ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಸಿದ್ದರಾಮಯ್ಯ Archives » Page 8 of 13 » Dynamic Leader
October 18, 2024
Home Posts tagged ಸಿದ್ದರಾಮಯ್ಯ (Page 8)
ರಾಜ್ಯ

ಶ್ರೀಕ್ಷೇತ್ರ ಆದಿಚುಂಚನಗಿರಿ ಮಠ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಅಂತರ ಜಿಲ್ಲಾ ಪತ್ರಕರ್ತರ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉದ್ಘಾಟಿಸಿ ಮಾತನಾಡಿದರು.

“ಕಾರಿನ ಮೇಲೆ ಕಾಗೆ ಕುಳಿತರೆ ಅದರಿಂದ ರಾಜ್ಯದ ಜನತೆಗೆ ಏನಾಗಬೇಕು? ಈ ಬಗ್ಗೆ ಜ್ಯೋತಿಷಿಗಳನ್ನು ಕರೆಸಿ ಚಾನಲ್‌ಗಳಲ್ಲಿ ಚರ್ಚೆ ನಡೆಸಿದರು. ಜ್ಯೋತಿಷಿಗಳು ನಾನು ಅಧಿಕಾರ ಕಳ್ಕೊತೀನಿ ಅಂದ್ರು. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳ್ಕೊತೀನಿ ಅಂತಾನೂ ಜ್ಯೋತಿಷಿಗಳು ಹೇಳಿದ್ರು. ಆದರೆ ನಾನು ಅಧಿಕಾರ ಪೂರ್ಣಗೊಳಿಸಿ ಮತ್ತೆ ಎರಡನೇ ಬಾರಿ ಸಿಎಂ ಆದೆ. ಕಾಗೆ ಕೂತಾಗ ಮಾತಾಡಿದ್ದ ಜ್ಯೋತಿಷಿಗಳ ಮಾತಿಗೆ ಏನು ಬೆಲೆ ಬಂತು? ಇಂಥಾ ಮೌಡ್ಯದ ಸುದ್ದಿ ಮತ್ತು ಚರ್ಚೆಗಳನ್ನು ಚಾನಲ್‌ಗಳು ಮಾಡಬಾರದು.

ವಸ್ತು ಸ್ಥಿತಿಯನ್ನು ಜನರಿಗೆ ತಲುಪಿಸಿ. ಊಹೆ ಮಾಡಿಕೊಂಡು, ಕಲ್ಪಿಸಿಕೊಂಡು ಸುದ್ದಿ ಬರೆದು ಹಾಸ್ಯಾಸ್ಪದರಾಗಬೇಡಿ. ತಿರುಚಿ ಸುದ್ದಿ ಮಾಡುವುದನ್ನು ಬಿಡಿ. ನನ್ನ ಮಾತುಗಳ ಸಾಂದರ್ಭಿಕತೆಯನ್ನೇ ಮರೆ ಮಾಚಿ ಸುದ್ದಿ ಮಾಡ್ತಾರೆ. ಇದು ತಪ್ಪು. ನನ್ನ ಸರ್ಕಾರದಲ್ಲಿ ತಪ್ಪುಗಳಿದ್ದರೆ ಮುಲಾಜಿಲ್ಲದೆ ಬರೆಯಿರಿ. ಸರ್ಕಾರ ಕೊಟ್ಟ ಮಾತು ತಪ್ಪಿದೆಯಾ, ಜನಪರವಾಗಿ ಕೆಲಸ ಮಾಡ್ತಾ ಇದೆಯೋ? ಇಲ್ಲವೋ? ಎನ್ನುವುದನ್ನೂ ಪ್ರಾಮಾಣಿಕಕವಾಗಿ ಜನರಿಗೆ ತಲುಪಿಸಬೇಕು.

ನನ್ನ ಬಗ್ಗೆ ಸುಳ್ಳು ಬರೆದಾಗ, ಸತ್ಯ ತಿರುಚಿ ಸುದ್ದಿ ಪ್ರಸಾರ ಮಾಡಿದಾಗ ನಾನು ಯಾವತ್ತೂ ಯಾವ ಮಾಧ್ಯಮದವರಿಗೂ ಯಾಕೆ ಸುಳ್ಳು ಹೇಳ್ತೀರಾ ಎಂದು ಕರೆ ಮಾಡಿ ಕೇಳಿಲ್ಲ, ಸರ್ಕಾರ ಒಳ್ಳೆ ಕೆಲಸ ಮಾಡಿದಾಗ ಅದನ್ನೂ ಜನರಿಗೆ ತಲುಪಿಸಿ. ನಿಮಗೆ ವಾಕ್ ಸ್ವಾತಂತ್ರ್ಯ ಇದೆ. ಅದನ್ನು ಘನತೆಯಿಂದ ಬಳಸಿಕೊಳ್ಳಬೇಕು” ಎಂದು ಹೇಳಿದರು.

ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ನಿರ್ಮಲಾನಂದ ಮಹಾ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಕೃಷಿ ಸಚಿವರಾದ ಚಲುವರಾಯಸ್ವಾಮಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಶಾಸಕರುಗಳಾದ ರವಿ ಗಣಿಗ, ದಿನೇಶ್ ಗೂಳಿಗೌಡ, ರಮೇಶ್ ಬಂಡಿ ಸಿದ್ದೇಗೌಡ, ನರೇಂದ್ರ ಸ್ವಾಮಿ ಹಾಗೂ ಮಂಡ್ಯ, ಮೈಸೂರು, ಮಡಿಕೇರಿ, ಚಾಮರಾಜನಗರ ಜಿಲ್ಲಾ ಪತ್ರಕರ್ತರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಜಕೀಯ

ಬೆಂಗಳೂರು: ಬರಪೀಡಿತ ಜನರಿಗೆ ಬೇಕಾಗಿರುವುದು ನಿಮ್ಮ ಬಾಯಿ ಮಾತಿನ ಸಾಂತ್ವನ ಅಲ್ಲ, ಅವರಿಗೆ ಬೇಕಾಗಿರುವುದು ಪರಿಹಾರ ಎಂದು ರಾಜ್ಯ ಪ್ರವಾಸ ಹೊರಟಿರುವ ರಾಜ್ಯ ಬಿಜೆಪಿ ನಾಯಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

‘‘ದೊರೆಯ ತನಕ ದೂರು ಕೊಂಡು ಹೋಗಲಾಗದವರು ಹೊಳೆಯ ತನಕ ಓಡಿದರಂತೆ’’ ಎಂಬ ಗಾದೆ ಮಾತಿನಂತಾಗಿದೆ ರಾಜ್ಯ ಬಿಜೆಪಿ ನಾಯಕರ ದಿಕ್ಕೆಟ್ಟ ಬರ ಅಧ್ಯಯನ ಯಾತ್ರೆ. ಬರಕ್ಕೆ ಪರಿಹಾರ ಕೊಡಬೇಕಾದವರು ದೆಹಲಿಯಲ್ಲಿ ಕೂತಿದ್ದಾರೆ. ಈ ಬಿಜೆಪಿ ನಾಯಕರು ಬರ ಅಧ್ಯಯನಕ್ಕೆ ರಾಜ್ಯದಲ್ಲಿ ಸುತ್ತಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ನಾಯಕರೇ, ನಿಮ್ಮದೇ ಪಕ್ಷದ ಸರ್ಕಾರ ಕಳುಹಿಸಿರುವ ತಜ್ಞರ ತಂಡವೇ ದೆಹಲಿಯಿಂದ ಬಂದು ಕರ್ನಾಟಕದಲ್ಲಿನ ಬರಪರಿಸ್ಥಿತಿಯನ್ನು ಅಧ್ಯಯನ ಮಾಡಿ ಹೋಗಿದೆ. ಈಗ ನೀವು ಅದೇ ಉದ್ದೇಶದಿಂದ ಇನ್ನೊಂದು ಪ್ರವಾಸಕ್ಕೆ ಹೊರಟಿದ್ದೀರಿ. ಯಾಕೆ, ನಿಮ್ಮದೇ ಸರ್ಕಾರ ಕಳುಹಿಸಿರುವ ಬರ ಅಧ್ಯಯನ ತಂಡದ ಮೇಲೆ ನಿಮಗೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಸರ್ಕಾರದ ಅಧ್ಯಯನದ ಪ್ರಕಾರ ಬರಗಾಲದಿಂದಾಗಿ ಆಗಿರುವ ನಷ್ಟ ಅಂದಾಜು 33,770 ಕೋಟಿ ರೂಪಾಯಿ. ಕೇಂದ್ರ ಸರ್ಕಾರದಿಂದ ನಾವು ಕೇಳಿರುವುದು 17,901 ಕೋಟಿ ರೂಪಾಯಿ ಪರಿಹಾರ. ಕೇಂದ್ರದಿಂದ ಈ ವರೆಗೆ ನಯಾಪೈಸೆ ಪರಿಹಾರದ ಹಣ ಬಂದಿಲ್ಲ. ಬಿಜೆಪಿ ನಾಯಕರೇ, ರಾಜ್ಯದ ರೈತರ ಬಗ್ಗೆ ನೀವು ಪ್ರಾಮಾಣಿಕವಾದ ಕಾಳಜಿ ಹೊಂದಿದ್ದರೆ ಮೊದಲು ಹೆಚ್ಚು ಪರಿಹಾರಕ್ಕಾಗಿ ಕೇಂದ್ರವನ್ನು ಒತ್ತಾಯಿಸಿ ಎಂದು ಕೇಳಿಕೊಂಡಿದ್ದಾರೆ.

ಡಬಲ್ ಎಂಜಿನ್ ಸರ್ಕಾರ ಬಂದರೆ ರಾಜ್ಯದಲ್ಲಿ ಹಾಲು-ಜೇನಿನ ಹೊಳೆ ಹರಿಯತ್ತದೆ ಎಂದು ಅಮಾಯಕ ಕನ್ನಡಿಗರನ್ನು ನಂಬಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸಂಸದರನ್ನು ಗೆಲ್ಲಿಸಿಕೊಂಡರಲ್ಲಾ, ಅವರೇನು ಮಾಡುತ್ತಿದ್ದಾರೆ? ಕಳ್ಳೆಕಾಯಿ ತಿನ್ನುತ್ತಿದ್ದಾರಾ? ಅವರೆಂದಾದರೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಬಾಯಿ ಬಿಟ್ಟಿದ್ದಾರಾ? ಎಂದು ಮೂದಲಿಸಿದರು.

ಬಿಜೆಪಿ ನಾಯಕರೇ ನೀವು ಯಾತ್ರೆ ಮಾಡಬೇಕಾಗಿರುವುದು ರಾಜ್ಯದಲ್ಲಿ ಅಲ್ಲ, ನೀವು ಯಾತ್ರೆ ಹೊರಡಬೇಕಾಗಿರುವುದು ದೆಹಲಿಗೆ. ನಿಮ್ಮ ಪಕ್ಷದ 25 ಲೋಕಸಭಾ ಸದಸ್ಯರನ್ನು ಕಟ್ಟಿಕೊಂಡು ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೊದಿ ಅವರ ಕಾಲಿಗಾದರೂ ಬಿದ್ದು ಬರಪರಿಹಾರಕ್ಕೆ ಹೆಚ್ಚು ಹಣ ಕೊಡುವಂತೆ ಕೇಳಿ. ನಿಮಗೆ ಕೇಳುವ ಧೈರ್ಯ ಇಲ್ಲ ಎಂದಾದರೆ ಪ್ರಧಾನಿ ಜೊತೆ ಭೇಟಿಗಾಗಿ ನನಗಾದರೂ ಒಂದು ಅಪಾಯಿಂಟ್ ಮೆಂಟ್ ಕೊಡಿಸಿ ಬಿಡಿ ಎಂದು ವ್ಯಂಗ್ಯವಾಡಿದರು.

ನೆಲ-ಜಲ-ಭಾಷೆಯ ವಿಚಾರದಲ್ಲಿ ಕರ್ನಾಟಕಕ್ಕೆ, ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಸಾಲು ಸಾಲು ಅನ್ಯಾಯ ಮಾಡಿ ಯಾವ ಮುಖ ಹೊತ್ತು ರಾಜ್ಯ ಪ್ರವಾಸ ಹೊರಟಿದ್ದೀರಿ ರಾಜ್ಯ ಬಿಜೆಪಿ ನಾಯಕರೇ? ಬರಪೀಡಿತ ಜನರಿಗೆ ಬೇಕಾಗಿರುವುದು ನಿಮ್ಮ ಬಾಯಿ ಮಾತಿನ ಸಾಂತ್ವನ ಅಲ್ಲ, ಅವರಿಗೆ ಬೇಕಾಗಿರುವುದು ಪರಿಹಾರ. ಬರಗಾಲದ ನಷ್ಟ – ನೋವನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಲು ಹೊರಟಿರುವ ನಿಮ್ಮನ್ನು ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ, ಜಾಗ್ರತೆಯಿಂದಿರಿ ಎಂದು ಎಚ್ಚರಿಸಿದ್ದಾರೆ.

ರಾಜಕೀಯ

ಬೆಂಗಳೂರು: ವಿದ್ಯುತ್ ಕೃತಕ ಅಭಾವ ಸೃಷ್ಟಿ ನಿಮ್ಮದೇ ಷಡ್ಯಂತ್ರ. ಅದು ಉಲ್ಬಣಿಸಿದಷ್ಟೂ ನಿಮಗೆ ಕಲೆಕ್ಷನ್‌ ಹೆಚ್ಚು. ಖಾಸಗಿ ಕಂಪನಿಗಳಿಂದ ಖರೀದಿಸಿ ಕೈ ತುಂಬಾ ಕಮೀಷನ್ ಎತ್ತಲು ಹೊರಟಿದ್ದೀರಿ. ಇಲ್ಲ ಎಂದಾದರೆ ವಿದ್ಯುತ್‌ ಕ್ಷಾಮದ ವಾಸ್ತವತೆ ಬಗ್ಗೆ ‘ಶ್ವೇತಪತ್ರ’ ಹೊರಡಿಸಿ. ಈ ಬಗ್ಗೆ ನಿಮ್ಮ ಮೌನ ಏಕೆ? ಎಂದು ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

“ವೆಸ್ಟ್ ಎಂಡ್ ನಲ್ಲಿ ಆಡಳಿತ ನಡೆಸಿಲ್ಲ ಎನ್ನುವ ಗಿಲೀಟು ಗಿರಾಕಿ, ಆವತ್ತು ಮುಖ್ಯಮಂತ್ರಿ ನಿವಾಸವನ್ನೇಕೆ ತೆರವು ಮಾಡಲಿಲ್ಲ? 5 ವರ್ಷ ಸರಕಾರ ಕೊಟ್ಟ ಸಿದ್ದಪುರುಷ ಇನ್ನೊಬ್ಬರ ಹೆಸರಿನಲ್ಲಿ ಭಂಗಲೆ ಪಡೆದು ಸಾಸಿವೆ ಕಾಳಷ್ಟೂ ಸಂಕೋಚವಿಲ್ಲದೆ ಅದೇ ಜಾಗದಲ್ಲಿ ಹೆಗ್ಗಣವಾಗಿ ಮೈತ್ರಿ ಸರಕಾರಕ್ಕೆ ಕನ್ನ ಕೊರೆದಿದ್ದನ್ನು ಕನ್ನಡಿಗರು ಮರೆತಿಲ್ಲ. ಹೇಳಿದ್ದೇ ಹೇಳುವ ಕಿಸುಬಾಯಿ ದಾಸನಿಗೆ ಗೊತ್ತಿರುವುದು ಎರಡೇ; 1. ವೆಸ್ಟ್‌ ಎಂಡ್‌, 2. ಬಿಜೆಪಿ ಬಿ ಟೀಂ” ಎಂದು ಕಿಡಿಕಾರಿದ್ದಾರೆ.

“ಡೋಂಗೀ ಸಮಾಜವಾದಿ, ಪುಲ್ ಟೈಂ ಮೀರುಸಾದಿಕವಾದಿಗೆ ವೆಸ್ಟ್ ಎಂಡ್ ಸೋಂಕು ಮತ್ತೆ ತಗುಲಿದೆ. I.N.D.I.A. ಕೂಟದ ಸಭೆಯನ್ನು ಇದೇ ವೆಸ್ಟ್ ಎಂಡ್ ಬದಲಿಗೆ, ತಮ್ಮ ಸುತ್ತ ಕೆನೆಪದರ, ಒಳಪದರ, ತೆಳುಪದರದಂತೆ ತಲೆ ಎತ್ತಿರುವ ʼಪರ್ಸಂಟೇಜ್ ಪಟಾಲಂʼ ಏಳುಸುತ್ತಿನ ಕೋಟೆಯ ವಠಾರದಲ್ಲಿಯೇ ನಡೆಸಬೇಕಿತ್ತು. ಏಕೆ ನಡೆಸಲಿಲ್ಲ?” ಎಂದು ಪ್ರಶ್ನಿಸಿದ್ದಾರೆ.

“ಆಧುನಿಕ ಭಾರತದ ಈಸ್ಟ್‌ ಇಂಡಿಯಾ ಕಂಪನಿ ಕಾಂಗ್ರೆಸ್‌ಗೆ ಕರ್ನಾಟಕ ಪೊಗದಸ್ತು ಹುಲ್ಲುಗಾವಲು. ಸಿದ್ದಪುರುಷ @ಶೋಕಿಪುರುಷನೇ ಈ ಹುಲ್ಲುಗಾವಲಿನ ಮೇಟಿ. ವಿದ್ಯುತ್ ಕ್ಷಾಮ ಮತ್ತು ಬರದಲ್ಲಿ ಜನರು ಬೆಯುತ್ತಿದ್ದರೆ ದಿನಪೂರ್ತಿ ಕೂತು ಕ್ರಿಕೆಟ್ ನೋಡುವಷ್ಟು ಶೋಕಿದಾರ! ರೋಮ್ ನಗರ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ!! ಜನ ಸಂಕಷ್ಟದಲ್ಲಿದ್ದರೆ ಕರ್ನಾಟಕದ ನೀರೋ ಕ್ರಿಕೆಟ್‌ ಮ್ಯಾಚ್‌ ನೋಡುತ್ತಿದ್ದ!!!” ಎಂದು ಕಟುವಾಗಿ ಟೀಕಿಸಿದ್ದಾರೆ.

“5 ತಿಂಗಳಿಂದ ವಿದ್ಯುತ್ ಉತ್ಪಾದನೆ ಅಲಕ್ಷಿಸಿದ್ದೇಕೆ? ಹಾಹಾಕಾರ ಎದ್ದ ಮೇಲೆ ಅದು ಮಾಡಿದ್ದೇವೆ, ಇದು ಮಾಡಿದ್ದೇವೆ ಎಂದರೆ ಲೋಡ್ ಶೆಡ್ಡಿಂಗ್ ಏಕೆ ಬಂತು? 2013-2018ರಲ್ಲಿ 12,000 ಮೆ.ವ್ಯಾ. ಉತ್ಪಾದಿಸಿದ್ದೇವೆ ಎಂದು ನೀವೇ ಹೇಳಿದ್ದೀರಿ, ಸರಿ. ಈಗ ಮಳೆ ಕಡಿಮೆಯಾಗಿ ಜಲವಿದ್ಯುತ್‌ ಉತ್ಪಾದನೆ ಕುಸಿದಿದೆ, ನನಗೂ ಗೊತ್ತಿದೆ.

ಇದನ್ನೂ ಓದಿ: ಜೆಡಿ(ಎಸ್)ನ ಕೇರಳ ಘಟಕವು ಎಲ್‌ಡಿಎಫ್‌ನ ಅವಿಭಾಜ್ಯ ಅಂಗವಾಗಿ ಮುಂದುವರಿಯಲಿದೆ: ಹೆಚ್.ಡಿ.ಕುಮಾರಸ್ವಾಮಿ

ಅದರಲ್ಲಿ 3,000 ಮೆ.ವ್ಯಾ. ಇಲ್ಲ ಎಂದರೂ ಸಾರ್ವಜನಿಕ & ಖಾಸಗಿ ವಲಯ ಸೇರಿ ಒಟ್ಟು 29,000 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ಆಗಲೇಬೇಕಿತ್ತು. ಆಗಿಲ್ಲವೇಕೆ? ಏಕಾಎಕಿ ಉತ್ಪಾದನೆ ನಿಲ್ಲಿಸಿದ್ದೇಕೆ? ಜಲವಿದ್ಯುತ್‌ ಕೈಕೊಡುತ್ತದೆ ಎಂದು ಗೊತ್ತಿದ್ದರೂ ಕಲ್ಲಿದ್ದಲ ಸಂಗ್ರಹ ಇಟ್ಟುಕೊಳ್ಳಲಿಲ್ಲವಲ್ಲ, ಏಕೆ?

ಜಲ ವಿದ್ಯುತ್‌ ಹೊರತುಪಡಿಸಿ ಇತರೆ ಮೂಲಗಳ ವಿದ್ಯುತ್‌ ಉತ್ಪಾದನೆಗೂ ಖೋತಾ ಬೀಳಲಿಕ್ಕೆ ಪ್ರಕೃತಿ ಕಾರಣವೋ? ಅಥವಾ ನಿಮ್ಮ ʼಕೈ ಚಳಕʼವೇ ಕಾರಣವೋ? ಸತ್ಯ ಹೇಳಿದರೆ ನನ್ನ ಕಡೆಗೇ ಬೊಟ್ಟು ಮಾಡುತ್ತೀರಿ, ನಿಮ್ಮ ಸಚಿವರನ್ನು ….. ….. ಗಳಂತೆ ನನ್ನ ಮೇಲೆ ಛೂ ಬಿಡುತ್ತೀರಿ. ಎಷ್ಟು ದಿನ ನೆಪಗಳ ನಾಜೂಕತನ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಮತ್ತೆ ಮತ್ತೆ ನಾನು ಹೇಳುತ್ತೇನೆ, ವಿದ್ಯುತ್ ಕೃತಕ ಅಭಾವ ಸೃಷ್ಟಿ ನಿಮ್ಮದೇ ಷಡ್ಯಂತ್ರ. ಅದು ಉಲ್ಬಣಿಸಿದಷ್ಟೂ ನಿಮಗೆ ಕಲೆಕ್ಷನ್‌ ಹೆಚ್ಚು. ಖಾಸಗಿ ಕಂಪನಿಗಳಿಂದ ಖರೀದಿಸಿ ಕೈ ತುಂಬಾ ಕಮೀಷನ್ ಎತ್ತಲು ಹೊರಟಿದ್ದೀರಿ. ಇಲ್ಲ ಎಂದಾದರೆ ವಿದ್ಯುತ್‌ ಕ್ಷಾಮದ ವಾಸ್ತವತೆ ಬಗ್ಗೆ ‘ಶ್ವೇತಪತ್ರ’ ಹೊರಡಿಸಿ. ಈ ಬಗ್ಗೆ ನಿಮ್ಮ ಮೌನ ಏಕೆ?” ಎಂದು ಆರೋಪಿಸಿದ್ದಾರೆ.

“ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ ನಂತರ ಇಂ’ಧನ’ ಇಲಾಖೆಯಲ್ಲೂ ನೀವು ನಗದೀಕರಣಕ್ಕೆ ನಾಂದಿ ಹಾಡಿದ್ದೀರಿ. ಖರೀದಿ ಖುಷಿಯಲ್ಲಿ ಪರ್ಸಂಟೇಜ್ ಪಟಾಲಂ ಸಂಭ್ರಮಿಸುತ್ತಿದೆ” ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.  

ರಾಜಕೀಯ

ಬೆಂಗಳೂರು: ಶಹಾಪುರ ಹಾಗೂ ಜೇವರ್ಗಿ ತಾಲ್ಲೂಕಿನ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿನ ಮಲ್ಲಾಬಾದ್ ಲಿಫ್ಟ್ 1,2,3 ಕಾಲುವೆಗಳ ಮೂಲಕ 28 ದಿನಗಳವರೆಗೆ ನೀರು ಹರಿಸುವಂತೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಿಗೆ ಸೂಚನೆ ನೀಡಲು ಮಾನ್ಯ  ಮುಖ್ಯಮಂತ್ರಿಗಳಲ್ಲಿ ಇಂದು ಮನವಿ ಮಾಡಲಾಯಿತು.

ಮಾನ್ಯ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿಯಾದ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರು ಶಹಾಪುರ ಹಾಗೂ ಜೇವರ್ಗಿ ತಾಲ್ಲೂಕಿನ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿನ ಮಲ್ಲಾಬಾದ್ ಲಿಫ್ಟ್ 1,2,3 ಕಾಲುವೆಗಳ ಮೂಲಕ ಒಂದು ವಾರದವರೆಗೆ: (28-10-2023 ರಿಂದ 4-11-2023) ನೀರು ಹರಿಸುವ ಆದೇಶವನ್ನು ಬದಲಿಸಿ ಸಂಪೂರ್ಣ 28 ದಿನಗಳವರೆಗೆ ನೀರು ಹರಿಸುವಂತೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಿಗೆ ಸೂಚನೆ ನೀವುವಂತೆ ಮನವಿ ಮಾಡಿದರು.

ಇತ್ತೀಚೆಗೆ ಎರಡೂ ತಾಲ್ಲೂಕುಗಳ ರೈತರು ಶಹಾಪುರ ಶಾಸಕರೂ ಆದ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡಿದ್ದರು. ಇದರಿಂದ ಶಹಾಪುರ ಹಾಗೂ ಜೇವರ್ಗಿ ತಾಲ್ಲೂಕುಗಳ ಸಾವಿರಾರು ರೈತರಿಗೆ ಅನುಕೂಲವಾಗಲಿದೆ ಎಂದು ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.

ರಾಜಕೀಯ ರಾಜ್ಯ

ಚಿತ್ರದುರ್ಗ: ಕಲುಷಿತ ನೀರು ಸೇವನೆಯಿಂದ ಸಾವು ಸಂಭವಿಸಿದ ಕಾವಾಡಿಗರಹಟ್ಟಿಯ ಸಂತ್ರಸ್ಥ ಕುಟುಂಬಗಳನ್ನು ಭೇಟಿಮಾಡಿ, ಬಳಿಕ ಗ್ರಾಮಸ್ಥರ ಸಮಸ್ಯೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆಲಿಸಿದರು.  

ಕಲುಷಿತ ನೀರು ಕುಡಿದು ಆರು ಮಂದಿ ಮೃತಪಟ್ಟಿದ್ದ ಕಾವಾಡಿಗರ ಹಟ್ಟಿಯ ಅಭಿವೃದ್ದಿಗೆ 3 ಎಕರೆ ಜಾಗ 4 ಕೋಟಿ ರೂಪಾಯಿ ನೀಡಿದ್ದೇವೆ. ಸಂತ್ರಸ್ಥ ಕುಟುಂಬಗಳ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ. ಈ ಕುಟುಂಬಗಳ ಸದಸ್ಯರಿಗೆ ಉದ್ಯೋಗವನ್ನೂ ಕೊಡುತ್ತೇವೆ; ಮನೆಯನ್ನೂ ಕಟ್ಟಿಸಿಕೊಡುತ್ತೇವೆ. ಶುದ್ಧ ಕುಡಿಯುವ ನೀರು ಕೊಡುವುದು ನಮ್ಮ ಕರ್ತವ್ಯ ಎಂದು ಪರಿಹಾರಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ವಿವರಿಸಿ ಹೇಳಿದರು.

ಘಟನೆ ಘಟಿಸಿದ ತಕ್ಷಣ ಸ್ಥಳೀಯ ಶಾಸಕರು, ಜಿಲ್ಲಾ ಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ಕೊಟ್ಟು, ತಕ್ಷಣಕ್ಕೆ 10 ಲಕ್ಷ ಪರಿಹಾರ ನೀಡಲಾಗಿತ್ತು. ಮೊದಲೇ ಶುದ್ಧ ನೀರಿನ ವ್ಯವಸ್ಥೆ ಇದ್ದಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ. ಘಟನೆ ಬಳಿಕ ಶುದ್ಧ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದೆ ಇಂತಹ ಅನಾಹುತ ನಡೆದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಜನರ ಮನಸ್ಥಿತಿ ಬದಲಾಗಿದೆ; ಮುಂದಿನ ದಿನಗಳಲ್ಲಿ ಕುಟುಂಬ ಪ್ರಾಬಲ್ಯವಿರುವ ಪ್ರಾದೇಶಿಕ ಪಕ್ಷಗಳು ನೆಲಕಚ್ಚುವುದು ಖಚಿತ! – ಜೆಪಿ ನಡ್ಡಾ

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ-2023’ ಪ್ರದಾನ ಮಾಡಿ ಮಾತನಾಡಿದರು.

2014ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ, ಮಹಾತ್ಮ ಗಾಂಧಿಯವರ ಜಯಂತಿಯಂದು ಗಾಂಧಿ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿ, ಗಾಂಧಿಜೀಯವರ ತತ್ವಾದರ್ಶಗಳ ಹಾದಿಯಲ್ಲಿ ನಡೆಯುವ ವ್ಯಕ್ತಿ ಅಥವಾ ಸಂಘಸಂಸ್ಥೆಗಳಿಗೆ ಗಾಂಧಿ ಪ್ರಶಸ್ತಿಯನ್ನು ನೀಡಬೇಕೆಂದು ಆದೇಶ ಹೊರಡಿಸಲಾಯಿತು. ಪ್ರಶಸ್ತಿಗೆ ಆರ್ಹರಾಗುವವರು ಗಾಂಧಿಜೀಯವರ ತತ್ವಗಳಲ್ಲಿ ನಂಬಿಕೆಯಿಟ್ಟುವವರಾಗಿರಬೇಕು. ಧಾರವಾಡದ ಗರಗ ಕ್ಷೇತ್ರಿಯ ಸೇವಾ ಸಂಘ ಖಾದಿ ಉತ್ಪನ್ನ ಮತ್ತು ಮಾರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಭಾರತದ ರಾಷ್ಟ್ರಧ್ವಜ ತಯಾರಕರಾಗಿದ್ದಾರೆ. ಇಲ್ಲಿ ತಯಾರಾಗುವ ರಾಷ್ಟ್ರಧ್ವಜವನ್ನು ಇಡೀ ದೇಶಕ್ಕೆ ಸರಬರಾಜು ಮಾಡಲಾಗುತ್ತದೆ. ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿಗೆ ಭಾಜನರಾದ ಈ ಸಂಸ್ಥೆಯ ಎಲ್ಲರಿಗೂ ಅಭಿನಂದನೆಗಳು ಹಾಗೂ ಪ್ರಶಸ್ತಿಯ ಆಯ್ಕೆ ಸಮಿತಿಗೆ ಧನ್ಯವಾದಗಳು ಎಂದು ಹೇಳಿದರು.

ಮಹಾತ್ಮ ಗಾಂಧಿಯವರ ವಿಚಾರಧಾರೆ ಎಲ್ಲ ಕಾಲಕ್ಕೂ ಪ್ರಸ್ತುತ. ವಕೀಲ ವೃತ್ತಿಯಲ್ಲಿದ್ದ ಗಾಂಧಿಯವರು ದಕ್ಷಿಣಾ ಆಫ್ರಿಕಾದಲ್ಲಿ ವರ್ಣಬೇಧದಿಂದ ಅವಮಾನಿತರಾದರು. ಆ ದೇಶದಲ್ಲಿ ವರ್ಣಬೇಧದ ವಿರುದ್ಧ ಹೋರಾಟ ನಡೆಸಿದರು. ಗೋಪಾಲಕೃಷ್ಣ ಗೋಖಲೆಯವರು ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಗಾಂಧಿಯವರ ಹೋರಾಟವನ್ನು ನೋಡಿ, ಭಾರತವನ್ನು ಬ್ರಿಟೀಷರ ದಾಸ್ಯದಿಂದ ತಪ್ಪಿಸಲು ಗಾಂಧಿಯವರು ನೇತೃತ್ವವನ್ನು ವಹಿಸಲು ಕೋರಿದರು. 1915ರಲ್ಲಿ ಗಾಂಧಿಯವರು ಭಾರತಕ್ಕೆ ಬಂದರು. ಭಾರತದ ಸಾಮಾಜಿಕ ವ್ಯವಸ್ಥೆ, ಜನರ ಬದುಕನ್ನು ಅರಿಯಲು ರೈಲಿನಲ್ಲಿ 3ನೇ ದರ್ಜೆಯಲ್ಲಿಯೇ ಪ್ರಯಾಣ ಮಾಡಿ ಇಡೀ ಭಾರತವನ್ನು ಸುತ್ತಿದ್ದ ಅತ್ಯಂತ ಸರಳ ಜೀವಿ ಅವರು ಎಂದು ಗಾಂಧಿಯನ್ನು ಸ್ಮರಿಸಿದರು.

ಗಾಂಧಿಯವರ ಮಾತು ಹಾಗೂ ಕೃತಿಯಲ್ಲಿ ವ್ಯತ್ಯಾಸವಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ, ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿದರು. ಅಹಿಂಸೆಯ ಹಾದಿಯಲ್ಲಿ ನಡೆದು ಸ್ವಾತಂತ್ರ್ಯ ಪಡೆಯಲು ಹೊರಟ ದೇಶವೆಂದರೆ ಅದು ಭಾರತ. ಗಾಂಧಿಯವರು ದೊಡ್ಡ ಮಾನವತಾವಾದಿ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವ ಮೂಲಕ ಗಾಂಧಿಯವರಿಗೆ ನಿಜವಾದ ಗೌರವ ಅರ್ಪಿಸಿದಂತಾಗುತ್ತದೆ. ಅವರು ನಡೆದ ದಾರಿಯಲ್ಲಿ ನಡೆಯುವ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಗಾಂಧಿಯವರಿಗೆ ಮಹಾತ್ಮ ಎಂದು ಬಿರುದು ನೀಡಿದವರು ರವೀಂದ್ರನಾಥ ಟಾಗೋರ್ ಅವರು. ಸುಭಾಷ್ ಚಂದ್ರ ಬೋಸ್ ಅವರು ರಾಷ್ಟ್ರಪಿತ ಎಂದು ಕರೆದರು. ದೇಶದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಲು ಕೊನೆಯವರೆಗೂ ಶ್ರಮಿಸಿದ್ದರು. ಆದರೆ ನಾಥೂರಾಂ ಗೋಡ್ಸೆಯವರ ಮತಾಂಧತೆಯಿಂದ ಅವರು ಅಸುನೀಗಿದರು. ನಾಥೂರಾಂ ಅವರನ್ನು ಪೂಜಿಸುವವರು ಈ ದೇಶದಲ್ಲಿರುವುದು ವಿಷಾದನೀಯ. ಇಂತಹವರ ಬಗ್ಗೆ ನಾವು ಜಾಗೃತರಾಗಿರಬೇಕು ಎಂದು ಕಿಡಿಕಾರಿದರು.

ಭಾರತ ಹಳ್ಳಿಗಳ ದೇಶ. ಹಳ್ಳಿಗಳ ಸ್ವಾವಂಬನೆಯಿಂದ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ನಮ್ಮ ದೇಶಕ್ಕೆ ದೊಡ್ಡ ಕೈಗಾರಿಕೆಗಳ ಬದಲು ಗುಡಿ ಕೈಗಾರಿಕೆಗಳು ಬರಬೇಕು. ಅವರು ಹೇಳಿದ ಪಂಚಾಯತ್ ರಾಜ್ ವ್ಯವಸ್ಥೆಯಂತೆ ಅಧಿಕಾರ ಹಳ್ಳಿಯಿಂದ ದಿಲ್ಲಿಗೆ ಹೋಗಬೇಕೆ ಹೊರತು, ದಿಲ್ಲಿಯಿಂದ ಹಳ್ಳಿಗೆ ಬರಬಾರದು ಎಂದಿದ್ದರು. ದೇಶ, ರಾಜ್ಯ, ಜಿಲ್ಲೆ, ಹಳ್ಳಿ ನಾಲ್ಕು ಹಂತದಲ್ಲಿ ಅಧಿಕಾರದ ವಿಕೇಂದ್ರೀಕರಣವು, ಜನರ ಪಾಲ್ಗೊಳ್ಳುವಿಕೆಯಿಂದ ಜನತಂತ್ರದ ವಿಕೇಂದ್ರೀಕರಣ ಸಾಧ್ಯ. ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಗಾಂಧಿಯವರ ಚಿಂತನೆಗಳೇ ಪ್ರೇರಣೆ ಎಂದು ಮೊಳಗಿದರು.

ಮಹಿಳಾ ಸ್ವಾತಂತ್ರ್ಯ ಹಾಗೂ ಸಬಲೀಕರಣದ ಬಗ್ಗೆ ಗಾಂಧಿಯವರು ಅಪಾರವಾದ ಬದ್ಧತೆ ಹೊಂದಿದ್ದರು. ಮಹಿಳೆಯರ ಅಭಿವೃದ್ಧಿಯಿಂದ ನಾಡು, ದೇಶದ ಅಭಿವೃದ್ಧಿ ಸಾಧ್ಯ. ನಮ್ಮ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಅನ್ನಭಾಗ್ಯ ಯೋಜನೆಗಳು ಗಾಂಧಿ ತತ್ವಗಳನ್ನು ಅವಲಂಬಿಸಿದೆ ಎಂದು ತಮ್ಮ ಸರ್ಕಾರದ ಯೋಜನೆಗಳನ್ನು ಸಮರ್ಥಿಸಿಕೊಂಡರು.

ಇಂದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯಾಗಿದ್ದು, ಇಡೀ ದೇಶದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಭಾರತ ಕಂಡ ಪ್ರಾಮಾಣಿಕ ರಾಜಕಾರಣಿ ಲಾಲ್ ಬಹದ್ದೂರ್ ಶಾಸ್ತ್ರಿ. ಸ್ವಾತಂತ್ರ್ಯ ಹೋರಾಟಗಾರರಾಗಿ, ಗಾಂಧಿವಾದಿಯಾಗಿ ಬದುಕಿದವರು. ಅವರನ್ನು ಈ ಸಂದರ್ಭದಲ್ಲಿ ಗೌರವದಿಂದ ನೆನೆಯುತ್ತೇನೆ ಎಂದು ಹೇಳಿದರು.

ರಾಜ್ಯ

ಬೆಂಗಳೂರು: ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಹಲವು ಇಲಾಖೆಗಳ ಸಹಯೋಗದಲ್ಲಿ ಗಾಂಧಿ ಭವನದಲ್ಲಿ ನಡೆದ ಮಹಾತ್ಮ ಗಾಂಧಿ ಅವರ ಜಯಂತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

ದೇಶಕ್ಕೆ ಗಾಂಧಿ ಒಬ್ಬರೇ ಮಹಾತ್ಮ ಮತ್ತು ಪಿತಾಮಹ. ಯಾವುದೇ ಪ್ರಚಾರದ ಸಾಮಾಗ್ರಿ ಮತ್ತು ತಂತ್ರಜ್ಞಾನ ಇಲ್ಲದೆ ಕೇವಲ ಅಹಿಂಸೆ ಮತ್ತು ತಮ್ಮ ಬದುಕಿನ ಸರಳತೆಯಿಂದಲೇ ಮಹಾತ್ಮಗಾಂಧಿ ವಿಶ್ವದ ಮೂಲೆ ಮೂಲೆಗೆ ತಲುಪಿದರು ಎಂದು ಹೇಳಿದರು.

ಒಮ್ಮೆ ರೈಲಿನಲ್ಲಿ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು. ಸಹ ಪ್ರಯಾಣಿಕರು, “ಏಕೆ ಮೂರನೇ ದರ್ಜೆ ಸೀಟಿನಲ್ಲಿ ಪ್ರಯಾಣಿಸುತ್ತಿದ್ದೀರಿ” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗಾಂಧಿ ಅವರು, “ನಾಲ್ಕನೇ ದರ್ಜೆ ರೈಲಿನಲ್ಲಿ ಇಲ್ಲ. ಇದ್ದಿದ್ದರೆ ಅಲ್ಲೇ ಪ್ರಯಾಣಿಸುತ್ತಿದ್ದೆ. ಅದು ಇಲ್ಲದ್ದರಿಂದ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದೇನೆ” ಎಂದರು. ಇಷ್ಟು ಸರಳವಾದ ವ್ಯಕ್ತಿತ್ವ ಗಾಂಧಿಯವರದ್ದಾಗಿತ್ತು ಎಂದು ಗಾಂಧಿಯನ್ನು ಸ್ಮರಿಸಿದರು.

ನಮ್ಮ ಸರ್ಕಾರ ರೂಪಿಸುತ್ತಿರುವ ಕಾರ್ಯಕ್ರಮಗಳಲ್ಲಿ ಮಹಾತ್ಮಗಾಂಧಿ ಅವರ ಆಶಯಗಳು ಸೇರಿವೆ. ಗಾಂಧಿ ಅವರ ಆಶಯದಂತೆ ಕಟ್ಟ ಕಡೆಯ ವ್ಯಕ್ತಿಗೂ ಬದುಕುವ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.  

ರಾಜ್ಯ

ಬೆಂಗಳೂರು: ಹಿರಿಯ ನಾಗರಿಕರಿಗೆ ನೀಡುತ್ತಿರುವ ಮಾಸಾಶನವನ್ನು ಮುಂದಿನ ಬಜೆಟ್‌ನಲ್ಲಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಉದ್ಘಾಟಿಸಿ, ವಿವಿಧ ಕ್ಷೇತ್ರಗಳ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯರನ್ನು ಸನ್ಮಾನಿಸಿ ಮಾತನಾಡಿದರು.

ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಬದುಕಿ, ವಿಶ್ವ ಮಾನವರಾಗಿಯೇ ಇಹಲೋಕ ತ್ಯಜಿಸಬೇಕು. ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳುವುದು ಮತ್ತು ಅವರ ಬದುಕಿನ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳುವುದೇ ಹಿರಿಯರಿಗೆ ನಾವು ನೀಡುವ ಗೌರವ. ನಾವು ನೀವೆಲ್ಲಾ ಎಷ್ಟು ವರ್ಷ ಬದುಕುತ್ತೀವಿ ಎನ್ನುವುದಕ್ಕಿಂತ ಇದ್ದಷ್ಟು ದಿನ ಸಾರ್ಥಕ ಬದುಕು ನಡೆಸುವುದು ಉತ್ತಮ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಪದ್ಮಶ್ರೀ ಪುರಸ್ಕೃತ ಶ್ರೀ.ಹರೇಕಳ ಹಾಜಪ್ಪ, ಹಿರಿಯ ನ್ಯಾಯವಾದಿ ಪಿ.ಎಸ್.ರಾಜಗೋಪಾಲ್, ಯೋಗಪಟು ಡಿ.ನಾಗರಾಜ್, ಸಂಬಾಳ ವಾದಕ ಹಣಮಂತ ಗೋವಿಂದಪ್ಪ ಹೂಗಾರ, ನಿವೃತ್ತ ಕುಲಪತಿ ಆರ್.ಆರ್.ಹಂಚಿನಾಳ, ಸಮಾಜ ಸೇವಕ ವೀರಭದ್ರಪ್ಪ ಶರಣಪ್ಪ ಉಪ್ಪಿನ, ನಿವೃತ್ತ ಶಿಕ್ಷಕರಾದ ಎಚ್.ಎಸ್.ಗಿರಿರಾಜ್ ಎಲ್ಲರೂ ನಮಗೆ ಮಾದರಿ ಮತ್ತು ಮಾರ್ಗದರ್ಶಕರು. ಇವರ ಬದುಕಿನ ಮೌಲ್ಯಗಳು ಸಮಾಜವನ್ನು ಬೆಳಗುತ್ತವೆ ಎಂಬ ಭಾವನೆ ನನ್ನದು ಎಂದರು.

ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ರಾಜಕೀಯ

ಮೈಸೂರು: ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಾವೇರಿ ವಿಷಯವನ್ನು ರಾಜಕೀಯಗೊಳಿಸುತ್ತಿರುವುದು ಸ್ವಂತ ಲಾಭಕ್ಕೆ ಹೊರತು ಜನರ ಹಾಗೂ ನಾಡಿನ ಹಿತದೃಷ್ಟಿಯಿಂದ ಅಲ್ಲ ಎಂದು ಇಂದು (ಸೆ.26) ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದರು.  

ಬಂದ್ ಮಾಡಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವಕಾಶವಿದೆ. ಆದರೆ ನ್ಯಾಯಾಲಯ ಯಾವುದೇ ಸಭೆ, ಮೆರವಣಿಗೆಯನ್ನು ನಡೆಸಬಾರದು, ಪ್ರತಿಭಟನೆ ಮಾಡಬಾರದು ಎಂದು ಹೇಳಿದೆ. ನಾವು ನಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುವಾಗ ಇತರರ ಮೂಲಭೂತ ಹಕ್ಕುಗಳನ್ನು ಕೂಡ ಗಮನದಲ್ಲಿರಿಸಿಕೊಳ್ಳಬೇಕು ಎಂದು ಹೇಳಿದರು.

ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು 144 ಸೆಕ್ಷನ್ ಜಾರಿ ಮಾಡಲಾಗಿದೆ. ರಾಜ್ಯದ ಹಾಗೂ ಜನತೆಯ ಹಿತದೃಷ್ಟಿಯಿಂದ ಆದೇಶ ಮಾಡಲಾಗಿದೆ. ಬಿಜೆಪಿಯವರನ್ನು ಮೊದಲು ಚಡ್ಡಿಗಳು ಎಂದೇ ಕರೆಯಲಾಗುತ್ತಿತ್ತು, ಈಗ ಚಡ್ಡಿ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಪ್ರತಿಭಟನೆಗೆ ನಮ್ಮ ತಕರಾರಿಲ್ಲ. ಆದರೆ ರಾಜಕೀಯ ಲಾಭಕ್ಕಾಗಿ ನೆಲ, ಜಲ, ಭಾಷೆಯ ವಿಷಯವನ್ನು ರಾಜಕಾರಣ ಮಾಡಬಾರದು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಡಿಎಂಕೆ ‘ಬಿ ಟೀಮ್’ ಎಂಬ ಬಿಜೆಪಿ ಆರೋಪ ರಾಜಕೀಯಪ್ರೇರಿತವಾದುದ್ದು. ಡಿಎಂಕೆ ತಮಿಳುನಾಡಿನವರು. ಬಿಜೆಪಿ ಪಕ್ಷ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿತ್ತು. ಅವರನ್ನು ಏನೆಂದು ಹೇಳಬೇಕು? ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿಗಳಿಗೆ ಪತ್ರ ಬರೆದಿರುವುದು ಸಂತೋಷದ ವಿಷಯ. ಅದನ್ನು ನಾನು ಸ್ವಾಗತಿಸಿದ್ದೇನೆ. ಆದರೆ ರಾಜ್ಯ ಸರ್ಕಾರ ವಿಫಲವಾಗಿದೆ ಎನ್ನುವುದು ಸುಳ್ಳು ಎಂದರು.

ಇದನ್ನೂ ಓದಿ: ಕಾವೇರಿ ಜಲ ನಿಯಂತ್ರಣ ಸಮಿತಿ ಆದೇಶ ಕನ್ನಡಿಗರ ಪಾಲಿಗೆ ಮರಣಶಾಸನ: ಹೆಚ್.ಡಿ.ಕುಮಾರಸ್ವಾಮಿ

ರಾಜ್ಯ ಸರ್ಕಾರ ಈ ರಾಜ್ಯದ ರೈತರ ಹಾಗೂ ರಾಜ್ಯದ ಹಿತರಕ್ಷಣೆಗೆ ಯಾವತ್ತೂ ಹಿಂದೆ ಬಿದ್ದಿಲ್ಲ; ಬೀಳುವುದೂ ಇಲ್ಲ. ನಮಗೆ ಅಧಿಕಾರ ಮುಖ್ಯವಲ್ಲ; ರಾಜ್ಯದ ಜನರ ಹಿತ ಮುಖ್ಯ. ಇದರಲ್ಲಿ ನಾವು ಬಲವಾದ ನಂಬಿಕೆ ಇಟ್ಟುಕೊಂಡಿರುವವರು. ಜನರು ಬಂದ್ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಬಂದ್, ಮೆರವಣಿಗೆ, ಪ್ರತಿಭಟನೆ ಮಾಡಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ಮಾಡಿದೆ. ಪ್ರತಿಭಟನೆ ಮಾಡುವವರು ಇದನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾವೇರಿ ನೀರು ನಿಯಂತ್ರಣ ಮಂಡಳಿ ಹಾಗೂ ಸರ್ವೋಚ್ಚ ನ್ಯಾಯಾಲಯದ ಮುಂದೆ ಸಂಕಷ್ಟ ಸೂತ್ರ ರೂಪಿಸಲು ನಾವು ಒತ್ತಡ ಹೇರುತ್ತಿದ್ದೇವೆ. ಏಕೆಂದರೆ, ಮಳೆ ಕೈಕೊಟ್ಟ ಸಂದರ್ಭದಲ್ಲಿ ಎರಡೂ ಕಡೆ ಸಂಕಷ್ಟ ಶುರುವಾಗುತ್ತದೆ. ಅಂಥ ಸಂದರ್ಭದಲ್ಲಿ ನಾವು ಸಂಕಷ್ಟ ಹಂಚಿಕೊಳ್ಳಬೇಕು. ಇಂತಹ ಸನ್ನಿವೇಶದಲ್ಲಿ ನೀರು ಹಂಚಿಕೆಯ ವಿಚಾರದಲ್ಲಿ ಸಂಕಷ್ಟ ಸೂತ್ರವಿರಬೇಕು. ಮತ್ತೊಂದು ಪರಿಹಾರವೆಂದರೆ, ಮೇಕೆದಾಟು ಯೋಜನೆ ಅನುಷ್ಠಾನ. ಈ ಜಲಾಶಯವಿದ್ದಿದ್ದರೆ 67 ಟಿಎಂಸಿ ನೀರು ಇರುತ್ತಿದ್ದು, ಅಲ್ಲಿ ನೀರಿದ್ದರೆ ತಮಿಳುನಾಡಿಗೆ ನೀರು ಬಿಡಲು ಅನುಕೂಲವಾಗುತ್ತಿತ್ತು. ಈ ಜಲಾಶಯದಿಂದ ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಿಗೆ ಅನುಕೂಲವಾಗುತ್ತಿತ್ತು ಎಂಬುದನ್ನು ಒತ್ತಿ ಹೇಳಿದರು.

ಕೇಂದ್ರದ ತಜ್ಞರು ರಾಜ್ಯದಲ್ಲಿ ಕಾವೇರಿ ನೀರಿನ ಲಭ್ಯತೆಯನ್ನು ವಾಸ್ತವವಾಗಿ ಪರಿಶೀಲಿಸುವ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಜನತಾದಳದ ವರಿಷ್ಠರಾದ ದೇವೇಗೌಡರು, ಈ ಬಗ್ಗೆ ಭೇಟಿಯಾಗಿದ್ದು, ಕೇಂದ್ರದೊಂದಿಗೆ ಅವರ ಹೊಸ ಸ್ನೇಹದಿಂದ ಪರಿಹಾರ ದೊರೆಯಬಹುದೇ ನೋಡಬೇಕಿದೆ. ರಾಜ್ಯ ಸರ್ಕಾರ ಪರಿಹಾರ ಸೂತ್ರ ಕೋರಿ ಬರೆದಿರುವ ಪತ್ರಕ್ಕೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಬಿಜೆಪಿಯ 25 ಸಂಸದರು ಪ್ರಧಾನಿಯವರ ಮೇಲೆ ಒತ್ತಡ ಹೇರಿ, ಕಾವೇರಿ ಸಮಸ್ಯೆಗೆ ಪರಿಹಾರ ದೊರಕಿಸಬೇಕು ಎಂದು ಒತ್ತಾಯಿಸಿದರು.

ಸಾಮಾನ್ಯ ವರ್ಷಗಳಲ್ಲಿ ತಮಿಳುನಾಡಿಗೆ ನೀರು ಬಿಡಬೇಕಾದ ಪ್ರಮಾಣದ ಬಗ್ಗೆ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಆದರೆ ಸಂಕಷ್ಟದ ಸಮಯದಲ್ಲಿ ಆ ರಾಜ್ಯಕ್ಕೆ ನೀರು ಬಿಡುವ ಪ್ರಮಾಣ ತಿಳಿಸುವ ಸಂಕಷ್ಟ ಸೂತ್ರ ಇನ್ನೂ ನಿರ್ಧಾರವಾಗಿಲ್ಲ. ಇಂತಹ ಸಂದರ್ಭದಲ್ಲಿ ಒಂದು ಸೌಹಾರ್ದ ಇತ್ಯರ್ಥಕ್ಕೆ ಬರುವುದೇ ಉತ್ತಮ. ಆದ್ದರಿಂದ ಕಾವೇರಿ ವಿವಾದದ ಇತ್ಯರ್ಥಕ್ಕೆ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು. ಕಾವೇರಿ ವಿಷಯದ ವಾದಮಂಡನೆಗೆ ಮೊದಲಿನಿಂದಲೂ ಇರುವ ಕಾನೂನೂ ತಂಡವೇ ಈಗಲೂ ಇದ್ದು, ಎಲ್ಲ ಪಕ್ಷದ ಸರ್ಕಾರದ ಅವಧಿಯಲ್ಲಿ ಇದ್ದ ತಂಡವೇ ಆಗಿದೆ ಎಂದು ಪ್ರತಿಕ್ರಿಯಿಸಿದರು.

ರಾಜಕೀಯ ರಾಜ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡದೆ ಪ್ರತಿಯೊಬ್ಬ ಭಾರತೀಯ ಪತ್ರಕರ್ತರನ್ನು ಬಹಿಷ್ಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಒಂದು ರಾಜಕೀಯ ಪಕ್ಷದ ಮುಖವಾಣಿಯಂತೆ ವರ್ತಿಸಿ ಮಾಧ್ಯಮ ನೀತಿಗೆ ಧಕ್ಕೆ ತಂದ 14 ಪತ್ರಕರ್ತರಿಗೆ ಬಹಿಷ್ಕಾರ ಹಾಕಿದ್ದು ಹೇಗೆ ತಪ್ಪು? ಎಂದು ಬಿಜೆಪಿ ವರಿಷ್ಠರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಜೆಪಿ ಅಧ್ಯಕ್ಷರಾದ ಜೆಪಿ ನಡ್ಡಾ ಅವರೆ, ದೇಶದ ಪ್ರಧಾನ ಮಂತ್ರಿ ಸನ್ಮಾನ್ಯ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾ ಗೋಷ್ಠಿಯನ್ನು ನಡೆಸದೆ ದೇಶದ ಎಲ್ಲಾ ಪತ್ರಕರ್ತರನ್ನು ಬಹಿಷ್ಕರಿಸಿರುವಾಗ…. ಒಂದು ಪಕ್ಷದ ತುತ್ತೂರಿಯಂತೆ ಕಾರ್ಯನಿರ್ವಹಿಸುತ್ತಾ ಮಾಧ್ಯಮ ಧರ್ಮಕ್ಕೆ ದ್ರೋಹ ಬಗೆಯುತ್ತಿರುವ 14 ಪತ್ರಕರ್ತರ ಮೇಲೆ ಬಹಿಷ್ಕಾರ ಹೇರಿದ್ದನ್ನು ಪ್ರಶ್ನಿಸುವ ಯಾವ ನೈತಿಕತೆ ನಿಮಗಿದೆ ಹೇಳಿ ಎಂದಿರುವ ಸಿದ್ದರಾಮಯ್ಯ, ಈ ಕೆಳಗಿನ ಮಾಹಿತಿಯನ್ನು ಎಕ್ಸ್ ಪೇಜ್ ನಲ್ಲಿ ಪ್ರಕಟಿಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.  

ಸತ್ಯದ ವರದಿ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾದ ಪತ್ರಕರ್ತರು: 1) ಸಿದ್ದಿಕ್ ಕಪ್ಪನ್, 2) ಮೊಹಮ್ಮದ್‌ ಝುಬೇರ್, 3) ಅಜಿತ್ ಓಝಾ, 4) ಜಸ್ಪಾಲ್‌ ಸಿಂಘ್‌, 5) ಸಜದ್ ಗುಲ್, 6) ಕಿಶೋರಚಂದ್ರ ವಾಂಗ್‌ಖೇನ್ 7) ಪ್ರಶಾಂತ್ ಕನೋಜಿಯಾ.

ಇದನ್ನೂ ಓದಿ: ಸುಳ್ಳು ಸುದ್ದಿ, ವದಂತಿಗಳ ಮೂಲಕ ಸಮಾಜದ ಶಾಂತಿ ಕದಡುವವರ ವಿರುದ್ಧ ಸ್ವಯಂಪ್ರೇರಿತ ಎಫ್.ಐ.ಆರ್ ದಾಖಲಿಸಿ! – ಸಿದ್ದರಾಮಯ್ಯ

ಸತ್ಯದ ದನಿಯಾಗಿ ನಿಂತಿದ್ದಕ್ಕೆ ಮೋದಿ ಆಡಳಿತದಲ್ಲಿ ಕೊಲೆಯಾದ ಪತ್ರಕರ್ತರು: 1) ರಾಕೇಶ್ ಸಿಂಗ್ ಉತ್ತರ ಪ್ರದೇಶ, ಸರ್ಕಾರಿ ನಿಧಿ ಅವ್ಯವಹಾರ ಕುರಿತು ವರದಿ 2) ಶುಭಂ ಮಣಿ ತ್ರಿಪಾಠಿ, ಉತ್ತರ ಪ್ರದೇಶ, ಮರಳು ದಂಧೆ ಕುರಿತು ವರದಿ 3) ಜಿ.ಮೋಸೆಸ್‌, ತಮಿಳುನಾಡು, ಗೋಮಾಳ ಅಕ್ರಮ ಮಾರಾಟ ಕುರಿತು ವರದಿ 4) ಪರಾಗ್‌ ಭುಯಾನ್, ಅಸ್ಸಾಮ್‌, ಎಸ್‌.ಐ ನೇಮಕಾತಿ ಹಗರಣ ಕುರಿತು ವರದಿ 5) ಗೌರಿ ಲಂಕೇಶ್‌, ಕೋಮುವಾದ ವಿರೋಧಿಸಿದ್ದಕ್ಕೆ.

ಪತ್ರಿಕಾ ಸ್ವಾತಂತ್ಯ್ರ: ಜಗತ್ತಿನಲ್ಲಿ ಭಾರತದ ಸ್ಥಾನ, ಅವಸಾನ..!! 2015ರಲ್ಲಿ 136ನೇ ಸ್ಥಾನ, 2019ರಲ್ಲಿ 140ನೇ ಸ್ಥಾನ, 2022ರಲ್ಲಿ 150ನೇ ಸ್ಥಾನ, 2023ರಲ್ಲಿ 161ನೇ ಸ್ಥಾನ.

ಪಕ್ಷವೊಂದು ಸುದ್ದಿ ಮಾಧ್ಯಮಕ್ಕೆ ಬರುವುದಿಲ್ಲ, ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದು ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸಿದ್ದು ನಿಜವಾದ ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ…!! ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಗೆ ಇಂದು ಚಾಲನೆ; ತಮಿಳುನಾಡಿನಲ್ಲಿ ಸಂಭ್ರಮದ ವಾತಾವರಣ!