ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಸರಸ್ವತಿ ದೇವಿ Archives » Dynamic Leader
October 23, 2024
Home Posts tagged ಸರಸ್ವತಿ ದೇವಿ
ಶಿಕ್ಷಣ

ರಾಜಸ್ಥಾನದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.

ಹೇಮಲತಾ ಭೈರ್ವಾ, ರಾಜಸ್ಥಾನದ ಬರನ್ ಜಿಲ್ಲೆಯ ಕಿಶನ್‌ಗಂಜ್ ಪ್ರದೇಶದ ಲಕ್ಡಾಯ್ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಜನವರಿ 26 ರಂದು ಸರಸ್ವತಿ ದೇವಿಯ ಫೋಟೋ ವಿಚಾರವಾಗಿ ಅವರಿಗೂ ಸ್ಥಳೀಯರಿಗೂ ವಿವಾದ ಹುಟ್ಟಿಕೊಂಡಿದೆ. ಅಂದು ಕಾರ್ಯಕ್ರಮದ ವೇದಿಕೆಯಲ್ಲಿ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸರಸ್ವತಿ ದೇವಿಯ ಭಾವಚಿತ್ರ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಆಗ ಶಿಕ್ಷಕಿ ಹೇಮಲತಾ ಭೈರ್ವಾ, ಇಬ್ಬರು ನಾಯಕರ ಜೊತೆ ಸರಸ್ವತಿ ದೇವಿಯ ಫೋಟೋ ಹಾಕಲು ನಿರಾಕರಿಸಿದ್ದಾರೆ. ಇದರಿಂದ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಕುಪಿತಗೊಂಡ ಶಿಕ್ಷಕಿ, “ಸರಸ್ವತಿ ದೇವಿ ಶಿಕ್ಷಣಕ್ಕೆ ಏನನ್ನೂ ಕೊಡುಗೆ ನೀಡಲಿಲ್ಲ” ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಮೊನ್ನೆ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.

ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಅವರು ಕಳೆದ ಗುರುವಾರ ಬರನ್ ಜಿಲ್ಲೆಯ ಕಿಶನ್‌ಗಂಜ್ ಪ್ರದೇಶದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಆ ಸಮಯದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಶಾಲೆಗಳಲ್ಲಿ ಸರಸ್ವತಿ ದೇವಿಯ ಪಾತ್ರವೇನು ಎಂದು ಕೆಲವರು ಕೇಳುತ್ತಿದ್ದಾರೆ. ಹೇಳಿದವರು ಯಾರೇ ಆದರೂ ಅವರನ್ನು ಅಮಾನತು ಮಾಡುತ್ತೇನೆ’ ಎಂದು ಹೇಳಿ ಹೋಗಿದ್ದಾರೆ.

ಶಿಕ್ಷಣ ಸಚಿವರ ಈ ಘೋಷಣೆಯ ನಂತರ ಬರನ್ ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿಗಳು ಶಿಕ್ಷಕಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ಪೂರ್ಣಗೊಂಡ ಬಳಿಕವೇ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಜಿಲ್ಲಾ ಶಿಕ್ಷಣಾಧಿಕಾರಿ, “ಗ್ರಾಮಸ್ಥರೊಂದಿಗೆ ಸಂಧಾನ ಮಾಡಿಕೊಂಡು, ವೇದಿಕೆಯ ಮೇಲೆ ಸರಸ್ವತಿ ದೇವಿಯ ಭಾವಚಿತ್ರ ಹಾಕಿ, ಯಾವುದೇ ಅಡ್ಡಿಯಿಲ್ಲದೆ ಗಣರಾಜ್ಯೋತ್ಸವ ನಡೆಯುವುದನ್ನು ಶಿಕ್ಷಕಿ ಖಚಿತಪಡಿಸಿಕೊಳ್ಳಬಹುದಿತ್ತು. ಬದಲಾಗಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ” ಎಂದು ಹೇಳಿದ್ದಾರೆ.