ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Adichunchanagiri Archives » Dynamic Leader
October 17, 2024
Home Posts tagged Adichunchanagiri
ರಾಜ್ಯ

ಶ್ರೀಕ್ಷೇತ್ರ ಆದಿಚುಂಚನಗಿರಿ ಮಠ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಅಂತರ ಜಿಲ್ಲಾ ಪತ್ರಕರ್ತರ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉದ್ಘಾಟಿಸಿ ಮಾತನಾಡಿದರು.

“ಕಾರಿನ ಮೇಲೆ ಕಾಗೆ ಕುಳಿತರೆ ಅದರಿಂದ ರಾಜ್ಯದ ಜನತೆಗೆ ಏನಾಗಬೇಕು? ಈ ಬಗ್ಗೆ ಜ್ಯೋತಿಷಿಗಳನ್ನು ಕರೆಸಿ ಚಾನಲ್‌ಗಳಲ್ಲಿ ಚರ್ಚೆ ನಡೆಸಿದರು. ಜ್ಯೋತಿಷಿಗಳು ನಾನು ಅಧಿಕಾರ ಕಳ್ಕೊತೀನಿ ಅಂದ್ರು. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳ್ಕೊತೀನಿ ಅಂತಾನೂ ಜ್ಯೋತಿಷಿಗಳು ಹೇಳಿದ್ರು. ಆದರೆ ನಾನು ಅಧಿಕಾರ ಪೂರ್ಣಗೊಳಿಸಿ ಮತ್ತೆ ಎರಡನೇ ಬಾರಿ ಸಿಎಂ ಆದೆ. ಕಾಗೆ ಕೂತಾಗ ಮಾತಾಡಿದ್ದ ಜ್ಯೋತಿಷಿಗಳ ಮಾತಿಗೆ ಏನು ಬೆಲೆ ಬಂತು? ಇಂಥಾ ಮೌಡ್ಯದ ಸುದ್ದಿ ಮತ್ತು ಚರ್ಚೆಗಳನ್ನು ಚಾನಲ್‌ಗಳು ಮಾಡಬಾರದು.

ವಸ್ತು ಸ್ಥಿತಿಯನ್ನು ಜನರಿಗೆ ತಲುಪಿಸಿ. ಊಹೆ ಮಾಡಿಕೊಂಡು, ಕಲ್ಪಿಸಿಕೊಂಡು ಸುದ್ದಿ ಬರೆದು ಹಾಸ್ಯಾಸ್ಪದರಾಗಬೇಡಿ. ತಿರುಚಿ ಸುದ್ದಿ ಮಾಡುವುದನ್ನು ಬಿಡಿ. ನನ್ನ ಮಾತುಗಳ ಸಾಂದರ್ಭಿಕತೆಯನ್ನೇ ಮರೆ ಮಾಚಿ ಸುದ್ದಿ ಮಾಡ್ತಾರೆ. ಇದು ತಪ್ಪು. ನನ್ನ ಸರ್ಕಾರದಲ್ಲಿ ತಪ್ಪುಗಳಿದ್ದರೆ ಮುಲಾಜಿಲ್ಲದೆ ಬರೆಯಿರಿ. ಸರ್ಕಾರ ಕೊಟ್ಟ ಮಾತು ತಪ್ಪಿದೆಯಾ, ಜನಪರವಾಗಿ ಕೆಲಸ ಮಾಡ್ತಾ ಇದೆಯೋ? ಇಲ್ಲವೋ? ಎನ್ನುವುದನ್ನೂ ಪ್ರಾಮಾಣಿಕಕವಾಗಿ ಜನರಿಗೆ ತಲುಪಿಸಬೇಕು.

ನನ್ನ ಬಗ್ಗೆ ಸುಳ್ಳು ಬರೆದಾಗ, ಸತ್ಯ ತಿರುಚಿ ಸುದ್ದಿ ಪ್ರಸಾರ ಮಾಡಿದಾಗ ನಾನು ಯಾವತ್ತೂ ಯಾವ ಮಾಧ್ಯಮದವರಿಗೂ ಯಾಕೆ ಸುಳ್ಳು ಹೇಳ್ತೀರಾ ಎಂದು ಕರೆ ಮಾಡಿ ಕೇಳಿಲ್ಲ, ಸರ್ಕಾರ ಒಳ್ಳೆ ಕೆಲಸ ಮಾಡಿದಾಗ ಅದನ್ನೂ ಜನರಿಗೆ ತಲುಪಿಸಿ. ನಿಮಗೆ ವಾಕ್ ಸ್ವಾತಂತ್ರ್ಯ ಇದೆ. ಅದನ್ನು ಘನತೆಯಿಂದ ಬಳಸಿಕೊಳ್ಳಬೇಕು” ಎಂದು ಹೇಳಿದರು.

ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ನಿರ್ಮಲಾನಂದ ಮಹಾ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಕೃಷಿ ಸಚಿವರಾದ ಚಲುವರಾಯಸ್ವಾಮಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಶಾಸಕರುಗಳಾದ ರವಿ ಗಣಿಗ, ದಿನೇಶ್ ಗೂಳಿಗೌಡ, ರಮೇಶ್ ಬಂಡಿ ಸಿದ್ದೇಗೌಡ, ನರೇಂದ್ರ ಸ್ವಾಮಿ ಹಾಗೂ ಮಂಡ್ಯ, ಮೈಸೂರು, ಮಡಿಕೇರಿ, ಚಾಮರಾಜನಗರ ಜಿಲ್ಲಾ ಪತ್ರಕರ್ತರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.