ನವದೆಹಲಿ: ಒಂದು ದೇಶ ಒಂದು ಚುನಾವಣಾ ಮಸೂದೆಗೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿಯು ಇಂದು (ಜನವರಿ 08) ಮೊದಲ ಸಮಾಲೋಚನಾ ಸಭೆ ನಡೆಸಲಿದೆ. ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಸಂವಿಧಾನದ 129ನೇ ತಿದ್ದುಪಡಿ ಮಸೂದೆಯನ್ನು ಡಿಸೆಂಬರ್ 17ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಅದೇ ದಿನ ಕೇಂದ್ರಾಡಳಿತ ಪ್ರದೇಶಗಳ ತಿದ್ದುಪಡಿ ಮಸೂದೆಯನ್ನೂ ಮಂಡಿಸಲಾಯಿತು. ಆದರೆ ವಿರೋಧ ಪಕ್ಷಗಳು ಒಗ್ಗೂಡಿ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದರಿಂದ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಯಿತು.
39 ಸದಸ್ಯರ ಜಂಟಿ ಸಂಸದೀಯ ಸಮಿತಿಯು ಇಂದು (ಜ.08) ತನ್ನ ಮೊದಲ ಸಮಾಲೋಚನಾ ಸಭೆಯನ್ನು ನಡೆಸಲಿದೆ. ಬೆಳಗ್ಗೆ 10.30ಕ್ಕೆ ಸಭೆ ಸೇರಲಿದೆ ಎಂದು ವರದಿಯಾಗಿದೆ.
ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಭೆಯಲ್ಲಿ ಕಾನೂನು ಇಲಾಖೆ ಕಾರ್ಯದರ್ಶಿಗಳು ಒಂದು ದೇಶ ಒಂದು ಚುನಾವಣೆ ವಿಧೇಯಕ ಹಾಗೂ ದೇಶಕ್ಕೆ ಹಾಗೂ ಜನತೆಗೆ ಆಗುವ ಲಾಭಗಳ ಕುರಿತು ಸದಸ್ಯರಿಗೆ ವಿವರವಾಗಿ ವಿವರಿಸಲಿದ್ದಾರೆ.
ಜಂಟಿ ಸಂಸದೀಯ ಸಮಿತಿಯಲ್ಲಿ ರಾಜ್ಯಸಭೆಯ 12 ಸದಸ್ಯರು, 27 ಲೋಕಸಭಾ ಸದಸ್ಯರಿದ್ದು ಒಟ್ಟು 39 ಸದಸ್ಯರಿದ್ದಾರೆ. ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಈ ಗುಂಪಿನ ಸದಸ್ಯರಾಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.