆ ಮಾಡಿ, ಪರಿಹಾರ ನೀಡಬೇಕಿರುವ ಜವಾಬ್ದಾರಿ ಸರ್ಕಾರದ್ದು. ರೈತನ ಆತ್ಮಹತ್ಯೆ ಸುದ್ದಿ ಆತಂಕಹುಟ್ಟುಹಾಕದಿದ್ದರೆ, ಅಧಿಕಾರದಲ್ಲಿದ್ದು ಏನು ಪ್ರಯೋಜನ?

ದುಡಿಯುವ ರೈತಾಪಿ ವರ್ಗಕ್ಕೆ ಕನಿಷ್ಟ ಸ್ಪಂದನೆ ನೀಡುವ ಮಾನವೀಯತೆ ಕೂಡ ಇಲ್ಲದಷ್ಟು ದಪ್ಪ ಚರ್ಮ ಸರ್ಕಾರಕ್ಕೆ ಬರಬಾರದು. ಈಗಲಾದರೂ, ಅನ್ನದಾತನ ಸಂಕಷ್ಟಕ್ಕೆ ರಚನಾತ್ಮಕವಾದ ಪರಿಹಾರ ಕೊಡಿಸಿ. ಇಲ್ಲದಿದ್ದರೆ, ಎಷ್ಟು ಉಗಿದರು ಒರೆಸಿಕೊಳ್ಳುವ ಭಂಡ ಸರ್ಕಾರ ಎಂದು ಜನತೆಯ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಎಚ್ಚರವನ್ನು ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಪಕ್ಷವು ಕೊಟ್ಟಿರುತ್ತದೆ.