ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Aravind Kejriwal Archives » Dynamic Leader
October 23, 2024
Home Posts tagged Aravind Kejriwal
ದೇಶ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಮಾಧ್ಯಮದವರನ್ನು ಭೇಟಿಯಾಗಿ ಮಾತನಾಡಿದರು:

ಕೇಂದ್ರ ಸರ್ಕಾರ ಮನೀಶ್ ಸಿಸೋಡಿಯಾ ಅವರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿದೆ. ಅವರನ್ನು ಬಂಧಿಸಿ ಒಂದು ವರ್ಷ ಕಳೆದಿದೆ. ಈ ಒಂದು ವರ್ಷದಲ್ಲಿ ನ್ಯಾಯಾಲಯಕ್ಕೆ ಒಂದೇ ಒಂದು ಸಾಕ್ಷ್ಯವನ್ನು ಮಂಡಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಇದೊಂದು ಸುಳ್ಳು ಪ್ರಕರಣ.

75 ವರ್ಷಗಳ ನಂತರ ಮನೀಶ್ ಸಿಸೋಡಿಯಾ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉಜ್ವಲ ಭವಿಷ್ಯದ ಭರವಸೆಯನ್ನು ತಂದರು. ಅವರು ಬಡವರ ಮಕ್ಕಳಿಗೆ ಕನಸು ಕಾಣುವ ಹಕ್ಕನ್ನು ನೀಡಿದರು. ಅಂತಹ ವ್ಯಕ್ತಿಯನ್ನು ಸುಳ್ಳು ಪ್ರಕರಣದಲ್ಲಿ ಜೈಲಿಗೆ ಹಾಕಲಾಗಿದೆ.

ಅವರು ನಮಗೆ ಉದಾಹರಣೆಯಾಗಿದ್ದಾರೆ. ಅವರು ಬಿಜೆಪಿ ಸೇರಿದ್ದರೆ ಅವರ ಮೇಲಿನ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲಾಗುತ್ತಿತ್ತು. ಆದರೆ ಅವರು ಸತ್ಯದ ಹಾದಿಯನ್ನು ಬಿಡಲಿಲ್ಲ ಎಂದು ಹೇಳಿದರು.

ದೇಶ ರಾಜಕೀಯ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನೂ ಬಂಧಿಸಬಹುದು ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ.

ಹೊಸ ಮದ್ಯ ನೀತಿಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಬಂಧನಕ್ಕೊಳಗಾಗಿ ಸುಮಾರು 8 ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿಯನ್ನು ಹಲವು ಬಾರಿ ತಿರಸ್ಕರಿಸಲಾಗಿದೆ. ಇಂದಿನ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳೂ ಜಾಮೀನು ನೀಡಲು ನಿರಾಕರಿಸಿದ್ದಾರೆ. 338 ಕೋಟಿ ಅಕ್ರಮ ಹಣ ವಿನಿಮಯವಾಗಿರುವುದಾಗಿ ಇಡಿ ಅಧಿಕಾರಿಗಳು ಸಾಕ್ಷ್ಯ ಸಹಿತ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಇದನ್ನು ಕೋರ್ಟ್ ಒಪ್ಪಿಕೊಂಡಿದೆ.

ಇದರ ಬಗ್ಗೆ ಮಾತನಾಡಿರುವ ಬಿಜೆಪಿ ಸಂಸದ ಮನೋಜ್ ತಿವಾರಿ, “ಅಕ್ರಮ ಹಣ ವರ್ಗಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಹಲವು ನಾಯಕರು ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಪ್ರಮುಖ ಮುಖಂಡರು ಏಕೆ ಕೇಜ್ರಿವಾಲ್ ಕೂಡ ಬಂಧನವಾಗಬಹುದು. ಅಷ್ಟೊಂದು ಆಧಾರಗಳು ಇದೆ ಎಂದು ತಿಳಿಯುತ್ತೇನೆ” ಎಂದು ಹೇಳಿದ್ದಾರೆ.

ದೇಶ ರಾಜಕೀಯ

ಇಂದು ಬಿಹಾರದ ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಮಾಲೋಚನಾ ಸಭೆ ಮುಕ್ತಾಯವಾಗಿದೆ. ಜೆಡಿಯು ಅಧ್ಯಕ್ಷ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಸುಮಾರು 4 ಗಂಟೆಗಳ ಕಾಲ ಸಮಾಲೋಚನೆ ಸಭೆ ನಡೆಯಿತು.

ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಕೆ.ಸಿ.ವೇಣುಗೋಪಾಲ್, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಹಾಗೂ ಟಿ.ಆರ್.ಬಾಲು, ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್‌ನ ಉಮರ್ ಅಬ್ದುಲ್ಲಾ,  ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕಿ ಮೆಹಬೂಬಾ ಮುಫ್ತಿ, ರಾಷ್ಟ್ರೀಯ ಜನತಾ ದಳದ ನಾಯಕ ಲಾಲು ಪ್ರಸಾದ್ ಯಾದವ್ ಹಾಗೂ ತೇಜಸ್ವಿ ಯಾದವ್, ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಡಿ.ರಾಜಾ, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸೀತಾರಾಂ ಯೆಚೂರಿ, ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಅಧ್ಯಕ್ಷ ಉದ್ಧವ್ ಠಾಕ್ರೆ,  ಜಾರ್ಖಂಡ್ ಮುಕ್ತಿ ಮೋರ್ಚಾ ಅಧ್ಯಕ್ಷ ಹೇಮಂತ್ ಸೊರೆನ್ ಸೇರಿದಂತೆ 15ಕ್ಕೂ ಹೆಚ್ಚು ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದರು.

ಸಮಾಲೋಚನಾ ಸಭೆಯ ನಂತರ, ವಿರೋಧ ಪಕ್ಷಗಳ ನಾಯಕರು ಜಂಟಿಯಾಗಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಮಾತನಾಡಿ, “ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲಾಯಿತು. ಬಿಜೆಪಿಯ ಕಳೆದ 9 ವರ್ಷಗಳ ಆಡಳಿತ ಅನಾಹುತಕ್ಕೆ ಕಾರಣವಾಗಿದೆ. ಬಿಜೆಪಿ ಆಡಳಿತದಲ್ಲಿ ದೇಶದ ಪ್ರಜಾಪ್ರಭುತ್ವ ಮತ್ತು ಸಮಾಜ ದುರಂತವಾಗಿದೆ. ಮೋದಿ ನೇತೃತ್ವದ ಸರ್ಕಾರ ದೊಡ್ಡ ಉದ್ಯಮಿಗಳ ಪರವಾಗಿ ನಾಚಿಕೆಯಿಲ್ಲದೆ ಕೆಲಸ ಮಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ದೇಶದಲ್ಲಿ ಪ್ರಜಾಪ್ರಭುತ್ವ ಕಣ್ಮರೆಯಾಗುತ್ತದೆ. ಬಿಜೆಪಿಯನ್ನು ಸೋಲಿಸಲೇಬೇಕು ಎಂದು ವಿರೋಧ ಪಕ್ಷಗಳು ತೀರ್ಮಾನಿಸಿವೆ” ಎಂದರು.

ಮಲ್ಲಿಕಾರ್ಜುನ ಖರ್ಗೆ: “ಜಾತ್ಯತೀತ ಪಕ್ಷದ ನಾಯಕರ ಮುಂದಿನ ಸಭೆ ಜುಲೈ 12 ರಂದು ಶಿಮ್ಲಾದಲ್ಲಿ ನಡೆಯಲಿದೆ. ಸಭೆಯಲ್ಲಿ ರಾಜ್ಯಗಳ ಪ್ರಮುಖ ನಾಯಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪ್ರಾದೇಶಿಕ ಪಕ್ಷಗಳ ವಿಲೀನದ ಬಗ್ಗೆಯೂ ಚರ್ಚಿಸಿದ್ದೇವೆ” ಎಂದರು.

ರಾಹುಲ್ ಗಾಂಧಿ: ” ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದ ರಚನೆಯನ್ನು ಹಾಳು ಮಾಡುತ್ತಿವೆ. ನಮ್ಮ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾವು ಸಿದ್ಧಾಂತದಲ್ಲಿ ಒಂದಾಗಿದ್ದೇವೆ” ಎಂದರು.

ಮಮತಾ ಬ್ಯಾನರ್ಜಿ: “ಬಿಹಾರದಲ್ಲಿನ ಗೊಂದಲವೇ ವಿರೋಧ ಪಕ್ಷಗಳು ಒಗ್ಗೂಡಲು ಕಾರಣ. ಸಿಬಿಐ ಹಾಗೂ ಇಡಿಯನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಬಳಿ ಹೋರಾಡಬೇಕಿದೆ. ಕೇಂದ್ರ ಸರ್ಕಾರ ಯಾವುದೇ ವಿಷಯದ ಬಗ್ಗೆ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸುವುದಿಲ್ಲ. ನಾವು ಒಗ್ಗಟ್ಟಾಗಿದ್ದೇವೆ; ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಮುಂದಿನ ಸಭೆಯಲ್ಲಿ ಬಿಜೆಪಿಯನ್ನು ಸೋಲಿಸುವ ಬಗ್ಗೆ ವಿವರವಾಗಿ ಚರ್ಚಿಸುತ್ತೇವೆ. ಇತಿಹಾಸ ಇಲ್ಲಿಂದ ಆರಂಭವಾಗುತ್ತದೆ. ಇತಿಹಾಸ ಬದಲಿಸುವ ಬಿಜೆಪಿಯ ಪ್ರಯತ್ನವನ್ನು ಒಗ್ಗಟ್ಟಾಗಿ ಎದುರಿಸೋಣ. ಈ ಬಾರಿಯೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗೆದ್ದರೆ ಅದು ಭಾರತದ ಕೊನೆಯ ಸಾರ್ವತ್ರಿಕ ಚುನಾವಣೆಯಾಗಲಿದೆ” ಎಂದರು.

ಮೆಹಬೂಬಾ ಮುಫ್ತಿ: “ದೇಶದ ಜಾತ್ಯತೀತ ಸ್ವರೂಪದ ಮೇಲೆ ದಾಳಿ ನಡೆಯುತ್ತಿದೆ. ಗಾಂಧಿಯನ್ನು ಬೆಂಬಲಿಸೋಣ; ಗೋಡ್ಸೆಯನ್ನು ಅಲ್ಲ” ಎಂದು ಹೇಳಿದರು.

ವಿರೋಧ ಪಕ್ಷದ ನಾಯಕರ ಮುಂದಿನ ಸಭೆ ಜುಲೈ 12 ರಂದು ಶಿಮ್ಲಾದಲ್ಲಿ ನಡೆಯಲಿದೆ. ಈ ಸಭೆಗೆ ಕಾಂಗ್ರೆಸ್ ನೇತೃತ್ವ ವಹಿಸಲಿದೆ ಎಂದು ತಿಳಿದು ಬಂದಿದೆ.

ದೇಶ

ಡಿ.ಸಿ.ಪ್ರಕಾಶ್

ದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ, ತಾನು ವಿರೋಧ ಪಕ್ಷವಾಗಿರುವ ರಾಜ್ಯಗಳಲ್ಲಿ ಹೇಗಾದರೂ ಮಾಡಿ, ಸರ್ಕಾರವನ್ನು ಉರುಳಿಸಿ, ಅಲ್ಲಿ ಅಧಿಕಾರವನ್ನು ಹಿಡಿಯಲು ನಾನಾ ರೀತಿಯ ಷಡ್ಯಂತ್ರಗಳನ್ನು ರೂಪಿಸುತ್ತಿವೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಶಿವಸೇನೆ ಪಕ್ಷದ ಶಾಸಕರನ್ನು ಏಕನಾಥ್ ಶಿಂಧೆ ಮೂಲಕ ಖರೀದಿಸಿ ಸರ್ಕಾರವನ್ನು ಉರುಳಿಸಿತು.

ಹೀಗೆ ತಾನು ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಹೇಗಾದರು ಮಾಡಿ, ಅಡ್ಡದಾರಿಯಲ್ಲಿ ಅಧಿಕಾರವನ್ನು ಹಿಡಿಯಬೇಕು ಎಂದು ನಾನಾ ಬಗೆಯ ಕಸರತ್ತುಗಳನ್ನು ಮಾಡುತ್ತಿವೆ.  ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷವನ್ನು ಮಹಾರಾಷ್ಟ್ರ ಮಾದರಿಯಲ್ಲಿ ಕೆಡವಿ, ಅಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಲು ನಾನಾ ಬಗೆಯ ತಂತ್ರಗಾರಿಕೆಗಳನ್ನು ಮಾಡುತ್ತಿವೆ.

ಅದರ ಭಾಗವಾಗಿ ದೆಹಲಿಯ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಅವರಿಗೂ ಆಮಿಷಗಳನ್ನು ತೋರಿಸಲಾಯಿತು. ಆದರೆ, ಅವರು ಇದು ಯಾವುದಕ್ಕೂ ಬಗ್ಗದ ಕಾರಣ, ಅವರ ಮೇಲೆ ಭ್ರಷ್ಟಾಚಾರ ಹಗರಣ ಹೂಡಿ, ಸಿಬಿಐ ಬಂಧಿಸುವಂತೆ ಮಾಡಿತು. ಇವರ ಬಂಧನವನ್ನು ಎಲ್ಲಾ ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿತು.

ಇದನ್ನೂ ಓದಿ: ಮನೀಶ್ ಸಿಸೋಡಿಯಾವನ್ನು ಅತ್ಯಂತ ಅಪಾಯಕಾರಿ ಕ್ರಿಮಿನಲ್‌ಗಳೊಂದಿಗೆ ಜೈಲಿನಲ್ಲಿ ಇರಿಸಲಾಗಿದೆ.

ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಕೊನೆಗೊಂಡಿತು. ಇದರಿಂದ ಮನೀಶ್ ಸಿಸೋಡಿಯಾ ಅವರನ್ನು ದೆಹಲಿ ಸಿಬಿಐ, ವಿಶೇಷ ನ್ಯಾಯಾಲಯಕ್ಕೆ ಕರೆತಂದಿತು. ಆಗ ಮನೀಶ್ ಸಿಸೋಡಿಯಾ ಅವರ ಮುಂದೆ ಮುಗಿಬಿದ್ದ ಪತ್ರಕರ್ತರ ಜತೆ ಮಾತನಾಡಲು ಯತ್ನಿಸಿದಾಗ, ಭದ್ರತಾ ಕಾರ್ಯಕ್ಕೆ ಬಂದಿದ್ದ ಪೊಲೀಸ್ ಅಧಿಕಾರಿಯೊಬ್ಬರು, ಅವರ ಕುತ್ತಿಗೆಯನ್ನು ಹಿಡಿದು ನ್ಯಾಯಾಲಯದ ಕೋಣೆಗೆ ಎಳೆದೊಯ್ದರು.

ಇದನ್ನೂ ಓದಿ: ದೆಹಲಿ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ; ಡಿಎಂಕೆ  ಖಂಡನೆ!

ಪೊಲೀಸರ ಈ ಕ್ರಮವನ್ನು ಆಮ್ ಆದ್ಮಿ ಪಕ್ಷ ಖಂಡಿಸಿದೆ. ಮನೀಶ್ ಸಿಸೋಡಿಯಾ ಅವರನ್ನು ಹೀಗೆ ನಡೆಸಿಕೊಳ್ಳುವಂತೆ ಪೊಲೀಸರಿಗೆ ಆದೇಶಿಸಿದವರು ಯಾರು? ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಈ ಹಿನ್ನಲೆಯಲ್ಲಿ, ದೆಹಲಿ ವಿಶೇಷ ನ್ಯಾಯಾಲಯವು ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ಜೂನ್ 1 ರವರೆಗೆ ವಿಸ್ತರಿಸಿದೆ.

ದೇಶ

ಡಿ.ಸಿ.ಪ್ರಕಾಶ್, ಸಂಪಾದಕರು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರದಲ್ಲಿ, ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ, ಅರವಿಂದ್ ಕೇಜ್ರಿವಾಲ್ ಅವರಿಗೆ ಅತ್ಯಂತ ಹತ್ತಿರದವರು. ಹೀಗಾಗಿ ಅವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಂಡು ದೆಹಲಿಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನಿಸಿತು. ಆದರೆ ಇದ್ಯಾವುದಕ್ಕೂ ಮಣಿಯದ ಮನೀಶ್ ಸಿಸೋಡಿಯಾ, ಬಿಜೆಪಿ ತನ್ನೊಂದಿಗೆ ಚೌಕಾಸಿ ಮಾಡಿದ ವಿಷಯವನ್ನು ಸಾರ್ವಜನಿಕವಾಗಿ ಬಯಲುಮಾಡಿದರು. ಇದರಿಂದ ಮನೀಶ್ ಸಿಸೋಡಿಯಾ ವಿರುದ್ಧ ಬಿಜೆಪಿ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿತ್ತು.

ಈ ಹಿನ್ನೆಲೆಯಲ್ಲಿ, 2021ರ ಕೊನೆಯಲ್ಲಿ ದೆಹಲಿಯಲ್ಲಿ ಹೊಸ ಮದ್ಯ ನೀತಿಯನ್ನು ಜಾರಿಗೆ ತರಲಾಯಿತು. ಅದರಂತೆ, ಆದಾಯವನ್ನು ಹೆಚ್ಚಿಸುವುದು, ಮದ್ಯದ ಮಾರಾಟದಲ್ಲಿ ಸಮಾನ ವಿತರಣೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಕಳ್ಳತನ ಹಾಗೂ ಮಾಫಿಯಾವನ್ನು ಕೊನೆಗೊಳಿಸಲು ದೆಹಲಿಯನ್ನು 32 ವಲಯಗಳನ್ನಾಗಿ ವಿಂಗಡಿಸಿ, ಪ್ರತಿ ವಲಯದಲ್ಲಿ 27 ಮದ್ಯದ ಅಂಗಡಿಗಳನ್ನು ಪ್ರಾರಂಭಿಸಲಾಯಿತು. ಖಾಸಗಿ ಬಾರ್‌ಗಳು ನಗರದ ಹೊರಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿತು. ಈ ಹಿನ್ನೆಲೆಯಲ್ಲಿ ದೆಹಲಿಯ ಡೆಪ್ಯುಟಿ ಗವರ್ನರ್ ವಿ.ಕೆ.ಸಕ್ಸೇನಾ ಅವರು ಕಳೆದ ವರ್ಷ ಜುಲೈನಲ್ಲಿ ದೆಹಲಿ ಸರ್ಕಾರದ 2021-22ನೇ ಸಾಲಿನ ಹೊಸ ಮದ್ಯ ನೀತಿಯಲ್ಲಿ ವಿವಿಧ ಅಕ್ರಮಗಳು ನಡೆದಿದೆ ಎಂದು ಆರೋಪಿಸಿ, ದೆಹಲಿ ಅಬಕಾರಿ ನೀತಿ 2021-22 ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದರು. ಆ ಬಳಿಕ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ 15 ಮಂದಿಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ನಂತರ ಮನೀಶ್ ಸಿಸೋಡಿಯಾ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿತು. ಆದರೆ ಸಿಬಿಐ ಯಾವುದೇ ಸಾಕ್ಷ್ಯವನ್ನು ವಶಪಡಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಪ್ರಕರಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಪುತ್ರಿ ಕವಿತಾ ಮತ್ತು ಆಂಧ್ರದ ವೈಎಸ್ಆರ್ ಕಾಂಗ್ರೆಸ್ ಸಂಸದ ಶ್ರೀನಿವಾಸಲು ರೆಡ್ಡಿ ಹಾಗೂ ಅವರ ಪುತ್ರ ಮಕುಂದ ರಾಘವ ರೆಡ್ಡಿಯ ಮೇಲೂ ಆರೋಪ ಮಾಡಲಾಗಿತ್ತು.

ಕಳೆದ ಫೆಬ್ರವರಿ 26 ರಂದು ಸಿಬಿಐ ಸುಮಾರು 8 ಗಂಟೆಗಳ ವಿಚಾರಣೆ ಬಳಿಕ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿತು. ನಂತರ ಅವರು ಕಳೆದ ಮಂಗಳವಾರ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ನಂತರ ಮನೀಶ್ ಸಿಸೋಡಿಯಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಮತ್ತೆ ಎರಡು ದಿನಗಳ ಕಾಲ ಸಿಬಿಐ ಕಸ್ಟಡಿಯನ್ನು ವಿಸ್ತರಿಸಿ ಕಳೆದ ಶುಕ್ರವಾರ ಆದೇಶಿಸಿತು. ಈ ಹಿನ್ನೆಲೆಯಲ್ಲಿ ಮನೀಶ್ ಸಿಸೋಡಿಯಾ ಬಿಡುಗಡೆಗೆ ಆಗ್ರಹಿಸಿ 9 ವಿರೋಧ ಪಕ್ಷಗಳು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದೆ. ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಅವರು ಪ್ರಧಾನಿಗೆ ಪತ್ರವನ್ನು ಬರೆದಿದ್ದಾರೆ.

ಪತ್ರದಲ್ಲಿ ‘ಭಾರತವನ್ನು ನೀವು ಇನ್ನೂ ಪ್ರಜಾಪ್ರಭುತ್ವ ಎಂದು ಒಪ್ಪುತ್ತೀರಿ ಎಂದು ನಾವು ಭಾವಿಸುತ್ತೇವೆ. ಪ್ರತಿಪಕ್ಷಗಳ ಸದಸ್ಯರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳ ಘೋರ ನಿಂದನೆಯನ್ನು ನೋಡಿದರೆ, ನಾವು ಪ್ರಜಾಪ್ರಭುತ್ವದಿಂದ ನಿರಂಕುಶ ಪ್ರಭುತ್ವಕ್ಕೆ ಸಾಗಿದ್ದೇವೆ ಎಂಬುದನ್ನು ತೋರಿಸುತ್ತಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದೆ. 2014 ರಿಂದ ನಿಮ್ಮ ಆಡಳಿತದಲ್ಲಿರುವ ಗುಪ್ತಚರ ಸಂಸ್ಥೆಗಳಿಂದ ದಾಖಲಾದ, ಬಂಧಿಸಲಾದ, ವಿಚಾರಣೆ ಅಥವಾ ತನಿಖೆಗೆ ಒಳಗಾದ ಒಟ್ಟು ಪ್ರಮುಖ ರಾಜಕಾರಣಿಗಳ ಸಂಖ್ಯೆಯಲ್ಲಿ ವಿರೋಧ ಪಕ್ಷಗಳೇ ಗರಿಷ್ಠ ಸಂಖ್ಯೆಯಲ್ಲಿದೆ. ಕುತೂಹಲಕಾರಿಯೆಂದರೆ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ವಿರೋಧ ಪಕ್ಷದ ರಾಜಕಾರಣಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ತನಿಖಾ ಸಂಸ್ಥೆಗಳು ಮುಂದೂಡುತ್ತಿವೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶಾರದಾ ನಿಧಿ ಭ್ರಷ್ಟಾಚಾರ ಪ್ರಕರಣವನ್ನು ಹೊಂದಿದ್ದರು. ಆದರೆ ಅವರು ಬಿಜೆಪಿ ಸೇರಿದ ನಂತರ ಪ್ರಕರಣವು ಪ್ರಗತಿ ಕಾಣಲಿಲ್ಲ. ಅದೇ ರೀತಿ, ತೃಣಮೂಲ ಕಾಂಗ್ರೆಸ್‌ನ ಮಾಜಿ ನಾಯಕ ಸುವೇಂದು ಅಧಿಕಾರಿ ಮತ್ತು ಮುಕುಲ್ ರಾಯ್, ನಾರದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಇಡಿ ಮತ್ತು ಸಿಬಿಐ ಸ್ಕ್ಯಾನರ್‌ಗೆ ಒಳಗಾಗಿದ್ದರು. ಆದರೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ ನಂತರ ಪ್ರಕರಣಗಳು ಪ್ರಗತಿಯೇ ಕಾಣಲಿಲ್ಲ. 2014 ರಿಂದ ಪ್ರತಿಪಕ್ಷ ನಾಯಕರ ಮೇಲಿನ ದಾಳಿಗಳು, ಕಾನೂನು ಕ್ರಮಗಳು ಮತ್ತು ಬಂಧನಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಲಾಲು ಪ್ರಸಾದ್ ಯಾದವ್ (ಆರ್‌ಜೆಡಿ), ಸಂಜಯ್ ರಾವತ್ (ಶಿವಸೇನೆ), ಅಜಂ ಖಾನ್ (ಸಮಾಜವಾದಿ), ನವಾಬ್ ಮಲಿಕ್, ಅನಿಲ್ ದೇಶಮುಖ್ (ಎನ್‌ಸಿಪಿ), ಅಭಿಷೇಕ್ ಬ್ಯಾನರ್ಜಿ (ಟಿಎಂಸಿ) ಅನೇಕ ಉದಾಹರಣೆಗಳು ಇದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ದೇಶ

2024ರ ಸಂಸತ್ತಿನ ಚುನಾವಣೆಯಲ್ಲಿ ಜನ ಬಡ್ಡಿ ಸಮೇತ ಅಸಲನ್ನೂ ಮರುಪಾವತಿಸಲಿದ್ದಾರೆ ಎಂದು ಮನೀಶ್ ಸಿಸೋಡಿಯಾ ಬಂಧನವನ್ನು ಡಿಎಂಕೆ ಖಂಡಿಸಿದೆ.

ಚೆನ್ನೈ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ, ಡಿಎಂಕೆ ಖಜಾಂಚಿ ಟಿ.ಆರ್.ಬಾಲು ಖಂಡನೆ.

ಈ ಕುರಿತು ಡಿಎಂಕೆ ಖಜಾಂಚಿ ಹಾಗೂ ಡಿಎಂಕೆ ಪಕ್ಷದ ಸಂಸದೀಯ ಸಮಿತಿ ಅಧ್ಯಕ್ಷ ಟಿ.ಆರ್.ಬಾಲು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, “ಆಮ್ ಆದ್ಮಿ ನೇತೃತ್ವದ ದೆಹಲಿ ಸರ್ಕಾರದ ಹೊಸ ಮದ್ಯ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿರುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ. ವಿಚಾರಣೆಗೆ ಹಾಜರಾಗುವ ಮೊದಲು ‘ಸಿಬಿಐ ತನ್ನನ್ನು ಬಂದಿಸಲಿದೆ’ ಎಂದು ಮನೀಶ್ ಸಿಸೋಡಿಯಾ ಹೇಳಿದಂತೆಯೇ ಕೇಂದ್ರ ಸರ್ಕಾರದ ಸಿಬಿಐ ಇದೀಗ ಅವರನ್ನು ಬಂಧಿಸಿ 5 ದಿನಗಳ ಕಸ್ಟಡಿ ಪಡೆದಿದೆ.

ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳ ಮೇಲೆ ಬಳಸಿಕೊಳ್ಳುವ ಬಿಜೆಪಿಯ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇಂದ್ರ ಸರಕಾರದ ಅಧೀನದಲ್ಲಿರುವ ಎಲ್ಲಾ ಸಂಸ್ಥೆಗಳನ್ನು ತನ್ನ ಮಿತ್ರಪಕ್ಷಗಳೆಂದು ಬಿಂಬಿಸುವ ಮೂಲಕ ಪ್ರತಿಪಕ್ಷ ನಾಯಕರ ಮೇಲೆ ದಬ್ಬಾಳಿಕೆ ನಡೆಸುವ ಪ್ರವೃತ್ತಿ ಕಳವಳಕಾರಿಯಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲ, ಘೋರ ಕಾನೂನು ಭಾಹಿರವೂ ಆಗಿದೆ. ಈ ಆಡಳಿತದಲ್ಲಿ ಗುಪ್ತಚರ ಸಂಸ್ಥೆಗಳ ಸ್ವಾತಂತ್ರ್ಯವು ಗಾಳಿಯಲ್ಲಿ ಹಾರಿದಂತೆ ಬೇರೆ ಯಾವ ಆಡಳಿತದಲ್ಲೂ ಹೀಗಾಗಲಿಲ್ಲ. ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ಒಬ್ಬೊಬ್ಬರನ್ನಾಗಿ ಬಂಧಿಸುತ್ತಿರುವುದು ಇದರಿಂದ ಸಾಬೀತಾಗುತ್ತಿದೆ.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಮ್ಮ ನೀತಿಗಳಿಗೆ ವಿರುದ್ಧವಾಗಿ ಯೋಚಿಸುವ ಸಾಹಿತಿಗಳು, ಪತ್ರಕರ್ತರು, ಚಿಂತಕರು, ಕಲಾವಿದರಿಗೆ ಬೆದರಿಕೆ ಹಾಕುವ ಪ್ರವೃತ್ತಿ ಆರಂಭವಾಗಿದೆ. ಬಿಜೆಪಿಯ ಇಂತಹ ಅಧಿಕಾರ ಬೆದರಿಕೆಯ ಆಕ್ಟೋಪಸ್ ಕೈಗಳು, 2024ರ ಸಂಸತ್ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ಅದು ಈಗ ಅತ್ಯಂತ ವೇಗವಾಗಿ ಮತ್ತು ಅರಾಜಕವಾಗಿ ವಿರೋಧ ಪಕ್ಷಗಳತ್ತ ಸಾಗಿ ಬರುತ್ತಿದೆ. “ಸಿಬಿಐಗೆ ಬಂಧಿಸಲು ಇಷ್ಟವಿಲ್ಲ. ಆದರೆ ರಾಜಕೀಯ ಒತ್ತಡದಿಂದ ಈ ಬಂಧನ ಮಾಡಲಾಗುತ್ತಿದೆ,’’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಪವನ್ನು ಸುಲಭವಾಗಿ ತಳ್ಳಿ ಹಾಕುವಂತಿಲ್ಲ.

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಹಿಮಾಲಯದ ಆರೋಪಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಆಡಳಿತ ಪಕ್ಷವು ಈ ರೀತಿಯ ಬಂಧನಕ್ಕೆ ಮುಂದಾಗಿದೆ. ವಿರೋಧ ಪಕ್ಷಗಳ ಮೇಲೆ ಸೇಡು ತೀರಿಸಿಕೊಳ್ಳಲು, ಅಧಿಕಾರದಲ್ಲಿದ್ದಾಗ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡವರು, ನಂತರ ಇತಿಹಾಸದ ಕಸದ ಬುಟ್ಟಿಗೆ ಎಸೆಯಲ್ಪಟ್ಟ ಅನೇಕ ಉದಾಹರಣೆಗಳಿವೆ ಎಂಬುದನ್ನು ಕೇಂದ್ರ ಬಿ.ಜೆ.ಪಿ ಸರ್ಕಾರದಲ್ಲಿ ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರು ಇದನ್ನು ನೆನಪು ಮಾಡಿಕೊಳ್ಳಬೇಕೆಂದು ನಾನು ಅವರಲ್ಲಿ ಕೇಳಿಕೊಳ್ಳುತ್ತೇನೆ.

ಮಾಧ್ಯಮಗಳನ್ನು ಬಳಸಿಕೊಂಡು ಸತ್ಯಗಳನ್ನು ಎಷ್ಟೇ ಮರೆಮಾಚಿದರೂ ಅದು ಜನಸಮೂಹದ ಮಧ್ಯೆ ಅಂಬಲವಾಗಿ ಬಿಡುತ್ತದೆ. ವಿರೋಧ ಪಕ್ಷಗಳ ಮೇಲೆ ಸೇಡು ತೀರಿಸಿಕೊಂಡು, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಉಗ್ರ ಪ್ರವೃತ್ತಿಯನ್ನು ಒಕ್ಕೂಟ ಬಿಜೆಪಿ ಸರಕಾರ ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಈ ವಿಷಯಗಳನ್ನು ಗಮನಿಸುತ್ತಿರುವ ಜನರು ಕೇವಲ ವೀಕ್ಷಕರಾಗಿರುವುದಿಲ್ಲ; ಅವರು ಪಾಠ ಕಲಿಸುವ ನ್ಯಾಯಾಧೀಶರಾಗುತ್ತಾರೆ. ಮತ್ತು 2024ರ ಸಂಸತ್ತಿನ ಚುನಾವಣೆಯಲ್ಲಿ ಬಡ್ಡಿ ಸಮೇತ ಅಸಲನ್ನು ಮರು ಪಾವತಿಸುತ್ತಾರೆ ಎಂದು ನಾನು ನಿಮಗೆ ಎಚ್ಚರಿಸಲು ಬಯಸುತ್ತೇನೆ” ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ 2023ರ ಕೇಂದ್ರ ಬಜೆಟ್‌ ಬಗ್ಗೆ ವಿರೋಧ ಪಕ್ಷಗಳ ನಾಯಕರ ಅಭಿಪ್ರಾಯವೇನು? ಅವರು ಏನು ಹೇಳುತ್ತಾರೆ? ನೋಡೋಣ!

ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರು, ಎಐಸಿಸಿ
‘ಮುಂಬರುವ 3 ಮತ್ತು 4ನೇ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಈ ಬಜೆಟ್ ನೀಡಿದೆ. ಈ ಬಜೆಟ್‌ನಲ್ಲಿ ಬಡವರಿಗೆ ಏನೂ ಇಲ್ಲ. ಹಣದುಬ್ಬರ ನಿಯಂತ್ರಣಕ್ಕೆ ಯಾವುದೇ ಕ್ರಮಗಳಿಲ್ಲ. ಅದೇ ರೀತಿ ಈ ಬಜೆಟ್‌ನಲ್ಲಿ ಉದ್ಯೋಗ ಹೆಚ್ಚಳ, ಖಾಲಿ ಇರುವ ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡುವ ಬಗ್ಗೆ ಅಥವಾ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ’.

ಪಿ.ಚಿದಂಬರಂ ಮಾಜಿ ಕೇಂದ್ರ ಹಣಕಾಸು ಸಚಿವರು
‘ಇದು ಅಹಿತವಾದ ಹಣಕಾಸು ಸಚಿವರಿಂದ ಓದಲ್ಪಟ್ಟ ಬಂಡವಾಳಶಾಹಿ ಬಜೆಟ್. ಬಡವರು ಮತ್ತು ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಘೋಷಿಸಲಾದ ಎಲ್ಲಾ ಸಬ್ಸಿಡಿಗಳನ್ನು ಈಗ ಕಡಿಮೆ ಮಾಡಲಾಗಿದೆ. ಕೇಂದ್ರ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ಘೋಷಣೆಯಾಗಿಲ್ಲ. ಜಿಎಸ್‌ಟಿ ಆದಾಯ ತೆರಿಗೆ ರಿಯಾಯಿತಿ ಇಲ್ಲದೇ ಬಜೆಟ್ ಮಂಡನೆ ಮಾಡಲಾಗಿದೆ. ಕೊರೊನಾ ಪೀಡಿತ ಜನರಿಗೆ ಪರಿಹಾರ ನೀಡಲು ಮುಂದಾಗಲಿಲ್ಲ. ಹಣದುಬ್ಬರವನ್ನು ನಿಯಂತ್ರಿಸಲು ಅಥವಾ ಬೆಲೆ ಏರಿಕೆಯನ್ನು ಕಡಿಮೆ ಮಾಡಲು ಯಾವುದೇ ಕ್ರಮವಿಲ್ಲ. ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಪುನಶ್ಚೇತನಗೊಳಿಸಲು ಬಜೆಟ್‌ನಲ್ಲಿ ಯಾವುದೇ ಘೋಷಣೆ ಮಾಡಿಲ್ಲ. ಬಡವರು ಎಂಬ ಪದ ಬಜೆಟ್‌ನಲ್ಲಿ ಎರಡು ಬಾರಿ ಕಾಣಿಸಿಕೊಂಡಿದೆ. ದೇಶದಲ್ಲಿ ಬಡವರು ಇದ್ದಾರೆ ಎಂಬುದು ಈಗ ಹಣಕಾಸು ಸಚಿವರಿಗೆ ಅರಿವಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆಯನ್ನು ಸರಿಪಡಿಸಲು ಯಾವುದೇ ಯೋಜನೆ ಘೋಷಿಸಿಲ್ಲ. ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳಿಗೆ ಹಣ ಹಂಚಿಕೆಯನ್ನು ಕಡಿತಗೊಳಿಸಲಾಗಿದೆ. ಸಂಕ್ಷಿಪ್ತ ಪಠ್ಯವನ್ನು ಹೊರತುಪಡಿಸಿ ಬಡ್ಡಿರಹಿತ ಸಾಲವನ್ನು ಸೂಚಿಸಲು ಅದರಲ್ಲಿ ಏನೂ ಇಲ್ಲ’.

ಪಿ.ಚಿದಂಬರಂ, ಮಾಜಿ ಕೇಂದ್ರ ಹಣಕಾಸು ಸಚಿವ

ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
‘ಈ ಬಜೆಟ್ ದೂರದೃಷ್ಟಿಯದ್ದಲ್ಲ. ಇದೊಂದು ಅವಕಾಶವಾದಿ ಬಜೆಟ್‌. ಇದು ಜನವಿರೋಧಿ, ಬಡವರ ವಿರೋಧಿ ಬಜೆಟ್. ಈ ಬಜೆಟ್ ಒಂದು ವರ್ಗಕ್ಕೆ ಮಾತ್ರ ಲಾಭವಾಗಲಿದೆ. ದೇಶದ ನಿರುದ್ಯೋಗ ಸಮಸ್ಯೆಗೆ ಈ ಬಜೆಟ್‌ನಲ್ಲಿ ಪರಿಹಾರವಿಲ್ಲ. ಮುಂಬರುವ 2024ರ ಸಂಸತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ ಸಿದ್ಧಪಡಿಸಲಾಗಿದೆ’.

ಎಂ.ಕೆ.ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿ
‘ಜನರ ಹಿತವನ್ನು ಮರೆತಿರುವ ಹಣಕಾಸು ವರದಿ. 2023ನೇ ಸಾಲಿನ ಈ ಹಣಕಾಸು ವರದಿಯು ಕೇಂದ್ರ ಬಿಜೆಪಿ ಸರಕಾರದ ನಿಯಮಿತ ಹಣಕಾಸು ವರದಿಯಾಗಿದ್ದು, ವೈಯಕ್ತಿಕ ಆದಾಯ ತೆರಿಗೆ ದರ, ರೈತರ ಕಲ್ಯಾಣ ಯೋಜನೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡ ರೈತರಿಗೆ ಯಾವುದೇ ಕಲ್ಯಾಣ ಯೋಜನೆಗಳಿಲ್ಲ’.

ಕೆ.ಚಂದ್ರಶೇಖರ್ ರಾವ್, ಮುಖ್ಯಮಂತ್ರಿ, ತೆಲಂಗಾಣ.

ಚಂದ್ರಶೇಖರ ರಾವ್ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ
‘ಕೇಂದ್ರ ಬಿಜೆಪಿ ಸರ್ಕಾರ ಮಂಡಿಸಿರುವ ಬಜೆಟ್ ‘ಗೋಲ್ಮಾಲ್ ಬಜೆಟ್’. ಈ ಬಜೆಟ್ ಜನಸಾಮಾನ್ಯರನ್ನು ತೀವ್ರ ಹತಾಶೆಗೆ ದೂಡಿದೆ. ರೈತರು ಮತ್ತು ಸಾಮಾನ್ಯ ಜನರೊಂದಿಗೆ, ಎಸ್‌ಸಿ/ಎಸ್‌ಟಿ, ಬಿ.ಸಿ. ಹಾಗೂ ಅಲ್ಪಸಂಖ್ಯಾತರಿಗೆ ತೀವ್ರ ನಿರಾಸೆಯನ್ನು ಮೂಡಿಸಿದೆ. ಬಡವರು, ಕಾರ್ಮಿಕರು ಮತ್ತು ನೌಕರರು ನಿರಾಶೆಗೊಂಡಿದ್ದಾರೆ. ಈ ಬಜೆಟ್ ದೇಶದ ಕೃಷಿ ಮತ್ತು ಕೈಮಗ್ಗ ಕ್ಷೇತ್ರಕ್ಕೆ ದೊಡ್ಡ ಶೂನ್ಯವಾಗಿದೆ. ಈ ಬಜೆಟ್ ಸಣ್ಣ ವ್ಯಾಪಾರಿಗಳಿಗೂ ನಿರಾಸೆ ಮೂಡಿಸಿದೆ. ಆರೋಗ್ಯ ಮತ್ತು ಮೂಲಸೌಕರ್ಯ ಕ್ಷೇತ್ರಗಳ ಅಭಿವೃದ್ಧಿಯನ್ನು ಬಜೆಟ್ ನಿರ್ಲಕ್ಷಿಸಿದೆ’.

ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ
‘ಈ ಬಾರಿಯ ಬಜೆಟ್‌ನಲ್ಲಿ ಹಣದುಬ್ಬರಕ್ಕೆ ಪರಿಹಾರ ಸಿಕ್ಕಿಲ್ಲ. ಇದಕ್ಕೆ ವಿರುದ್ಧವಾಗಿ ಈ ಬಜೆಟ್ ಹಣದುಬ್ಬರವನ್ನು ಹೆಚ್ಚಿಸುತ್ತದೆ. ನಿರುದ್ಯೋಗ ನಿವಾರಣೆಗೆ ಯಾವುದೇ ನಿರ್ದಿಷ್ಟ ಯೋಜನೆ ಇಲ್ಲ. ಶಿಕ್ಷಣದ ಬಜೆಟ್ ಶೇ.2.64ರಿಂದ ಶೇ.2.5ಕ್ಕೆ ಇಳಿಸಿರುವುದು ದುರದೃಷ್ಟಕರ. ಆರೋಗ್ಯ ಬಜೆಟ್ ಅನ್ನು 2.2% ರಿಂದ 1.98% ಕ್ಕೆ ಇಳಿಸುವುದು ಸಹ ಹಾನಿಕಾರಕವಾಗಿದೆ’.

ದೇಶ

ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವಲ್ಲಿ ಆಮ್ ಆದ್ಮಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಬಿಜೆಪಿ ಶಾಸಕರು ಇಂದು ದೆಹಲಿ ವಿಧಾನಸಭೆಗೆ ಮಾಸ್ಕ್ ಧರಿಸಿ ಆಕ್ಷಿಜೆನ್ ಸಿಲಿಂಡರ್ ನೊಂದಿಗೆ ಬಂದಿದ್ದರು.

ದೆಹಲಿಯಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಅನೇಕ ಜನರು ಉಸಿರಾಟದ ತೊಂದರೆ ಮತ್ತು ಹೃದಯದ ತೊಂದರೆಗಳಿಂದ ಬಳಲುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ದೆಹಲಿ ವಿಧಾನಸಭೆ ನಡೆಯಿತು. ಆಗ ಬಿಜೆಪಿ ಶಾಸಕರು ಮುಖ ಕವಚದೊಂದಿಗೆ ಕೈಯಲ್ಲಿ ಸಣ್ಣ ಆಮ್ಲಜನಕ ಸಿಲಿಂಡರ್ ಹಿಡಿದು ವಿಧಾನಸಭೆಗೆ ಬಂದು ಕೋಲಾಹಲವನ್ನು ಎಬ್ಬಿಸಿದರು.

ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವುದನ್ನುಖಂಡಿಸಲು ಸಿಲಿಂಡರ್ ಸಮೇತ ವಿಧಾನಸಭೆಗೆ ಬಂದಿರುವುದಾಗಿ ಅವರು ಹೇಳಿದರು.

ದೆಹಲಿಯ ಸಮೀಪವಿರುವ ಪಂಜಾಬ್ ರಾಜ್ಯದಲ್ಲಿ ಕೋಲುಗಳನ್ನು ಸುಡುವುದರಿಂದ ವಾಯುಮಾಲಿನ್ಯ ಪರಿಸ್ಥಿತಿಯು ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರು ನಡೆದುಕೊಂಡು ಹೋಗಲು ಸಹ ಸಾಧ್ಯವಿಲ್ಲ. ಕೋಲು ಸುಡುವುದರಿಂದ ವಾಯು ಗುಣಮಟ್ಟ ಸೂಚ್ಯಂಕ (AQI) ಮಟ್ಟಕ್ಕೆ ಏರಿಕೆಯಾಗಿದೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ದೆಹಲಿಯ ಗಾಳಿಯ ಗುಣಮಟ್ಟ ಪ್ರತಿವರ್ಷವು ಅಪಾಯಕಾರಿ ಮಟ್ಟ ತಲುಪುತ್ತದೆ. ದೆಹಲಿಯ ಸುತ್ತಲಿನ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನದಲ್ಲಿ ಗೋಧಿ ಬೆಳೆದ ನಂತರ ಹುಲ್ಲುಗಳನ್ನು ಸುಡುವುದರಿಂದ, ಸಾರಿಗೆಯಿಂದ ಹೊರಸೂಸುವಿಕೆ, ಇತರ ಕೈಗಾರಿಕೆಗಳ ಹೊರಗಿನ ಕಲ್ಲಿದ್ದಲು ಸ್ಥಾವರಗಳು, ತೆರೆದ ಜಾಗದಲ್ಲಿ ಕಸವನ್ನು ಸುಡುವುದು ಮತ್ತು ಧೂಳಿನಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ.

ಇದನ್ನು ನಿಯಂತ್ರಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದು ಬಿಜೆಪಿಯವರ ಆರೋಪವಾಗಿದೆ. ಅದಕ್ಕಾಗಿ ಈ ರೀತಿಯ ವಿನೂತನವಾದ, ಜನರ ಗಮನ ಸೆಳೆಯುವ ಗುರುತರವಾದ ಪ್ರತಿಭಟನೆಗಳನ್ನು ಬಿಜೆಪಿ ಪಕ್ಷವು ಮಾಡುತ್ತಿದೆ.