ನಾಗಪಟ್ಟಿಣಂ: ನಾಗಪಟ್ಟಿಣಂ ಜಿಲ್ಲೆ ವೇಲಾಂಕಣ್ಣಿಯಲ್ಲಿ ವಿಶ್ವಪ್ರಸಿದ್ದ ಸಂತ ಮೇರಿ ಮಾತೆಯ ದೇವಾಲಯವಿದೆ. ಇದು ಪೂರ್ವ ದೇಶಗಳ “ಲೂರ್ದು ನಗರ” ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ದೇವಾಲಯದಲ್ಲಿ ವಾರ್ಷಿಕವಾಗಿ ಆಂಗ್ಲ ಹೊಸ ವರ್ಷಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವರ್ಷಾಚರಣೆಯ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯ ಪ್ರವಾಸಿಗರು ಮತ್ತು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
ಆಂಗ್ಲ ಹೊಸ ವರ್ಷ 2024 ಇಂದು ಮಧ್ಯರಾತ್ರಿ ಪ್ರಾರಂಭವಾಗಲಿದೆ. ಹಾಗಾಗಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ ಸೇರಿದಂತೆ ಇತರೆ ರಾಜ್ಯಗಳು ಹಾಗೂ ಹಲವು ಜಿಲ್ಲೆಗಳಿಂದ ಪ್ರವಾಸಿಗರು ವೇಲಾಂಕಣ್ಣಿ ದೇವಾಲಯಕ್ಕೆ ಆಗಮಿಸಿದ್ದಾರೆ. ನಿನ್ನೆಯಿಂದ ಸತತ 3 ದಿನ ರಜೆ ಇರುವುದರಿಂದ ಸ್ಥಳೀಯ ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
ಇದರಿಂದಾಗಿ ಪ್ರವಾಸಿಗರ ದಂಡು ವೇಲಾಂಕಣ್ಣಿಗೆ ಹರಿದು ಬರುತ್ತಿದೆ. ವೇಲಾಂಕಣ್ಣಿ ದೇವಸ್ಥಾನ, ಮಾತಾಕುಲಂ, ನಡುತ್ತಿಟ್ಟು, ಹಳೆ ವೇಲಾಂಕಣ್ಣಿ, ಬೀಚ್ ರೋಡ್, ವೇಲಾಂಕಣ್ಣಿ ಬೀಚ್ ಹೀಗೆ ಎಲ್ಲೆಡೆ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ.
ಇಂದು ಮಧ್ಯರಾತ್ರಿಯಿಂದ ನಾಳೆ ಬೆಳಗಿನ ಜಾವದವರೆಗೆ ವೇಲಾಂಕಣ್ಣಿ ಚರ್ಚ್ ನಲ್ಲಿ ವಿಶೇಷ ಆಂಗ್ಲ ಹೊಸ ವರ್ಷದ ದಿವ್ಯ ಬಲಿಪೂಜೆಗಳು ನಡೆಯಲಿವೆ. ವರ್ಷಾಚರಣೆಯಲ್ಲಿ ಸಹಸ್ರಾರು ಜನ ಪಾಲ್ಗೊಳ್ಳುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಭದ್ರತೆಯಲ್ಲಿ ತೊಡಗಿದ್ದಾರೆ.