ಅಲಹಾಬಾದ್: “ಮತಾಂತರ ನಡೆಯುವ ಧಾರ್ಮಿಕ ಸಭೆಗಳನ್ನು ತಡೆದು ನಿಲ್ಲಿಸಬೇಕು” ಎಂದು ಹೇಳಿರುವ ಅಲಹಾಬಾದ್ ಹೈಕೋರ್ಟ್ “ಇದೇ ರೀತಿ ಮುಂದುವರಿದರೆ ದೇಶದ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ” ಎಂದು ಹೇಳಿದೆ. ಇಂತಹ ಆದೇಶ ವಿವಾದ ಸೃಷ್ಟಿಸಿದೆ.
ಇತ್ತೀಚೆಗೆ ಉತ್ತರದ ರಾಜ್ಯಗಳಲ್ಲಿ ನ್ಯಾಯಾಲಯಗಳು ನೀಡುವ ತೀರ್ಪುಗಳು ಹಾಗೂ ಅವರು ವ್ಯಕ್ತಪಡಿಸುವ ಅಭಿಪ್ರಾಯಗಳು ವಿವಾದಕ್ಕೀಡಾಗುತ್ತಿವೆ. ಮತ್ತು ನ್ಯಾಯಾಧೀಶರು ವಿಜ್ಞಾನವನ್ನೇ ಪ್ರಶ್ನಿಸುವಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಅಚ್ಚರಿ ಮೂಡಿಸುತ್ತಿದಾರೆ.
ಕಳೆದ ವರ್ಷ ಅಲಹಾಬಾದ್ ಹೈಕೋರ್ಟ್ ವ್ಯಕ್ತಪಡಿಸಿದ್ದ ಅಭಿಪ್ರಾಯವೊಂದು ಎಲ್ಲರಿಗೂ ಆಘಾತವನ್ನು ಉಂಟುಮಾಡಿತ್ತು. ಹಸುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಆರೋಪಿಸಿ, ಗೋಮಾಂಸ ವ್ಯಾಪಾರಿ ಒಬ್ಬರನ್ನು ಬಂಧಿಸಿದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಗೋವು ನಮ್ಮ ಭೂಮಿಗೆ ತಾಯಿ ಇದ್ದಂತೆ; ಗೋವಿನ ರಕ್ತವು ಭೂಮಿಯ ಮೇಲೆ ಚೆಲ್ಲಿದರೆ ಅದು ಈ ಜಗತ್ತಿಗೆ ಒಳ್ಳೆಯದಲ್ಲ.
ಗೋವು ದೇವರ ಅದ್ಭುತ ಸೃಷ್ಟಿ. ಹಸುವಿನ ಮೂತ್ರ (ಗೋಮೂತ್ರ) ಎಲ್ಲಾ ರೋಗಗಳನ್ನು ಗುಣಪಡಿಸುತ್ತದೆ. ಹಸುವಿನ ಸಗಣಿಯಿಂದ ಮನೆಯನ್ನು ಸಾರಿಸಿದರೆ ಅಣು ವಿಕಿರಣವೂ ಮನೆಯೊಳಗೆ ಪ್ರವೇಶಿಸುವುದಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ವೈದ್ಯರು ಮತ್ತು ವಿಜ್ಞಾನಿಗಳು ನ್ಯಾಯಾಧೀಶರ ಅಭಿಪ್ರಾಯಗಳು ಯಾವುದೇ ವೈಜ್ಞಾನಿಕ ಸತ್ಯವನ್ನು ಹೊಂದಿಲ್ಲ ಎಂದು ಟೀಕಿಸಿದರು.
ಈ ಹಿನ್ನೆಲೆಯಲ್ಲಿ, ಉತ್ತರಪ್ರದೇಶದ ನಿವಾಸಿ ರಾಮ್ ಕಾಲಿ ಪ್ರಜಾಪತಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, “ನನ್ನ ಸಹೋದರ ರಾಂಪಾಲ್ ಮಾನಸಿಕ ಅಸ್ವಸ್ಥ. ಅವರನ್ನು ಕೈಲಾಶ್ ಎಂಬುವರು ದೆಹಲಿಗೆ ಕರೆದೊಯ್ದರು. ಸಹೋದರ ಮನೆಗೆ ಹಿಂತಿರುಗಲಿಲ್ಲ. ಕೈಲಾಶ್ ಅವರನ್ನು ಕೇಳಿದಾಗ ಅವರು ಸರಿಯಾಗಿ ಉತ್ತರ ನೀಡಲಿಲ್ಲ.
ಕೈಲಾಶ್ ಅವರು ನಮ್ಮ ಹಳ್ಳಿಯಿಂದ ದೆಹಲಿಗೆ ಅನೇಕ ಜನರನ್ನು ಕರೆದೊಯ್ದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ” ಎಂದು ಹೇಳಿದ್ದಾರೆ. ಇದರ ನಂತರ, ಕೈಲಾಶ್ ಅವರನ್ನು ಕಳ್ಳಸಾಗಣೆ ಮತ್ತು ಮತಾಂತರ ನಿಷೇಧ ಕಾಯ್ದೆಯಡಿ ಬಂಧಿಸಲಾಯಿತು.
ಕೈಲಾಶ್ ಜಾಮೀನು ಕೋರಿ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ಕೈಲಾಶ್ ಅವರ ಜಾಮೀನು ಅರ್ಜಿಯನ್ನು ನಿನ್ನೆ ವಿಚಾರಣೆ ನಡೆಸಿದರು. ರಾಜ್ಯದ ಪರ ವಾದ ಮಂಡಿಸಿದ ವಕೀಲರು, ಧಾರ್ಮಿಕ ಸಭೆಗಳಲ್ಲಿ ಭಾಗವಹಿಸುವ ಅನೇಕರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ. ಇದಕ್ಕಾಗಿ ಕೈಲಾಶ್ ಹಣ ಪಡೆಯುತ್ತಿದ್ದಾರೆ ಎಂದರು.
ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶರು, “ಸಂವಿಧಾನದ 25ನೇ ವಿಧಿಯು ತನ್ನ ಧರ್ಮವನ್ನು ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಒದಗಿಸುತ್ತದೆ. ಆದರೆ, ಒಂದು ಧಾರ್ಮಿಕ ನಂಬಿಕೆಯಿಂದ ಇನ್ನೊಂದು ಧರ್ಮಕ್ಕೆ ಮತಾಂತರವಾಗುವ ಹಕ್ಕನ್ನು ನೀಡಿಲ್ಲ. ‘ಪ್ರೊಪಗೇಶನ್ ‘ (Propagation) ಎಂಬ ಪದಕ್ಕೆ ಪ್ರೋತ್ಸಾಹಿಸಬಹುದು ಎಂದು ಅರ್ಥ ಹೇಳಬಹುದು.
ಆದರೆ ನೀವು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳಬಹುದು ಎಂದು ಅರ್ಥವಲ್ಲ. ರಾಂಪಾಲ್ ಮನೆಗೆ ಹಿಂತಿರುಗಲಿಲ್ಲ. ಹಲವರನ್ನು ಮತಾಂತರಕ್ಕೆ ಕರೆದುಕೊಂಡು ಹೋಗಿದ್ದಾರೆ. ಇದನ್ನು ಮುಂದುವರೆಸಿದರೆ ದೇಶದ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ. ಮತಾಂತರಕ್ಕೆ ಕಾರಣವಾಗುವ ಧಾರ್ಮಿಕ ಸಭೆಗಳನ್ನು ಕೂಡಲೇ ನಿಲ್ಲಿಸಬೇಕು. ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.