ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶದಿಂದ ದ್ವೇಷ ಮತ್ತು ಅಹಂಕಾರದ ರಾಜಕಾರಣಕ್ಕೆ ಮತದಾರ ಮೂಗುದಾರ ತೊಡಿಸಿದ್ದಾನೆ. ಬಣ್ಣದ ಮಾತುಗಳು ಹೆಚ್ಚು ಕಾಲ ನಡೆಯದು ಎಂಬುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ
ಅವರು ಮಾತನಾಡುತ್ತಾ, ‘ಸ್ವತಃ ಪ್ರಧಾನಿಗಳೇ ಧರ್ಮದ ಭಾವನೆ ಕೆರಳಿಸುವ ಪ್ರಯತ್ನ ಮಾಡಿಯೂ ರಾಜ್ಯದಲ್ಲಿ ಮೋದಿ ವರ್ಚಸ್ಸು ಪರಿಣಾಮ ಬೀರಲಿಲ್ಲ; ಕೈಯಲ್ಲಿರುವ ಸೀಟನ್ನು ಉಳಿಸಿಕೊಳ್ಳಲು ಅವರಿಂದಾಗಲಿಲ್ಲ. ರಾಜ್ಯ ಸರ್ಕಾರ ಕೂಡಾ ಹೆಚ್ಚಾಗಿ ಗ್ಯಾರಂಟಿಯನ್ನೇ ಅವಲಂಭಿಸಿತು. ನಿರೀಕ್ಷಿತ ಸ್ಥಾನವನ್ನು ಗಳಿಸದಿದ್ದರೂ ಒಂಬತ್ತು ಸ್ಥಾನ ಬಗಲಿಗೆ ಹಾಕಿದೆ. ಬಿಜೆಪಿಯ ಅಹಂಕಾರದ ಹುಚ್ಚು ನಾಗಾಲೋಟಕ್ಕೆ ಮತದಾರ ಲಗಾಮು ಹಾಕಿದ್ದಾನೆ.
ಕೇಂದ್ರದ ಆರ್ಥಿಕ ನೀತಿ, ರೈತರನ್ನು ಸತಾಯಿಸಿದ್ದು, ಕಾರ್ಪೊರೇಟ್ ದಿಗ್ಗಜರ ಹಿತಾಸಕ್ತಿಗಳನ್ನು ಕಾಪಾಡಿದ್ದು ಕೇಂದ್ರದ ಬಗ್ಗೆ ಜನರಿಗೆ ಅಸಹನೆ ಮೂಡಿಸಿದೆ. ರಾಮಮಂದಿರದ ವಿಚಾರ ಪ್ರಸ್ತಾಪಿಸಿ ಭಾವನಾತ್ಮಕವಾಗಿ ಮತವನ್ನಾಗಿಸುವ ಪ್ರಯತ್ನ ಫಲ ನೀಡಲಿಲ್ಲ. ರಾಜ್ಯ ಸರ್ಕಾರವನ್ನು ಉರುಳಿಸಲು ಇನ್ನು ಬಿಜೆಪಿ ಮುಂದಾಗದು. ತಮ್ಮವರನ್ನು ನಿಯಂತ್ರಿಸುವ ಕಾರ್ಯದಲ್ಲಿ ಲೀನವಾಗಬಹುದು.
ರಾಜ್ಯದಲ್ಲಿ ಕಾಂಗ್ರೆಸ್ ಗೆ ನಿರೀಕ್ಷಿತಾ ಫಲಿತಾಂಶ ದೊರಕಲಿಲ್ಲ ಈ ಫಲಿತಾಂಶದಿಂದ ಕಾಂಗ್ರೆಸ್ ಕೂಡ ಪಾಠ ಕಲಿಯಬೇಕಾಗಿದೆ. ಕೇವಲ ಗ್ಯಾರಂಟಿಗಳಿಂದ ಗೆಲ್ಲಲಾಗದು. ದ್ವೇಷ ರಾಜಕಾರಣವನ್ನು ಮಟ್ಟ ಹಾಕಿ, ಭ್ರಷ್ಟಾಚಾರ ರಹಿತರಾಗಿ ಜನರ ಹಿತಾಸಕ್ತಿಗಳನ್ನು ಕಾಪಾಡಲು ಸರಕಾರ ಮುಂದಾಗಬೇಕು ಎಂದು ಅವರು ಕರೆ ನೀಡಿದ್ದಾರೆ.