ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಸಂಜಯ್ ಸಿಂಗ್ Archives » Dynamic Leader
November 22, 2024
Home Posts tagged ಸಂಜಯ್ ಸಿಂಗ್
ರಾಜಕೀಯ

ನವದೆಹಲಿ: ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಯು 45 ಸಂಶಯಾಸ್ಪದ ಕಂಪನಿಗಳಿಂದ 1,068 ಕೋಟಿ ರೂಪಾಯಿ ದೇಣಿಗೆಯನ್ನು ಪಡೆದಿದ್ದು, ಈ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.

ನಿನ್ನೆ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಮಾಡಿದ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ಜಾಸ್ಮಿನ್ ಶಾ ಅವರು, “ಬಿಜೆಪಿಗೆ 45 ಸಂಶಯಾಸ್ಪದ ಕಂಪನಿಗಳು ರೂ.1,068 ಕೋಟಿಯವರೆಗೆ ದೇಣಿಗೆ ನೀಡಿದೆ. ಅವು ನಷ್ಟದ ಕಂಪನಿಗಳಾಗಿವೆ. ಅಥವಾ ಅವರು ತೆರಿಗೆಗಳನ್ನು ಪಾವತಿಸದವರು ಅಥವಾ ಲಾಭಕ್ಕಿಂತ ಹೆಚ್ಚಾಗಿ ದೇಣಿಗೆ ನೀಡಿದವರಾಗಿದ್ದಾರೆ.

ಏಳು ವರ್ಷಗಳಲ್ಲಿ 33 ಕಂಪನಿಗಳು ಒಟ್ಟು ಒಂದು ಲಕ್ಷ ಕೋಟಿ ರೂಪಾಯಿಯವರೆಗೆ ನಷ್ಟ ಅನುಭವಿಸಿದ ಕಂಪನಿಗಳಾಗಿರುತ್ತವೆ. ಈ ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ 450 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿರುತ್ತವೆ. ಈ ಪೈಕಿ 17 ಕಂಪನಿಗಳು ಶೂನ್ಯ ತೆರಿಗೆ ಅಥವಾ ಋಣಾತ್ಮಕ ತೆರಿಗೆ ಪಾವತಿಸಿದ ಕಂಪನಿಗಳಾಗಿವೆ.

ಇದಲ್ಲದೆ, ಈ ಕಂಪನಿಗಳು ತೆರಿಗೆ ವಿನಾಯಿತಿಗಳನ್ನು ಸಹ ಪಡೆದಿರುತ್ತವೆ. ಅಲ್ಲದೆ, ಆರು ಕಂಪನಿಗಳು ಬಿಜೆಪಿಗೆ 600 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿವೆ. ಆ ಮೊತ್ತವು ಆ ಕಂಪನಿಗಳ ಲಾಭಕ್ಕಿಂತ ಹೆಚ್ಚಿನ ಮೊತ್ತವಾಗಿರುತ್ತದೆ. ಇನ್ನೊಂದು ಕಂಪನಿ ಅವರ ಲಾಭಕ್ಕಿಂತ 93 ಪಟ್ಟು ಹೆಚ್ಚು ನೀಡಿದೆ. ಮೂರು ಕಂಪನಿಗಳು 28 ಕೋಟಿ ದೇಣಿಗೆ ನೀಡಿ ಶೂನ್ಯ ತೆರಿಗೆ ಪಾವತಿಸಿವೆ. ಉದಾಹರಣೆಗೆ, ನಷ್ಟದ ನಡುವೆಯೂ ಅನೇಕ ಕಂಪನಿಗಳು ಉದಾರವಾಗಿ ಬಿಜೆಪಿಗೆ ದೇಣಿಗೆ ನೀಡಿದವು. ಅದರಲ್ಲಿ ಪ್ರಮುಖವಾದದ್ದು ಭಾರ್ತಿ ಏರ್‌ಟೆಲ್ ಕಂಪೆನಿ.

77,000 ಕೋಟಿ ನಷ್ಟ ಅನುಭವಿಸಿದರೂ ಕಂಪನಿ 200 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಇದಕ್ಕೆ ಪ್ರತಿಯಾಗಿ ರೂ.8,200 ಕೋಟಿ ತೆರಿಗೆ ರಿಯಾಯಿತಿ ಪಡೆದುಕೊಂಡಿದೆ. ಇನ್ನೊಂದು ಕಂಪನಿ DLF. 7 ವರ್ಷಗಳಲ್ಲಿ 130 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಆದರೂ 25 ಕೋಟಿ ರೂಪಾಯಿ ದೇಣಿಗೆ ನೀಡಿ, 20 ಕೋಟಿ ರೂಪಾಯಿ ತೆರಿಗೆ ಲಾಭವನ್ನು ಪಡೆದುಕೊಂಡಿದೆ. ಧರಿವಾಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ 115 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿ, ಬಿಜೆಪಿಗೆ ಸುಮಾರು 24.96 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದೆ. ಈ ಕಂಪನಿಯ ನಷ್ಟ ರೂ.299 ಕೋಟಿಯಾಗಿದೆ. ಹೀಗಾಗಿ ಅವರು ಶೂನ್ಯ ತೆರಿಗೆ ಪಾವತಿಸಿದ್ದಾರೆ.

ಅದೇ ರೀತಿ ಪಿಆರ್‌ಎಲ್ ಡೆವಲಪರ್ಸ್ 20 ಕೋಟಿ ರೂಪಾಯಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿ, 10 ಕೋಟಿ ರೂಪಾಯಿ ದೇಣಿಗೆ ನೀಡಿ 4.7 ಕೋಟಿ ರೂಪಾಯಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ. ಈ ಕಂಪನಿ 1550 ಕೋಟಿ ನಷ್ಟವನ್ನು ಅನುಭವಿಸಿದ ಕಂಪನಿಯಾಗಿದೆ. ಯುಜಿಯಾ ಫಾರ್ಮಾ ಲಿಮಿಟೆಡ್ ಶರತ್ ಚಂದ್ರ ರೆಡ್ಡಿ ಅವರ ಕಂಪನಿಯಾಗಿದೆ. 7 ವರ್ಷದಲ್ಲಿ 28 ಕೋಟಿ ನಷ್ಟ ಅನುಭವಿಸಿದ್ದರೂ ಚುನಾವಣಾ ಬಾಂಡ್ ನಿಧಿಯಾಗಿ 15 ಕೋಟಿ ನೀಡಿ, ರೂ.7.20 ಕೋಟಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ.

7 ವರ್ಷದಲ್ಲಿ ರೂ.86 ಕೋಟಿ ನಷ್ಟವನ್ನು ಉಂಟುಮಾಡಿಕೊಂಡಿದ್ದ ಮೈತ್ರಾ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪನಿ, 19 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿ, 9.99 ಕೋಟಿ ಪಾವತಿಸುವ ಮೂಲಕ ರೂ.126 ಕೋಟಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ.

ಪಿರಮಲ್ ಕ್ಯಾಪಿಟಲ್ ಮತ್ತು ಹೌಸಿಂಗ್ ಫೈನಾನ್ಸ್ ಲಿಮಿಟೆಡ್ 10 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸುವ ಮೂಲಕ 16,376 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದರೂ 10 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ. ಇದಕ್ಕೆ ರೂ.5178.50 ಕೋಟಿ ರೂ. ತೆರಿಗೆ ವಿನಾಯಿತಿ ಸಿಕ್ಕಿದೆ.

ಓರಿಯಂಟಲ್ ಸೌತ್ ದೆಹಲಿ ಹೊಟೇಲ್ ಪ್ರೈವೇಟ್ ಲಿಮಿಟೆಡ್ 5 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದು, 5 ಕೋಟಿ ದೇಣಿಗೆಯನ್ನೂ ನೀಡಿದೆ. ಕಂಪನಿ 49 ಕೋಟಿ ನಷ್ಟವನ್ನು ಅನುಭವಿಸಿದ್ದು, ಶೂನ್ಯ ತೆರಿಗೆ ಪಾವತಿಸಿದೆ. ವಿಲೇಜ್ ಡಿ ನಂದಿ ಪ್ರೈವೇಟ್ ಲಿಮಿಟೆಡ್ ಚುನಾವಣಾ ಬಾಂಡ್‌ಗಳನ್ನು ರೂ.5 ಕೋಟಿಗೆ ಖರೀದಿಸಿದೆ. ಮತ್ತು ರೂ.48 ಕೋಟಿ ನಷ್ಟದ ಹೊರತಾಗಿಯೂ, ಸಂಪೂರ್ಣ ಮೊತ್ತವನ್ನು ದೇಣಿಗೆಯಾಗಿ ನೀಡಿದೆ.

ರೂ.167 ಕೋಟಿ ನಷ್ಟವನ್ನು ಅನುಭವಿಸಿದ ಟಕಿಡೋ ಲೀಸಿಂಗ್ ಆಪರೇಟರ್ಸ್ ಪ್ರೈವೇಟ್ ಲಿಮಿಟೆಡ್ 4 ಕೋಟಿ ಮೌಲ್ಯದ ಬಾಂಡ್ ಖರೀದಿಸಿ ಸಂಪೂರ್ಣ ಹಣವನ್ನು ನೀಡಿದೆ. ಇದಲ್ಲದೇ ಇನ್ನೂ ಹಲವು ಕಂಪನಿಗಳು ತಮ್ಮ ಲಾಭದ ಆರು ಪಟ್ಟು ಹಣವನ್ನು ಉದಾರವಾಗಿ ನೀಡಿದೆ. ಇದೆಲ್ಲವೂ ಅತ್ಯಂತ ಅನುಮಾನಾಸ್ಪದವಾಗಿದೆ. ಈ ಕಂಪನಿಗಳು ಮತ್ತು ಸಂಬಂಧಪಟ್ಟ ಬಿಜೆಪಿ ಮುಖಂಡರ ವಿರುದ್ಧ ಕೂಡಲೇ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.