ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Bangalore Slums Archives » Dynamic Leader
January 8, 2025
Home Posts tagged Bangalore Slums
ರಾಜಕೀಯ

ಬೆಂಗಳೂರು: ಈ ಬಾರಿ ಕರ್ನಾಟಕದಲ್ಲಿ “ಇಂಡಿಯಾ” ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಮ್ಮ ಬೆಂಬಲ ಎಂದು “ಕರ್ನಾಟಕ ತಮಿಳರ ಸಂಘ” ತೀರ್ಮಾನಿಸಿದೆ ಎಂದು ಅದರ ಅಧ್ಯಕ್ಷ ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಸುಮಾರು 80 ಲಕ್ಷ ತಮಿಳರಿದ್ದಾರೆ. ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ,  ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ಮತ್ತು ಕೋಲಾರದ ಕೆಜಿಎಫ್‌ನಲ್ಲಿ ವ್ಯಾಪಕವಾಗಿ ವಾಸಿಸುತ್ತಿದ್ದಾರೆ. ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಶಿವಮೊಗ್ಗ ಮತ್ತು ಕೋಲಾರದ ಕೆಜಿಎಫ್‌ನಲ್ಲಿ ತಮಿಳರೆ ನಿರ್ಣಾಯಕರು.

ಆದರೆ, ತಮಿಳರಿಗೆ ಇಲ್ಲಿ ಯಾವುದೇ ರಾಜಕೀಯ ಪ್ರಾತಿನಿತ್ಯ ನೀಡುವುದಿಲ್ಲ. ಇಲ್ಲಿ ಎಲ್ಲರಿಗೂ ಜಾತಿ ಆಧಾರದ ಮೇಲೆಯೆ ಅವಕಾಶ ನೀಡಲಾಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಯಾರೊಬ್ಬರೂ ತಮ್ಮ ಜಾತಿಯ ಮತಗಳಿಂದ ಗೆದ್ದು ಬರುವುದಿಲ್ಲ. ಗೆಲ್ಲಬೇಕಾದರೆ ಅವರಿಗೆ ತಮಿಳರು ಮತ್ತು ಕೊಳಗೇರಿ ಜನರ ಮತಗಳು ಬೇಕು. ಬೆಂಗಳೂರಿನ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಸುಮಾರು ಶೇ.60ರಷ್ಟು ಜನ ತಮಿಳು ಭಾಷಿಕರಾಗಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

ಕಳೆದ ರಾಜ್ಯ ಬಿಜೆಪಿ ಸರ್ಕಾರದಲ್ಲಿ, ಮತಾಂತರ ನಿಷೇಧ ಕಾಯಿದೆ, ಗೋಹತ್ಯೆ ನಿಷೇಧ ಕಾಯಿದೆ ಮುಂತಾದ ಸಂವಿಧಾನ ವಿರೋಧಿ ಕಾಯಿದೆಗಳನ್ನು ತಂದು ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದಬ್ಬಾಳಿಕೆ ಮಾಡಲಾಯಿತು. ಇದರಿಂದ ಕರ್ನಾಟಕದಲ್ಲಿ ಮುಸ್ಲಿಮರು ಮಾತ್ರವಲ್ಲ ತಮಿಳು ಕ್ರೈಸ್ತರು ಮತ್ತು ಆದಿ ದ್ರಾವಿಡ (ತಮಿಳರು) ಸಮುದಾಯವು ಕೂಡ ದಬ್ಬಾಳಿಕೆಯನ್ನು ಎದುರಿಸಬೇಕಾಯಿತು.

ಬೆಂಗಳೂರು ಮಹಾನಗರದ ಸುತ್ತಮುತ್ತ ಮತ್ತು ಕೆಜಿಎಫ್‌ನಲ್ಲಿರುವ ಕ್ರೈಸ್ತರಲ್ಲಿ ಶೇ.80ರಷ್ಟು ಜನ ತಮಿಳು ಕ್ರೈಸ್ತರಾಗಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃದ ಕಾಂಗ್ರೆಸ್ ಸರ್ಕಾರ ಬಂದಮೇಲೆ ರಾಜ್ಯದಲ್ಲಿ ಅಲ್ಪಸಂಖ್ಯಾತರು ವಿಶೇಷವಾಗಿ ತಮಿಳು ಕ್ರೈಸ್ತರು ಹಾಗೂ ಆದಿ ದ್ರಾವಿಡ ಸಮುದಾಯವು ನಿಟ್ಟುಸಿರು ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

2024-25ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ರೂ.500 ಕೋಟಿ ನಿರೀಕ್ಷಿಸಲಾಗಿತ್ತು. ಆದರೆ, ರೂ.200 ಕೋಟಿಯಷ್ಟೆ ಘೋಷಣೆ ಮಾಡಲಾಗಿದೆ. ತಮಿಳು ಕ್ರೈಸ್ತರಿಗೆ ಇದರಲ್ಲೂ ಸ್ವಲ್ಪ ಮಟ್ಟಿಗೆ ಪಾಲು ದೊರೆತಿದೆ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ 5 ಗ್ಯಾರಂಟಿ (ಅನ್ನ ಭಾಗ್ಯ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಉಚಿತ ಪ್ರಯಾಣ, ಯುವನಿಧಿ)  ಯೋಜನೆಯಿಂದ ಕರ್ನಾಟಕ ತಮಿಳರು ಹೆಚ್ಚಾಗಿ ಅನುಕೂಲ ಪಡೆದಿದ್ದಾರೆ. ವಿಶೇಷವಾಗಿ ಕೊಳಗೇರಿಗಳಲ್ಲಿ ವಾಸವಾಗಿರುವ ಅಸಂಘಟಿ ತಮಿಳು ಕೂಲಿ ಕಾರ್ಮಿಕರು ಹೆಚ್ಚಿನ ರೀತಿಯಲ್ಲಿ ಅನುಕೂಲತೆಯನ್ನು ಪಡೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ, ಕೇಂದ್ರ ಸಚಿವೆ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು, ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿ ತಮಿಳುನಾಡಿನವರು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಮಿಳರ ಮಧ್ಯೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಶೋಭಾ ಕರಂದ್ಲಾಜೆ ವಿರುದ್ಧ ತಮಿಳುನಾಡಿನಲ್ಲಿ ಪ್ರಕರಣಗಳು ದಾಖಲಾದವು. ಡಿಎಂಕೆ ದೂರಿನ ಮೇರೆಗೆ, ಕರ್ನಾಟಕದಲ್ಲೂ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ. ಶೋಭಾ ಕರಂದ್ಲಾಜೆ ಅವರ ಈ ಹೇಳಿಕೆಯಿಂದ ಕರ್ನಾಟಕ ತಮಿಳರು ಆಘಾತಕ್ಕೆ ಒಳಗಾಗಿದ್ದಾರೆ.

ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಮಾನ ಅವಕಾಶಕ್ಕಾಗಿ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಜಾತಿಗಣತಿ ನಡೆಸುವ ಆಶ್ವಾಸನೆಯನ್ನು ನೀಡಿದೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅತೀ ಹಿಂದುಳಿದ, ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಹಾಗೂ ಆರ್ಥಿಕವಾಗಿ ಇನ್ನು ಹೆಚ್ಚಾಗಿ ಪ್ರಗತಿ ಹೊಂದಲು ಅನುಕೂಲವಾಗಬಹುದು; ಇದು ಸ್ವಾಗತಾರ್ಹ.

ಮೋದಿ ಸರ್ಕಾರಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ; ಅತ್ಯಾಚಾರವೆಂಬುದು ಸಾಮಾನ್ಯವಾಗಿದೆ. ಅಲ್ಪಸಂಖ್ಯಾತರಿಗೆ ಭದ್ರತೆಯಿಲ್ಲ. ಬಿಜೆಪಿ ಸಂಸದರ ವರ್ತನೆಗೆ ಕಡಿವಾಣವಿಲ್ಲ. ಅವರ ನಾಲಿಗೆಯಲ್ಲಿ ಹಿಡಿತವಿಲ್ಲ; ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುತ್ತಾರೆ. ರಾಜ್ಯದ, ತಮ್ಮ ಕ್ಷೇತ್ರದ ಬಗ್ಗೆ ಕಾಳಜಿಯಿಲ್ಲ; ಅವರಿಗೆ ಜನರ ಸಮಸ್ಯೆಗಳು ಅರ್ಥವಾಗುತ್ತಿಲ್ಲ. ಒಟ್ಟಾರೆಯಾಗಿ ಪ್ರಧಾನಿ ಮೋದಿಯ ಮುಂದೆ ಮಾತನಾಡುವುದೇ ಇಲ್ಲ. ಇಂತಹ ಸಂಸದರು ಮತ್ತೊಮ್ಮೆ ಬೇಕೆ?

ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಏರಿಕೆ, ಜಿಎಸ್‌ಟಿಯಲ್ಲಿ ತಾರತಮ್ಯ, ಉದ್ಯೋಗದ ನೇಮಕಾತಿಯಲ್ಲಿ ಉತ್ತರದವರಿಗೆ ಆದ್ಯತೆ, ಅತಿವೃಷ್ಟಿ-ಅನಾವೃಷ್ಟಿಯ ಕಾಲದಲ್ಲಿ ಅನುದಾನದ ನಿರಾಕರಣೆ, ಹಣ ನೀಡುತ್ತೇವೆ ಎಂದರೂ ರಾಜ್ಯಕ್ಕೆ ಅಕ್ಕಿ ಕೊಡದೆ “ಭಾರತ್ ರೈಸ್” ಹೆಸರಿನಲ್ಲಿ ಹಕ್ಕಿಯನ್ನು ಕಡಿಮೆ ಬೆಲೆಗೆ ನೇರವಾಗಿ ಮಾರಟ ಮಾಡುವುದು ಮುಂತಾದ ಇನ್ನು ಹಲವಾರು ಜನವಿರೋಧಿ ಕಾರ್ಯಗಳಿಂದ ಜನ ಬೇಸತ್ತು ಹೋಗಿದ್ದಾರೆ.

ಆದ್ದರಿಂದ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕ ತಮಿಳರ ಸಂಘವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ತೀರ್ಮಾನವನ್ನು ಮಾಡಿದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಶಿವಮೊಗ್ಗ ಮತ್ತು ಕೋಲಾರದ ಕೆಜಿಎಫ್‌ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ತಿಗಳನ್ನು ಬೆಂಬಲಿಸಿ ಪ್ರಚಾರ ಮಾಡುವುದರೊಂದಿಗೆ ಅವರ ಗೆಲುವಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುವುದೆಂದು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.