ಡಿ.ಸಿ.ಪ್ರಕಾಶ್ ಸಂಪಾದಕರು
‘ಅದಾನಿ’ ಸಮೂಹದ ಸಿಇಒ ಗೌತಮ್ ಅದಾನಿಯ ನಂತರ, ‘ವೇದಾಂತ’ ಅಧ್ಯಕ್ಷ ಅನಿಲ್ ಅಗರ್ವಾಲ್ ಕೂಡ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ವೇದಾಂತ ರಿಸೋರ್ಸ್ ಕಂಪನಿಯ ನಿಧಿಸಂಗ್ರಹದ ಪ್ರಯತ್ನಗಳು ವಿಫಲವಾದರೆ, ಕಂಪನಿ ಭಾರೀ ಸಂಕಷ್ಟಕ್ಕೆ ಸಿಲುಕಲಿದೆ ಎನ್ನಲಾಗುತ್ತಿದೆ.
ಭಾರತದ ಅತಿದೊಡ್ಡ ಗಣಿ ಕಂಪನಿಯಾದ ವೇದಾಂತ, ಈಗ ಸಾಲದ ಸುಳಿಯಲ್ಲಿ ಸಿಲುಕಿರುವುದು ಬೆಳಕಿಗೆ ಬಂದಿದೆ. ವೇದಾಂತ ರಿಸೋರ್ಸ್ ಕಂಪನಿ ರೂ.1.10 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿದ್ದರೂ, ಮುಂದಿನ ಜನವರಿಯಲ್ಲಿ ಬಾಕಿಯಿರುವ 8,300 ಕೋಟಿ ರೂಪಾಯಿಗಳ ಬಾಂಡ್ ಮೊತ್ತವನ್ನು ಮರುಪಾವತಿ ಮಾಡುವ ಜವಾಬ್ದಾರಿಯಲ್ಲಿದೆ. ಕಳೆದ 11 ತಿಂಗಳಲ್ಲಿ ಅದರ ಬಹುಪಾಲು ಸಾಲವನ್ನು ಕಡಿಮೆ ಮಾಡಿದ್ದರೂ ತೀರಿಸಲು ಇನ್ನೂ ಸಾಕಷ್ಟು ಸಾಲದ ಬಾಧ್ಯತೆಗಳಿವೆ.
S&P ಗ್ಲೋಬಲ್ ರೇಟಿಂಗ್ ಕಂಪನಿ, ವೇದಾಂತಕ್ಕೆ ಸಂಬಂಧಿಸಿದಂತೆ, ಕಳೆದ ತಿಂಗಳು ಬಿಡುಗಡೆ ಮಾಡಿದ ವರದಿಯೂ ಈ ಹೊತ್ತಿನಲ್ಲಿ ಮಹತ್ವದ್ದಾಗಿದೆ. ‘ವೇದಾಂತದ ಸಾಲ ಮರುಪಾವತಿಯ ಸಾಮರ್ಥ್ಯವೆಂಬುದು, ಅದು ಕೈಗೊಳ್ಳುವ ನಿಧಿಸಂಗ್ರಹಣೆಯನ್ನು ಅವಲಂಬಿತವಾಗಿರುತ್ತದೆ. ದಕ್ಷಿಣ ಆಫ್ರಿಕಾದ ಜಿಂಕ್ (ಸತು) ಗಣಿಗಳನ್ನು ಹಿಂದುಸ್ತಾನ್ ಜಿಂಕ್ ಕಂಪೆನಿಗೆ ಮಾರಾಟವನ್ನು ಅದು ಅವಲಂಬಿಸಿರುತ್ತದೆ. ಈ ಒಪ್ಪಂದಗಳು ಸಂಭವಿಸದಿದ್ದರೆ, ವೇದಾಂತ ಕಂಪನಿಗೆ ತೀವ್ರ ತೊಂದರೆಯಾಗಲಿದೆ’ ಎಂದು ಎಚ್ಚರಿಸಿದೆ.
ಈ ಹಿನ್ನಲೆಯಲ್ಲಿ ಭಾರತ ಸರ್ಕಾರದ ಸ್ವಾಮ್ಯದಲ್ಲಿರುವ ಹಿಂದೂಸ್ತಾನ್ ಕಾರ್ಪೊರೇಷನ್, ವೇದಾಂತ ರಿಸೋರ್ಸ್ ಕಂಪನಿಯ ದಕ್ಷಿಣ ಆಫ್ರಿಕಾದ ಗಣಿಗಳನ್ನು ಖರೀದಿಸಲು ನಿರಾಕರಿಸಿದೆ. ಅಗತ್ಯಬಿದ್ದರೆ ನ್ಯಾಯಾಲಯದ ಮೊರೆ ಹೋಗಲು ಸರ್ಕಾರ ಸಿದ್ಧವಾಗಿದೆ. ಹಿಂದೂಸ್ತಾನ್ ಜಿಂಕ್ ಕಂಪನಿಯ 29.5 ರಷ್ಟು ಷೇರುಗಳನ್ನು ಕೇಂದ್ರ ಸರ್ಕಾರ ಹೊಂದಿದೆ. 65 ರಷ್ಟು ಷೇರುಗಳನ್ನು ವೇದಾಂತ ಹೊಂದಿರುವುದು ಗಮನಾರ್ಹ. ವೇದಾಂತದ ಮಾರಾಟ ಪ್ರಯತ್ನಗಳಿಗೆ ಸರ್ಕಾರ ತಡೆ ಮಾಡಿರುವುದರಿಂದ ಕಂಪನಿಗೆ ದೊಡ್ಡ ಹಿನ್ನಡೆಯಾಗಲಿದೆ ಎನ್ನುತ್ತಿದ್ದಾರೆ.