ಚೆನ್ನೈ: ಕರ್ನಾಟಕ ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ಕೊಚ್ಚಿ ಹೋಗಿದ್ದ ನಾಮಕ್ಕಲ್ ಮತ್ತು ಕೃಷ್ಣಗಿರಿ ಜಿಲ್ಲೆಗಳ ಇಬ್ಬರು ಲಾರಿ ಚಾಲಕರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಮೃತರ ಕುಟುಂಬಗಳಿಗೆ 3 ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆ ಆದೇಶಿಸಿದ್ದಾರೆ.
ಈ ಕುರಿತು ತಮಿಳುನಾಡು ಮುಖ್ಯಮಂತ್ರಿ ಸಂತಾಪ ಸೂಚಿಸಿ ಹೊರಡಿಸಿರುವ ಸಂದೇಶದಲ್ಲಿ, “ನಾಮಕ್ಕಲ್ ಜಿಲ್ಲೆಯ ಪುದುಚತ್ರಂ ವೃತ್ತದ ತಾತಯ್ಯಂಗಾರಪಟ್ಟಿ ಗ್ರಾಮದ ಚಿನ್ನನ್ ಮತ್ತು ಕೃಷ್ಣಗಿರಿ ಜಿಲ್ಲೆಯ ಊತ್ತಂಗರೈ ಒಳ ವೃತ್ತದ ಎಂ.ವೆಲ್ಲಾಪಟ್ಟಿ ಗ್ರಾಮದ ಮುರುಗನ್ ಇಬ್ಬರೂ, ಕಳೆದ ಜುಲೈ 16 ರಂದು ಎಲ್‌ಪಿಜಿ ಟ್ಯಾಂಕರ್ ಲಾರಿಯಲ್ಲಿ ಚಾಲಕರಾಗಿ ಹೋಗಿದ್ದಾಗ, ಕರ್ನಾಟಕ ರಾಜ್ಯ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ವೃತ್ತದ ಶಿರೂರು ಪ್ರದೇಶದಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ಕೊಚ್ಚಿ ಹೋಗಿದ್ದರು ಎಂಬ ದುಃಖದ ಸುದ್ದಿಯನ್ನು ಕೇಳಿ ನನಗೆ ಅತೀವ ದುಃಖ ಮತ್ತು ನೋವಾಗಿದೆ” ಎಂದು ಹೇಳಿದ್ದಾರೆ.
ಅಲ್ಲದೆ, ಅಪಘಾತದಲ್ಲಿ ಸಾವನ್ನಪ್ಪಿದ ಟ್ರಕ್ ಚಾಲಕರ ಕುಟುಂಬಗಳಿಗೆ ಮತ್ತು ಅವರ ಸಂಬಂಧಿಕರಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುವದರ ಜೊತೆಗೆ ಮುಖ್ಯಮಂತ್ರಿಗಳ ಸಾಮಾನ್ಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ಮೂರು ಲಕ್ಷ ರೂಪಾಯಿಗಳನ್ನು ನೀಡಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.