ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಸಿದ್ದರಾಮಯ್ಯ Archives » Page 9 of 13 » Dynamic Leader
October 23, 2024
Home Posts tagged ಸಿದ್ದರಾಮಯ್ಯ (Page 9)
ರಾಜಕೀಯ

ಬೆಂಗಳೂರು: ಕಾವೇರಿ ಜಲವಿವಾದ ಕುರಿತಂತೆ ಇಂದು ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತುಗಳು:

ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಸಾಮಾನ್ಯ ವರ್ಷಗಳಲ್ಲಿ 177.25 ಟಿಎಂಸಿ ನೀರು ಬಿಡಬೇಕು. ಆದರೆ ದುರದೃಷ್ಟವಶಾತ್‌ ಸಂಕಷ್ಟ ಹಂಚಿಕೆ ಸೂತ್ರವಿಲ್ಲದ ಕಾರಣ ನಾವು ಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದೇವೆ. ಈ ವರೆಗೆ 99 ಟಿಎಂಸಿ ನೀರು ಕೊಡಬೇಕಾಗಿತ್ತು. 37.7 ಟಿಎಂಸಿ ನೀರು ಬಿಡಲಾಗಿದೆ. ಈಗಲೂ ನೀರು ಬಿಡಲಾಗದೆ ಇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ 70 ಟಿಎಂಸಿ ನೀರು ಬೆಳೆ ಉಳಿಸಿಕೊಳ್ಳಲು ಬೇಕು. 33 ಟಿಎಂಸಿ ಕುಡಿಯುವ ನೀರಿಗಾಗಿ ಬೇಕು. ಜೊತೆಗೆ 3 ಟಿಎಂಸಿ ಕೈಗಾರಿಕೆಗಳಿಗೆ ಬೇಕು. ಆದರೆ ಈಗ ನಾಲ್ಕೂ ಜಲಾಶಯಗಳಿಂದ ಲಭ್ಯವಿರುವುದು 53 ಟಿಎಂಸಿ ನೀರು ಮಾತ್ರ. ಬೆಳೆಗಳಿಗೆ ಕಟ್ಟುನೀರು ಬಿಡಲಾಗುತ್ತಿದೆ. ಇದರಲ್ಲಿ ನಾವು 33 ಟಿಎಂಸಿ ಕುಡಿಯುವ ನೀರಿಗೆ ಹಾಗೂ 3 ಟಿಎಂಸಿ ಕೈಗಾರಿಕೆಗಳಿಗೆ ಒದಗಿಸಬೇಕಾಗುತ್ತದೆ. ಬೆಳೆಗಳಿಗೆ ಸಾಕಾಗುವುದಿಲ್ಲ ಎಂದು ಹೇಳಿದರು.

ಕಾವೇರಿ ನೀರು ನಿರ್ವಹಣಾ ಸಮಿತಿ ನಿನ್ನೆ ಐದು ಸಾವಿರ ಕ್ಯೂಸೆಕ್ಸ್‌ ನೀರು ಬಿಡುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆಯನ್ನು ಕರೆಯಲಾಗಿತ್ತು. ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಭೆ ಕರೆದಿದ್ದೆವು. ತುರ್ತಾಗಿ ಆಯೋಜನೆಯಾದ ಈ ಸಭೆಗೆ ಕೆಲವರು ಪೂರ್ವನಿರ್ಧಾರಿತ ಕಾರ್ಯಕ್ರಮಗಳ ಕಾರಣ ಗೈರಾಗಿದ್ದಾರೆ. ಕಾವೇರಿ ನೀರು ನಿಯಂತ್ರಣ ಸಮಿತಿಗೆ ಮತ್ತೊಂದು ಅರ್ಜಿ ಸಲ್ಲಿಸಲಾಗುವುದು. ಸುಪ್ರೀಂ ಕೋರ್ಟಿನಲ್ಲಿಯೂ ಅರ್ಜಿ ಸಲ್ಲಿಸಲಾಗುವುದು. ಅಲ್ಲಿಯೂ ವಾಸ್ತವಾಂಶ ತಿಳಿಸುವ ಕೆಲಸ ಮಾಡಲಾಗುವುದು. ಈಗ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಬಗ್ಗೆ ಹಾಗೂ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ವಕೀಲರ ತಂಡದೊಂದಿಗೆ ಚರ್ಚಿಸಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು.

ಇದನ್ನೂ ಓದಿ: ನೆಲ, ಜಲ, ಭಾಷೆ ಬಗ್ಗೆ ತಮಿಳುನಾಡಿನವರಿಗೆ ಇರುವ ಬದ್ಧತೆ ನಮ್ಮವರಿಗಿಲ್ಲ; ನಮ್ಮವರಲ್ಲಿ ಉಪೇಕ್ಷೆ, ಉಡಾಫೆ ಹೆಚ್ಚು! – ಹೆಚ್.ಡಿ.ಕುಮಾರಸ್ವಾಮಿ

ಸರ್ವಪಕ್ಷ ನಿಯೋಗ ತೆರಳಲು ಅನುವು ಮಾಡಿಕೊಡುವಂತೆ ಪ್ರಧಾನಮಂತ್ರಿಯವರ ಸಮಯ ಕೇಳಿ ಮತ್ತೊಮ್ಮೆ ಪತ್ರ ಬರೆಯಲಾಗುವುದು. ಸಂಸದರೂ ಹೋರಾಟ ಮಾಡುವ ಭರವಸೆ ನೀಡಿದ್ದಾರೆ. 18 ರಿಂದ ಸಂಸತ್‌ ಅಧಿವೇಶನ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಹಾಗೂ ಸಂಸದರೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿ ಚರ್ಚಿಸಿ, ದೇಶದ ಗಮನ ಸೆಳೆಯಲಾಗುವುದು. ಇದಕ್ಕೆ ಎಲ್ಲರೂ ಸಹಮತಿ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ರಾಜಕೀಯ

ಬೆಂಗಳೂರು: ಸನಾತನ ಧರ್ಮದ ಬಗೆಗಿನ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ತಕ್ಕ ಪ್ರತ್ಯುತ್ತರ ನೀಡಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಅತ್ಯಂತ ಪ್ರಚೋದನಕಾರಿಯಾದುದು ಮಾತ್ರವಲ್ಲ ಸಂವಿಧಾನ ವಿರೋಧಿಯಾಗಿದೆ. ಈ ಪ್ರಚೋದನಕಾರಿ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ವಿಷಯ-ವಿದ್ಯಮಾನಗಳೇನೇ ಇರಲಿ, ಯಾರಾದರೂ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ. ಇದರ ಬದಲಿಗೆ ತಕ್ಕ ಪ್ರತ್ಯುತ್ತರ ನೀಡಿ ಎಂದು ಜನರನ್ನು ಪ್ರಚೋದಿಸುವುದು, ಕಾನೂನನ್ನು ಕೈಗೆತ್ತಿಕೊಳ್ಳಲು ನೀಡುವ ಕರೆಯಾಗುತ್ತದೆ. ಇದನ್ನು ಪ್ರಧಾನಿ ಮಾಡಿದರೂ ಅಪರಾಧವೇ ಆಗುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಬಿಜೆಪಿಯ ನಾಯಕರಲ್ಲ, ಅವರು ಸಾಂವಿಧಾನಿಕ ಹುದ್ದೆಯಾದ ಪ್ರಧಾನಮಂತ್ರಿಯ ಕುರ್ಚಿಯಲ್ಲಿ ಕುಳಿತಿರುವವರು. ಹೀಗಿರುವಾಗ ಅವರ ನಡೆ-ನುಡಿ ಮತ್ತು ಕ್ರಿಯೆ-ಪ್ರತಿಕ್ರಿಯೆ ಆ ಸ್ಥಾನದ ಘನತೆ-ಗೌರವ ಮತ್ತು ಜವಾಬ್ದಾರಿಗಳಿಗೆ ತಕ್ಕಂತೆ ಇರಬೇಕಾಗಿರುವುದು ರಾಜಧರ್ಮವಾಗಿದೆ. ನರೇಂದ್ರ ಮೋದಿ ಅವರು ಇನ್ನೂ ಆರ್‌ಎಸ್‌ಎಸ್‌ ನ ತನ್ನ ಪೂರ್ವಾಶ್ರಮದ ಗುಂಗಿನಲ್ಲಿದ್ದಂತೆ ಕಾಣುತ್ತಿದೆ. ತಾನು ಈ ದೇಶದ 140 ಕೋಟಿ ಜನರಿಗೂ ಪ್ರಧಾನಿ ಎನ್ನುವುದನ್ನು ಮರೆತಂತಿದೆ. ಪ್ರಧಾನಿಯವರ ಇಂತಹ ಹೇಳಿಕೆಗಳಿಂದ ಪ್ರಚೋದಿತರಾಗಿ ಅವರದ್ದೇ ಪಕ್ಷ ಮತ್ತು ಸಂಘಟನೆಯ ಅನೇಕ ನಾಯಕರು ಹಿಂಸಾಚಾರಕ್ಕೆ ಕರೆನೀಡುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಹಿಂದಿನ ನಡವಳಿಕೆಗಳನ್ನು ಗಮನಿಸಿದರೆ ಅವರ ಈಗಿನ ಹೇಳಿಕೆಗಳು ಅಚ್ಚರಿ ಹುಟ್ಟಿಸುವುದಿಲ್ಲ. ಗುಜರಾತ್ ಗಲಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರು ನಡೆದುಕೊಂಡ ರೀತಿಯ ಬಗ್ಗೆ ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರೇ ಅಸಮಾಧಾನ ವ್ಯಕ್ತಪಡಿಸಿ, ರಾಜಧರ್ಮ ಪಾಲಿಸಲು ಕರೆ ಕೊಟ್ಟಿದ್ದರು. ದಿವಂಗತ ವಾಜಪೇಯಿ ಅವರ ಆ ಬುದ್ದಿಮಾತನ್ನೇ ಈ ಸಂದರ್ಭದಲ್ಲಿ ಮೋದಿಯವರಿಗೆ ನೆನಪು ಮಾಡಿಕೊಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ರಾಜಕೀಯ

ಶಾಲಾ ವಿದ್ಯಾರ್ಥಿಗಳಿಗೆ ಬಿಸಿ ಹಾಲು ನೀಡುವ ಕ್ಷೀರಭಾಗ್ಯ ಯೋಜನೆಗೆ ಈಗ ದಶಮಾನೋತ್ಸವದ ಸಂಭ್ರಮ. ಈ ಸಡಗರವನ್ನು ಶಾಲೆಗಳಲ್ಲಿ ಖುಷಿಖುಷಿಯಾಗಿ ಹಾಲು ಕುಡಿಯುತ್ತಿರುವ ಮಕ್ಕಳ ಮುಖಗಳಲ್ಲಿ ನಾನು ಕಾಣುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

“ಒಂದನೇ ತರಗತಿಯಲ್ಲಿ ಬಿಸಿ ಹಾಲು ಕುಡಿಯಲಾರಂಭಿಸಿದ ಮಗುವೊಂದು ಈಗ ಹತ್ತನೇ ತರಗತಿಯ ಪ್ರೌಡ ವಿದ್ಯಾರ್ಥಿಯಾಗಿ ಕ್ಷೀರಭಾಗ್ಯ ಯೋಜನೆಯಿಂದ ತನ್ನ ದೇಹಕ್ಕೆ ಬಲ ಬಂತು, ಓದಲು ಹುಮ್ಮಸ್ಸು ಬಂತು ಎಂದೆಲ್ಲ ಹೇಳುತ್ತಿರುವುದನ್ನು ಕೇಳಿದಾಗ ಯೋಜನೆಯ ಉದ್ದೇಶ ಸಾರ್ಥಕವಾಯಿತು ಎಂದು ಅನಿಸುತ್ತದೆ.

ಇದನ್ನೂ ಓದಿ: ಒಂದು ಕೋಟಿ ಗೋವಿಂದ ನಾಮ ಬರೆಯುವವರಿಗೆ ವಿಐಪಿ ದರ್ಶನ: ತಿರುಪತಿಯಲ್ಲಿ ಆಫರ್!

ಅಪೌಷ್ಟಿಕತೆ ನಿವಾರಣೆಯ ಜೊತೆಗೆ ಕಲಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ 2013ರಲ್ಲಿ ನಮ್ಮ ಸರ್ಕಾರವು ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿತ್ತು. ಕ್ಷೀರಭಾಗ್ಯ ಜಾರಿಗೊಂಡ ನಂತರದಿಂದ ಶಾಲಾ ಮಕ್ಕಳ ಪೌಷ್ಟಿಕ ಮಟ್ಟ ಸುಧಾರಣೆಯಾಗಿದೆ, ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಾಗಿದೆ ಮತ್ತು ರಾಜ್ಯದ ಹಾಲು ಉತ್ಪಾದಕ ಒಕ್ಕೂಟಗಳಿಗೂ ಬಲ ಬಂದಿದೆ ಎನ್ನುವುದನ್ನು ತಿಳಿಸಲು ಹೆಮ್ಮೆಯಾಗುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೇಮ್ ಚೇಂಜರ್ಸ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕೇವಲ ನೇಮ್ ಚೇಂಜರ್ಸ್ ಆಗಿದೆ!

ರಾಜಕೀಯ ರಾಜ್ಯ

“ಕರ್ನಾಟಕ ಆದಿಜಾಂಬವರ ಸಾಂಸ್ಕೃತಿಕ ಸಮಿತಿ ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ, ಸಿದ್ದಲಿಂಗಯ್ಯ ಅವರ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಬರೀ ಅಂಬಾನಿ – ಅದಾನಿ ಜೇಬಿನಲ್ಲಿ ಹಣ ಇದ್ದರೆ ಬಡವರ, ಮಧ್ಯಮ ವರ್ಗದವರ ಉದ್ಧಾರ ಸಾಧ್ಯವಿಲ್ಲ. ತಿಮ್ಮ-ಬೋರ-ಕಾಳನ ಜೇಬಿನಲ್ಲಿ ಹಣ ಇದ್ದರೆ ಮಾತ್ರ ಆರ್ಥಿಕತೆ ಬೆಳವಣಿಗೆ ಆಗುತ್ತದೆ. ದುಡಿಯುವವರ, ಶ್ರಮಿಕರ ಜೇಬಿನಲ್ಲಿ ಹಣ ಇದ್ದರೆ ಅವರು ದೇಶದ ಆರ್ಥಿಕತೆಯ ಬೆಳವಣಿಗೆಗೆ ಕಾರಣರಾಗುತ್ತಾರೆ. ಕೇವಲ ಅಂಬಾನಿ, ಅದಾನಿ ಜೇಬು ತುಂಬಿಸುವವರ ಕೈಗೆ ಅಧಿಕಾರ ಕೊಟ್ಟು ಇಡೀ ದೇಶ ಪರಿತಪಿಸುವಂತಾಗಿದೆ. ಈ ಕಾರಣಕ್ಕೆ ನಾವು ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಕಾರ್ಯಕ್ರಮಗಳನ್ನು ಜಾರಿ ಮಾಡಿ ಜನರ ಜೇಬಿಗೆ ಹಣ ಹಾಕುವ ಕೆಲಸಕ್ಕೆ ಮುಂದಾಗಿದ್ದೇವೆ. ಇದರಿಂದ ನಮ್ಮ ಆರ್ಥಿಕತೆ ಚೈತನ್ಯ ಪಡೆದುಕೊಳ್ಳುತ್ತಿದೆ.

ದೇಶಕ್ಕೆ ಬಂದಿರುವ ರಾಜಕೀಯ ಸ್ವಾತಂತ್ರ್ಯ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ಜಾರಿ ಆಗದಿದ್ದರೆ ಸ್ವಾತಂತ್ರ್ಯಕ್ಕೆ ಅರ್ಥ ಇಲ್ಲ ಎಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಸಂವಿಧಾನದ ವಿರೋಧಿಗಳ ಕೈಗೆ ಅಧಿಕಾರ ಕೊಟ್ಟು ಸಮಾನತೆ ಬರಬೇಕು ಎಂದರೆ ಹೇಗೆ ಸಾಧ್ಯ? ಅಂಬಾನಿ – ಅದಾನಿಯವರ ಜೇಬು ತುಂಬಿಸುವವರ ಕೈಗೆ ಅಧಿಕಾರ ಕೊಟ್ಟು ಬಡವರ, ಮಧ್ಯಮ ವರ್ಗದವರ ಉದ್ಧಾರ ಆಗಬೇಕು ಎಂದರೆ ಹೇಗೆ ಸಾಧ್ಯ? ಸಿದ್ದಲಿಂಗಯ್ಯ ಅವರ ಆಶಯಗಳನ್ನು ಬದುಕಿನಲ್ಲಿ ಇಟ್ಟುಕೊಂಡವರಿಗೆ ಜೀವ ಬೆದರಿಕೆ ಪತ್ರಗಳು ಬರುತ್ತಿವೆ. ಈ ಬೆದರಿಕೆ ಪತ್ರ ಬರೆಯುವವರನ್ನು ಬೆಂಬಲಿಸುವವರ ಕೈಗೆ ಅಧಿಕಾರ ಕೊಟ್ಟು ಯಾರಿಗೆ ಬಂತು? ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ? ಎಂದು ಪ್ರಶ್ನಿಸಿದರೆ ಹೇಗೆ?” ಎಂದು ಪ್ರಶ್ನಿಸಿದರು.

ಮಾಜಿ ಸಚಿವರಾದ ಹೆಚ್.ಆಂಜನೇಯ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಹಿರಿಯ ಸಾಹಿತಿಗಳಾದ ಕೆ.ಮರುಳಸಿದ್ದಪ್ಪ, ಎಸ್.ಜಿ ಸಿದ್ದರಾಮಯ್ಯ, ಅಗ್ರಹಾರ ಕೃಷ್ಣಮೂರ್ತಿ ಹಾಗೂ ಪ್ರಜಾವಾಣಿ ಪತ್ರಿಕೆ ಸಂಪಾದಕರಾದ ರವೀಂದ್ರ ಭಟ್, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಇಂದಿರಾ ಕೃಷ್ಣಪ್ಪ, ಪ್ರೊ.ಜಾಫೆಟ್ ಸೇರಿ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಹುಂಡಿಯಲ್ಲಿ ರೂ.100 ಕೋಟಿ ಚೆಕ್ ಪಾವತಿಸಿದ ಭಕ್ತ; ಬ್ಯಾಂಕ್ ಮೊರೆ ಹೋದ ದೇವಸ್ಥಾನದ ಆಡಳಿತಾಧಿಕಾರಿಗಳಿಗೆ ನಿರಾಸೆ!

ರಾಜಕೀಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಸಭೆ ನಡೆಸಿ, ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್, ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಮೋಹನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರು ಉಪಸ್ಥಿತರಿದ್ದರು.

ಪ್ರಜಾಪ್ರಭುತ್ವಕ್ಕೆ ಬೆದರಿಕೆಯೊಡ್ಡುವ ಹಾಗೂ ಸಮಾಜದ ಸ್ವಾಸ್ಥ್ಯ ಕದಡುವ ಸುಳ್ಳು ಸುದ್ದಿಗಳ ನಿಯಂತ್ರಣ ಮಾಡಬೇಕಿದ್ದು, ರಾಜ್ಯದಲ್ಲಿ ಫ್ಯಾಕ್ಟ್ ಚೆಕ್ ಘಟಕ ಸ್ಥಾಪನೆ ಸೇರಿದಂತೆ ಅಗತ್ಯ ಇರುವ ಎಲ್ಲಾ ನಿಯಮ ಮತ್ತು ಕಾನೂನು ರೂಪಿಸಲಾಗುವುದು. ಸುಳ್ಳು ಸುದ್ದಿಗಳು ಮತ್ತು ಸುಳ್ಳು ಸುದ್ದಿ ಸೃಷ್ಟಿಸುವ ಸಿಂಡಿಕೇಟ್ ಗಳ ಪತ್ತೆ, ಸುಳ್ಳು ಸುದ್ದಿ ಪ್ರಸಾರಕ್ಕೆ ತಡೆ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂರು ಹಂತಗಳ ಕ್ರಮಕ್ಕೆ ಅನುಮೋದನೆ ನೀಡಲಾಯಿತು.

ರಾಜಕೀಯ

ತಮಿಳುನಾಡು ಕುರುವೈ ಬೆಳೆಗೆ ಎರಡು ಪಟ್ಟು ನೀರು ಬಳಕೆ ಮಾಡಿದೆ. ನಾಲ್ಕು ಪಟ್ಟು ಕುರುವೈ ಬೆಳೆ ಕ್ಷೇತ್ರ ವಿಸ್ತರಣೆ ಮಾಡಿದೆ. ಕರ್ನಾಟಕ ಸರ್ಕಾರ ಇದನ್ನು ಸಿಡಬ್ಲುಎಂಎದಲ್ಲಿ ಪ್ರತಿಭಟಿಸದೇ ಮತ್ತು ಅವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದ ತಕ್ಷಣ ನೀರು ಬಿಟ್ಟಿರುವುದು ಅಕ್ಷಮ್ಯ ಅಪರಾಧ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

“ರಾಜ್ಯದ ರೈತರಿಗೆ ಈ ಮೊದಲು ನೀರು ಬಿಡದೇ ನಮ್ಮ ರಾಜ್ಯದ ರೈತರ ಪಾಲನ್ನು ಡ್ಯಾಂನಲ್ಲಿ ಸ್ಟೋರೇಜ್ ಮಾಡಿ, ರಾಜ್ಯದ ರೈತರಿಗೆ ನೀರು ಕೊಡುವ ತೀರ್ಮಾನ ವಿಳಂಬ ಮಾಡಿ ಈಗ ನಮ್ಮ ರೈತರ ಪಾಲಿನ ನೀರನ್ನು ತಮಿಳುನಾಡಿಗೆ ಹರಿಸುವ ಸ್ಥಿತಿ ನೀವು ತಂದೊಡ್ಡಿದ್ದೀರಿ.

ಇದನ್ನೂ ಓದಿ: ಹುಟ್ಟಿನಿಂದ ಮನುಷ್ಯರು ಎಲ್ಲರೂ ಸಮಾನರು; ಜನರ ನಡುವೆ ತಾರತಮ್ಯ ಮಾಡುವುದು ಅವಮಾನಕರ! – ನಟ ಕಮಲಹಾಸನ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾವೇರಿ ನೀರನ್ನು ಬಿಡಲು ಸಾಧ್ಯವಿಲ್ಲ ಎಂಬ ಹೇಳಿಕೆ ಕೊಟ್ಟ ಮರುದಿನವೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನೀರಾವರಿ ಇಲಾಖೆ ತಮಿಳುನಾಡಿಗೆ ನೀರು ಬಿಟ್ಟಿರುವುದು, ರಾಜ್ಯದಲ್ಲಿ ಕಾವೇರಿ ನೀರು ನಿರ್ವಹಣೆಯಲ್ಲಿ ಒಮ್ಮತ ಇಲ್ಲ ಹಾಗೂ ನಮ್ಮ ರಾಜ್ಯದ ನೀರಿನ ಪಾಲನ್ನು ರಕ್ಷಣೆ ಮಾಡುವಂತ ಛಲವೂ ಕಾಣಿಸುತ್ತಿಲ್ಲ.

ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಿ, ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಈ ವಿಚಾರದಲ್ಲಿ ರಾಜ್ಯದ ರೈತರ ಹಿತ ಕಾಯಬೇಕು” ಎಂದು ಹೇಳಿದ್ದಾರೆ.

ರಾಜಕೀಯ

ಸಂವಿಧಾನದಲ್ಲಿ ಒಳಮೀಸಲಾತಿಗೆ ಅವಕಾಶ ಇಲ್ಲ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯಸಚಿವ ನಾರಾಯಣ ಸ್ವಾಮಿಯವರು ರಾಜ್ಯಸಭೆಗೆ ತಿಳಿಸಿದ್ದು, ಈ ಮೂಲಕ ಒಳಮೀಸಲಾತಿಗೆ ಡಬಲ್ ಎಂಜಿನ್ ಸರ್ಕಾರ ಬದ್ಧವಾಗಿದೆ ಎಂಬ ಬಿಜೆಪಿ ಪಕ್ಷದ ಹಿಪಾಕ್ರಟಿಕ್ ನಡವಳಿಕೆ ಬಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

“ಒಳಮೀಸಲಾತಿ ವಿಷಯದ ಕಟ್ಲೆ ಸುಪ್ರಿಂ ಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ. ಸುಪ್ರೀಂಕೋರ್ಟ್ ನ ಐವರು ನ್ಯಾಯಾಧೀಶರ ಪೀಠವು ಒಳಮೀಸಲಾತಿ ವಿಷಯವನ್ನು ಏಳು ನ್ಯಾಯಾಧೀಶರ ಪೀಠಕ್ಕೆ ವರ್ಗಾವಣೆ ಮಾಡಬೇಕೆಂದು ಮುಖ್ಯನ್ಯಾಯಮೂರ್ತಿಯನ್ನು ಕೋರಿದ್ದಾರೆ. ಇದರಿಂದಾಗಿ ಇದಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ‘ಸಬ್ ಜುಡೀಸ್’ ಆಗುತ್ತದೆ” ಎಂದು ಬಿಜೆಪಿ ಸದಸ್ಯ ಜಿ.ವಿ.ಎಲ್.ನರಸಿಂಹರಾವ್ ಅವರ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಸಚಿವ ನಾರಾಯಣ ಸ್ವಾಮಿ ಜಾರಿಕೊಂಡಿದ್ದಾರೆ.

“ಒಳಒಳಮೀಸಲಾತಿಗಾಗಿ ಸಂವಿಧಾನದ 341ನೇ ಪರಿಚ್ಚೇದಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ ಎಂದು ಈ ಉದ್ದೇಶಕ್ಕಾಗಿಯೇ ರಚಿಸಲಾಗಿರುವ ರಾಷ್ಟ್ರೀಯ ಆಯೋಗ ಶಿಫಾರಸು ಮಾಡಿತ್ತು. ಈ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅಭಿಪ್ರಾಯಗಳನ್ನು ನೀಡಲು ಕೋರಲಾಗಿತ್ತು. ಆದರೆ ಇಲ್ಲಿಯವರೆಗೆ 20 ರಾಜ್ಯ ಸರ್ಕಾರಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಮಾತ್ರ ತಮ್ಮ ಅಭಿಪ್ರಾಯವನ್ನು ತಿಳಿಸಿದೆ” ಎಂದು ಹೇಳಿದ್ದಾರೆ.

“ಈ 20 ರಾಜ್ಯಗಳಲ್ಲಿ ಏಳು ರಾಜ್ಯಗಳು ಮಾತ್ರ ಒಳಮೀಸಲಾತಿಗೆ ಒಪ್ಪಿಗೆ ಸೂಚಿಸಿದ್ದು ಉಳಿದ 13 ರಾಜ್ಯಗಳು ವಿರೋಧಿಸಿವೆ” ಎಂದು ಹೇಳುವ ಮೂಲಕ ಬಹುಸಂಖ್ಯಾತ ರಾಜ್ಯಗಳು ಒಳಮೀಸಲಾತಿಗೆ ವಿರುದ್ಧವಾಗಿವೆ ಎಂಬ ಸೂಚನೆಯನ್ನೂ ಸಚಿವ ನಾರಾಯಣಸ್ವಾಮಿ ನೀಡಿದ್ದಾರೆ. ಒಳಮೀಸಲಾತಿ ಜಾರಿಗೆ ತಮ್ಮ ಪಕ್ಷ ಬದ್ಧವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶೀಘ್ರದಲ್ಲಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭರವಸೆ ನೀಡಿದ್ದ ಬಿಜೆಪಿ ನಾಯಕರು ಆ ಸಮಯದಲ್ಲಿ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದಾಗಲಿ, ಈ ಬಗ್ಗೆ ಕೈಗೊಳ್ಳುವ ನಿರ್ಧಾರ ಸಬ್ ಜುಡಿಸ್ ಆಗುತ್ತದೆ ಎಂದಾಗಲಿ ಯಾಕೆ ಹೇಳಿಲ್ಲ?

2020ರ ಆಗಸ್ಟ್ ತಿಂಗಳಲ್ಲಿಯೇ ಐವರು ನ್ಯಾಯಾಧೀಶರ ಪೀಠವು ಏಳು ನ್ಯಾಯಾಧೀಶರ ಪೀಠ ರಚಿಸುವಂತೆ ಕೋರಿಕೆ ಸಲ್ಲಿಸಿದ್ದರೂ ಇಲ್ಲಿಯ ವರೆಗೆ ಯಾಕೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿಲ್ಲ? ಇದೇ ವಿಷಯವನ್ನು ನಾವು ಪ್ರಶ್ನಿಸಿದಾಗ ಸಂವಿಧಾನಕ್ಕೆ ತಿದ್ದುಪಡಿ ಮಾಡದೆಯೇ ಒಳಮೀಸಲಾತಿ ಜಾರಿಗೊಳಿಸುವುದಾಗಿ ಸುಳ್ಳು ಭರವಸೆ ನೀಡಿದ್ದು ಯಾಕೆ? ಬಹಿರಂಗವಾಗಿ ದಲಿತ ಸಮುದಾಯದ ಬಗ್ಗೆ ಹುಸಿಪ್ರೀತಿ-ಕಾಳಜಿ ವ್ಯಕ್ತಪಡಿಸುವ ಬಿಜೆಪಿ ಮತ್ತು ಸಂಘ ಪರಿವಾರ, ಅಂತರಂಗದಲ್ಲಿ ಮೀಸಲಾತಿಯೂ ಸೇರಿದಂತೆ ಸಾಮಾಜಿಕ ನ್ಯಾಯದ ಯಾವುದೇ ಉಪಕ್ರಮಗಳಿಗೆ ವಿರುದ್ಧವಾಗಿದೆ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಎಂದು ಹೇಳಿದ್ದಾರೆ.

ದೇಶ ರಾಜ್ಯ

ನಾನು ಆಯವ್ಯಯ ಸಿದ್ಧತೆಗೆ ಕುಳಿತಾಗ ಬುದ್ಧ, ಬಸವಣ್ಣ, ಅಂಬೇಡ್ಕರ್‌, ಗಾಂಧೀಜಿ, ನೆಹರು, ಮಹಾತ್ಮ ಫುಲೆ, ಕುವೆಂಪು, ನಾರಾಯಣ ಗುರುಗಳು ಇಂತಹ ಮಹಾತ್ಮರು ನೆನಪಾಗುತ್ತಾರೆ. ಇವರೆಲ್ಲರ ಕನಸಿನ ನಾಡನ್ನು ಕಟ್ಟುವ ಆಶಯದ ಬಜೆಟ್ ರೂಪಿಸಬೇಕು ಎನ್ನುವುದು ನನ್ನ ಬದ್ಧತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

“ಸಾಮಾಜಿಕ ಸ್ವಾತಂತ್ರ್ಯ ಇಲ್ಲದ ರಾಜಕೀಯ ಸ್ವಾತಂತ್ರ್ಯ ಏನು ಪ್ರಯೋಜನ? ಎಂದು ಬಾಬಾ ಸಾಹೇಬರು ಪ್ರಶ್ನಿಸಿದ್ದರು. ಅದಕ್ಕಾಗಿಯೇ ಅವರು, “ರಾಜಕೀಯ ಪ್ರಭುತ್ವದ ತಳಪಾಯ ಸಾಮಾಜಿಕ ಪ್ರಭುತ್ವದಲ್ಲಿರಬೇಕು” ಎಂದಿದ್ದರು. ಬಸವಣ್ಣ ದಾಸೋಹದ ಮಹತ್ವ ಹೇಳಿದ್ದರು. ಹೀಗೆ‌ ಈ ಎಲ್ಲಾ ಮಹಾನುಭಾವರ ಸರ್ವರನ್ನೂ ಒಳಗೊಳ್ಳುವ ಪ್ರಗತಿಯ ಮಾದರಿಯನ್ನು ನಾನು ಪಾಲಿಸಿದ್ದೇನೆ. ಸರ್ವರ ಅಭಿವೃದ್ಧಿಗೆ ಪೂರಕವಾದ ಬಜೆಟ್ ರೂಪಿಸಿದ್ದೇನೆ.

ನಾವು ಚುನಾವಣೆಯಲ್ಲಿ ಕೊಟ್ಟ ಭರವಸೆಯನ್ನು ಬಜೆಟ್ ನಲ್ಲಿ ಈಡೇರಿಸಿದ್ದೇವೆ. ಬಜೆಟ್ ನಲ್ಲಿ ಅಗತ್ಯ ಅನುದಾನ ಕೊಟ್ಟು ಐದು ಗ್ಯಾರಂಟಿಗಳಲ್ಲಿ ನಾಲ್ಕನ್ನು ಈಗಾಗಲೇ ಜಾರಿ ಮಾಡಿದ್ದೇವೆ. ನಾವು ಹೇಳಿದ್ದನ್ನು ಮಾಡಿದ್ದೇವೆ. ಬಿಜೆಪಿಯವರು “ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ” ಎಂದರು. ಆದರೆ ತಾವು ಹೇಳಿದಂತೆ ನಡೆದುಕೊಳ್ಳಲಿಲ್ಲ. ಹೀಗಾಗಿ ಬಿಜೆಪಿಯ ಟೊಳ್ಳುತನ, ಬೇಜವಾಬ್ದಾರಿತನ, ನಕಲಿತನ ನಾಡಿನ ಜನರೆದುರು ಬೆತ್ತಲಾಗಿದೆ. ಗುಜರಾತ್ ಮಾದರಿ ಎಂದು ಭಾಷಣ ಕೊಚ್ಚುತ್ತಿದ್ದವರು ಕರ್ನಾಟಕದ ಗ್ಯಾರಂಟಿ ಮಾದರಿಗೆ, ಕರ್ನಾಟಕದ ಅಭಿವೃದ್ಧಿ ಮಾದರಿಗೆ ಹೆದರಿದ್ದಾರೆ.

ದುಡಿಯುವ ಜನರ ಜೇಬಿನಲ್ಲಿ ಹಣ ಇರಬೇಕು, ಶ್ರಮಿಕ ಜನರ ಜೇಬಿಗೆ ಹಣ ಹಾಕಬೇಕು ಎನ್ನುವುದು ಕರ್ನಾಟಕ ಮಾದರಿ. ಜನರ ಜೇಬಿಗೆ ಕೈ ಹಾಕಿ ಕಿತ್ತುಕೊಳ್ಳಬೇಕು ಎನ್ನುವುದು ಗುಜರಾತ್ ಮಾದರಿ. ಗುಜರಾತ್ ಮಾದರಿಯಲ್ಲಿ ಪೆನ್ನು, ಪೆನ್ಸಿಲ್, ಬಿಸ್ಕೆಟ್, ಬೆಣ್ಣೆ, ಮಂಡಕ್ಕಿ ಮೇಲೂ ಟ್ಯಾಕ್ಸ್ ಹಾಕಿದರು. ಕರ್ನಾಟಕ ಮಾದರಿಯಲ್ಲಿ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 6 ರಿಂದ 8 ಸಾವಿರ ರೂಪಾಯಿ ಉಳಿತಾಯ, ಉಪಯೋಗ ಆಗುವಂತಹ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಪ್ರತೀ ದಿನ ನಾಡಿನ ಜನತೆ ನಮ್ಮ ಗ್ಯಾರಂಟಿಗಳ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತೀ ದಿನ ಪ್ರತೀ ಕುಟುಂಬಕ್ಕೆ ಸರ್ಕಾರದ ಸ್ಪಂದನೆ ಸಿಗುತ್ತಿದೆ. ಇದು ಬಿಜೆಪಿಯ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ. ಅವರ ಹೊಟ್ಟೆಕಿಚ್ಚು ಅವರನ್ನೇ ಸುಡುತ್ತದೆ.

ಬಿಜೆಪಿಯವರು ವಿಶ್ವಗುರುವಿನ ಬಗ್ಗೆ ಭರ್ಜರಿ ಭಾಷಣ ಮಾಡುತ್ತಾರೆ. ಆ ವಿಶ್ವಗುರುವಿಗೆ ತಮ್ಮ ಪಕ್ಷದಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬರೀ ಭಾಷಣದಿಂದ ನಾಡಿನ, ದೇಶದ ಜನರ ಸಂಕಷ್ಟ ಪರಿಹಾರ ಆಗುವುದಿಲ್ಲ ಎನ್ನುವ ಪಾಠವನ್ನು ವಿಶ್ವಗುರುವಿಗೆ ಜನ ಕಲಿಸಿದ್ದಾರೆ.

ಆರ್ಥಿಕತೆಯ ಚಲನಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯನ್ನು ಪರಿಚಯಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದು “ಕರ್ನಾಟಕ ಮಾದರಿ ಅಭಿವೃದ್ಧಿ”. ಜನರು ಬೆಲೆ ಏರಿಕೆ, ಇಂಧನ ಬೆಲೆ ಏರಿಕೆ, ನಿರುದ್ಯೋಗ ಮೊದಲಾದ ಸಮಸ್ಯೆಗಳಿಂದ ತತ್ತರಿಸಿದ್ದು, ಅವರ ಬದುಕು ಸುಧಾರಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಗ್ಯಾರಂಟಿ ಕಾರ್ಯಕ್ರಮಗಳ ಮೂಲಕ ದೇಶದಲ್ಲಿಯೇ ದೊಡ್ಡ ಮೊತ್ತ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ, ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳ ಜಾರಿ ಸಾಧ್ಯವಿಲ್ಲ ಎಂದರು. ಆದರೆ ಈಗಾಗಲೇ 3 ಯೋಜನೆಗಳು ಜಾರಿಯಾಗಿವೆ. ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಾರಂಭವಾಗಿದೆ. ಯುವನಿಧಿ ಯೋಜನೆ ಬಹುತೇಕ ಡಿಸೆಂಬರ್‌ ತಿಂಗಳಿನಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.

ಎಲ್ಲ ಗ್ಯಾರೆಂಟಿ ಯೋಜನೆಗಳಿಗೆ ಆಯವ್ಯಯದಲ್ಲಿ ಅನುದಾನ ಹಂಚಿಕೆ ಮಾಡಲಾಗಿದೆ. ಅನುದಾನ ಕ್ರೋಢೀಕರಣವನ್ನೂ ಆಯವ್ಯಯದಲ್ಲಿ ವಿವರಿಸಲಾಗಿದೆ. ಈ ಕಾರ್ಯಕ್ರಮಗಳಿಗೆ ವಾರ್ಷಿಕ ಒಟ್ಟು 52,068 ಕೋಟಿ ರೂ.ಗಳು ಅಗತ್ಯವಿದೆ. 1.30 ಕೋಟಿ ಕುಟುಂಬಗಳಿಗೆ ಈ ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರೆಯಲಿದೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ 4-5 ಸಾವಿರ ರೂ. ಅಂದರೆ ವಾರ್ಷಿಕ 48,000- 60,000 ರೂ. ದೊರಕುತ್ತದೆ. ದೇಶದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಮೊತ್ತವನ್ನು ಜಾತಿ ಧರ್ಮ ನೋಡದೇ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ. ಈ ವರ್ಷ 35,410 ಕೋಟಿಗಳನ್ನು 5 ಗ್ಯಾರೆಂಟಿಗಳಿಗೆ ಮೀಸಲಿರಿಸಿದ್ದೇವೆ.

ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಸಾಮಾಜಿಕ ಪ್ರಭುತ್ವಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂಬ ಮಾತಿನಲ್ಲಿ ನಮಗೆ ನಂಬಿಕೆ ಇದೆ. ಹಾಗೂ ಇದಕ್ಕೆ ಬದ್ಧರಾಗಿದ್ದೇವೆ. ಬಜೆಟ್ ಸಿದ್ದಮಾಡುವಾಗ ನಮ್ಮ ಕಣ್ಣಿಗೆ ಅಂಬೇಡ್ಕರ್, ಗಾಂಧಿ, ಬುದ್ಧ, ಕುವೆಂಪು, ನಾರಾಯಣ ಗುರು ಅವರ ಆಶಯಗಳು ಕಾಣುತ್ತವೆ. ಕಟ್ಟಕಡೆಯ ವ್ಯಕ್ತಿ ಸಂತುಷ್ಟವಾಗಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಭಾಗೀದಾರರಾಗಬೇಕು. ಅದರ ಫಲವನ್ನು ಎಲ್ಲರೂ ಸಮಾನರಾಗಿ ಹಂಚಿಕೊಳ್ಳಬೇಕು. ಇದನ್ನೇ ಕುವೆಂಪು ಸಮಬಾಳು, ಸಮಪಾಲು ಎಂದಿದ್ದು.

ನಾವು ಹಿಂದೆಯೂ ನುಡಿದಂತೆ ನಡೆದಿದ್ದೇವೆ. 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಈ ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗ 1 ಲಕ್ಷದ 16 ಸಾವಿರ ಕೋಟಿ ರೂ.ಗಳ ಸಾಲವಾಗಿದೆ. 2018 ಮಾರ್ಚ್ ಅಂತ್ಯಕ್ಕೆ 2,45,000 ಕೋಟಿ ಸಾಲ ಇತ್ತು. 2023 ಕ್ಕೆ ಇದು 5,20,೦00 ಕೋಟಿ ರೂ.ಗೆ ಹೆಚ್ಚಾಗಿದೆ.

ನಾವು ಬಡವರ ಪರವಾಗಿದ್ದೇವೆ. ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ತತ್ತರಿಸಿರುವ ಜನರ ಜೇಬಿಗೆ ಹಣ ತುಂಬುವ ಕೆಲಸ ಮಾಡಿದ್ದೇವೆ. ಸಾರ್ವತ್ರಿಕ ಮೂಲ ಆದಾಯವನ್ನು ಎಲ್ಲಾ ಅಭಿವೃದ್ಧಿಯಾಗಿರುವ ರಾಜ್ಯಗಳು ಮಾಡುತ್ತಿವೆ. ಇದು ಕರ್ನಾಟಕ ಮಾದರಿ. ಉದ್ಯೋಗ ಸೃಷ್ಟಿಯಾಗಲು ಆರ್ಥಿಕ ಚಟುವಟಿಕೆಗಳು ಅಗತ್ಯ. ಇಲ್ಲದಿದ್ದರೆ ಹೂಡಿಕೆಗಳು ಆಗುವುದಿಲ್ಲ.

ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. 32 ಸಾವಿರ ಕೋಟಿ ರೂ.ಗಳು ಒಂದು ವರ್ಷಕ್ಕೆ ಖರ್ಚಾಗುತ್ತದೆ. ಒಂದೇ ಯೋಜನೆಗೆ ಇಷ್ಟು ದೊಡ್ಡ ಮೊತ್ತವನ್ನು ವೆಚ್ಚ ಮಾಡುತ್ತಿರುವ ಮೊಲದ ರಾಜ್ಯ ಕರ್ನಾಟಕ. ಇದಕ್ಕಾಗಿ 17,500 ಕೋಟಿ ಈ ವರ್ಷ ಮೀಸಟ್ಟಿದ್ದೇವೆ. ಅನ್ನಭಾಗ್ಯಕ್ಕೆ 10,125 ಕೋಟಿ ರೂ, ಗೃಹಜ್ಯೋತಿಗೆ 13 ಸಾವಿರ ಕೋಟಿ, ಶಕ್ತಿಗೆ 2,800 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.

2022-23ರ ಬಜೆಟ್ ಗಾತ್ರ 2,65,720 ಕೋಟಿ ಇತ್ತು, ನಮ್ಮ ಸರ್ಕಾರದ ಬಜೆಟ್ 3,27,747 ಕೋಟಿ ರೂ.ಇದೆ. ಹಿಂದಿಗಿಂತ 62,027 ಸಾವಿರ ಕೋಟಿ ಜಾಸ್ತಿಯಿದೆ. ಬೆಳವಣಿಗೆಯ ಪ್ರಮಾಣ ಶೇ.22 ಇದೆ. ರೈತರಿಗೆ 3 ಲಕ್ಷದವರೆಗೆ ಬಡ್ಡಿರಹಿತ ಸಾಲ ಮುಂಚೆ ನೀಡುತ್ತಿದ್ದೆವು. ಈಗ 5 ಲಕ್ಷದವರೆಗೆ ಮೊತ್ತವನ್ನು ಹೆಚ್ಚಿಸಲಾಗಿದೆ. 10 ಲಕ್ಷದವರೆಗೆ 3% ಬಡ್ಡಿ ಇದ್ದಿದ್ದು , ಈಗ ಅದನ್ನು 15 ಲಕ್ಷಕ್ಕೆ ಏರಿಸಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ 9, 10ನೇ ತರಗತಿ ವಿದ್ಯಾರ್ಥಿಗಳಿಗೂ ಸೇರಿ ವಾರದಲ್ಲಿ 2 ದಿನ ಮೊಟ್ಟೆ ನೀಡಲಾಗುತ್ತಿದೆ.

2013-18ರ ವರೆಗೆ ನಾವು 5 ವರ್ಷದಲ್ಲಿ 14,54,663 ಮನೆಗಳನ್ನು ಕಟ್ಟಿಸಿದ್ದೆವು. ನಾವು ಹಿಂದಿನ ಸರ್ಕಾರಕ್ಕಿಂತ 6 ಲಕ್ಷ ಮನೆಗಳನ್ನು ಹೆಚ್ಚಾಗಿ ನಿರ್ಮಿಸಿದ್ದೆವು. ನಮ್ಮ ಸರ್ಕಾರದ ಅವಧಿಯಲ್ಲಿ 14,169 ಹೆದ್ದಾರಿ ಅಭಿವೃದ್ಧಿಪಡಿಸಿದ್ದೆವು. ಬಿಜೆಪಿ ಸರ್ಕಾರ 8,037 ಕಿ.ಮಿ ಮಾತ್ರ ನಿರ್ಮಿಸಿದ್ದಾರೆ. ಎಸ್ ಸಿಎಸ್ ಪಿ / ಟಿಎಸ್ ಪಿ ಕಾನೂನು ಬಂದ ನಂತರ, ನಮ್ಮ ಸರ್ಕಾರ 5 ವರ್ಷದಲ್ಲಿ 88,530 ಕೋಟಿ ಖರ್ಚು ಮಾಡಿತ್ತು. ನಮ್ಮದು ಬಡವರ ಪರವಾದ ಸರ್ಕಾರ.

ನಮ್ಮ ಬಜೆಟ್‌ ಗಾತ್ರ 2018-19ರಲ್ಲಿ 2,02,297 ಕೊಟಿ ಇತ್ತು. ಆಗ 21,691 ಕೋಟಿ ರೂ. ಎಸ್.ಸಿ/ಎಸ್.ಟಿ ಸಮುದಾಯದ ಯೋಜನೆಗಳಿಗೆ ಮೀಸಲಿಟ್ಟಿದ್ದೆವು. ಈ ಬಾರಿ ಸಹ ಶಿಕ್ಷಣ, ಸಮಾಜ ಕಲ್ಯಾಣ, ಕೃಷಿ, ವಿದ್ಯುತ್, ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಸಾಮಾಜಿಕ, ಆರ್ಥಿಕ ವಲಯಕ್ಕೆ ಕಡಿಮೆ ಮಾಡಿಲ್ಲ. ನೀರಾವರಿ, ವಸತಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನಮ್ಮ ಸರ್ಕಾರ ಎಲ್ಲರನ್ನು ಒಳಗೊಂಡ ಅಭಿವೃದ್ದಿಯ ಧ್ಯೇಯವನ್ನು ನಂಬಿದೆ.

2023-24ನೇ ಸಾಲಿನಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಈ ಆರ್ಥಿಕ ವರ್ಷಕ್ಕೆ ಸರ್ಕಾರದ ಮುಂಗಡ ಪತ್ರವನ್ನು ಮಂಡಿಸಿದ್ದು, ಹೊಸ ಸರ್ಕಾರ ಬಂದ ಮೇಲೆ ಜನರ ಆಶೋತ್ತರಗಳಿಗೆ ಸ್ಪಂದಿಸಲು, ಸರ್ಕಾರದ ನೀತಿ ನಿಲುವುಗಳು, ಪ್ರಣಾಳಿಕೆಯ ಭರವಸೆಗಳನ್ನು ಒಳಗೊಂಡಿರುವ ಆಯವ್ಯಯ ಮಂಡಿಸುವುದು ನಮ್ಮ ಕರ್ತವ್ಯ. ಬಜೆಟ್ ಮೇಲೆ 62 ಜನ ಆಡಳಿತ ಹಾಗೂ ವಿರೋಧ ಪಕ್ಷದವರು ಸೇರಿ ಮಾತನಾಡಿದ್ದಾರೆ. ಸುಮಾರು 12 ಗಂಟೆ 52 ನಿಮಿಷಗಳ ಕಾಲ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಟೀಕೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಅದೆರಡನ್ನೂ ಸ್ವಾಗತಿಸುತ್ತೇನೆ. ಚರ್ಚೆಯಲ್ಲಿ ಭಾಗವಹಿಸಿ ಅನಿಸಿಕೆಗಳನ್ನು ವ್ಯಕ್ತಮಾಡಿದ ವಿರೋಧ ಪಕ್ಷದವರಿಗೆ ಧನ್ಯವಾದಗಳು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

ರಾಜಕೀಯ

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ವಿಧಾನಸೌಧದಲ್ಲಿ ಇಂದು ಹಮ್ಮಿಕೊಂಡಿದ್ದ “ಅನ್ನ ಭಾಗ್ಯ” ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿ, ಮಾತನಾಡಿದರು:

“ಅನ್ನಭಾಗ್ಯ ಯೋಜನೆ ಘೋಷಣೆ ಆದ ತಕ್ಷಣ ರಾಜ್ಯಕ್ಕೆ ಅಕ್ಕಿ ಕೊಡುವುದನ್ನು ಬಂದ್ ಮಾಡುವ ಮೂಲಕ, ಕೇಂದ್ರದ ಬಿಜೆಪಿ ಸರ್ಕಾರ ಬಡವರ ವಿರೋಧಿಯಾದ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ. ಅಕ್ಕಿಯನ್ನು ನಮಗೆ ಪುಕ್ಕಟ್ಟೆಯಾಗಿ ಕೊಡುತ್ತಿರಲಿಲ್ಲ; ಕೆಜಿಗೆ 34 ರೂ. ನಮ್ಮಿಂದ ತೆಗೆದುಕೊಳ್ಳುತ್ತಿದ್ದರು.

ಕನ್ನಡ ನಾಡಿನ ಜನರಿಗೆ ಅಕ್ಕಿ ಕೊಡುವುದನ್ನು ಬಂದ್ ಮಾಡಿದ ಕೇಂದ್ರ ಸರ್ಕಾರ, ಬಳಿಕ ಇ-ಹರಾಜು ಮೂಲಕ ಆ ಅಕ್ಕಿಯನ್ನು ಹರಾಜು ಹಾಕಲು ಮುಂದಾಯಿತು. ಆದರೆ, ಈಗ ಇ-ಹರಾಜು ಮೂಲಕ ಅಕ್ಕಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನು ನಾವು ಡರ್ಟಿ ಪಾಲಿಟಿಕ್ಸ್ ಅಂತ ಕರೆಯಬೇಕೋ ಬೇಡವೋ? ಇದನ್ನು ಕರ್ನಾಟಕದ ಜನತೆಯ ವಿರುದ್ಧದ ದ್ವೇಷದ ರಾಜಕಾರಣ ಎಂದು ಕರೆಯಬೇಕೋ ಬೇಡವೋ?

4 ಕೋಟಿ 42 ಲಕ್ಷ ಫಲಾನುಭವಿಗಳಿಗೆ ಈಗ ತಲಾ 170 ರೂ. ನೇರವಾಗಿ ಅವರ ಖಾತೆಗೆ ವರ್ಗಾವಣೆ ಆಗುತ್ತಿದೆ. ಬಡವರು, ಮಧ್ಯಮ ವರ್ಗದವರು ಎರಡು ಹೊತ್ತು ಅನ್ನ ತಿಂದರೆ ಬಿಜೆಪಿಗೆ ಯಾಕೆ ಹೊಟ್ಟೆಯುರಿ? ನಾಡಿನ ಜನತೆ ತಮ್ಮ ಖಾತೆಗೆ ಬರುವ ಹಣವನ್ನು ಊಟ, ಆಹಾರಕ್ಕಾಗಿ ಖರ್ಚು ಮಾಡಿ ನೆಮ್ಮದಿಯ ಬದುಕು ನಡೆಸಬೇಕು ಎಂದು ಮನವಿ ಮಾಡುತ್ತೇನೆ” ಎಂದರು.

ರಾಜಕೀಯ

ಯೋಜನೆಗಳ ಅನುಷ್ಠಾನಕ್ಕಾಗಿ ಬಡವರ-ಮಧ್ಯಮ ವರ್ಗದವರ ಮೇಲೆ ಯಾವುದೇ ತೆರಿಗೆ ಹಾಕಿಲ್ಲ, ಜನರಿಗೆ ಹೊರೆ ಆಗಬಾರದು ಎನ್ನುವ ಕಾರಣಕ್ಕೇ ಪೆಟ್ರೋಲ್-ಡೀಸೆಲ್ ಮೇಲೆ ತೆರಿಗೆ ಹಾಕಲಿಲ್ಲ, ಬೆಲೆ ಏರಿಕೆ ಮಾಡಿಲ್ಲ.

ಗ್ಯಾರಂಟಿ ಯೋಜನೆಗಳಿಗೆ ಪ್ರಸಕ್ತ ಸಾಲಿಗೆ 35,410 ಕೋಟಿ ರೂ. ಅಗತ್ಯವಿದ್ದು, ಜನಸಾಮಾನ್ಯರಿಗೆ ಹೊರೆಯಾಗದಂತೆ ಸಂಪನ್ಮೂಲ ಕ್ರೋಢೀಕರಣ ಮಾಡಲಾಗುವುದು. ಪೆಟ್ರೋಲ್-ಡೀಸೆಲ್ ಮೇಲೆ ತೆರಿಗೆ ಹೆಚ್ಚಳ ಮಾಡಿಲ್ಲ. ಬಡವರು-ಮಧ್ಯಮ ವರ್ಗದವರನ್ನು ಹೆಚ್ಚುವರಿ ತೆರಿಗೆ ಹೊರೆಯಿಂದ ಮುಕ್ತರಾಗಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

“ಗ್ಯಾರಂಟಿ ಯೋಜನೆಗಳಿಗೆ 13,500 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಹೆಚ್ಚಳ ಹಾಗೂ 8,000 ಕೋಟಿ ರೂ. ಹೆಚ್ಚುವರಿ ಸಾಲದ ಮೂಲಕ ಮತ್ತು ಉಳಿದ ಸಂಪನ್ಮೂಲವನ್ನು ಯೋಜನೆಗಳ ಆದ್ಯತೆಯನ್ನು ನಿಗದಿಪಡಿಸುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆಗಳ ಅನುಷ್ಠಾನಕ್ಕಾಗಿ ಬಡವರ-ಮಧ್ಯಮ ವರ್ಗದವರ ಮೇಲೆ ಯಾವುದೇ ತೆರಿಗೆ ಹಾಕಿಲ್ಲ, ಜನರಿಗೆ ಹೊರೆ ಆಗಬಾರದು ಎನ್ನುವ ಕಾರಣಕ್ಕೇ ಪೆಟ್ರೋಲ್-ಡೀಸೆಲ್ ಮೇಲೆ ತೆರಿಗೆ ಹಾಕಲಿಲ್ಲ, ಬೆಲೆ ಏರಿಕೆ ಮಾಡಿಲ್ಲ.

ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ 3 ಮಾನದಂಡಗಳನ್ನು ಪಾಲಿಸಬೇಕಿದ್ದು, ಈ ಪೈಕಿ 2023-24ರ ಬಜೆಟ್‌ನಲ್ಲಿ 2 ಮಾನದಂಡಗಳನ್ನು ಕಾಯ್ದುಕೊಳ್ಳುವ ಮೂಲಕ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲಾಗಿದೆ. ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ ವಿತ್ತೀಯ ಕೊರತೆ ಶೇ.3 ರಷ್ಟಿರಬೇಕು, ಸಾಲದ ಪ್ರಮಾಣ ಜಿಡಿಪಿಯ ಶೇ.25%ರ ಒಳಗೆ ಇರಬೇಕು. ಉಳಿತಾಯ ಬಜೆಟ್ (revenue surplus) ಇರಬೇಕು ಎನ್ನುವ ಮಾನದಂಡಗಳಿವೆ. ವಿತ್ತೀಯ ಕೊರತೆ ಶೇ.2.6 ರಷ್ಟಿದ್ದು, ಸಾಲ ಜಿಡಿಪಿಯ ಶೇ.22.3 % ರಷ್ಟಿದೆ. ಹೀಗೆ 2 ಮಾನದಂಡಗಳನ್ನು ಪಾಲಿಸಿ ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳಲಾಗಿದೆ.

ಈ ಆಯವ್ಯಯಲ್ಲಿ 2,50,933 ಕೋಟಿ ರೂ. ರಾಜಸ್ವ ವೆಚ್ಚ, ಬಂಡವಾಳ ವೆಚ್ಚ 54,374 ಕೋಟಿ ರೂ.ಗಳಾಗಿದ್ದು, 2022-23ರ ಬಜೆಟ್‌ಗೆ ಹೋಲಿಸಿದರೆ ಶೇ.23ರಷ್ಟು ರಾಜಸ್ವ ವೆಚ್ಚ ಹಾಗೂ ಶೇ.16ರಷ್ಟು ಬಂಡವಾಳ ವೆಚ್ಚ ಹೆಚ್ಚಾಗುತ್ತದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2021-22ರಲ್ಲಿ ವಿತ್ತೀಯ ಕೊರತೆ 14,699 ಕೋಟಿ ರೂ.ಗಳಷ್ಟಿತ್ತು. ನಮ್ಮ ಸರ್ಕಾರದ ರಾಜಸ್ವ ಕೊರತೆ 12,523 ಕೋಟಿ ರಷ್ಟಿದೆ, ವಿತ್ತೀಯ ಕೊರತೆ 66,646 ಕೋಟಿ ರೂ. ಇದು ಜಿಎಸ್‌ಡಿಪಿಯ ಶೇ.2.6ರಷ್ಟಿದೆ. ರಾಜ್ಯದ ಹೊಣೆಗಾರಿಕೆ 5,71,665 ಕೋಟಿ ರೂ.ಗಳಷ್ಟಿದ್ದು, ಇದು ಜಿಎಸ್‌ಡಿಪಿ ಶೇ.22.3 ರಷ್ಟಿದೆ. 2023-24 ಕ್ಕೆ ರಾಜ್ಯವು ಪಡೆಯುವ ಸಾಲ 85,818 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.

ವಾಣಿಜ್ಯ ತೆರಿಗೆ ಫೆಬ್ರವರಿ ಆಯವ್ಯಯಕ್ಕಿಂತ 4,000 ಕೋಟಿ ರೂ. ಹೆಚ್ಚುವರಿ ಗುರಿ ನಿಗದಿಪಡಿಸಲಾಗಿದೆ. ಅಬಕಾರಿ ಸುಂಕ ಗುರಿ 1,000 ಕೋಟಿ ರೂ. ಹೆಚ್ಚಳ ಮಾಡಿದೆ. ಇದನ್ನು ಸೇರಿದಂತೆ ತೆರಿಗೆ ಸಂಗ್ರಹದ ಒಟ್ಟಾರೆ ಗುರಿಯನ್ನು 13,500 ಕೋಟಿ ರೂ.ಗಳಷ್ಟು ಹೆಚ್ಚಳ ಮಾಡಿದೆ” ಎಂದು ಹೇಳಿದ್ದಾರೆ.