ನವದೆಹಲಿ: ವಿವಾದಾತ್ಮಕ ಚಿತ್ರ ‘ಎಮರ್ಜೆನ್ಸಿ’ಗೆ ಸಂಬಂಧಿಸಿದಂತೆ ನಟಿ ಹಾಗೂ ಸಂಸದೆ ಕಂಗನಾ ರಣಾವತ್ಗೆ ಚಂಡೀಗಢ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಭಾರೀ ಕೋಲಾಹಲ ಉಂಟಾಗಿತ್ತು. ಆ ಇತಿಹಾಸವನ್ನು ಕೇಂದ್ರೀಕರಿಸಿ ಖ್ಯಾತ ನಟಿ ಕಂಗನಾ ರಣಾವತ್ ಎಮರ್ಜೆನ್ಸಿ (Emergency) ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವನ್ನು ಸೆಪ್ಟೆಂಬರ್ 6 ರಂದು ಘೋಷಿಸಲಾಗಿತ್ತು. ಆದರೆ, ಚಿತ್ರದಲ್ಲಿ ಸಿಖ್ ಸಮುದಾಯವನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂಬ ವಿವಾದದ ನಡುವೆ ಚಿತ್ರದ ಬಿಡುಗಡೆ ವಿಳಂಬವಾಗಿದೆ.
ಈ ಹಿನ್ನೆಲೆಯಲ್ಲಿ, ಸಿನಿಮಾ ಕಲಾವಿದರ ಸಂಘದ ಮಾಜಿ ಅಧ್ಯಕ್ಷ, ವಕೀಲ ರವೀಂದರ್ ಸಿಂಗ್ ಬಸ್ಸಿ (Ravinder Singh Bassi) ಚಿತ್ರದಲ್ಲಿ ಸಿಖ್ಖರ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸಲಾಗಿದೆ ಎಂದು ನ್ಯಾಯಲಯಕ್ಕೆ ಅರ್ಜಿ ಹಾಕಿದರು. ಚಿತ್ರದಲ್ಲಿ ಸಿಖ್ ಸಮುದಾಯದ ವಿರುದ್ಧ ಹಲವಾರು ಸುಳ್ಳು ಆರೋಪಗಳಿವೆ ಎಂದು ಆರೋಪಿಸಿ ರಣಾವತ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ವಕೀಲರು ಕೇಳಿಕೊಂಡರು. ಬಳಿಕ ಚಂಡೀಗಢ ನ್ಯಾಯಾಲಯವು ಕಂಗನಾ ರಣಾವತ್ಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯವು ಡಿಸೆಂಬರ್ 5 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಸಲಿದೆ.
ಏತನ್ಮಧ್ಯೆ, ‘ಇಂದು ಸೆನ್ಸಾರ್ ಮಂಡಳಿ ಅನಗತ್ಯ ವ್ಯವಸ್ಥೆಯಾಗಿದೆ. ಈ ಚಿತ್ರ ಥಿಯೇಟರ್ಗೆ ಬರಲು ನನ್ನ ವೈಯಕ್ತಿಕ ಸಂಪತ್ತನ್ನು ಪಣಕ್ಕಿಟ್ಟಿದ್ದೇನೆ. ಈಗ ಬಿಡುಗಡೆಯಾಗದ ಕಾರಣ ಆಸ್ತಿ ಮಾರಾಟ ಮಾಡಬೇಕಾಗಿದೆ’ ಎಂದು ಕಂಗನಾ ರಣಾವತ್ (Kangana Ranaut) ವಿಷಾದ ವ್ಯಕ್ತಪಡಿಸಿದ್ದಾರೆ.