ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
2B ಮೀಸಲಾತಿ Archives » Dynamic Leader
October 23, 2024
Home Posts tagged 2B ಮೀಸಲಾತಿ
ರಾಜ್ಯ

ಬೆಂಗಳೂರು: ಕರ್ನಾಟಕ ಮುಸ್ಲಿಮರ ಪ್ರಮುಖ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಸೂಕ್ತ ಹಾಗೂ ಶೀಘ್ರವಾಗಿ ಈಡೇರಿಸಲು ಒತ್ತಾಯಿಸಿ ಇದೇ ಆಗಸ್ಟ್ 22 ರಂದು ಕರ್ನಾಟಕ ಮುಸ್ಲಿಂ ಯುನಿಟಿ ವತಿಯಿಂದ ಬೆಂಗಳೂರಿನಲ್ಲಿ ಮುಸ್ಲಿಂ ಮುಖಂಡರ ಚಿಂತನಾ ಸಭೆಯನ್ನು ಆಯೋಜಿಸಲಾಗಿತ್ತು.

ಕರ್ನಾಟಕ ಮುಸ್ಲಿಂ ಯುನಿಟಿಯ ರಾಜ್ಯಾಧ್ಯಕ್ಷರಾದ ಜಬ್ಬಾರ್ ಕಲ್ಬುರ್ಗಿ ಅವರು ಅಧ್ಯಕ್ಷತೆ ವಹಿಸಿದ್ದ ಈ ಚಿಂತನಾ ಸಭೆಯಲ್ಲಿ, ರಾಜ್ಯ ಗೌರವ ಅಧ್ಯಕ್ಷರಾದ ಜಿ.ಎ.ಭಾವ, ಔಕಾಫ್ ಮಂಡಳಿ ಮಾಜಿ ಅಧ್ಯಕ್ಷರಾದ ಶಾಫಿ ಸಹದಿ, ರಾಜ್ಯ ಯುವ ಅಧ್ಯಕ್ಷ ಎಂ.ಎನ್.ನೂರ್ ಅಹಮದ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್, ಕಿತ್ತೂರು ಕರ್ನಾಟಕ ವಿಭಾಗದ ಸಂಚಾಲಕ ಎಂ.ಎಲ್.ಸರಕಾವಸ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಚಿಂತನಾ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಿಸಾರ್ ಅಹ್ಮದ್ ಮುಂತಾದವರಿಗೆ ಕಳುಹಿಸಿ ಕೊಡಲಾಗಿದೆ.

ಚಿಂತನಾ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಮತ್ತು ಮುಖ್ಯಮಂತ್ರಿಗಳು ಹಾಗೂ ಇತರರಿಗೆ ಕಳುಹಿಸಿಕೊಟ್ಟ ಮನವಿ ಪತ್ರದ ಸಾರಾಂಶ ಈ ರೀತಿಯಿದೆ: ನಮ್ಮ ಕರ್ನಾಟಕ ರಾಜ್ಯವು ಸೂಫಿ, ಶರಣರು, ದಾಸರ ನೆಲೆಯಬೀಡಾಗಿದೆ. ನ್ಯಾಯ, ಸೌಹಾರ್ದತೆ, ಸಹಬಾಳ್ವೆಯ ಕನ್ನಡನಾಡಾಗಿದೆ. ಶೋಷಿತ ಸಮುದಾಯಗಳ ಸಾಮಾಜಿಕ ನ್ಯಾಯ ಹಾಗೂ ಸಮ ಸಮಾಜದ ಗುರಿಯೊಂದಿಗೆ ಬಸವಣ್ಣ, ಟಿಪ್ಪುಸುಲ್ತಾನ್, ಡಿ.ದೇವರಾಜ ಅರಸ್ ಅವರಂತಹ ನೂರಾರು ದಿವಂಗತ ಹುತಾತ್ಮರೆಲ್ಲರೂ ನಮ್ಮೊಂದಿಗೆ ಸೈದ್ಧಾಂತಿಕವಾಗಿ ಬದುಕಿ, ಪರಿವರ್ತನೆಯ ಸಾಮಾಜದ, ನ್ಯಾಯ ಬುನಾದಿಯ, ಸಮಾಜ ನಿರ್ಮಾಣದ ನಾಡಿಗೆ ಜೀವತುಂಬಿದ್ದಾರೆ.

ಆದರೆ, ರಾಜ್ಯದಲ್ಲಿ ಒಂದು ಕೋಟಿ ಜನಸಂಖ್ಯೆಯುಳ್ಳ ಮುಸ್ಲಿಮರ ಸಾಮಾಜಿಕ ನ್ಯಾಯ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಮುಸ್ಲಿಮರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ ಹಾಗೂ ರಾಜಕೀಯವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದ್ದಾರೆ.

ನಮ್ಮನ್ನು ಆಳಿದ ಜಾತ್ಯತೀತ / ಕೋಮುವಾದಿ ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳ ಸರ್ಕಾರಗಳು ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ಸರಿಯಾದ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸಲಿಲ್ಲ. ಸರ್ಕಾರಗಳು ಇವುಗಳ ಅನುಷ್ಠಾನಕ್ಕಾಗಿ ಸೂಕ್ತ ಬಜೆಟ್ ಗಳ ಘೋಷಣೆಯನ್ನೂ ಮಾಡಲಿಲ್ಲ.

ಯಾವುದೇ ಪಕ್ಷ ಅಧಿಕಾರಕ್ಕೆ ಬಂದು ಸರ್ಕಾರ ನಡೆಸಿದರೂ ಆಯಾ ಪಕ್ಷಗಳ ಯೋಗ್ಯತೆಗೆ ತಕ್ಕಂತೆ ಮುಸ್ಲಿಮರನ್ನು ಅಭಿವೃದ್ಧಿಯಿಂದ ಹೊರಗಿಡುವ ಅಥವಾ ತಾರತಮ್ಯಮಾಡುವ ಯೋಚನೆಗಳಿಂದ ಮಾತ್ರ ಬದಲಾಗಲಿಲ್ಲ; ಇದು ಖಂಡನೀಯ.

ನಮ್ಮ ದೇಶ ಸ್ವಾತಂತ್ರ್ಯಗೊಂಡು ಇದೀಗ 78 ವರ್ಷಗಳು ಕಳೆದಿದೆ. ಆದರೆ, ಭಾರತೀಯ ಮುಸ್ಲಿಮರು ವಿಶೇಷವಾಗಿ, ಕರ್ನಾಟಕದ ಅತಿಹೆಚ್ಚು ಮುಸ್ಲಿಮರು ಬಡತನ, ನಿರುದ್ಯೋಗ, ಅನಕ್ಷರತೆಯಲ್ಲಿ ನಲುಗುತ್ತಿರುವುದು, ಕೋಮು ದೌರ್ಜನ್ಯಗಳಿಂದ ತಮ್ಮ ಸಂವಿಧಾನಾತ್ಮಕ ಹಕ್ಕುಗಳನ್ನು ಕಳೆದು ಕೊಳ್ಳುತ್ತಿರುವುದು ಶೋಚನಿಯ.

ಮುಸ್ಲಿಮರು ಎಲ್ಲಾ ಕ್ಷೆತ್ರ ಗಳಲ್ಲೂ ಹಿಂದುಳಿದಿದ್ದಾರೆ ಎಂಬ ನಗ್ನ ಸತ್ಯವನ್ನು ಡಾ.ಗೋಪಾಲ್ ಸಿಂಗ್ ವರದಿ, ಜಸ್ಟೀಸ್ ರಾಜೇಂದ್ರ ಸಾಚಾರ್ ಸಮಿತಿಯ ವರದಿ, ಜಸ್ಟೀಸ್ ರಂಗನಾಥ್ ಮಿಶ್ರ ವರದಿ, ಪ್ರೊಫೆಸರ್ ಕುಂಡು ಮುಂತಾದ ಕೇಂದ್ರ ಸರ್ಕಾರಗಳು ನೇಮಿಸಿದ ಸಮಿತಿ-ಆಯೋಗಗಳೇ ಮುಸ್ಲಿಮರ ಈ ಚಿಂತಾಜನಕ ದುಸ್ಥಿತಿಗಳನ್ನು ಬಹಿರಂಗ ಪಡೆಸಿವೆ.

ಅಲ್ಲದೆ, ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಆಯೋಗಗಳು ಸಹ ಮುಸ್ಲಿಮರು ಹಿಂದುಳಿದಿದ್ದಾರೆ ಮತ್ತು ಅಭಿವೃದ್ಧಿಯಿಂದಲೂ ವಂಚಿತರಾಗಿದ್ದಾರೆ ಎಂದು ಹೇಳಿವೆ. ಇಷ್ಟಲ್ಲದೆ, ಮುಸ್ಲಿಮರಿಗಾಗಿ ಸಂವಿಧಾನಬದ್ದವಾಗಿ ಜಾರಿಗೊಂಡಿದ್ದ ಮೀಸಲಾತಿಯನ್ನು ಸಹ ಕಿತ್ತುಕೊಳ್ಳಲಾಗಿದೆ.

ರಾಜ್ಯದಲ್ಲಿ OBC ಯ ಹಾವನೂರು, ಪ್ರೊ.ರವಿವರ್ಮ ಕುಮಾರ್ ಆಯೋಗಗಳಿಂದ ಹಿಡಿದು ಡಾ.ಸಿ.ಎಸ್.ದ್ವಾರಕನಾಥ್ ಆಯೋಗದವರೆಗೆ ಸ್ವತಂತ್ರ ನಂತರ ಕಳೆದ 78 ವರ್ಷಗಳಲ್ಲಿ ಬಂದಿರುವ ಎಲ್ಲ ಕೇಂದ್ರ, ರಾಜ್ಯ ಆಯೋಗಗಳು ಸಹ ಮುಸ್ಲಿಮರನ್ನು ಹಿಂದುಳಿದ ವರ್ಗ ಎಂದೇ ಗುರುತಿಸಿದೆ.

ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ಆಯೋಗದ ಅಧ್ಯಯನದ ಪೂರ್ಣವರದಿಯ ಶಿಫಾರಸ್ಸುಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗದಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗಿತ್ತು.

ವೀರಪ್ಪ ಮೊಯಿಲಿ ಅವರ ಸರ್ಕಾರದ ಅವಧಿಯಲ್ಲಿ ಮೊದಲ ಬಾರಿಗೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗವನ್ನು ರಚಿಸಿ, ಅಂದಿನ ಅಧ್ಯಕ್ಷರಾಗಿದ್ದ ಕೆ.ರೆಹಮಾನ್ ಖಾನ್ ನೇತೃತ್ವದಲ್ಲಿ ಕರ್ನಾಟಕದ ಮುಸ್ಲಿಮರ ಸಾಮಾಜಿಕ, ಆರ್ಥಿಕ ವರದಿಯ ಆಧಾರದ ಮೇಲೆ ಮೊದಲ ಬಾರಿಗೆ ಶೇ.6ರಷ್ಟು ಮೀಸಲಾತಿಯನ್ನು ಕಲ್ಪಿಸಲಾಯಿತು.

ನಂತರ ರಾಜ್ಯದ ಮೀಸಲಾತಿ ಮಿತಿ ಶೇ.50ಕ್ಕೂ ಮೀರಿ ಹೆಚ್ಚಳವಾದ ಕಾರಣ, ಈ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆಯಾದ ನಂತರ, ಮತ್ತೆ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ಹಿಂದಿನಂತೆಯೇ ಕಲ್ಪಿಸಲಾಯಿತು. ಇದೀಗ, ಮುಸ್ಲಿಮರ ಅಭಿವೃದ್ಧಿಗೆ ಒಂದಷ್ಟು ಆಸರೆಯಾಗಿದ್ದ ಆ ಮೀಸಲಾತಿಯನ್ನೂ ಸಹ ಕಿತ್ತುಕೊಳ್ಳಲಾಗಿದೆ.

ಇಂತಹ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದ, ತಾರತಮ್ಯಕ್ಕೆ ಒಳಗಾದ, ಅಭಿವೃದ್ಧಿಯಿಂದ ವಂಚನೆಗೆ ಒಳಗಾದ, ಕೋಮುವಾದಿಗಳ ದೌರ್ಜನ್ಯಕ್ಕೆ ಒಳಗಾದ ಹಾಗೂ ರಾಜಕೀಯವಾಗಿ ಸಮಾನ ಪಾಲುಸಿಗದ ಮುಸ್ಲಿಮರಾದ ನಾವು ನಮ್ಮ ಹಕ್ಕುಗಳಿಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಈ ಕೆಳಕಂಡ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಲು ನಾವು ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ.

ಸರಕಾರಕ್ಕೆ ನಮ್ಮ ಹಕ್ಕೋತ್ತಾಯಗಳು:
ವಕ್ಫ್ ಮಂಡಳಿಯಲ್ಲಿ ಬದಲಾವಣೆಗಳನ್ನು ತರುವ ಮೂಲಕ ವಕ್ಫ್ನ ಹಕ್ಕು ಮತ್ತು ಸ್ವತಂತ್ರವನ್ನು ಮೋಟುಕುಗೊಳಿಸುವ ಕೇಂದ್ರ ಸರ್ಕಾರದ ಹೊಸ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರಾಜ್ಯ ಸರ್ಕಾರ ನಿರ್ಣಯವನ್ನು ಕೈಗೊಳ್ಳಬೇಕು.

ಒಬಿಸಿ ಮುಸ್ಲಿಂ 2B ಮೀಸಲಾತಿಯನ್ನು ಮರುಸ್ಥಾಪಿಸಬೇಕು. 4% ಮೀಸಲಾತಿಯನ್ನು ಶೇ.8ಕ್ಕೆ ಹೆಚ್ಚಿಸಬೇಕು.

ಸ್ಥಳೀಯವಾಗಿ ನಡೆಯುವ ಚುನಾವಣೆಗಳಲ್ಲಿ, ಒಬಿಸಿ ಮೀಸಲಾತಿಯಲ್ಲಿ ಪ್ರಬಲ ಜಾತಿಗಳಿಂದ ಮುಸ್ಲಿಮರು ಅವಕಾಶ ವಂಚಿತರಾಗುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಈ ಮೀಸಲಿನಲ್ಲಿ ಒಳಮೀಸಲು ತಂದು ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು.

ಅತಿ ಹಿಂದುಳಿದ ನದಾಫ್ – ಪಿಂಜಾರ ಸಮುದಾಯಗಳ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿ / ಸಕ್ರಿಯಗೊಳಿಸಿ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು.

ರಾಜ್ಯದ ಮುಸ್ಲಿಮ್ ಲೈಸನ್ಸ್ ಗುತ್ತಿಗೆದಾರರಿಗೆ ಆಧ್ಯತೆ ಹಾಗೂ ವಿಶೇಷ ಅವಕಾಶಗಳನ್ನು ನೀಡಬೇಕು.