ತೊಗರಿ ಬೇಳೆ ಬೆಳೆಯುವ 61 ರೈತರು ಆತ್ಮಹತ್ಯೆ! ಜೆಡಿಎಸ್ ಪಕ್ಷ ಆರೋಪ.!! » Dynamic Leader
December 3, 2024
ಬೆಂಗಳೂರು ರಾಜ್ಯ

ತೊಗರಿ ಬೇಳೆ ಬೆಳೆಯುವ 61 ರೈತರು ಆತ್ಮಹತ್ಯೆ! ಜೆಡಿಎಸ್ ಪಕ್ಷ ಆರೋಪ.!!

ಬೆಂಗಳೂರು: ಕಳೆದ ಎಂಟು ತಿಂಗಳ ಅವಧಿಯಲ್ಲಿ ತೊಗರಿ ಬೇಳೆ ಬೆಳೆಯುವ 61 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಶೋಚನಿಯ ಸುದ್ದಿ ಹೊರಬಂದಿದೆ. ಜಿಲ್ಲಾ ಅಪರಾಧ ದಾಖಲೆಗಳ ಬ್ಯುರೊ ಬಿಡುಗಡೆ ಮಾಡಿರುವ ಈ ಮಾಹಿತಿಯು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ. ರೈತರ ಬದುಕು, ಕೃಷಿಯ ಬಗ್ಗೆ ಉದಾಸೀನ ತೋರುವ ರಾಜ್ಯ ಬಿಜೆಪಿ ಸರ್ಕಾರದ ಬಳಿ ಈ ಬಗ್ಗೆ ಏನಿದೆ ಉತ್ತರ? ಎಂದು ಜೆಡಿಎಸ್ ಪಕ್ಷವು ಟ್ವಿಟ್ಟರ್ ಮೂಲಕ ಬಿಜೆಪಿ ಸರ್ಕಾರವನ್ನು ಖಾರವಾಗಿ ಪ್ರಶ್ನೆ ಮಾಡಿದೆ.

ಅಕಾಲಿಕ‌ ಮಳೆ, ನೀರಿನ‌ ಕೊರತೆ, ಸರಿಯಾದ ಸಮಯದಲ್ಲಿ ಸಮರ್ಪಕವಾಗಿ ಸಿಗದ ಗೊಬ್ಬರ, ವಿವಿಧ ಕೀಟ-ರೋಗಗಳ ಬಾಧೆ, ಬೆಂಬಲ ಬೆಲೆಯ ಅಭಾವ ಇಂತಹ ಹಲವು ಗಂಭೀರ ಸಮಸ್ಯೆಗಳಿಂದ ತೊಗರಿ ನಾಡಿನ ಕೃಷಿಕರು ತತ್ತರಿಸಿಹೋಗಿದ್ದಾರೆ. ಇಷ್ಟು ವ್ಯಾಪಕ ಸಮಸ್ಯೆಗಳ ಸುಳಿಗೆ ಸಿಕ್ಕ ರೈತನಿಗೆ, ಬೆಂಗಾವಲಾಗಿ ನಿಲ್ಲಬೇಕಿದ್ದ ರಾಜ್ಯ ಸರ್ಕಾರ ಗಾಢ ನಿದ್ದೆಯಲ್ಲಿದೆ.

ಕೇಂದ್ರ-ರಾಜ್ಯದ ಡಬಲ್ ಎಂಜಿನ್ ಬಿಜೆಪಿ ಸರ್ಕಾರಗಳು ಈ ಮಟ್ಟದ ನಿರ್ಲಕ್ಷ್ಯ ತೋರಿರುವುದು ಅಕ್ಷಮ್ಯವಷ್ಟೇ ಅಲ್ಲ, ಅತ್ಯಂತ ಅಮಾನವೀಯ ಕೂಡ. ಬೆಳೆ ನಷ್ಟದ ಬಗ್ಗೆ ಅಗತ್ಯ ಮತ್ತು ಸಮರ್ಪಕ ಸಮೀಕ್ಷೆ ಮಾಡಿ, ಪರಿಹಾರ ನೀಡಬೇಕಿರುವ ಜವಾಬ್ದಾರಿ ಸರ್ಕಾರದ್ದು. ರೈತನ ಆತ್ಮಹತ್ಯೆ ಸುದ್ದಿ ಆತಂಕಹುಟ್ಟುಹಾಕದಿದ್ದರೆ, ಅಧಿಕಾರದಲ್ಲಿದ್ದು ಏನು ಪ್ರಯೋಜನ?

ದುಡಿಯುವ ರೈತಾಪಿ ವರ್ಗಕ್ಕೆ ಕನಿಷ್ಟ ಸ್ಪಂದನೆ ನೀಡುವ ಮಾನವೀಯತೆ ಕೂಡ ಇಲ್ಲದಷ್ಟು ದಪ್ಪ ಚರ್ಮ ಸರ್ಕಾರಕ್ಕೆ ಬರಬಾರದು. ಈಗಲಾದರೂ, ಅನ್ನದಾತನ ಸಂಕಷ್ಟಕ್ಕೆ ರಚನಾತ್ಮಕವಾದ ಪರಿಹಾರ ಕೊಡಿಸಿ. ಇಲ್ಲದಿದ್ದರೆ, ಎಷ್ಟು ಉಗಿದರು ಒರೆಸಿಕೊಳ್ಳುವ ಭಂಡ ಸರ್ಕಾರ ಎಂದು ಜನತೆಯ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಎಚ್ಚರವನ್ನು ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಪಕ್ಷವು ಕೊಟ್ಟಿರುತ್ತದೆ.

Related Posts