ಅದಾನಿ ವಿಚಾರ ಮುಜುಗರಕ್ಕೆ ಕಾರಣವಾಗುವುದರಿಂದ ಕೇಂದ್ರ ಸರ್ಕಾರ ಚರ್ಚೆಗೆ ಅವಹಾಶ ನೀಡುತ್ತಿಲ್ಲ ಎಂದು ಸಂಸದ ಶಶಿ ತರೂರ್ ಆರೋಪ ಮಾಡಿದ್ದಾರೆ.
ನವದೆಹಲಿ: ಅಮೇರಿಕ ಮೂಲದ ಹಿಂಡೆನ್‌ಬರ್ಗ್ ಮಾರ್ಕೆಟ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಇತ್ತೀಚೆಗೆ ಅದಾನಿ ಕಂಪನಿಗಳ ವಂಚನೆಯ ಆರೋಪಗಳೊಂದಿಗೆ ವರದಿಯನ್ನು ಪ್ರಕಟಿಸಿತು. ಇದು ದೇಶವನ್ನು ಆಘಾತಕ್ಕೆ ತಳ್ಳಿದೆ.
ಈ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಧ್ವನಿ ಎತ್ತುತ್ತಿವೆ. ಇದನ್ನು ಕೇಂದ್ರ ಸರ್ಕಾರ ಒಪ್ಪದ ಕಾರಣ ನಿನ್ನೆಯೂ ಸಂಸತ್ತಿನ ಉಭಯ ಸದನಗಳು ಸತತ 2ನೇ ದಿನವೂ ಕಲಾಪ ನಡೆಸಲು ಸಾಧ್ಯವಾಗದೆ ಸ್ತಬ್ಧಗೊಂಡಿತು.
ಈ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾದ ಸಂಸದ ಶಶಿ ತರೂರ್ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ: ‘ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಸಂಸತ್ತು ವೇದಿಕೆಯಾಗಿದೆ. ಈ ಮೂಲಕ ಸಂಸದರ ಕಳಕಳಿ, ಸಂಸದರು ಯಾವ ವಿಷಯದ ಮೇಲೆ ಗಮನಹರಿಸುತ್ತಿದ್ದಾರೆ ಎಂಬುದನ್ನು ದೇಶದ ಜನತೆ ತಿಳಿಯಬಹುದಾಗಿದೆ.
ಆದರೆ ದುರದೃಷ್ಟವಶಾತ್ ಕೇಂದ್ರ ಸರಕಾರಕ್ಕೆ ಇದರ ಪ್ರಯೋಜನ ಕಾನುತ್ತಿಲ್ಲ. ಅದಕ್ಕಾಗಿಯೇ ಅವರು (ಸರ್ಕಾರದಲ್ಲಿರುವವರು) ಚರ್ಚೆಗಳನ್ನು ತಡೆಯುತ್ತಾರೆ. ಇದರಿಂದಾಗಿ 2 ದಿನಗಳ ಸಂಸತ್ತನ್ನು ಕಳೆದುಕೊಂಡಿದ್ದೇವೆ.
ಅದಾನಿ ಕಂಪೆನಿಯ ವಿಷಯವು ಅತ್ಯಂತ ಮಹತ್ವದ್ದಾಗಿರುವುದರಿಂದ ಮತ್ತು ದೇಶದ ಜನರ ಮೇಲೆ ಪರಿಣಾಮ ಬೀರುವುದರಿಂದ ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಚರ್ಚಿಸಲು ಬಯಸುತ್ತಿವೆ. ಇದು ಸಾಕಷ್ಟು ಪ್ರಾಮುಖ್ಯತೆಯ ವಿಷಯವಾಗಿದ್ದು, ಇದನ್ನು ಚರ್ಚಿಸಲು ಸರ್ಕಾರ ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯ ಮಾಡುತ್ತಿವೆ.