ಪಂಚಮಸಾಲಿ ಸಮುದಾಯವನ್ನು ರಾಜ್ಯ 2(ಎ) ಪಟ್ಟಿಗೆ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರಿಸಲು ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಂಚಮಸಾಲಿ ಶಾಸಕರ ನಿಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಪಂಚಮಸಾಲಿ ಸಮುದಾಯವನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡುವ ಬಗ್ಗೆ ಬಜೆಟ್ ಅಧಿವೇಶನದ ನಂತರ ಕಾನೂನು ಹಾಗೂ ಸಂವಿಧಾನ ತಜ್ಞರ ಸಭೆ ಕರೆದು, ಸಂವಿಧಾನಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದ ಪಂಚಮಸಾಲಿ ಶಾಸಕರ ನಿಯೋಗಕ್ಕೆ ಆಶ್ವಾಸನೆ ನೀಡಿದರು.
“ಹಿಂದಿನ ಸರ್ಕಾರ ಮೀಸಲಾತಿ ವಿಚಾರದಲ್ಲಿ ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಗೊಂದಲ ಸೃಷ್ಟಿಸಿದೆ. ಮೂಗಿಗೆ ತುಪ್ಪ ಸವರುವ ಬದಲು ಹಣೆಗೆ ತುಪ್ಪ ಸವರಿದೆ. ಮೀಸಲಾತಿ ವಿಚಾರವಾಗಿ ಆತುರದ ನಿರ್ಧಾರ ಸಲ್ಲದು. ಸಂವಿಧಾನಾತ್ಮಕ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ತೀರ್ಮಾನ ಮಾಡಬೇಕು. ಹಾಗಾಗಿ ಸಭೆ ಕರೆದು ಕೂಲಂಕುಷವಾಗಿ ಚರ್ಚಿಸಲಾಗುವುದು.
ಕಾಟಾಚಾರಕ್ಕಾಗಿ ಮೀಸಲಾತಿ ಕೊಡಬಾರದು; ಬಿಜೆಪಿಗೆ ಮೀಸಲಾತಿ ಕೊಡುವುದು ಬೇಕಾಗಿರಲಿಲ್ಲ. ಅದಕ್ಕೇ ನ್ಯಾಯಾಲಯಕ್ಕೆ ಹೋದರೆ ಬಿದ್ದೋಗುವ ರೀತಿಯಲ್ಲಿ ಕಾಟಾಚಾರಕ್ಕೆ ಕೊಟ್ಟರು. ಇದರಿಂದ ಗೊಂದಲ ಸೃಷ್ಟಿಯಾಗಿದೆ. ಸಂವಿಧಾನ ತಜ್ಞರ ಜತೆ ಚರ್ಚಿಸಿ ಗೊಂದಲ ಬಗೆಹರಿಸಬೇಕಾಗಿದೆ” ಎಂದರು.